
ತಾಳಿಕೋಟೆ(ಮೇ.17): ಇನ್‌ಸ್ಟಾಗ್ರಾಂನ ಸೈಲೆಂಟ್ ಕಿಲ್ಲರ್ 35110 ಐಡಿಯಲ್ಲಿ ಪಾಕಿಸ್ತಾನ್ ಜಿಂದಾಬಾದ್, ಓನ್ಲಿ ಮುಸ್ಲಿಂ ರಾಷ್ಟ್ರ ಎಂದು ಬರೆದು ಪಾಕಿಸ್ತಾನ ಧ್ವಜದ ಚಿತ್ರ ಇದ್ದ ಫೋಟೊ ಸ್ಟೇಟಸ್ ಇಟ್ಟುಕೊಂಡಿದ್ದ ಆರೋಪದ ಮೇರೆಗೆ ತಾಳಿಕೋಟೆ ತಾಲೂಕು ಹಿರೂರು ಗ್ರಾಮದ ಯುವಕ ಇಬ್ರಾಹಿಂ ಮುರ್ತುಜಸಾಹೇಬ್ ಮುಲ್ಲಾ (21) ಎಂಬಾತನನ್ನು ತಾಳಿಕೋಟೆ ಪೊಲೀಸರು ಬಂಧಿಸಿ, ಮುದ್ದೇಬಿಹಾಳದ ನ್ಯಾಯಾಧೀಶರ ಮುಂದೆ ಹಾಜರುಪಡಿಸಿ ವಿಜಯಪುರದ ದರ್ಗಾ ಜೈಲಿಗೆ ಕಳುಹಿಸಿದ ಘಟನೆ ಮಂಗಳವಾರ ಸಂಜೆ ಬೆಳಕಿಗೆ ಬಂದಿದೆ.
ಘಟನೆ ಕುರಿತು ತಾಳಿಕೋಟೆ ಪೊಲೀಸ್ ಠಾಣೆಯಲ್ಲಿ ಹಿರೂರು ಗ್ರಾಮದ ಬೀಟ್ ಪೊಲೀಸ್ ಶಿವಪ್ಪ ಶರಣಪ್ಪ ಹಾಳಗೋಡಿ ಅವರು ಸರ್ಕಾರದ ಪರವಾಗಿ ದೂರು ದಾಖಲಿಸಿದ್ದು, ಪಿಎಸ್‌ಐ ಸುರೇಶ ಮಂಟೂರ ಅವರು ಐಪಿಸಿ ಕಲಂ 153, 153(ಎ), 153 (ಬಿ) ಅಡಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಕೊಂಡಿದ್ದಾರೆ. ಇಬ್ರಾಹಿಂ ತಾಳಿಕೋಟೆ ಪಟ್ಟಣದ ಕಾಲೇಜು ಒಂದರಲ್ಲಿ ವಿದ್ಯಾರ್ಥಿಯಾಗಿದ್ದಾನೆ.
ಪಾಕಿಸ್ತಾನದ ಹನಿಟ್ರ್ಯಾಪ್ ಬಲೆಗೆ ಬೆಂಗ್ಳೂರಿನ ವಾಯುಪಡೆ ಸಿಬ್ಬಂದಿ!
ತನ್ನ ಇನ್‌ಸ್ಟಾಗ್ರಾಂ ಐಡಿ ಅಡಿ ಎಂಐಎಂ ಬಾಯ್ಸ್, ಪಾಕಿಸ್ತಾನ ಜಿಂದಾಬಾದ್ ಎಂದು ಬರೆದು ಹಸಿರು ಬಣ್ಣದ ಹೃದಯದ ಚಿತ್ರ ಮತ್ತು ಪಾಕಿಸ್ತಾನ ಧ್ವಜದ ಚಿತ್ರ ಇಟ್ಟು ಅದರ ಕೆಳಗೆ ಓನ್ಲಿ ಮುಸ್ಲಿಂ ರಾಷ್ಟ್ರ ಎಂದು ಪೋಸ್ಟ್ ಮಾಡಿದ್ದ ಸ್ಕ್ರೀನ್‌ಶಾಟ್ ಸಾಮಾಜಿಕ ಜಾಲತವಾಣದಲ್ಲಿ ಹರಿದಾಡುತ್ತಿತ್ತು. ಇದು ಗಮನಕ್ಕೆ ಬಂದ ಕೂಡಲೇ ಗ್ರಾಮಕ್ಕೆ ಹೋಗಿ ಆತನ ಮೊಬೈಲ್ ಪರಿಶೀಲಿಸಿದಾಗ ಆತ ಇದೇ ಸ್ಟೇಟಸ್ ಇಟ್ಟುಕೊಂಡಿರುವುದು ಪತ್ತೆಯಾಗಿದೆ.
ಈ ಹಿನ್ನೆಲೆಯಲ್ಲಿ ಈತ ಸಮಾಜದಲ್ಲಿ ದ್ವೇಷ ಭಾವನೆಯಿಂದ ಜಾತಿ-ಜಾತಿಗಳ ನಡುವೆ ಕೋಮು, ದ್ವೇಷ ಮತ್ತು ವೈಮನಸ್ಸಿನ ಭಾವನೆಗಳನ್ನು ಹಾಗೂ ಮತೀಯ ಸೌಹಾರ್ದಕ್ಕೆ ಧಕ್ಕೆ ಉಂಟಾಗುವ ಕೃತ್ಯ ಎಸಗಿರುವ ಆರೋಪದಡಿ ದೂರು ದಾಖಲಿಸಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ