ದರ್ಶನ್ ಮೇಲೆ ಹಲ್ಲೆಗೈದು ವಿಮಾನದಲ್ಲಿ ಮುಂಬೈಗೆ ಪರಾರಿಯಾಗಿದ್ದ ವೇದಾಂತ್, ಅಲ್ಲಿ ಖಾಸಗಿ ಜೆಟ್ ಮೂಲಕ ಉತ್ತರ ಪ್ರದೇಶಕ್ಕೆ ತೆರಳಿದ್ದ. ಅಲ್ಲಿಂದ ಬಾಡಿಗೆ ಕಾರಿನಲ್ಲಿ ನೇಪಾಳ ಗಡಿವರೆಗೆ ಪ್ರಯಾಣಿಸಿ, ಬಳಿಕ ನೇಪಾಳ ಪ್ರವೇಶಿಸಿ ತಲೆಮರೆಸಿಕೊಂಡಿದ್ದ
ಬೆಂಗಳೂರು(ಜೂ.27): ಇತ್ತೀಚೆಗೆ ನಗರದ ಖಾಸಗಿ ಹೋಟೆಲ್‌ನಲ್ಲಿ ಕ್ಷುಲ್ಲಕ ಕಾರಣಕ್ಕೆ ಉದ್ಯಮಿ ಪುತ್ರನ ಮೇಲೆ ಬಿಯರ್ ಬಾಟಲಿಯಿಂದ ಹಲ್ಲೆಗೈದು ತಲೆಮರೆಸಿಕೊಂಡಿದ್ದ ಆರೋಪಿಯನ್ನು ಆರ್.ಟಿ.ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ವಿಎಆರ್ ಬಿಲ್ಡರ್ಸ್ ಕಂಪನಿ ಮಾಲೀಕ ಸಂಜಯ್ ದುಗಾರ್ ಪುತ್ರ ವೇದಾಂತ್ ದುಗಾರ್(29) ಬಂಧಿತ ಆರೋಪಿ. ಜೂ.10ರಂದು ಹೆಬ್ಬಾಳದ ಐಷಾರಾಮಿ ಹೋಟೆಲ್‌ನಲ್ಲಿ ವೈಷ್ಣವಿ ಬಿಲ್ಡರ್ಸ್ ಮಾಲೀಕ ಗೋವಿಂದರಾಜು ಪುತ್ರ ದರ್ಶನ್(30) ಮೇಲೆ ಕ್ಷುಲ್ಲಕ ಕಾರಣಕ್ಕೆ ಜಗಳ ತೆಗೆದು ಬಿಯರ್ ಬಾಟಲಿಯಿಂದ ಹಲ್ಲೆಗೈದು ಪರಾರಿಯಾಗಿದ್ದ. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ಕೊಲೆಗೆ ಯತ್ನ ಪ್ರಕರಣ ದಾಖಲಿಸಲಾಗಿತ್ತು. ಘಟನೆ ನಡೆದ ದಿನದಿಂದ ತಲೆಮರೆಸಿಕೊಂಡಿದ್ದ ಆರೋಪಿ ವೇದಾಂತ್‌ನನ್ನು ಶನಿವಾರ ಸಂಜೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಹೆಚ್ಚಿನ ವಿಚಾರಣೆಗಾಗಿ 8 ದಿನ ಕಸ್ಟಡಿಗೆ ಪಡೆಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನಡೆದು ಬರುತ್ತಿದ್ದ ಜೋಡಿಯನ್ನು ಅಡ್ಡಹಾಕಿದ ದರೋಡೆಕೋರರು, ಬಳಿಕ ನಡೆದಿದ್ದೇ ಅಚ್ಚರಿ!
ನೇಪಾಳಕ್ಕೆ ಪರಾರಿ:
ದರ್ಶನ್ ಮೇಲೆ ಹಲ್ಲೆಗೈದು ವಿಮಾನದಲ್ಲಿ ಮುಂಬೈಗೆ ಪರಾರಿಯಾಗಿದ್ದ ವೇದಾಂತ್, ಅಲ್ಲಿ ಖಾಸಗಿ ಜೆಟ್ ಮೂಲಕ ಉತ್ತರ ಪ್ರದೇಶಕ್ಕೆ ತೆರಳಿದ್ದ. ಅಲ್ಲಿಂದ ಬಾಡಿಗೆ ಕಾರಿನಲ್ಲಿ ನೇಪಾಳ ಗಡಿವರೆಗೆ ಪ್ರಯಾಣಿಸಿ, ಬಳಿಕ ನೇಪಾಳ ಪ್ರವೇಶಿಸಿ ತಲೆಮರೆಸಿಕೊಂಡಿದ್ದ. ಆರೋಪಿಯ ಜಾಡು ಹಿಡಿದು ಆರ್.ಟಿ.ನಗರ ಪೊಲೀಸರು ಮುಂಬೈಗೆ ತೆರಳಿ ಸ್ಥಳೀಯ ಪೊಲೀಸರ ಸಹಾಯ ಪಡೆದು ಸುಮಾರು ಒಂದು ವಾರ ಮುಂಬೈನಲ್ಲಿ ಹುಡುಕಾಟ ನಡೆಸಿದ್ದರು. ಆರೋಪಿ ನೇಪಾಳಕ್ಕೆ ಪರಾರಿಯಾಗಿರುವ ಬಗ್ಗೆ ಮಾಹಿತಿ ಸಂಗ್ರಹಿಸಿ ಬೆಂಗಳೂರಿಗೆ ವಾಪಾಸಾಗಿದ್ದರು. ನೇಪಾಳ ಪೊಲೀಸರನ್ನು ಸಂಪರ್ಕಿಸಿ ಆರೋಪಿ ಬಗ್ಗೆ ಮಾಹಿತಿ ನೀಡಿದ್ದರು. ಒಂದು ತಂಡ ನೇಪಾಳಕ್ಕೆ ತೆರಳಲು ಸಿದ್ಧತೆ ನಡೆಸಿತ್ತು.
ಯುವತಿಯರ ಸ್ನಾನದ ದೃಶ್ಯ ಸೆರೆ ಹಿಡಿಯುತ್ತಿದ್ದವನಿಗೆ ಧರ್ಮದೇಟು: ಕಾಮುಕನ ಬಂಧನ
ಏರ್‌ಪೋರ್ಟ್‌ನಲ್ಲಿ ಸೆರೆ
ಈ ನಡುವೆ ಆರೋಪಿ ಪತ್ತೆಗಾಗಿ ಲುಕ್‌ಔಟ್ ನೋಟಿಸ್ ಹೊರಡಿಸಿದ್ದ ಆರ್.ಟಿ.ನಗರ ಠಾಣೆ ಪೊಲೀಸರು, ದೇಶದ ವಿಮಾನ ನಿಲ್ದಾಣಗಳು, ಬಂದರುಗಳು, ರೈಲು ನಿಲ್ದಾಣಗಳು ಸೇರಿದಂತೆ ಅನೇಕ ಕಡೆಗೆ ಆರೋಪಿಯ ಬಗ್ಗೆ ಮಾಹಿತಿ ನೀಡಿದ್ದರು. ಜೂ.24ರಂದು ಸಂಜೆ ಆರೋಪಿ ವೇದಾಂತ್, ನೇಪಾಳದ ಕಠ್ಮಂಡುವಿನಿಂದ ವಿಮಾನದಲ್ಲಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನಕ್ಕೆ ಬಂದಿದ್ದಾನೆ. ಈ ವೇಳೆ ವಲಸೆ ಅಧಿಕಾರಿಗಳು ಆರೋಪಿಯನ್ನು ವಶಕ್ಕೆ ಪಡೆದು ಆರ್.ಟಿ.ನಗರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಪೊಲೀಸರು ವಿಮಾನ ನಿಲ್ದಾಣಕ್ಕೆ ತೆರಳಿ ಆರೋಪಿಯನ್ನು ಬಂಧಿಸಿ ಕರೆತಂದಿದ್ದಾರೆ.
ಮದ್ಯದ ಅಮಲಿನಲ್ಲಿ ಹೊಡೆದೆ!
ಅಂದು ಸ್ನೇಹಿತನ ಮದುವೆ ಹಿನ್ನೆಲೆಯಲ್ಲಿ ಹೆಬ್ಬಾಳದ ಫೋರ್ ಸೀಜನ್ ಹೋಟೆಲ್‌ನಲ್ಲಿ ಉಳಿದುಕೊಂಡಿದ್ದೆ. ಈ ಮದುವೆಗೆ ಸ್ನೇಹಿತ ದರ್ಶನ್ ಬಂದಿದ್ದ. ಈ ವೇಳೆ ಇಬ್ಬರು ಮದ್ಯದ ಸೇವಿಸಿದ್ದೆವು. ಮದ್ಯದ ಅಮಲಿನಲ್ಲಿ ಮಾತಿಗೆ ಮಾತು ಬೆಳೆದು ಜಗಳ ಶುರುವಾಯಿತು. ಹೀಗಾಗಿ ಕೈಯಲ್ಲಿದ್ದ ಬಿಯರ್ ಬಾಟಲಿಯಿಂದ ದರ್ಶನ್ ಮೇಲೆ ಹಲ್ಲೆ ಮಾಡಿದೆ ಎಂದು ಆರೋಪಿ ವೇದಾಂತ್ ವಿಚಾರಣೆ ವೇಳೆ ಹೇಳಿಕೆ ನೀಡಿದ್ದಾನೆ ಎನ್ನಲಾಗಿದೆ.