
ಬೆಂಗಳೂರು(ಆ.31): ಅರಣ್ಯ ರಕ್ಷಕರು ಹಾರಿಸಿದ ಗುಂಡೇಟಿಗೆ ಒಬ್ಬ ಬಲಿಯಾಗಿ ಮತ್ತೋರ್ವ ಪರಾರಿಯಾದ ಘಟನೆ ಬನ್ನೇರುಘಟ್ಟ ಪೊಲೀಸ್ ಠಾಣೆ ವ್ಯಾಪ್ತಿಯ ಕಲ್ಕೆರೆಯ ವೀವರ್ಸ್ ಕಾಲೋನಿಯಲ್ಲಿ ನಡೆದಿದೆ. ಅರಣ್ಯದಲ್ಲಿ ಅತಿಕ್ರಮವಾಗಿ ಪ್ರವೇಶ ಮಾಡಿ ಶ್ರೀಗಂಧ ಮರ ಕಡಿಯಲು ಬಂದಿದ್ದ ಕೋಲಾರ ಜಿಲ್ಲೆಯ ಮಾಲೂರು ಮೂಲದ ತಿಮ್ಮರಾಯಪ್ಪ ಗುಂಡೇಟಿಗೆ ಬಲಿಯಾದ ವ್ಯಕ್ತಿ. ಅರಣ್ಯ ರಕ್ಷಕ ವಿನಯ್ ಕುಮಾರ್ ಹಾರಿಸಿದ ಗುಂಡಿಗೆ ಆತ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.
ಬುಧವಾರ ಮುಂಜಾನೆ 3.30ರ ಸುಮಾರಿಗೆ ಅರಣ್ಯ ರಕ್ಷಕರಿಗೆ ಮರ ಕಡಿಯುವ ಶಬ್ದ ಕೇಳಿದೆ. ತಕ್ಷಣ ಸ್ಥಳಕ್ಕೆ ತೆರಳಿದಾಗ ಗಂಧದ ಮರ ಕಡಿಯುತ್ತಿರುವುದು ಖಚಿತವಾಗಿದೆ. ತಕ್ಷಣ ಮರ ಕಡಿಯುತ್ತಿದ್ದವರಿಗೆ ಶರಣಾಗುವಂತೆ ಅರಣ್ಯ ರಕ್ಷಕರು ಸೂಚಿಸಿದ್ದಾರೆ. ಇದನ್ನು ಲೆಕ್ಕಿಸದೆ ಆರೋಪಿಗಳು ಮಚ್ಚಿನಿಂದ ಹಲ್ಲೆಗೆ ನಡೆಸಿ ಪರಾರಿಯಾಗಲು ಮುಂದಾಗಿದ್ದಾರೆ. ಈ ಸಂದರ್ಭದಲ್ಲಿ ಜೀವರಕ್ಷಣೆಗಾಗಿ ಅರಣ್ಯ ರಕ್ಷಕ ವಿನಯ್ ಕುಮಾರ್ ಹಾರಿಸಿದ ಗುಂಡಿಗೆ ತಿಮ್ಮರಾಯಪ್ಪ ಸ್ಥಳದಲ್ಲೇ ಕುಸಿದು ಅಸು ನೀಗಿದ್ದಾನೆ.
ತುಮಕೂರು: ಪತ್ನಿಯ ಅಂತ್ಯಸಂಸ್ಕಾರಕ್ಕೆ ಬಾರದ ಗಂಡ; ಮನೆ ಮುಂದೆ ಶವ ಬಿಟ್ಟು ಹೋದ ಗ್ರಾಮಸ್ಥರು!
ಸ್ಥಳಕ್ಕೆ ಶ್ವಾನದಳ, ಬೆರಳಚ್ಚು ತಜ್ಞರು ಹಾಗೂ ವಿಧಿ ವಿಜ್ಞಾನ ಪ್ರಯೋಗಾಲಯದ ತಂಡದ ಜೊತೆಯಲ್ಲಿ ದೌಡಾಯಿಸಿದ ಬನ್ನೇರುಘಟ್ಟಪೊಲೀಸರು ಅರಣ್ಯ ರಕ್ಷಕರಿಂದ ಘಟನೆಯ ಸಂಪೂರ್ಣ ಮಾಹಿತಿ ಕಲೆ ಹಾಕಿದರು. ಬಳಿಕ ಕೇಸು ದಾಖಲು ಮಾಡಿದ್ದಾರೆ. ತಲೆ ಮರೆಸಿಕೊಂಡಿರುವ ಮತ್ತೋರ್ವ ಆರೋಪಿಗಾಗಿ ಬಲೆ ಬೀಸಿದ್ದಾರೆ.
ಬೆಂಗಳೂರು ಗ್ರಾಮಾಂತರ ಎಸ್.ಪಿ.ಮಲ್ಲಿಕಾರ್ಜುನ ಬಾಲದಂಡಿ ಮಾತನಾಡಿ, ಶ್ರೀಗಂಧ ಮರ ಚೋರನ ಮೇಲೆ ಶೂಟ್‌ಔಟ್ ಘಟನೆಗೆ ಸಂಬಂಧಿಸಿದಂತೆ ಎಲ್ಲಾ ಆಯಾಮಗಳಲ್ಲಿ ತನಿಖೆ ನಡೆಸಲಾಗುತ್ತಿದೆ. ಘಟನೆಯ ಸಂಪೂರ್ಣ ಮಾಹಿತಿ ಕಲೆ ಹಾಕಲಾಗುತ್ತಿದೆ, ಶೀಘ್ರದಲ್ಲೇ ಮತ್ತೋರ್ವ ಆರೋಪಿಯನ್ನು ಬಂಧಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ