ಬೆಂಗಳೂರು: ಪಾರ್ಕಿಂಗ್‌ನಿಂದ ಬೈಕ್‌ ಕದ್ದೊಯ್ಯತ್ತಿದ್ದ ಖದೀಮ ಬಲೆಗೆ

By Kannadaprabha NewsFirst Published Feb 7, 2023, 6:00 AM IST
Highlights

22 ಲಕ್ಷ ರು. ಮೌಲ್ಯದ 26 ಬೈಕ್‌ ಜಪ್ತಿ, ಜೈಲುನಿಂದ ಹೊರಬಂದ ಬಳಿಕವೂ ಹಳೇ ಚಾಳಿ ಮುಂದುವರೆಸಿದ್ದ ಖದೀಮ. 

ಬೆಂಗಳೂರು(ಫೆ.07):  ಅಂಗಡಿ ಮುಂಗಟ್ಟುಗಳು, ಸಾರ್ವಜನಿಕ ಸ್ಥಳಗಳಲ್ಲಿನ ಪಾರ್ಕಿಂಗ್‌ ಸ್ಥಳಗಳಲ್ಲಿ ನಿಲುಗಡೆ ಮಾಡಿದ ದ್ವಿಚಕ್ರ ವಾಹನಗಳನ್ನು ಕಳವು ಮಾಡುತ್ತಿದ್ದ ಕಳ್ಳನೊಬ್ಬನನ್ನು ಜಯನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಜೆ.ಸಿ. ರಸ್ತೆಯ 2ನೇ ಕ್ರಾಸ್‌ ನಿವಾಸಿ ಮುರಳಿ (39) ಬಂಧಿತ. ಆರೋಪಿಯಿಂದ 22 ಲಕ್ಷ ರು. ಮೌಲ್ಯದ 26 ದ್ವಿಚಕ್ರ ವಾಹನಗಳನ್ನು ಜಪ್ತಿ ಮಾಡಲಾಗಿದೆ. 

ಸುಬ್ರಮಣ್ಯಪುರ ನಿವಾಸಿ ಪ್ರಾರ್ಥನಾ ನಂದಿ ಅವರು ಜ.27 ರಂದು ಮಧ್ಯಾಹ್ನ 2 ಗಂಟೆಗೆ ಜಯನಗರ 4ನೇ ಬ್ಲಾಕ್‌ನ 10ನೇ ಮುಖ್ಯರಸ್ತೆಯ ಕೂಲ್‌ ಜಾಯಿಂಟ್‌ ಮಳಿಗೆ ಎದುರು ತಮ್ಮ ದ್ವಿಚಕ್ರ ವಾಹನ ನಿಲುಗಡೆ ಮಾಡಿ ಜ್ಯೂಸ್‌ ಕುಡಿಯಲು ಹೋಗಿದ್ದರು. ಅರ್ಧಗಂಟೆ ಬಳಿಕ ಬಂದು ನೋಡಿದಾಗ ಅವರ ದ್ವಿಚಕ್ರ ವಾಹನ ಇರಲಿಲ್ಲ. ಈ ಸಂಬಂಧ ನೀಡಲಾದ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Bengaluru: ಖರೀದಿಗೆ ಬಂದು 16 ಲಕ್ಷದ ಬಿಎಂಡಬ್ಲ್ಯೂ ಬೈಕ್‌ ಎಗರಿಸಿದರು

ಆರೋಪಿ ಮುರಳಿ ವೃತ್ತಿಪರ ಕಳ್ಳನಾಗಿದ್ದು, ಈತನ ವಿರುದ್ಧ ಈ ಹಿಂದೆ ಕೆ.ಜಿ.ನಗರ, ಕಲಾಸಿಪಾಳ್ಯ ಸೇರಿದಂತೆ ವಿವಿಧ ಪೊಲೀಸ್‌ ಠಾಣೆಗಳಲ್ಲಿ ದ್ವಿಚಕ್ರ ವಾಹನ ಕಳವು ಪ್ರಕರಣಗಳು ದಾಖಲಾಗಿವೆ. ಕೆಲ ಪ್ರಕರಣಗಳಲ್ಲಿ ಜೈಲು ಸೇರಿದ್ದ ಆರೋಪಿಯು ಜಾಮೀನು ಪಡೆದು ಹೊರಬಂದ ಬಳಿಕವೂ ತನ್ನ ಹಳೇ ಚಾಳಿ ಮುಂದುವರೆಸಿದ್ದ. ಮೋಜು-ಮಸ್ತಿಗೆ ಸುಲಭವಾಗಿ ಹಣ ಹೊಂದಿಸುವ ಉದ್ದೇಶದಿಂದ ದ್ವಿಚಕ್ರ ವಾಹನಗಳನ್ನು ಕಳವು ಮಾಡುತ್ತಿದ್ದ. ಕದ್ದ ದ್ವಿಚಕ್ರ ವಾಹನಗಳನ್ನು ಪರಿಚಿತರ ಮೂಲಕ ವಿಲೇವಾರಿ ಮಾಡಿಸಿ ಹಣ ಪಡೆಯುತ್ತಿದ್ದ ಎಂಬುದು ವಿಚಾರಣೆಯಿಂದ ತಿಳಿದು ಬಂದಿದೆ.

ಆರೋಪಿ ಮುರಳಿ ವಿಚಾರಣೆ ವೇಳೆ ನೀಡಿದ ಮಾಹಿತಿ ಮೇರೆಗೆ ವಿವಿಧ ಕಂಪನಿಗಳ 26 ದ್ವಿಚಕ್ರ ವಾಹನಗಳನ್ನು ಜಪ್ತಿ ಮಾಡಲಾಗಿದೆ. ಜಯನಗರ 8, ಸಿದ್ದಾಪುರ 4, ತಿಲಕನಗರ 3 ಹಾಗೂ ಬನಶಂಕರಿ ಠಾಣೆಯಲ್ಲಿ ದಾಖಲಾಗಿದ್ದ ಒಂದು ದ್ವಿಚಕ್ರ ವಾಹನ ಕಳವು ಪ್ರಕರಣ ಸೇರಿದಂತೆ ಒಟ್ಟು 16 ದ್ವಿಚಕ್ರ ವಾಹನ ಕಳವು ಪ್ರಕರಣಗಳು ಪತ್ತೆಯಾಗಿವೆ. ಉಳಿದ 10 ದ್ವಿಚಕ್ರ ವಾಹನಗಳ ಕಳ್ಳತನ ಪ್ರಕರಣಗಳ ಬಗ್ಗೆ ಮಾಹಿತಿ ಸಂಗ್ರಹಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕೀ ಬಿಟ್ಟು ಮರೆತು ಹೋದ ಬೈಕ್‌ಗಳೇ ಟಾರ್ಗೆಟ್‌!

ಆರೋಪಿಯು ಜನದಟ್ಟಣೆ ಹೆಚ್ಚಿರುವ ಪ್ರದೇಶಗಳಲ್ಲಿ ಅಂಗಡಿ ಮುಂಗಟ್ಟುಗಳು, ಸಾರ್ವಜನಿಕ ಸ್ಥಳಗಳಲ್ಲಿನ ಪಾರ್ಕಿಂಗ್‌ ಸ್ಥಳಗಳಲ್ಲಿ ದ್ವಿಚಕ್ರ ವಾಹನಗಳನ್ನು ಕಳವು ಮಾಡುತ್ತಿದ್ದ. ಮೊದಲಿಗೆ ದ್ವಿಚಕ್ರ ವಾಹನಗಳಲ್ಲಿ ಮರೆತು ಕೀ ಬಿಟ್ಟಿದ್ದಾರೆಯೇ ಎಂಬುದನ್ನು ಗಮನಿಸುತ್ತಿದ್ದ. ಕೀ ಇರುವ ದ್ವಿಚಕ್ರ ವಾಹನ ಸಿಕ್ಕರೆ ಕ್ಷಣವೂ ಯೋಚಿಸದೆ ಪರಾರಿಯಾಗುತ್ತಿದ್ದ. ಇಲ್ಲವಾದರೆ, ಹ್ಯಾಂಡಲ್‌ ಲಾಕ್‌ ಮುರಿದು ದ್ವಿಚಕ್ರ ವಾಹನ ಕಳವು ಮಾಡುತ್ತಿದ್ದ.

click me!