ಕಾವಲುಗಾರನ ಕೈಕಾಲು ಕಟ್ಟಿ ಮುತ್ತೂಟ್‌ ಫೈನಾನ್ಸ್‌ಗೆ ನುಗ್ಗಿ 7 ಕೋಟಿ ದರೋಡೆ

By Kannadaprabha News  |  First Published Jan 23, 2021, 8:16 AM IST

ಹಾಡಹಾಗಲೇ ಸಿನಿಮೀಯ ರೀತಿ ದರೋಡೆ| ಗಡಿಭಾಗದ ಹೊಸೂರಲ್ಲಿ ಘಟನೆ| ನಗದು, ಚಿನ್ನಾಭರಣ 7 ಕೋಟಿ ರು. ಮೌಲ್ಯದ ವಸ್ತುಗಳನ್ನು ದೋಚಿ ಪರಾರಿ| ದರೋಡೆಕೋರರ ಪತ್ತೆಗೆ ಕಾರ್ಯಾಚರಣೆಗಿಳಿದ ಕರ್ನಾಟಕ ಪೊಲೀಸರು| 


ಆನೇಕಲ್‌(ಜ.23):  ನೆರೆಯ ಹೊಸೂರು ಪಟ್ಟಣದಲ್ಲಿರುವ ಮುತ್ತೂಟ್‌ ಫೈನಾನ್ಸ್‌ಗೆ ಶುಕ್ರವಾರ ಬೆಳಗ್ಗೆ 9ರ ವೇಳೆಗೆ ನುಗ್ಗಿದ್ದ 8 ಮಂದಿಯ ಕಳ್ಳರ ಗುಂಪೊಂದು ಕಾವಲುಗಾರನ ಕೈಕಾಲು ಕಟ್ಟಿ ಹಾಕಿ, ಮ್ಯಾನೇಜರ್‌ ತಲೆಗೆ ರಿವಾಲ್ವರ್‌ ಇಟ್ಟು ಸಿನಿಮೀಯ ರೀತಿಯಲ್ಲಿ ನಗದು, ಚಿನ್ನಾಭರಣ 7 ಕೋಟಿ ರು. ಮೌಲ್ಯದ ವಸ್ತುಗಳನ್ನು ದೋಚಿ ಪರಾರಿಯಾಗಿದ್ದಾರೆ.

ಬ್ಯಾಂಕಿನೊಳಗೆ ನುಗ್ಗಿದ ಖದೀಮರು ಸಿಬ್ಬಂದಿಯ ಕೈ ಕಾಲುಗಳನ್ನು ಕಟ್ಟಿ ಅಲುಗಾಡದಂತೆ ಎಚ್ಚರಿಕೆ ನೀಡಿದರು. ಚಿನ್ನ ಹಾಗೂ ನಗದು ಸೇರಿದಂತೆ 7 ಕೋಟಿ ರು. ದೋಚಿಕೊಂಡು ಹೋದರು ಎಂದು ಮ್ಯಾನೇಜರ್‌ ತಿಳಿಸಿದ್ದಾರೆ.
4 ಬೈಕಿನಲ್ಲಿ ಬಂದ 8 ಜನ ಕೃತ್ಯ ಎಸಗಿದ್ದು, ಪೊಲೀಸರ ದಾರಿ ತಪ್ಪಿಸುವ ಸಲುವಾಗಿ ದರೋಡೆ ಮಾಡಿದ ಬಳಿಕ ಒಂದೊಂದು ದಿಕ್ಕಿನತ್ತ ಸಾಗಿದ್ದಾರೆ. ಕರ್ನಾಟಕ ಗಡಿಯತ್ತ ಒಂದು ಬೈಕ್‌ ಸಾಗಿದ್ದು, ಕೂಡಲೇ ಅತ್ತಿಬೆಲೆ ಹಾಗೂ ಆನೇಕಲ್‌ ಪೊಲೀಸರಿಗೆ ಮಾಹಿತಿ ರವಾನಿಸಿದ್ದಾರೆ.

Latest Videos

undefined

ಪಿಪಿಇ ಕಿಟ್ ಧರಿಸಿ ಬಂದವ ದೋಚಿದ್ದು  25 ಕೆಜಿ ಚಿನ್ನ!

ಕೂಡಲೇ ಕರ್ನಾಟಕ ಪೊಲೀಸರು ದರೋಡೆಕೋರರ ಪತ್ತೆಗೆ ಕಾರ್ಯಾಚರಣೆಗೆ ಇಳಿದಿದ್ದಾರೆ, ಆದರೆ, ಆನೇಕಲ್‌ ತಾಲೂಕಿನ ಗಡಿ ಗ್ರಾಮ ಬಳ್ಳೂರು ಮೂಲಕ ರಾಜ್ಯವನ್ನು ಪ್ರವೇಶಿಸಿರುವ ದರೋಡೆಕೋರರು ಭಕ್ತಿಪುರ ಎಂಬ ಹಳ್ಳಿಯ ಬಳಿ ಒಂದು ಮೊಬೈಲ್‌ ಎಸೆದು, ಸ್ವಲ್ಪ ದೂರದಲ್ಲಿ ಮುತ್ತೂಟ್‌ ಕಂಪನಿಯ ಕಾಗದ ಪತ್ರಗಳನ್ನು ಎಸೆದು ಹೋಗಿದ್ದಾರೆ. ಹೀಗೆ ಮೊಬೈಲ್‌ ಎಸೆದು ಹೋಗಿರುವ ಕಾರಣ ಕಳ್ಳರ ಪತ್ತೆ ಕಠಿಣವಾಗಿದ್ದು, ಕಾರ್ಯಾಚರಣೆ ಮುಂದುವರೆಸಿದ್ದಾರೆ.
 

click me!