ಲಾಭದ ಉದ್ದೇಶಕ್ಕೆ 5 ಲಕ್ಷ ಜನರ ಫೇಸ್‌ಬುಕ್‌ಗೆ ಕನ್ನ : ದಾಖಲಾಯ್ತು ಕೇಸ್

By Kannadaprabha NewsFirst Published Jan 23, 2021, 10:45 AM IST
Highlights

ಲಾಭದ ಉದ್ದೇಶಕ್ಕಾಗಿ ಲಕ್ಷಾಂತರ ಭಾರತೀಯರ ಫೇಸ್‌ಬುಕ್‌ಗೆ ಕನ್ನ ಹಾಕಿದ್ದ ಎರಡು ಕಂಪನಿಗಳ ವಿರುದ್ಧ ಇದೀಗ ಪ್ರಕರಣ ದಾಖಲಾಗಿದೆ. 

 ನವದೆಹಲಿ (ಜ.23):   ಲಾಭದ ಉದ್ದೇಶಕ್ಕಾಗಿ ಹಾಗೂ ಲೋಕಸಭೆ ಚುನಾವಣೆ ಮೇಲೆ ಪ್ರಭಾವ ಬೀರುವ ಉದ್ದೇಶದಿಂದ 5.62 ಲಕ್ಷ ಭಾರತೀಯ ಫೇಸ್‌ಬುಕ್‌ ಬಳಕೆದಾರರ ಮಾಹಿತಿಯನ್ನು ಅವರಿಗೆ ಅರಿವಿಲ್ಲದಂತೆಯೇ ಅಕ್ರಮವಾಗಿ ಬಳಸಿದ ಆರೋಪ ಸಂಬಂಧ ಬ್ರಿಟನ್‌ ಮೂಲದ ಕೇಂಬ್ರಿಜ್‌ ಅನಾಲಿಟಿಕಾ ಹಾಗೂ ಗ್ಲೋಬಲ್‌ ಸೈನ್ಸ್‌ ರೀಸರ್ಚ್ ಕಂಪನಿಗಳ ವಿರುದ್ಧ ಸಿಬಿಐ ಪ್ರಕರಣ ದಾಖಲು ಮಾಡಿದೆ.

ಭಾರತೀಯ ದಂಡ ಸಂಹಿತೆಯಡಿ ಕ್ರಿಮಿನಲ್‌ ಸಂಚು ಹಾಗೂ ಮಾಹಿತಿ ತಂತ್ರಜ್ಞಾನ ಕಾಯ್ದೆ ಉಲ್ಲಂಘನೆ ಆರೋಪದಡಿ ಬ್ರಿಟನ್‌ ಮೂಲದ ಈ ಎರಡೂ ಕಂಪನಿಗಳ ವಿರುದ್ಧ ಪ್ರಕರಣ ದಾಖಲಾಗಿದೆ. ಎಲೆಕ್ಟ್ರಾನಿಕ್ಸ್‌ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವಾಲಯ 2018ರ ಜು.25ರಂದು ಈ ಸಂಬಂಧ ಸಿಬಿಐಗೆ ದೂರು ನೀಡಿತ್ತು. ಆ ಕುರಿತಂತೆ 18 ತಿಂಗಳ ಕಾಲ ಪ್ರಾಥಮಿಕ ವಿಚಾರಣೆ ನಡೆಸಿದ ಸಿಬಿಐ, ಪ್ರಕರಣದಲ್ಲಿ ಸತ್ಯಾಂಶ ಕಂಡುಬಂದ ಹಿನ್ನೆಲೆಯಲ್ಲಿ ಕೇಸು ಹೂಡಿದೆ.

ಮೆಸೇಜಿಗೆ ಕನ್ನ ಹಾಕುತ್ತಾರೆ! ಹೌದೇ? ..

ಏನಿದು ಪ್ರಕರಣ?:

335 ಫೇಸ್‌ಬುಕ್‌ ಬಳಕೆದಾರರ ಮಾಹಿತಿಯನ್ನು ಸಂಶೋಧನೆ ಹಾಗೂ ಶೈಕ್ಷಣಿಕ ಉದ್ದೇಶಕ್ಕಾಗಿ ಬಳಸಿಕೊಳ್ಳುವ ಸಲುವಾಗಿ ‘ದಿಸ್‌ ಇಸ್‌ ಯುವರ್‌ ಡಿಜಿಟಲ್‌ ಲೈಫ್‌’ ಎಂಬ ಆ್ಯಪ್‌ ಅನ್ನು ಗ್ಲೋಬಲ್‌ ಸೈನ್ಸ್‌ ರೀಸಚ್‌ರ್‍ ಕಂಪನಿಯ ಅಲೆಕ್ಸಾಂಡರ್‌ ಕೋಗನ್‌ ಎಂಬುವರು ಸಿದ್ಧಪಡಿಸಿದ್ದರು. ಬಳಕೆದಾರರ ಮಾಹಿತಿ ಉಪಯೋಗಿಸಲು ಫೇಸ್‌ಬುಕ್‌ನಿಂದ ಅನುಮತಿಯನ್ನೂ ಪಡೆದುಕೊಂಡಿದ್ದರು. ಆದರೆ 335 ಬಳಕೆದಾರರಷ್ಟೇ ಅಲ್ಲದೆ ಅವರ ಸ್ನೇಹ ಬಳಗದಲ್ಲಿದ್ದವರೂ ಸೇರಿ 5.62 ಲಕ್ಷ ಬಳಕೆದಾರರ ಮಾಹಿತಿಯನ್ನು ಅಕ್ರಮವಾಗಿ ಕೋಗನ್‌ ಅವರ ಕಂಪನಿ ಗಳಿಸಿತ್ತು. ಇದನ್ನು ವಾಣಿಜ್ಯ ಉದ್ದೇಶಕ್ಕಾಗಿ ಕೇಂಬ್ರಿಜ್‌ ಅನಾಲಿಟಿಕಾ ಸಂಸ್ಥೆಗೆ ಮಾರಾಟ ಮಾಡಲಾಗಿತ್ತು. ಭಾರತದ ಲೋಕಸಭೆ ಚುನಾವಣೆ ಮೇಲೆ ಪ್ರಭಾವ ಬೀರಲು ಈ ದತ್ತಾಂಶಗಳನ್ನು ಬಳಸಿಕೊಳ್ಳಲಾಗಿತ್ತು ಎಂಬ ಆರೋಪ ಕೇಳಿಬಂದಿತ್ತು.

click me!