ಕೆಲ ದಿನಗಳ ಹಿಂದೆ ಮಹಾರಾಷ್ಟ್ರದ ಸಾಂಗ್ಲಿಯಲ್ಲಿ ಒಂದೇ ಕುಟುಂಬದ 9 ಮಂದಿ ಆತ್ಮಹತ್ಯೆ ಮಾಡಿಕೊಂಡ ಸುದ್ದಿ ವೈರಲ್ ಆಗಿತ್ತು. ಇದರ ಬೆನ್ನಲ್ಲಿಯೇ ತನಿಖೆಯನ್ನು ತೀವ್ರಗೊಳಿಸಿದ ಮಹಾರಾಷ್ಟ್ರ ಪೊಲೀಸರಿಗೆ ಆಘಾತಕಾರಿ ಸುದ್ದಿ ತಿಳಿದಿದ್ದು, 9 ಮಂದಿ ಮಾಡಿಕೊಂಡಿದ್ದು ಆತ್ಮಹತ್ಯೆಯಲ್ಲ ಇದು ಕೊಲೆ ಎಂದು ಹೇಳಿದೆ.
ಮುಂಬೈ (ಜೂನ್ 28): ಮಹಾರಾಷ್ಟ್ರದ (Maharashtra) ಸಾಂಗ್ಲಿಯಲ್ಲಿ (Sangli) ಜೂನ್ 20 ರಂದು ಒಂದೇ ಕುಟುಂಬದ 9 ಮಂದಿಯ ಶವ ಪತ್ತೆಯಾಗಿತ್ತು. ಸಾಂಗ್ಲಿ ಜಿಲ್ಲೆಯ ಮಿಹಿಸಾಲ್‌ನಲ್ಲಿ (Mihisal) ಈ ಘಟನೆ ನಡೆದಿತ್ತು. ಸಹೋದರರಿಬ್ಬರು ಕುಟುಂಬದ ಎಲ್ಲಾ ಸದಸ್ಯರು ಸಾವಿಗೀಡಾಗಿದ್ದರು. ಪ್ರಾಥಮಿಕ ತನಿಖೆಯ ಪ್ರಕಾರ, ಇಡೀ ಕುಟುಂಬ ಸಾಲದ ಸುಳಿಯಲ್ಲಿತ್ತು ಆ ಕಾರಣಕ್ಕಾಗಿ ಆತ್ಮಹತ್ಯೆಯ ನಿರ್ಧಾರ ಮಾಡಿದ್ದಾರೆ ಎಂದು ಹೇಳಲಾಗಿತ್ತು.
ಆದರೆ, ಪೊಲೀಸ್ ತನಿಖೆಯಲ್ಲಿ ಇಡೀ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ನಿಧಿಯ ಆಸೆಗಾಗಿ ಮಾಟಗಾರ ಹಾಗೂ ಆತನ ಡ್ರೈವರ್ ಇಡೀ ಕುಟುಂಬಕ್ಕೆ ವಿಷ ಬೆರೆಸಿದ ಚಹಾ ನೀಡಿದ್ದರು ಎನ್ನುವ ಮಾಹಿತಿ ತಿಳಿದುಬಂದಿದೆ. ಪೊಲೀಸ್ ಮಾಹಿತಿಯ ಪ್ರಕಾರ ಮಾಟಗಾರ ಹಾಗೂ ಆತನ ಡ್ರೈವರ್ ಇಬ್ಬರನ್ನೂ ಬಂಧಿಸಲಾಗಿದೆ.
ಐಪಿಸಿ ಸೆಕ್ಷನ್ 302ರ ಅಡಿಯಲ್ಲಿ ಇಬ್ಬರ ವಿರುದ್ಧವೂ ಕೇಸ್ ದಾಖಲಿಸಲಾಗಿದೆ. ಜುಲೈ 19 ರಂದು ಮಾಟಗಾರ ಅಬ್ಬಾಸ್ ಮೊಹಮದ್ ಅಲಿ ಬಾಗ್ವನ್ (Abbas Mohammad Ali Bagwan) ಹಾಗೂ ಆತನ ಡ್ರೈವರ್ ಧೀರಜ್ ಚಂದ್ರಕಾತ್ ಸುರ್ವಾಶೆ (Dheeraj Chandrakant Survashe), ವ್ಯಾನ್ಮೋರ್‌ನಲ್ಲಿದ್ದ ಸಹೋದರರ ಮನೆ ತಲುಪಿದ್ದರು. ಈ ವೇಳೆ ತಂತ್ರ-ಮಂತ್ರ ಆರಂಭಿಸಿದ್ದ ಮಾಟಗಾರ ಅಬ್ಬಾಸ್, ನಿಧಿ ಹುಡುಕಿಕೊಡುವ ಸ್ಥಳವನ್ನು ಪತ್ತೆ ಹಚ್ಚಿ ತಿಳಿಸುವುದಾಗಿ ಆಸೆ ತೋರಿಸಿದ್ದ.
ಇದೇ ವೇಳೆ ಕುಟುಂಬದ ಎಲ್ಲಾ 9 ಸದಸ್ಯರನ್ನೂ ಮನೆಯ ಛಾವಣಿಯ ಮೇಲೆ ಕರೆದುಕೊಂಡು ಹೋಗಿದ್ದ ಮಾಟಗಾರ, ಬಳಿಕ ಒಬ್ಬೊಬ್ಬರನ್ನೇ ಕೆಳಕ್ಕೆ ಕರೆದು ತಾನೇ ಮಾಡಿದ್ದ ಚಹಾವನ್ನು ಸೇವಿಸುವಂತೆ ಹೇಳಿದ್ದ ಎಂದು ಪೊಲೀಸ್ ಮೂಲಗಳನ್ನು ಉದ್ದೇಶಿಸಿ ಮಾಹಿತಿ ಹೊರಬಂದಿದೆ. ಇಬ್ಬರೂ ಸಹೋದರರು ಅಕ್ಕಪಕ್ಕದ ಮನೆಯಲ್ಲಿ ವಾಸ ಮಾಡುತ್ತಿದ್ದರು. ಒಬ್ಬಾತ ಶಿಕ್ಷಕನಾಗಿದ್ದರೆ, ಇನ್ನೊಬ್ಬ ಪಶುವೈದ್ಯನಾಗಿದ್ದ.
ಬೆಳಗಾದರೂ ಮನೆಯ ಗೇಟ್ ತೆಗೆಯದ ಕಾರಣದಿಂದಾಗಿ ಅನುಮಾನ ಬಂದಿತ್ತು: ಸಾಮಾನ್ಯವಾಗಿ ಮುಂಜಾನೆಯೇ ಮನೆಯ ಗೇಟ್ ತೆಗೆದು ಇಡುತ್ತಿದ್ದ ಮನೆಯವರು ಜೂನ್ 20 ರಂದು ಬೆಳಗಾಗಿ ಸಾಕಷ್ಟು ಹೊತ್ತಾಗಿದ್ದರೂ ಮನೆಯ ಗೇಟ್‌ಗಳನ್ನು ತೆಗೆದಿರಲಿಲ್ಲ. ಇದು ಗ್ರಾಮಸ್ಥರ ಅನುಮಾನಕ್ಕೆ ಕಾರಣವಾಗಿತ್ತು.
1 ಸಾವಿರ ಟನ್ ಚಿನ್ನ ಹೂತಿಟ್ಟ ಕನಸು ಬಿದ್ದಿದ್ದ ಶೋಭನ್ ಸರ್ಕಾರ್ ನಿಧನ!
ಅಣ್ಣ ತಮ್ಮ ಇಬ್ಬರೂ ಮುಂಜಾನೆ ಬಹಳ ಬೇಗನೆ ಏಳುವ ಅಭ್ಯಾಸವಿರಿಸಿಕೊಂಡಿದ್ದರು. ಆದರೆ, ಆ ದಿನ ಮಾತ್ರ ಮಧ್ಯಾಹ್ನವಾಗುವ ಸಮಯ ಬಂದರೂ ಇಬ್ಬರ ಮನೆಯ ಗೇಟ್‌ಗಳು ತೆರೆದಿರಲಿಲ್ಲ. ಈ ವೇಳೆ ಗ್ರಾಮಸ್ಥರು ಕುಟುಂಬದವರ ಮೊಬೈಲ್‌ಗೆ ಕರೆ ಮಾಡಲು ಆರಂಭಿಸಿದ್ದರು. ಆದರೆ, ಯಾರೂ ಕೂಡ ಕರೆ ಸ್ವೀಕರಿಸಿರಲಿಲ್ಲ. ಮನೆಯಲ್ಲಿ ಏನಾದರೂ ಅನಾಹುತ ಆಗಿರಬಹುದು ಎನ್ನುವ ಶಂಕೆ ವ್ಯಕ್ತಪಡಿಸಿದ ಗ್ರಾಮಸ್ಥರು ಮನೆಯನ್ನು ಶೋಧ ಮಾಡಿದ್ದರು. ಈ ವೇಳೆ ಕುಟುಂಬದ ಎಲ್ಲಾ ಸದಸ್ಯ ಶವ ಪತ್ತೆಯಾಗಿತ್ತು. ಇದರ ಬೆನ್ನಲ್ಲಿಯೇ ಪೊಲೀಸರಿಗೆ ಕರೆ ಮಾಡಿ ಸುದ್ದಿ ತಿಳಿಸಲಾಗಿತ್ತು.
ಏನಿದು ಅದೃಷ್ಟ: ಮೊದಲು 6 ಕೋಟಿ ರೂ. ಲಾಟರಿ, ಬಳಿಕ ಹೊಲದಲ್ಲಿ ಸಿಕ್ತು ನಿಧಿ!
ಹಣಕಾಸಿನ ತೊಂದರೆಯಿಂದ ಕುಟುಂಬ ಸದಸ್ಯರು ಬಹಳ ದಿನಗಳಿಂದ ಒತ್ತಡದಲ್ಲಿದ್ದರು ಎಂದು ನೆರೆಹೊರೆಯವರು ಪೊಲೀಸರಿಗೆ ತಿಳಿಸಿದ್ದರು. ಸಹೋದರರಿಬ್ಬರೂ ಅನೇಕರಿಂದ ಸಾಲ ಪಡೆದಿದ್ದರು. ಹೀಗಾಗಿ ಸಾಲ ತೀರಿಸುವಂತೆ ಒತ್ತಡ ಹೇರಿ ಸಾಮೂಹಿಕ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. 72 ವರ್ಷದ ಅಕ್ಕತೈ ವ್ಯಾನ್ಮೋರ್, 52 ವರ್ಷದ ಪೋಪಟ್ ಯಲ್ಲಪ್ಪ ವ್ಯಾನ್ಮೋರ್, 49 ವರ್ಷದ ಮಾಣಿಕ್ ಯಲ್ಲಪ್ಪ ವ್ಯಾನ್ಮೋರ್, 48 ವರ್ಷದ ಸಂಗೀತಾ ಪೋಪಟ್ ವ್ಯಾನ್ಮೋರ್, 45 ವರ್ಷದ ರೇಖಾ ಮಾಣಿಕ್ ವ್ಯಾನ್ಮೋರ್, 30 ವರ್ಷದ ಅರ್ಚನಾ ಪೋಪಟ್ ವ್ಯಾನ್ಮೋರ್, 28 ವರ್ಷದ ಶುಭಂ ಪೋಪಟ್ ವ್ಯಾನ್ಮೋರ್, ಅನಿತಾ ಮಾಣಿಕ್ ವ್ಯಾನ್ಮೋರ್ ಹಾಗೂ 15 ವರ್ಷದ ಆದಿತ್ಯ ಮಾಣಿಕ್ ವ್ಯಾನ್ಮೋರ್ ಸಾವು ಕಂಡಿದ್ದರು.