ಬೆಂಗಳೂರು: ನೈಜೀರಿಯಾ ಪ್ರಜೆಗಳಿಂದ 75 ಲಕ್ಷದ ಡ್ರಗ್ಸ್‌ ವಶ

By Kannadaprabha News  |  First Published Mar 18, 2021, 7:37 AM IST

ಸಿಸಿಬಿ ಕಾರ್ಯಾಚರಣೆ| ಪ್ರವಾಸಿ, ಬ್ಯುಸಿನೆಸ್‌ ವೀಸಾದಲ್ಲಿ ಬೆಂಗ್ಳೂರಿಗೆ ಬಂದು ಡ್ರಗ್ಸ್‌ ದಂಧೆ| ಪೆಡ್ಲರ್‌ ಮೂಸಾನಿಂದ ಡ್ರಗ್ಸ್‌ ಖರೀದಿಸಿ ಮಾರಾಟ| ನೈಜೀರಿಯಾ ಮೂಲದ ಜೋಸೆಫ್‌ ನ್ಡುಕ್ವೇ ಓಕಾಫಾರ್‌ ಹಾಗೂ ಉಚಾಕ್ವಾ ಮಾರ್ಕಮೌರಿಸ್‌ ಮಬಾಟ್ಯುಕ್ವಾ ಬಂಧಿತ ಆರೋಪಿಗಳು|  


ಬೆಂಗಳೂರು(ಮಾ.18): ರಾಜಧಾನಿಯಲ್ಲಿ ಪ್ರತ್ಯೇಕವಾಗಿ ಭರ್ಜರಿ ಕಾರ್ಯಾಚರಣೆ ನಡೆಸಿ ಮಾದಕ ವಸ್ತು ದಂಧೆಯಲ್ಲಿ ತೊಡಗಿದ್ದ ಇಬ್ಬರು ವಿದೇಶಿ ಪೆಡ್ಲರ್‌ಗಳನ್ನು ಸೆರೆ ಹಿಡಿದ ಸಿಸಿಬಿ ಪೊಲೀಸರು, 75 ಲಕ್ಷ ಮೌಲ್ಯದ ಡ್ರಗ್ಸ್‌ ಜಪ್ತಿ ಮಾಡಿದ್ದಾರೆ.

ನೈಜೀರಿಯಾ ಮೂಲದ ಜೋಸೆಫ್‌ ನ್ಡುಕ್ವೇ ಓಕಾಫಾರ್‌ ಹಾಗೂ ಉಚಾಕ್ವಾ ಮಾರ್ಕಮೌರಿಸ್‌ ಮಬಾಟ್ಯುಕ್ವಾ ಬಂಧಿತರಾಗಿದ್ದು, ಆರೋಪಿಗಳಿಂದ 510 ಗ್ರಾಂ ಎಂಡಿಎಂಎ, 141 ಎಕ್ಸ್‌ಟೆಸಿ ಮಾತ್ರೆಗಳು, 126 ಎಲ್‌ಎಸ್‌ಡಿ ಸ್ಟ್ರಿಫ್ಸ್‌ಗಳು ಸೇರಿದಂತೆ 65 ಲಕ್ಷ ಮೌಲ್ಯದ ಡ್ರಗ್ಸ್‌, 5 ಸಾವಿರ ನಗದು ಹಾಗೂ 5 ಮೊಬೈಲ್‌ಗಳು ಜಪ್ತಿಯಾಗಿದೆ. ನಗರದಲ್ಲಿ ಡ್ರಗ್ಸ್‌ ದಂಧೆ ಬಗ್ಗೆ ಮಾಹಿತಿ ಸಂಗ್ರಹಿಸುವಾಗ ಈ ವಿದೇಶಿ ಪ್ರಜೆಗಳ ಕುರಿತು ಲಭಿಸಿದ ಮಾಹಿತಿ ಮೇರೆಗೆ ದಾಳಿ ನಡೆಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Tap to resize

Latest Videos

ಜಕ್ಕೂರಿನಲ್ಲಿ ಸಿಕ್ಕಿಬಿದ್ದ ಜೋಸೆಫ್‌:

ಜಕ್ಕೂರು ಚೊಕ್ಕನಹಳ್ಳಿಯಲ್ಲಿರುವ ಮನೆ ಮೇಲೆ ದಾಳಿ ನಡೆಸಿದ ಸಿಸಿಬಿ ಪೊಲೀಸರು, ಅಲ್ಲಿನ ನಿವಾಸಿ ಜೋಸೆಫ್‌ ನ್ಡುಕ್ವೇ ಓಕಾಫಾರ್‌ ಬಲೆಗೆ ಹಾಕಿದ್ದಾರೆ. ಬಳಿಕ ಆತನಿಂದ 25 ಲಕ್ಷ ಮೌಲ್ಯದ 65 ಗ್ರಾಂ ಕೊಕೇನ್‌, 50 ಎಕ್ಸ್‌ಟೆಸಿ ಮಾತ್ರೆಗಳು, 56 ಎಲ್‌ಎಸ್‌ಡಿ ಸ್ಟ್ರಿಫ್ಸ್‌ಗಳು, 10 ಗ್ರಾಂ ಎಂಡಿಎಂಎ ಕ್ರಿಸ್ಟೆಲ್‌, ಎರಡು ಮೊಬೈಲ್‌ಗಳನ್ನು ಜಪ್ತಿ ಮಾಡಲಾಗಿದೆ.

ಸಿಕ್ಕಿಬಿದ್ದ ಡ್ರಗ್ಸ್‌ಕೇಸ್ ಕಿಂಗ್‌ಪಿನ್, ಟಾಲಿವುಡ್ ನಟ ತನುಷ್‌ಗೂ ಸಂಕಷ್ಟ

ಒಂದೂವರೆ ವರ್ಷದ ಹಿಂದೆ ಪ್ರವಾಸದ ವೀಸಾದಡಿ ಭಾರತಕ್ಕೆ ಬಂದ ಜೋಸೆಫ್‌, ವೀಸಾ ನಿಯಮ ಉಲ್ಲಂಘಿಸಿ ಡ್ರಗ್ಸ್‌ ದಂಧೆಯಲ್ಲಿ ತೊಡಗಿದ್ದ. ಇತ್ತೀಚೆಗೆ ಮಾದವಾರ ಸಮೀಪ ಡ್ರಗ್ಸ್‌ ಮಾರಾಟದ ವೇಳೆ ಗೋವಿಂದಪುರ ಪೊಲೀಸರಿಂದ ತಪ್ಪಿಸಿಕೊಂಡಿದ್ದ ಉಸ್ಮಾನ್‌ ಮೊಹಮ್ಮದ್‌ ಅಲಿಯಾಸ್‌ ಮೂಸಾನ ಸಹಚರನಾಗಿದ್ದಾನೆ. ಮೂಸಾನಿಂದ ಡ್ರಗ್ಸ್‌ ಪಡೆದು ಆರೋಪಿಗಳು ನಗರದಲ್ಲಿ ಮಾರಾಟ ಮಾಡುತ್ತಿದ್ದ. ಮೂಸಾನ ಬೆನ್ನುಹತ್ತಿದ್ದಾಗ ಆತನ ಸಂಪರ್ಕದಲ್ಲಿದ್ದ ಜೋಸೆಫ್‌ ಗಾಳಕ್ಕೆ ಸಿಲುಕಿದ್ದಾನೆ. ಇನ್‌ಸ್ಪೆಕ್ಟರ್‌ ಲಕ್ಷ್ಮೇಕಾಂತಯ್ಯ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿದೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.

50 ಲಕ್ಷ ಡ್ರಗ್ಸ್‌ ಜಪ್ತಿ

ಜಕ್ಕೂರು ಸಮೀಪದ ನವ್ಯಾ ನಗರದಲ್ಲಿ ಇನ್‌ಸ್ಪೆಕ್ಟರ್‌ ಬಿ.ಎಸ್‌.ಅಶೋಕ್‌ ನೇತೃತ್ವದ ತಂಡ ನಡೆಸಿದ ಮತ್ತೊಂದು ಕಾರ್ಯಾಚರಣೆಯಲ್ಲಿ ಉಚ್ಚಾಕ್ವಾ ಮಾರ್ಕಮೌರಿಸ್‌ ಮಬಾಟ್ಯುಕ್ವಾ ಸೆರೆಯಾಗಿದ್ದಾನೆ. ಆರೋಪಿಯಿಂದ 50 ಲಕ್ಷ ಮೌಲ್ಯದ 500 ಗ್ರಾಂ ಎಂಡಿಎಂಎ, 91 ಎಕ್ಸ್‌ಟೆಸಿ ಮಾತ್ರೆಗಳು, 56 ಎಲ್‌ಎಸ್‌ಡಿ ಸ್ಟ್ರಿಫ್ಸ್‌ಗಳು, 5 ಸಾವಿರ ನಗದು, 3 ಮೊಬೈಲ್‌ಗಳು ಹಾಗೂ ಸ್ಕೂಟರ್‌ ಜಪ್ತಿಯಾಗಿದೆ. ಕೆಲ ತಿಂಗಳ ಹಿಂದೆ ಬ್ಯುಸಿನೆಸ್‌ ವೀಸಾದಡಿ ಭಾರತಕ್ಕೆ ಬಂದಿದ್ದ ಆರೋಪಿ, ಜಕ್ಕೂರು ಹತ್ತಿರದ ನವ್ಯಾ ನಗರದಲ್ಲಿ ವಾಸವಾಗಿದ್ದ. ವಿದೇಶದ ಡಾರ್ಕ್ನೆಟ್‌ ಮೂಲಕ ಡ್ರಗ್ಸ್‌ ಖರೀದಿಸಿ ಬಳಿಕ ಆತ ನಗರದಲ್ಲಿ ದಂಧೆ ನಡೆಸುತ್ತಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇನ್ನು ವೀಸಾ ನಿಯಮ ಉಲ್ಲಂಘನೆ ಸಂಬಂಧ ಈ ಇಬ್ಬರು ವಿದೇಶಿ ಪೆಡ್ಲರ್‌ಗಳ ಮೇಲೆ ಪ್ರತ್ಯೇಕ ಪ್ರಕರಣ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
 

click me!