ಮೆಸೇಜಿಗೆ ಕನ್ನ ಹಾಕುತ್ತಾರೆ! ಹೌದೇ?
ಅಕಟಕಟಾ! ನನ್ನ ಪ್ರೈವಸಿಯನ್ನು ವಾಟ್ಸಪ್ಪು ಸರ್ರನೆ ಎಗರಿಸಿತೇ? ಹಾ ದುರ್ವಿಧಿಯೇ! ನಾನೆಂಥ ಹತಭಾಗ್ಯ ಅಂದುಕೊಂಡವರ ಥಾಟಿಗೆ ಒಂದಷ್ಟುಫುಡ್ಡು ಬಡಿಸುವ ಪ್ರಯತ್ನವಿದು.
ಶರತ್ ಭಟ್ ಸೇರಾಜೆ
ಹಳೆಯ ಕತೆಯೊಂದನ್ನು ಸುಮ್ಮನೆ ಓದಿಕೊಳ್ಳಿ. ಗಡಿಯೊಂದನ್ನು ಒಬ್ಬ ಹುಡುಗ ವಾರಕ್ಕೊಮ್ಮೆ ಸೈಕಲ್ಲಿನಲ್ಲಿ ದಾಟುತ್ತಿದ್ದನಂತೆ. ಸೈಕಲ್ಲಿನಲ್ಲಿ ಯಾವಾಗಲೂ ಎರಡು ಚೀಲಗಳು. ಪಹರೆ ಕಾಯುವವನಿಗೆ ಸಂದೇಹ ಬಂತು. ಏನಿದೆ ಚೀಲದಲ್ಲಿ? ಎಂದರೆ, ಏನಿಲ್ಲ, ಬರೀ ಮರಳು ಅಷ್ಟೇ ಎಂದ ಹುಡುಗ. ಇಳಿ ಕೆಳಗೆ ಅಂತ ಹೇಳಿ ಚೀಲ ಬಿಚ್ಚಿಸಿ ನೋಡಿದರೆ ನಿಜಕ್ಕೂ ಮರಳೇ. ಹೀಗೇ ಒಂದು ತಿಂಗಳಾಯಿತು.ಏನೋ ಸಾಗಾಣಿಕೆ ಆಗ್ತಾ ಇದೆ ಅಂತ ಗುಮಾನಿ, ನೋಡಿದರೆ ಏನೂ ಇಲ್ಲ. ತಜ್ಞರು ಮರಳನ್ನು ಪರೀಕ್ಷೆ ಮಾಡಿ ನೋಡಿದಾಗಲೂ ಸೈಕಲು ಸವಾರನ ಚೀಲದಲ್ಲಿರುವುದು ಮರಳಲ್ಲದೆ ಬೇರೇನೂ ಅಲ್ಲ ಅಂತ ಸಾಬೀತಾಯಿತು. ಕಾವಲು ಪಡೆಯವನ ತಲೆಕೆಟ್ಟು ಚಿತ್ರಾನ್ನವಾಯಿತು. ಕಡೆಗೊಮ್ಮೆ, ಕೆಲಸ ಬಿಟ್ಟಮೇಲೆ, ಹುಡುಗನ ಗೆಳೆತನ ಮಾಡಿಕೊಂಡು, ನೀನು ಏನನ್ನೋ ಸಾಗಿಸುತ್ತಿದ್ದೆ ಅಂತ ನನಗೆ ಗೊತ್ತಿದೆ, ಏನು ಅಂತ ಮಾತ್ರ ಗೊತ್ತಾಗಲಿಲ್ಲಪ್ಪ ಅಂದನಂತೆ ಮಾಜಿ ಕಾವಲುಗಾರ. ನಾನು ನಿಜಕ್ಕೂ ಸಾಗಿಸುತ್ತಿದ್ದದ್ದು ಸೈಕಲ್ಲುಗಳನ್ನು ಅಂದನಂತೆ ಹುಡುಗ ನಗುತ್ತಾ. ಈ ಕಥೆಗೆ ಕೊನೆಗೆ ಬರೋಣ.
ವಾಟ್ಸಾಪ್‌ನ ಹೊಸ ಫೀಚರ್, ಬಳಕೆದಾರರಿಗೆ ನೆಮ್ಮದಿ!
ಗೂಗಲ್ಲಿನಲ್ಲಿ ನೀವು ಬಾಯಿಗೆ(ಕೈಗೆ)ಬಂದಂತೆ ಏನೋ ಟೈಪು ಮಾಡಿದರೆ ತಕ್ಷಣವೇ ಸಾವಿರಾರು ಸೈಟುಗಳು ಬಂದು ಜೀ ಹುಜೂರ್ ಎನ್ನುತ್ತವೆ. ಫೇಸ್ಬುಕ್ಕಿನೊಳಗೆ ನುಗ್ಗಿ, ಅಲ್ಲಿ ಬಿಚ್ಚಿಕೊಳ್ಳುವ ರಂಗ್‌ಬಿರಂಗೀ ಜಗತ್ತನ್ನು ನೋಡುತ್ತಾ ನೋಡುತ್ತಾ ನಿಧಾನಕ್ಕೆ ಕೆಳ ಜಾರುತ್ತೀರಿ. ನಿಮ್ಮ ಬೆರಳ ತುದಿಯ ಓರೆ ಸನ್ನೆಗೆ ಒಂದಿಡೀ ಜಗತ್ತೇ ಬಾಯಿ ತೆರೆದು ಕೂರುತ್ತದೆ, ಬಟನ್ ಒತ್ತಿದರೆ ಮಾಯಾಲೋಕವೊಂದು ಸೃಷ್ಟಿಯಾದಂತೆ, ಗಾರುಡಿಗನೊಬ್ಬ ಟೊಪ್ಪಿಯೊಳಗಿಂದ ಮೊಲವೊಂದನ್ನು ತೆಗೆದಂತೆ. ‘Any sufficiently advanced technology is indistinguishable from magic ’ ಅಂತ ಸೈನ್ಸಿ$ಫಿಕ್ಷನ್ ಲೇಖಕ ಆರ್ಥರ್ ಸಿ ಕ್ಲಾರ್ಕ್ ಹೇಳಿದಂತೆ. ಈ ಮ್ಯಾಜಿಕ್ಕು, ಮಂತ್ರವೂ ಅಲ್ಲ, ಕಣ್ಕಟ್ಟೂಅಲ್ಲ, ಇದು ಮ್ಯಾಜಿಕ್ಕೇ ಅಲ್ಲ, ಇದರ ಹಿಂದೆ ಲಕ್ಷಗಟ್ಟಲೆ ಜನರ ಧೀಶಕ್ತಿ, ಪರಿಶ್ರಮ, ಎಂಜಿನಿಯರಿಂಗ್ ಇದೆ, ಕೋಟಿ ಕೋಟಿಗಟ್ಟಲೆ ದುಡ್ಡಿದೆ ಅಂತ ಮರೆತೇ ಬಿಡುತ್ತೀರಿ.
ಫೇಸ್ಬುಕ್ಕನ್ನೇ ತೆಗೆದುಕೊಳ್ಳಿ. ಒಂದು ಸೈಟು ಕೆಲಸ ಮಾಡಲಿಕ್ಕೆ ಸರ್ವರ್ ಎಂಬ ಒಂದು ತರದ ಕಂಪ್ಯೂಟರ್ ಬೇಕಾಗುತ್ತದೆ. ಇಂಥ ಸರ್ವರುಗಳನ್ನು ಝುಕ್ಕರ್ ಬರ್ಗನ ಮನೆಯ ಅಟ್ಟದಲ್ಲಿಡುವುದಿಲ್ಲ, ಅವುಗಳನ್ನು ಇಡುವುದು ಡಾಟಾಸೆಂಟರ್ ಎಂಬ ಗೋದಾಮುಗಳಲ್ಲಿ. ನಾನೂ ಇಂಥ ಒಂದು ಡಾಟಾಸೆಂಟರ್ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದಾಗ ಅಲ್ಲಿಗೆ ಟೂರ್ ಹೋಗಿದ್ದೆ. ಕಂಪ್ಯೂಟರನ್ನು ಗೋಣಿಚೀಲದಲ್ಲಿ ತುಂಬಿಸಿ ಇಡಲಾಗುವುದಿಲ್ಲ. ಅವುಗಳನ್ನು ಆಪ್ಟಿಕಲ್ ಫೈಬರ್ ಬಳಸಿ ಬೆಸೆಯಬೇಕು, ಕೂಲಿಂಗ್ ಸಿಸ್ಟಮ್ ಬಳಸಿ ತಣ್ಣಗಿಡಬೇಕು, ಅವುಗಳಿಗೆ ಅಯ್ಯೋ ಸೆಖೆ ಅನ್ನಿಸದಂತೆ ನೋಡಿಕೊಳ್ಳಲಿಕ್ಕೆ ಫ್ಯಾನುಗಳು ಇರುತ್ತವೆ, ಕರೆಂಟು ಹೋಗುವ ಹಾಗೇ ಇಲ್ಲ. ಪ್ರವಾಹ, ಬಿರುಗಾಳಿ ಬಂದರೆ ಏನು ಮಾಡಬೇಕು ಎಂಬ ತಯಾರಿ ಬೇಕು. ಹೀಗೆ.. ಒಟ್ಟಿನಲ್ಲಿ ಈ ಕಂಪ್ಯೂಟರುಗಳಿಗೆ ರಾಜ ಮರ್ಯಾದೆ ಕೊಡಬೇಕು.
New Sensation: ವಾಟ್ಸಾಪ್ ಹಿಂದಿಕ್ಕುವ ‘ಸಿಗ್ನಲ್’
ಫೇಸ್ಬುಕ್ಕಿನಂಥ ದೊಡ್ಡ ಕುಳಗಳು ತಮ್ಮ ಡಾಟಾ ಸೆಂಟರುಗಳನ್ನು ತಾವೇ ಕಟ್ಟಿಕೊಳ್ಳುತ್ತವೆ. ಈಗ ಉಸಿರು ಬಿಗಿ ಹಿಡಿದುಕೊಂಡು ಲೆಕ್ಕಕ್ಕೆ ಬನ್ನಿ. ಈ ಒಂದೊಂದು ಡಾಟಾ ಸೆಂಟರುಗಳ ವಿಸ್ತಾರ ಸಾಧಾರಣವಾಗಿ 25 ಲಕ್ಷ ಸ್ಕೆ$್ವೕರ್ ಫೀಟ್! ಲಘುವಾಗಿ ಹೃದಯಾಘಾತ ಆಗಿರದಿದ್ದರೆ ಮುಂದೆ ಓದಿ. ಫೇಸ್ಬುಕ್ಕಿನವರು ಅವರ ಅಷ್ಟೂಸರ್ವರುಗಳನ್ನು ಒಂದು ಸುವಿಶಾಲವಾದ ಬಟಾಬಯಲಿನಲ್ಲಿ ಜೋಡಿಸಿಟ್ಟರೆ, ಎಲ್ಲ ಸರ್ವರುಗಳನ್ನೂ ಒಂದು ಸಲ ಮುಟ್ಟಿನನ್ನ ಜನ್ಮ ಪಾವನ ಮಾಡಿಕೊಳ್ಳುತ್ತೇನೆ ಅಂತ ನೀವು ಹೊರಟರೆ, ನೀವು ಕಮ್ಮಿ ಅಂದರೂ 350 ಎಕರೆಗಳಷ್ಟುಸುತ್ತಬೇಕು! ಬೇರೇನಾಗದಿದ್ದರೂ, ಈ ರಾಕ್ಷಸ ಪ್ರಮಾಣದ ಡಾಟಾದಲ್ಲಿ ನನ್ನದೆಷ್ಟುಕ್ಷುದ್ರ ಎಂಬ ಭಾವ ಮೂಡಿ ನಮ್ಮ ಅಹಂಕಾರ ನಿರಸನವಾದರೂ ಆದೀತೇನೋ!
ಅದಿರಲಿ. ಇಷ್ಟೆಲ್ಲ ಮಾಡುವುದಕ್ಕೆ ಖರ್ಚೆಷ್ಟಾಗುತ್ತದೆ ಅಂತ ನೀವೇ ಊಹಿಸಿಕೊಳ್ಳಿ. ಇನ್ನು ಫೇಸ್ಬುಕ್ಕಿನಲ್ಲಿ 50,000 ಜನ ಕೆಲಸ ಮಾಡುತ್ತಾರೆ ಅಂತಿಟ್ಟುಕೊಳ್ಳಿ, ಒಬ್ಬೊಬ್ಬರ ಸಂಬಳ 50,000 ಅಂತ ಅಂದಾಜು ನಿಗದಿ ಮಾಡಿ. ಇಷ್ಟಕ್ಕೆ ತಿಂಗಳಿಗೆ 250 ಕೋಟಿ ರೂಪಾಯಿ, ವರ್ಷಕ್ಕೆ ಮೂರು ಸಾವಿರ ಕೋಟಿ ರೂಪಾಯಿ ಬರೀ ಸಂಬಳದ ಬಟವಾಡೆಗೇ ಬೇಕು. ಇಷ್ಟುಖರ್ಚಾದರೂ ಉಂಟೇ ಉಂಟು. ನೀವು ಒಂದೇ ಒಂದು ರೂಪಾಯಿಯನ್ನೂ ಕಟ್ಟುತ್ತಿಲ್ಲ ಅಂತ ನೆನಪಿದೆಯಲ್ಲ. ಹಾಗಾದರೆ ಇಷ್ಟಕ್ಕೆಲ್ಲ ದುಡ್ಡು ಎಲ್ಲಿಂದ ಬಂದು ಬೀಳುತ್ತದೆ? ನಿಮ್ಮ ಆಯ್ಕೆಗಳು ಹೀಗಿವೆ :
ಎ. ಖರ್ಚಿಗೆ ಇಟ್ಟುಕೊಳ್ಳಿ ಅಂತ ಹದಿನೆಂಟೆಕರೆ ಅಡಕೆ ತೋಟವನ್ನು ನನ್ನ ಅಜ್ಜ ಫೇಸ್ಬುಕ್ಕಿಗೆ ಬರೆದುಕೊಟ್ಟಿದ್ದಾರೆ!
ಬಿ. ಮಾರ್ಕ್ ಜುಕ್ಕರ್ ಬರ್ಗನದ್ದು ಸಾವಿರ ಕೋಟಿಗಳ ಖೋಟಾ ನೋಟಿನ ದಂಧೆ ಇರಬಹುದು!
ಅ. ಆಯ್ದ ಬ್ಯಾಂಕುಗಳಲ್ಲಿ ದರೋಡೆ ಮಾಡುವವರ ತಂಡವೊಂದನ್ನು ಫೇಸ್ಬುಕ್ ಇಟ್ಟುಕೊಂಡಿರಬಹುದು.
ಆ. ನನಗೆ ಇಂಥದ್ದೆಲ್ಲ ತಲೆಗೆ ಹೋಗುವುದಿಲ್ಲ.
ನಮಗೆ ಎಲ್ಲವೂ ಪುಗಸಟ್ಟೆಬೇಕು. ಅವರಿಗೆ ಎಷ್ಟುಸಾವಿರ ಕೋಟಿಗಳಲ್ಲಿ ಖರ್ಚಾದರೂ ನಮಗದು ಬಿಟ್ಟಿಯಾಗಿ ಸಿಗಬೇಕು, ಇದು ನಮ್ಮ ಮನಃಸ್ಥಿತಿ. ಹಾಗಾದರೆ ವಹಿವಾಟು ನಡೆಯುತ್ತಿರುವುದು ಹೇಗೆ? ನಾವು ನಿಮ್ಮ ಡಾಟಾವನ್ನು ಯಾರಿಗೂ ಮಾರುವುದಿಲ್ಲ, ನಾವು ಜಾಸ್ತಿ ದುಡ್ಡು ಮಾಡುವುದು ಟಾರ್ಗೆಟೆಡ್ ಜಾಹೀರಾತುಗಳಿಂದ ಅಂತ ಫೇಸ್ಬುಕ್ಕಿನವರೇ ಬಾಯ್ಬಿಟ್ಟು ಹೇಳಿಯೂ ಇದ್ದಾರೆ. ‘If you are not paying for the produc,you are the product.’ ಎಂಬ ಚತುರೋಕ್ತಿಯನ್ನು ನಾವು ಸ್ಮರಿಸಿಕೊಂಡು ಮುಂದೆ ಹೋಗಬಹುದು. ಆದರೆ ಫೇಸ್ಬುಕ್ಕಿನವರು ಇಪ್ಪತ್ತು ಬಿಲಿಯನ್ ಡಾಲರು ಎಣಿಸಿ ವಾಟ್ಸಪ್ಪನ್ನು ಖರೀದಿ ಮಾಡಿದ್ದು ಯಾವ ಮಂಡೆಪೆಟ್ಟಿನ ಕೆಲಸ? ವಾಟ್ಸಪ್ಪಿನಲ್ಲಿ ಜಾಹೀರಾತುಗಳೂ ಬರುವುದಿಲ್ಲವಲ್ಲ.
ವಾಟ್ಸಪ್‌ನಲ್ಲಿ ಈ ವರ್ಷ ಬರಲಿದೆ ಮತ್ತೆ 6 ಹೊಸ ಫೀಚರ್‌ಗಳು..!
ಮತ್ತೆಲ್ಲಿಂದ ಅವರ ಹಣದ ಥೈಲಿ ತುಂಬುತ್ತದೆ? ಇದಕ್ಕೆ ಸ್ಪಷ್ಟವಾದ ಉತ್ತರ ನನಗೆ ಗೊತ್ತಿರುವುದಾಗಿ ಇಲ್ಲ. ನಮ್ಮನ್ನೇನ್ರೀ ಕೇಳ್ತೀರಾ, ಜುಕ್ಕರಬರ್ಗನನ್ನೇ ಕೇಳಿ ಎಂಬ ಉತ್ತರವನ್ನು ಬದಿಗಿಟ್ಟು, ಊಹೆ ಮಾಡೋಣ. ಅಂಬಾನಿಗಳು ಜಿಯೊವನ್ನು ಯಾಕೆ ಫ್ರೀ ಕೊಟ್ಟರು ಅಂತ ಯೋಚನೆ ಮಾಡಿದರೆ ಒಂದು ಅನುಮಾನವನ್ನು ಮುಟ್ಟಬಹುದು.
ಅಂಬಾನಿಗಳು ಹೇಳಿ ಕೇಳಿ ವ್ಯಾಪಾರಿಗಳು, ನನ್ನ ಆಸ್ತಿಯನ್ನೆಲ್ಲ ಬಡಬಗ್ಗರಿಗೆ ಹಂಚಿ ನಾಳೆಯಿಂದ ತಪಸ್ಸಿಗೆ ಹೋಗುತ್ತೇನೆ ಅನ್ನುವವರಲ್ಲ, ಇವತ್ತು ಹತ್ತು ರೂಪಾಯಿಯದ್ದನ್ನು ಅವರು ಉಚಿತವಾಗಿ ಕೊಟ್ಟರೆ ಮುಂದಿನ ವರ್ಷ ಅದರಲ್ಲಿ ನೂರು ರೂಪಾಯಿ ಲಾಭ ಮಾಡುವ ಹಂಚಿಕೆ ಇರುತ್ತದೆ ಅಂತ ಹೇಳಲಿಕ್ಕೆ ನೀವೇನು ಲಂಡನ್ ಸ್ಕೂಲ್ ಆಫ್ ಎಕಾನಾಮಿಕ್ಸಿನಲ್ಲಿ ಡಾಕ್ಟರೇಟು ಪಡೆಯಬೇಕಾದ್ದಿಲ್ಲ! ಹಾಗಾದರೆ whats exactly is their game ಅಂತ ಕಲ್ಪಿಸಲಿಕ್ಕೆ ಒಂದು ದೊಡ್ಡ ಯಕ್ಷಗಾನ ಪ್ರದರ್ಶನವೋ ಜಾತ್ರೆಯೋ ಆಗುತ್ತದೆ ಅಂದುಕೊಳ್ಳಿ. ಅಂಥಲ್ಲಿ ಸಾವಿರಗಟ್ಟಲೆ ಜನ ಸೇರುತ್ತಾರೆ. ಹೀಗೆ ಬಂದವರಿಗೆ ಆಗಾಗ ಚಾ ಬೇಕಾಗುತ್ತದೆ, ಕೆಲವರು ಚುರುಮುರಿ ತಿನ್ನುತ್ತಾರೆ, ಮಕ್ಕಳಿಗೆ ಐಸ್ಕ್ರೀಮು ತಿನ್ನುವ ಆಸೆಯಾಗುತ್ತದೆ. ಇವನ್ನೆಲ್ಲ ಮಾರಲಿಕ್ಕೆ ಅವಕಾಶ ಸೃಷ್ಟಿಯಾಗುತ್ತದೆ. ಇಷ್ಟುಜನ ಒಂದು ಕಡೆ ಸೇರಿದಾಗ ಯಾವುದಾದರೂ ವ್ಯಾಪಾರಕ್ಕೆ ಸುಯೋಗ ಒದಗಿಯೇ ಒದಗುತ್ತದೆ.
ಜಿಯೋದವರಿಗೂ, ಮೊದಲು ಒಂದು ಹತ್ತು ಕೋಟಿ ಜನ ಬಲಗಾಲಿಟ್ಟು ಒಳಗೆ ಬರಲಿ, ನೆರೆದ ಜನಜಾತ್ರೆಗೆ ಆಮೇಲೆ ಏನನ್ನಾದರೂ ಮಾರಿದರಾಯಿತು ಎಂಬ ಯೋಚನೆ ಇರುತ್ತದೆ. ನಾಳೆ Internet of things(LoT) ಬರಬಹುದು, ಜಿಯೋದವರೇ ಒಂದು ಇಂಟರ್ನೆಟ್ಟಿನಲ್ಲೇ ಬರುವ ಟೀವಿ ಚಾನೆಲ್ ಶುರು ಮಾಡಬಹುದು, ನೆಟ್ಟನ್ನೇ ಬಳಸುವ ಇನ್ನೆಂತದೋ ಬರಬಹುದು. ಆಗೆಲ್ಲ ಜಿಯೋದವರು ಈಗಿರುವ ಕೋಟಿಗಟ್ಟಲೆ ಗ್ರಾಹಕರ ಪೂರ್ಣ ಪ್ರಯೋಜನ ಪಡೆಯಬಹುದು. ಉದಾಹರಣೆಗೆ, ನಾಳೆ WhatsApp Pay ಅಂತ ಶುರು ಮಾಡುತ್ತಾರೆ. ಈಗಾಗಲೇ ಅಲ್ಲಿರುವ ಕೋಟಿಗಟ್ಟಲೆ ಜನರನ್ನು ವಾಟ್ಸಪ್‌್ಪ ಸುಲಭದಲ್ಲಿ ಬಳಸಿ ಪೇಟಿಎಂ, ಗೂಗಲ್ ಪೇಗಳಿಗೆ ಸಡ್ಡು ಹೊಡೆಯಬಹುದು.
ನಿಮ್ಮ ವಾಟ್ಸಾಪ್‌ಗೆ ಈ ಮೆಸೇಜ್ ಬಂತಾ? ಹುಷಾರ್
ನಮಗೆ ಕೋಟಿಗಳಲ್ಲಿ ಗ್ರಾಹಕರಿದ್ದಾರೆ ಅನ್ನುವುದನ್ನು ಬೇರೆ ತರದಲ್ಲೂ ತೋಳ್ಬಲವಾಗಿ ಬಳಸಬಹುದು. ಈಗ ಉದಾಹರಣೆಗೆ, ನಾಳೆ ಅಂಬಾನಿ ನೆಟ್‌ಫ್ಲಿಕ್ಸಿನವರನ್ನು ಕರೆದು, ‘ನೋಡಿ ಸ್ವಾಮೀ, ನಮ್ಮ ಹತ್ತಿರ ಇರುವ ಹತ್ತು ಕೋಟಿ ಜನರಿಗೆ ನಿಮ್ಮ ಸಿನೆಮಾಗಳು ಸರಿಯಾಗಿ, ಅಡೆತಡೆ ಇಲ್ಲದೆ ಕಾಣಬೇಕು ಅಂತಾದರೆ ನಮಗೆ ತಿಂಗಳಿಗೆ ಇಷ್ಟುಅಂತ ಕೊಡಿ’ ಅನ್ನಬಹುದು. ಅಷ್ಟೊಂದು ಮಾರ್ಕೆಟ್ ಶೇರ್ ಇರುವವರು ಹೀಗೆ ಮಾತಾಡಿದರೆ ನೆಟ್‌ಫ್ಲಿಕ್ಸಿನವರಿಗೂ ನೀವು ಸಹಕಾರ ಕೊಡದಿದ್ದರೆ ಕತ್ತೆ ಬಾಲ ಅಂತ ಝಾಡಿಸಿ ಎದ್ದು ಹೋಗಲು ಆಗುವುದಿಲ್ಲ.
ಅಮೆಜಾನಿನವರು ಬಂದಾಗ, ನಮ್ಮದೊಂದು ಆನ್ಲೈನ್ ಪುಸ್ತಕದಂಗಡಿ ಅಷ್ಟೇ ಅನ್ನುತ್ತಲೇ ಬಂದಿದ್ದರು. ಯಾವಾಗ ಕೋಟಿಗಟ್ಟಲೆ ಜನ ಅದರ ಗ್ರಾಹಕರಾದರೋ ಆವಾಗಿಂದ ಅಮೆಜಾನ್ ಹೇಳಿದ್ದೇ ಮಾತು ಅಂತಾಯಿತು. ಇಷ್ಟುಬೆಲೆಗೆ ಕೊಡುವುದಾದರೆ ಮಾತ್ರ ನಮ್ಮಲ್ಲಿ ಹಾಕ್ತೇವೆ, ಇಲ್ಲದಿದ್ದರೆ ಹೊರಡಿ ಅಂತ ಪುಸ್ತಕದ ಅಂಗಡಿಯವರನ್ನು ಗದರಿಸುವ ಸಾಮರ್ಥ್ಯ ಅದಕ್ಕೆ ಬಂತು. ಪುಸ್ತಕದ ಅಂಗಡಿಯವರಿಗೂ ಅಮೆಜಾನ್ ಇಲ್ಲದಿದ್ದರೆ ಲಕ್ಷಗಟ್ಟಲೆ ಜನರನ್ನು ಮುಟ್ಟುವುದು ಸಾಧ್ಯವಿಲ್ಲವಾದ್ದರಿಂದ ಅವರೂ ಅಮೆಜಾನ್ ಕುಣಿಸಿದಂತೆ ಕುಣಿಯಬೇಕಾಯ್ತು. ‘ಯಾರ ಹಿಂದೆ ಹೆಚ್ಚು ಜನ ಇರುತ್ತಾರೋ, ಯಾರು ಹೆಚ್ಚು ಏರಿಯಾಗಳನ್ನುಆಳುತ್ತಾರೋ ಅವರೇ ಡಾನ್’ ಎಂಬ ಭೂಗತ ಜಗತ್ತಿನ ಒಡಂಬಡಿಕೆಯಂತೆ ಇದು ಕೂಡಾ!
ಹೀಗಾಗಿ ಬಿಟ್ಟಿಗಿರಾಕಿಗಳನ್ನಾದರೂ ಸೃಷ್ಟಿಸಿ ಮಾರ್ಕೆಟ್ ಡಾಮಿನೇಷನ್ ಮಾಡುವುದಕ್ಕೆ ವ್ಯಾಪಾರಿಗಳು ತಯಾರಿರುತ್ತಾರೆ. ಈ ರೀತಿ ನೀವು ಒಂದೇ ಒಂದು ರೂಪಾಯಿ ಕೊಡದಿದ್ದರೂ ಪರೋಕ್ಷವಾಗಿ ಕಂಪೆನಿಯ ತಾಕತ್ತನ್ನು ಹೆಚ್ಚಿಸುತ್ತಿರುತ್ತೀರಿ, ನಿಮ್ಮ ಒಂದೇ ಒಂದು ಓಟಿನ ಬಲದಿಂದ ರಾಜಕಾರಣಿಗಳು ಬಲಶಾಲಿಗಳಾಗುವ ಹಾಗೆ ಇದೂ ಕೂಡಾ. ಈ ಅರ್ಥದಲ್ಲಿ, ಇವತ್ತು ಫೇಸ್ಬುಕ್, ವಾಟ್ಸಪ್ಪುಗಳು ಇಷ್ಟೊಂದು ಪ್ರಭಾವಿಯೂ, ಬಲಶಾಲಿಯೂ ಆಗಿರುವುದಕ್ಕೆ ನಮ್ಮಂಥವರು ಅವುಗಳಲ್ಲಿ ಹಾಕುವ, ಕೆಲಸಕ್ಕೆ ಬಾರದ ತಲೆಹರಟೆ ಮೆಸೇಜು, ಪೋಸ್ಟುಗಳೇ ಕಾರಣ ಅನ್ನುವುದು ನಮಗೂ ಹೆಮ್ಮೆಯ ವಿಷಯವೇ!
ಅಂತೂ ಹತ್ತು ಕೋಟಿ ಜನ ಒಂದು ಸಲ ಒಳಗೆ ಬಂದರೆ ಅವರಿಗೆ ಅನುಕೂಲ ಆಗುವಂತೆ ಏನಾದರೂ ಎಂಟೋ ಹತ್ತೋ ಅಂಗಡಿ ಹಾಕುವ ಐಡಿಯಾ ಮುಂದೊಂದು ದಿನ ಬಂದೇ ಬರುತ್ತದೆ, ಇಡೀ ಮಾರುಕಟ್ಟೆಯನ್ನು ತಮ್ಮ ಮರ್ಜಿಗೆ ತಕ್ಕಂತೆ ನಡೆಸಲು ಬರುತ್ತದೆ ಎಂಬುದು ಒಟ್ಟು ತಾತ್ಪರ್ಯ. ನಾವು ಪಹರೆಯವನಂತೆ ಚೀಲದಲ್ಲಿ ಏನೋ ಇದೆ ಅಂತ ಮರಳನ್ನು ಹುಡುಕುತ್ತಿರುತ್ತೇವೆ, ಸೈಕಲ್ಲೂ ಸಾಗಾಣಿಕೆ ಆಗುತ್ತಿರಬಹುದು ಎಂಬುದು ಪಕ್ಕನೆ ಹೊಳೆಯುವುದಿಲ್ಲ.
ಇನ್ನು ಕಾಡಿನಲ್ಲಿ, ಗುಹೆಗಳಲ್ಲಿ ವಾಸ ಮಾಡುವವರನ್ನು ಬಿಟ್ಟರೆ ಉಳಿದವರ ಮಟ್ಟಿಗೆ ಪ್ರೈವಸಿ ಎಂಬುದು ಬೆಲ್ ಬಾಟಮ್ ಪ್ಯಾಂಟುಗಳಂತೆ ಒಂದಾನೊಂದು ಕಾಲದಲ್ಲಿದ್ದ ಸಂಗತಿಗಳಾಗಿ ಯಾವುದೋ ಕಾಲವೇ ಆಯಿತು. ನಿಮ್ಮ ಮಗನಿಗೆ ಮದುವೆಗೆ ಹೆಣ್ಣನ್ನು ಗೂಗಲ್, ಮೈಕ್ರೋಸಾಫ್ಟ್ , ಅಮೆಜಾನ್, ಫೇಸ್ಬುಕ್, ಟ್ವಿಟ್ಟರ್‌ಗಳೇ ಹುಡುಕಿ ಕೊಟ್ಟಾವು ಎಂಬಷ್ಟುಮಟ್ಟಿಗೆ ಅವನ ಇಡೀ ಜಾತಕ ಅವರ ಹತ್ತಿರ ಇದೆ. ಇಂತಿರುವಾಗ ಅಂಥ ದೊಡ್ಡ ಪ್ರೈವಸಿ ಚ್ಟಿಛಿa್ಚh ಹೊಸದಾಗಿ ಆಗಲಿಕ್ಕೆ ಏನಿದೆ? ನನ್ನ ಈ ಖಾಸಗಿ ವಿವರ ಹೊರಬಿದ್ದರೆ ನಾಳೆಯೇ ನಮ್ಮ ಮನೆಯ ಮೇಲೆ ಸಿಬಿಐ ದಾಳಿ ಆಗಬಹುದು ಅನ್ನುವಂಥ ಭಯಂಕರ ರಹಸ್ಯ ಯಾವುದೂ ನನ್ನ ಫೇಸ್ಬುಕ್ಕಿನಲ್ಲೋ, ವಾಟ್ಸಪ್ಪಿನಲ್ಲೋ ಇಲ್ಲ! ಅಷ್ಟಕ್ಕೂ ನಮ್ಮ ವಾಟ್ಸಪ್‌್ಪ ಮೆಸೇಜುಗಳನ್ನು ನಾವು ಯಾರಿಗೆ ಕಳಿಸಿರುತ್ತೇವೋ ಅವರೇ ಕೆಲವೊಮ್ಮೆ ಓದುವುದಿಲ್ಲ! ಪರಿಸ್ಥಿತಿ ಇಷ್ಟುಕಠಿಣ ಇರುವಾಗ ನಾವು ಹಾಕುವ ಮೆಸೇಜುಗಳನ್ನು ಯಾರಾದರೂ ಕದ್ದಾದರೂ ಓದಿದರೂ ಸಂತೋಷವೇ! ತಮಾಷೆಗೆ ಹೇಳಿದೆ, ವಾಟ್ಸಪ್ಪಿನ ಮೆಸೇಜುಗಳು ಈಗಲೂ encrypted ಆಗಿರುತ್ತವೆ, ನಡುವೆ ಯಾರೋ ಕದ್ದು ನೋಡಿ ಅದನ್ನುಓದಲಾಗುವುದಿಲ್ಲ.
ಹೀಗಿರುವಾಗ ನಿಮ್ಮ ಪ್ರೈವೆಸಿಯನ್ನು ಕದ್ದು ಬಹುಶಃ ಅವರಿಗೆ ಆಗಬೇಕಾದ್ದು ಏನೂ ಇಲ್ಲ, ಇದೆಲ್ಲ Much ado about nothing ಅಷ್ಟೇ ಅನಿಸುತ್ತದೆ. ನೀವೊಬ್ಬ potential ಕಸ್ಟಮರ್, ನಿಮಗೆ ಏನನ್ನು ಮಾರಬಹುದು ಎಂಬಷ್ಟರ ಮಟ್ಟಿಗೆ ಅವರಿಗೆ ನಿಮ್ಮ ಡಾಟಾ ಬೇಕು. ನೀವು ಐದೋ ಹತ್ತೋ ವರ್ಷ ಅವರ ಸರಕನ್ನು ಬಿಟ್ಟಿಯಾಗಿ ಉಪಯೋಗಿಸಿದ್ದಕ್ಕೆ ತೆರುವ ಬೆಲೆ ಇದೇ -You are the product! !