ಮೊಬೈಲ್ ಕಳ್ಳತನ ಮಾಡಿದ ವ್ಯಕ್ತಿಯನ್ನ ಸಿಮೆಂಟ್ ಇಟ್ಟಿಗೆಯಿಂದ ಜಜ್ಜಿ ಕೊಲೆ ಮಾಡಿರುವ ಘಟನೆ ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ಮರವಂಜಿ ಗ್ರಾಮದ ಬಳಿ ನಡೆದಿದೆ.
ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು
ಚಿಕ್ಕಮಗಳೂರು (ಫೆ.16): ಮೊಬೈಲ್ ಕಳ್ಳತನ ಮಾಡಿದ ವ್ಯಕ್ತಿಯನ್ನ ಸಿಮೆಂಟ್ ಇಟ್ಟಿಗೆಯಿಂದ ಜಜ್ಜಿ ಕೊಲೆ ಮಾಡಿರುವ ಘಟನೆ ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ಮರವಂಜಿ ಗ್ರಾಮದ ಬಳಿ ನಡೆದಿದೆ. ಮೃತನನ್ನ ಕಡೂರು ತಾಲೂಕಿನ ಮಲ್ಲೇದೇವರಹಳ್ಳಿ ಗ್ರಾಮದ 60 ವರ್ಷದ ಮೋಹನ್ ಎಂದು ಗುರುತಿಸಲಾಗಿದೆ. ಕಡೂರು ತಾಲೂಕಿನ ನಾಗಗೊಂಡನಹಳ್ಳಿ ಕೆಂಚಪ್ಪ ಆರೋಪಿಯಾಗಿದ್ದು, ಇದೇ 14ರ ಮಂಗಳವಾರ ಮಧ್ಯರಾತ್ರಿ ಎರಡು ಗಂಟೆ ಸುಮಾರಿಗೆ ಮರವಂಜಿ ವೃತ್ತದಲ್ಲಿ ಮೋಹನ ಕುಮಾರ್ ಕೆಂಚಪ್ಪನ ಮೊಬೈಲ್ ಮತ್ತು ಹಣ ಕಸಿದುಕೊಳ್ಳಲು ಯತ್ನಿಸಿದಾಗ ಕೆಂಚಪ್ಪ ಆತನ ತಲೆಯ ಮೇಲೆ ಸಿಮೆಂಟ್ ಇಟ್ಟಿಗೆಯಲ್ಲಿ ಜಜ್ಜಿ ಪರಾರಿಯಾಗಿದ್ದಾನೆ.
ಬೆಳಿಗ್ಗೆ ಚಿಂತಾಜನಕ ಸ್ಥಿತಿಯಲ್ಲಿ ನರಳುತ್ತಿದ್ದ ವ್ಯಕ್ತಿಯನ್ನ ಸ್ಥಳೀಯರು ನೋಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಆತನನ್ನು ಸಾರ್ವಜನಿಕ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕೊಂಡೊಯ್ಯುವ ವೇಳೆ ಆತ ಮಾರ್ಗ ಮಧ್ಯೆ ಮೃತಪಟ್ಟಿದ್ದಾನೆ. ಘಟನೆ ಸಂಬಂಧ ಮೃತನ ಸಂಬಂಧಿ ರತ್ನಮ್ಮ ಎಂಬುವರು ಕಡೂರು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ತನಿಖೆ ಕೈಗೆತ್ತಿಕೊಂಡ ಕಡೂರು ಪೊಲೀಸರು ಸ್ಥಳದಲ್ಲಿರುವ ಸಿಸಿ ಟಿವಿ ಫೂಟೇಜ್‍ಗಳನ್ನ ಪರಿಶೀಲಿಸಿ ಆರೋಪಿ ಕೆಂಚಪ್ಪನನ್ನು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಕೊಲೆ ನಡೆದ ಕೆಲವೇ ಗಂಟೆಯಲ್ಲಿ ಪೊಲೀಸರು ಆರೋಪಿಯನ್ನ ಬಂಧಿಸಿದ್ದಾರೆ.
ನಾವೆಂದೂ ಮತಗಳಿಗಾಗಿ ಆಮಿಷವೊಡ್ಡಲ್ಲ: ಶಾಸಕಿ ಅನಿತಾ ಕುಮಾರಸ್ವಾಮಿ
ಪತ್ನಿಯಿಂದಲೇ ಪತಿಯ ಕೊಲೆ: ಗಂಡ ಕಿರಿಕಿರಿ ಮಾಡುತ್ತಾನೆ ಎಂದು ಹೆಂಡತಿಯೇ ಆತನನ್ನು ಕೊಲೆ ಮಾಡಿರುವ ಘಟನೆ ನಗರದಲ್ಲಿ ನಡೆದಿದೆ. ಹೂಟಗಳ್ಳಿಯ ನಿವಾಸಿ ಮಂಜುನಾಥ (40) ಕೊಲೆಯಾದ ವ್ಯಕ್ತಿ. ಈತನ ಪತ್ನಿ ನಿಖಿತಾ (28) ಹತ್ಯೆ ಮಾಡಿದ ಮಹಿಳೆ. ಈ ದಂಪತಿ ಮದುವೆಯಾಗಿ 12 ವರ್ಷವಾಗಿತ್ತು. ಇಬ್ಬರೂ ಗಂಡು ಮಕ್ಕಳು ಇದ್ದಾರೆ. ಹೂಟಗಳ್ಳಿಯ ಮಾರಿಗುಡಿ ದೇವಸ್ಥಾನದ ಬಳಿಯ ಮನೆಯಲ್ಲಿ ವಾಸವಾಗಿದ್ದರು. ದಂಪತಿಯ ನಡುವೆ ಕಳೆದ ಒಂದು ವರ್ಷದಿಂದ ಜಗಳವಾಗುತ್ತಿತ್ತು. ಹೆಂಡತಿಯ ನಡವಳಿಕೆ ಸರಿಯಾಗಿಲ್ಲ ಎಂದು ಮಂಜುನಾಥ ಕುಡಿಯಲು ಆರಂಭಿಸಿದ್ದ. ಕುಡಿದು ಬಂದು ಜಗಳವಾಡುತ್ತಿದ್ದ.
ಪ್ರತಿಭಟನೆ ಮಾಡಲು ಶಾಸಕರಿಗೆ ಯಾವುದೇ ನೈತಿಕತೆ ಇಲ್ಲ: ಸಚಿವ ಎಂಟಿಬಿ ನಾಗರಾಜ್ ಆಕ್ರೋಶ
ಮಂಗಳವಾರ ರಾತ್ರಿ ಕೂಡ ಇಬ್ಬರ ನಡುವೆ ಜಗಳವಾಗಿತ್ತು. ಬೆಳಗ್ಗೆ ಹೊತ್ತಿಗೆ ಮಂಜುನಾಥ್ ಮೃತಪಟ್ಟಿದ್ದ. ಮಾಹಿತಿ ತಿಳಿದ ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿ, ಪತ್ನಿ ನಿಖಿತಾಳನ್ನು ವಿಚಾರಣೆ ಮಾಡಿದಾಗ ಗಂಡ ಕಿರಿಕಿರಿ ಮಾಡುತ್ತಾನೆ ಎಂದು ನಾನೇ ಬಾಯಿಗೆ ಬಟ್ಟೆತುರುಕಿ, ಉಸಿರುಗಟ್ಟಿಸಿ ಕೊಲೆ ಮಾಡಿದ್ದೇನೆ ಎಂಬುದಾಗಿ ತಪ್ಪು ಒಪ್ಪಿಕೊಂಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ವಿಜಯನಗರ ಠಾಣೆಯ ಪೊಲೀಸರು ನಿಖಿತಾಳನ್ನು ಬಂಧಿಸಿದ್ದಾರೆ.