ಬೆಳಗಾವಿ: ಗೃಹಿಣಿ ಖಾಸಗಿ ಕ್ಷಣದ ವಿಡಿಯೋ ಹರಿಬಿಟ್ಟ ಪ್ರಿಯಕರನ ಸೆರೆ

By Kannadaprabha NewsFirst Published Feb 24, 2024, 4:00 AM IST
Highlights

ಘಟನೆ ಸಂಬಂಧ ಚನ್ನಮ್ಮನ ಕಿತ್ತೂರು ಪಟ್ಟಣದ ಸೋಮವಾರ ಪೇಟೆ ನೇಕಾರ ಓಣಿಯ ಮುತ್ತುರಾಜ ಅಲಿಯಾಸ್‌ ಕುಬೇರ ಬಸವರಾಜ ಇಟಗಿ, ಬಸವರಾಜ ಗಂಗಾಧರ ಇಟಗಿ, ನಾಗರತ್ನಾ ಬಸವರಾಜ ಇಟಗಿ, ಚೆನ್ನಮ್ಮ ಓಂಕಾರಿ, ಲತಾ ಜ್ಯೋತಿಬಾ, ಶಿವಲೀಲಾ ಇಟಗಿ, ಹೇಮಾ ಹಾಗೂ ನೇತ್ರಾ ಸೇರಿ ಎಂಟು ಜನರ ವಿರುದ್ಧ ಪ್ರಕರಣ ದಾಖಲಾಗಿದೆ.

ಬೆಳಗಾವಿ(ಫೆ.24): ಪ್ರೀತಿಸಿದ ಯುವತಿ ಬೇರೆಯವರೊಂದಿಗೆ ವಿವಾಹವಾಗಿದ್ದಕ್ಕೆ ಆಕ್ರೋಶಗೊಂಡ ಪ್ರಿಯಕರ, ತನ್ನೊಂದಿಗಿನ ಆಕೆ ಕಳೆದ ಖಾಸಗಿ ಕ್ಷಣಗಳ ವಿಡಿಯೋ ಮತ್ತು ಫೋಟೋಗಳನ್ನು ವರನ ಮೊಬೈಲ್‌ಗೆ ಕಳುಹಿಸಿದ ಹೇಯ ಕೃತ್ಯ ಬೆಳಗಾವಿ ಜಿಲ್ಲೆಯ ಚನ್ನಮ್ಮನ ಕಿತ್ತೂರು ಪಟ್ಟಣದಲ್ಲಿ ನಡೆದಿದ್ದು, ವಿಡಿಯೋ ಹರಿಬಿಟ್ಟವನನ್ನು ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.

ಈ ಘಟನೆ ಸಂಬಂಧ ಚನ್ನಮ್ಮನ ಕಿತ್ತೂರು ಪಟ್ಟಣದ ಸೋಮವಾರ ಪೇಟೆ ನೇಕಾರ ಓಣಿಯ ಮುತ್ತುರಾಜ ಅಲಿಯಾಸ್‌ ಕುಬೇರ ಬಸವರಾಜ ಇಟಗಿ, ಬಸವರಾಜ ಗಂಗಾಧರ ಇಟಗಿ, ನಾಗರತ್ನಾ ಬಸವರಾಜ ಇಟಗಿ, ಚೆನ್ನಮ್ಮ ಓಂಕಾರಿ, ಲತಾ ಜ್ಯೋತಿಬಾ, ಶಿವಲೀಲಾ ಇಟಗಿ, ಹೇಮಾ ಹಾಗೂ ನೇತ್ರಾ ಸೇರಿ ಎಂಟು ಜನರ ವಿರುದ್ಧ ಪ್ರಕರಣ ದಾಖಲಾಗಿದೆ.

ವಿವಾಹಿತೆ ಮಹಿಳೆ ಅನುಮಾನಾಸ್ಪದ ಸಾವು; ಅಕ್ರಮ ಸಂಬಂಧ ಪ್ರಶ್ನಿಸಿದ್ದಕ್ಕೆ ಗಂಡನೇ ಕೊಂದನಾ?

ಪ್ರಕರಣದ ಹಿನ್ನೆಲೆ:

ಕಳೆದ ಆರು ವರ್ಷಗಳಿಂದ ನೇಕಾರ ಓಣಿಯಲ್ಲಿ ವಾಸವಾಗಿದ್ದ ಮತ್ತುರಾಜ ಹಾಗೂ ಯುವತಿ ಪರಸ್ಪರ ಪ್ರೀತಿಸುತ್ತಿದ್ದರು. 2023 ಜುಲೈನಲ್ಲಿ ರಾತ್ರಿ ಮನೆಗೆ ಹೋಗಿ ಮದುವೆ ಆಗುವುದಾಗಿ ನಂಬಿಸಿ, ದೈಹಿಕ ಸಂಪರ್ಕಕ್ಕೂ ಯತ್ನಿಸಿದ್ದಾನೆ. ಇದಕ್ಕೆ ವಿರೋಧ ವ್ಯಕ್ತಪಡಿಸಿದ ಯುವತಿ ಮೇಲೆ ಬಲವಂತವಾಗಿ ದೈಹಿಕ ಸಂಪರ್ಕ ಮಾಡಿದ್ದಾನೆ. ಈ ವೇಳೆ ಖಾಸಗಿ ಕ್ಷಣಗಳ ವಿಡಿಯೋ, ಫೋಟೋವನ್ನು ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದಾನೆ. ಈ ವಿಷಯ ಯಾರಿಗಾದರೂ ಹೇಳಿದರೆ ನಿನ್ನ ಮತ್ತು ನಿಮ್ಮ ಮನೆಯವರನ್ನು ಬಿಡುವುದಿಲ್ಲ ಎಂದು ಜೀವ ಬೆದರಿಕೆ ಹಾಕಿದ್ದನು ಎಂದು ತಿಳಿದುಬಂದಿದೆ.

ನಂತರದ ದಿನಗಳಲ್ಲಿ ಯುವತಿ ಮದುವೆಯಾಗುವಂತೆ ಆತನನ್ನು ಪದೇ ಪದೇ ಕೇಳಿಕೊಂಡಿದ್ದಾಳೆ. ಈ ವಿಷಯ ಯುವತಿ ಮನೆಯವರಿಗೂ ಗೊತ್ತಾಗಿ ಆತನೊಂದಿಗಿನ ಮದುವೆಗೆ ಒಪ್ಪಿಕೊಂಡಿದ್ದಾರೆ. ಆದರೆ, ಯುವಕ ಮತ್ತು ಆತನ ಮನೆಯವರು ನಿರಾಕರಿಸಿದ್ದಾರೆ. ನಂತರ ಯುವತಿ ಬೇರೆ ವರನೊಂದಿಗೆ 2024, ಫೆ.14 ರಂದು ಮದುವೆ ನಡೆದಿದೆ. ಇದರಿಂದ ಅಸಮಾಧಾನಗೊಂಡ ಆರೋಪಿ ಮುತ್ತುರಾಜ್‌ ಫೆ.15 ರಂದು ವರನ ಮನೆಗೆ ಹೋಗಿ ತಾನು ಹುಡುಗಿ ಕಡೆಯವನು ಎಂದು ಪರಿಚಯ ಮಾಡಿಕೊಂಡು ಬಂದಿದ್ದಾನೆ. ಬಳಿಕ ವರನ ಮೊಬೈಲ್‌ ನಂಬರ್‌ ಪಡೆದು ಆತನಿಗೆ ಯುವತಿ ತನ್ನೊಂದಿಗಿದ್ದ ಖಾಸಗಿ ಕ್ಷಣಗಳ ವಿಡಿಯೋ ಮತ್ತು ಫೋಟೊಗಳನ್ನು ಕಳುಹಿಸಿದ್ದಾನೆ. ಇದನ್ನು ಕಂಡ ವರನ ಮನೆಯವರು ಯುವತಿಯನ್ನು ಮನೆಯಿಂದ ಹೊರಗೆ ಹಾಕಿದ್ದಾರೆ.

ಯುವಕನ ಈ ಕೃತ್ಯ ಖಂಡಿಸಿ ಸಂತ್ರಸ್ತೆ ಚ.ಕಿತ್ತೂರಿನಲ್ಲಿರುವ ಆತನ ಮನೆ ಎದುರು ನ್ಯಾಯಕ್ಕಾಗಿ ಗುರುವಾರ ಧರಣಿ ನಡೆಸಿದ್ದಾಳೆ. ಈ ವೇಳೆ ಆರೋಪಿ ಮುತ್ತುರಾಜ್‌ ಹಾಗೂ ಸಂತ್ರಸ್ತೆ ಮನೆಯವರ ನಡುವೆ ಗಲಾಟೆ ಕೂಡ ನಡೆದಿದೆ. ಇದರಿಂದಾಗಿ ಮನನೊಂದ ಯುವತಿ ಹಾಗೂ ಆಕೆಯ ಕುಟುಂಬಸ್ಥರು ನ್ಯಾಯಕ್ಕಾಗಿ ಕಿತ್ತೂರು ಪೊಲೀಸ್‌ ಮೊರೆ ಹೋಗಿದ್ದಾರೆ. ಆದರೆ, ಠಾಣೆಗೆ ಮೂರು ದಿನ ಅಲೆದರೂ ಸ್ಥಳೀಯ ಪೊಲೀಸರು ನ್ಯಾಯ ಕೊಡಿಸುವಲ್ಲಿ ಉದಾಸೀನ ತೋರಿದ್ದಾರೆ. ಇದರಿಂದ ಬೇಸತ್ತ ಯುವತಿ ವಿಷದ ಬಾಟಲಿಯೊಂದಿಗೆ ನ್ಯಾಯಕ್ಕಾಗಿ ಯುವಕನ ಮನೆಗೆ ತೆರಳಿ ಧರಣಿ ನಡೆಸಿದ್ದಾಳೆ.

ರಾಯಚೂರು: ಮಳಿಗೆ ತೆರವುಗೊಳಿಸಲು ಬಂದ ನಗರಸಭೆ ಸಿಬ್ಬಂದಿಗೆ ಮಚ್ಚು ತೋರಿಸಿ ಜೀವ ಬೆದರಿಕೆ!

ನೊಂದ ಯುವತಿಗೆ ನ್ಯಾಯ ಕೊಡಿಸಬೇಕಿದ್ದ ಪೊಲೀಸರು ಪ್ರಕರಣ ದಾಖಲಿಸಿಕೊಳ್ಳುವಲ್ಲಿ ಹಿಂದೇಟು ಹಾಕಿದ್ದಾರೆ. ಕೊನೆಗೆ ಗುರುವಾರ ರಾತ್ರಿ ಪ್ರಕರಣ ದಾಖಲಿಸಿಕೊಂಡು, ಆರೋಪಿಯನ್ನು ಬಂಧಿಸಿದ್ದಾರೆ.

ಈ ಪ್ರಕರಣವು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ.ಭೀಮಾಶಂಕರ ಗುಳೇದ ಅವರ ಗಮನಕ್ಕೆ ಬಂದಿದೆ. ತಕ್ಷಣ ಆರೋಪಿ ವಿರುದ್ಧ ಕ್ರಮ ಜರುಗಿಸುವಂತೆ ಖಡಕ್‌ ಅವರು ಸೂಚನೆ ನೀಡಿದ್ದಾರೆ. ಇದರಿಂದಾಗಿ ಎಚ್ಚೆತ್ತ ಸ್ಥಳೀಯ ಪೊಲೀಸರು ಅನಿವಾರ್ಯವಾಗಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸೂಚನೆ ನೀಡಿದ ಕೆಲವೇ ನಿಮಿಷಗಳಲ್ಲಿ ಆರೋಪಿಯನ್ನು ಠಾಣೆಗೆ ಕರೆತಂದಿದ್ದಾರೆ. ಐಪಿಸಿ ಸೆಕ್ಷನ್ 143, 147, 417, 376, 323, 504, 506 ಅಡಿಯಲ್ಲಿ ಕೇಸು ದಾಖಲಿಸಿದ್ದಾರೆ. ಈ ಕುರಿತು ಚನ್ನಮ್ಮನ ಕಿತ್ತೂರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

click me!