
ಪುಣೆ: 21 ವರ್ಷದ ಯುವಕನೋರ್ವ 20 ವರ್ಷದ ಕಾಲೇಜು ಹುಡುಗಿಯ ಕೊಲೆಗೆ ಯತ್ನಿಸಿದ್ದು, ಕೈಯಲ್ಲಿ ಕತ್ತಿ ಹಿಡಿದುಕೊಂಡು ಆಕೆಯನ್ನು ರಸ್ತೆಯಲ್ಲಿ ಓಡಿಸಿಕೊಂಡು ಹೋಗಿದ್ದಾನೆ. ಈ ವೇಳೆ ಯುವತಿಯ ನೆರವಿಗೆ ಬಂದ ಸ್ಥಳೀಯರು ಈ ಕೊಲೆಗೆ ಯತ್ನಿಸಿದ ಯುವಕನನ್ನು ಹಿಡಿದು ಸರಿಯಾಗಿ ಎರಡು ಬಾರಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಮಹಾರಾಷ್ಟ್ರದ ಪುಣೆಯ ಸದಾಶಿವ ಪೇಟೆಯಲ್ಲಿ ಈ ಘಟನೆ ನಡೆದಿದೆ. ಹುಡುಗಿಯನ್ನು ಯುವಕ ಕತ್ತಿ ಹಿಡಿದು ಓಡಿಸಿಕೊಂಡು ಹೋಗುತ್ತಿರುವ ದೃಶ್ಯ ಅಲ್ಲಿನ ಸಿಸಿ ಕ್ಯಾಮರಾದಲ್ಲಿ ಸೆರೆ ಆಗಿದ್ದು, ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ವಿಶ್ರಂಬಾಗ್ ಪೊಲೀಸ್ ಠಾಣೆಯ ಪೆರುಗೇಟ್ ಪೊಲೀಸ್ ಚೌಕಿ ಬಳಿ ಬೆಳಗ್ಗೆ 10 ಗಂಟೆಗೆ ಈ ಘಟನೆ ನಡೆದಿದ್ದು, ಆ ಪ್ರದೇಶದಲ್ಲಿ ಅಳವಡಿಸಲಾಗಿದ್ದ ಭದ್ರತಾ ಕ್ಯಾಮೆರಾಗಳಲ್ಲಿ ಈ ದೃಶ್ಯ ಸೆರೆಯಾಗಿದೆ. ಹೀಗೆ ಯುವತಿಯ ಮೇಲೆ ಕತ್ತಿಯಿಂದ ದಾಳಿ ಮಾಡಿದ ಯುವಕನ್ನು ಪುಣೆಯ ಮುಲ್ಶಿ ಪ್ರದೇಶದ ಡೊಂಗರ್‌ಗಾಂವ್ ಗ್ರಾಮದ ನಿವಾಸಿಯಾಗಿರುವ 21 ವರ್ಷದ ವಿದ್ಯಾರ್ಥಿ ಶಂತನು ಲಕ್ಷ್ಮಣ್ ಜಾಧವ್ (Shantanu Laxman Jadhav) ಎಂದು ಗುರುತಿಸಲಾಗಿದೆ. ಹಾಗೆಯೇ ದಾಳಿಗೊಳಗಾದ ಯುವತಿ ಪುಣೆಯ ಕಾಲೇಜೊಂದರಲ್ಲಿ ಇಂಟೀರಿಯರ್ ಡಿಸೈನಿಂಗ್ ಕೋರ್ಸ್ (interior designing course) ಓದುತ್ತಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.
ಚುಡಾಯಿಸಿದವನಿಗೆ ಕಾಲೇಜು ಹುಡುಗಿಯಿಂದ ಬಿತ್ತು ಗೂಸಾ..!
ಈ ಯುವತಿ ತನ್ನ ಇನ್ನೊಬ್ಬ ಗೆಳೆಯನ ಜೊತೆ ಬೈಕ್‌ನ ಹಿಂದೆ ಕುಳಿತು ಕಾಲೇಜಿಗೆ ಹೋಗುತ್ತಿದ್ದಾಗ ಈ ಘಟನೆ ನಡೆದಿದೆ, ಹಲ್ಲೆ ಮಾಡಿದ ಯುವಕ ಶಂತನು, ಯುವತಿಗೆ ತನ್ನೊಂದಿಗೆ ಮಾತನಾಡಬೇಕು ಎಂದು ಹೇಳುತ್ತಾ ಅವರು ಹೋಗುತ್ತಿದ್ದ ಬೈಕ್‌ನ್ನು ಹಿಂಬಾಲಿಸುತ್ತಿದ್ದನು. ಈತ ನಿರಂತರವಾಗಿ ಹಿಂಬಾಲಿಸುತ್ತಿದ್ದಾಗ ಯುವತಿ ಸಾಗುತ್ತಿದ್ದ ಬೈಕ್‌ನ ಸವಾರ ಬೈಕ್ ನಿಲ್ಲಿಸಿ ಆತನೊಂದಿಗೆ ಮಾತನಾಡಿದ್ದಾನೆ. ಈ ವೇಳೆ ಜಗಳ ಆರಂಭವಾಗಿದ್ದು, ಅವರಿಬ್ಬರ ಮಧ್ಯೆ ಮಾತಿನ ಚಕಮಕಿ ನಡೆದಿದೆ. ಕೂಡಲೇ ಶಂತನು ತಾನು ಬ್ಯಾಗ್‌ನಲ್ಲಿ ಬಚ್ಚಿಟ್ಟಿದ್ದ ಕತ್ತಿಯನ್ನು ಹೊರ ತೆಗೆದು ಇಬ್ಬರ ಮೇಲೆ ಹಲ್ಲೆಗೆ ಮುಂದಾಗಿದ್ದಾನೆ. ಮೊದಲಿಗೆ ಯುವಕನನ್ನು ಓಡಿಸಿಕೊಂಡು ಹೋದ ಆತ ನಂತರ ಯುವತಿಯನ್ನು ಬೆನ್ನಟ್ಟಿದ್ದಾನೆ. ಈತನಿಮದ ತಪ್ಪಿಸಿಕೊಳ್ಳುವ ಭರದಲ್ಲಿ ಯುವತಿ ಮುಗ್ಗರಿಸಿ ಬಿದ್ದಿದ್ದು, ಆಕೆಯ ಮೇಲೆ ಹಲ್ಲೆ ಮಾಡಿದ್ದಾನೆ. ಈ ವೇಳೆ ಅಲ್ಲಿ ಸೇರಿದ್ದ ಜನರೆಲ್ಲಾ ಓಡಿ ಬಂದು ಯುವತಿಯನ್ನು ಆತನಿಂದ ರಕ್ಷಿಸಿ ಆತನಿಗೆ ನಾಲ್ಕು ಬಾರಿಸಿ ನಂತರ ಪೊಲೀಸರಿಗೆ ಒಪ್ಪಿಸಿದ್ದಾರೆ ಎಂದು ವಿಶ್ರಂಬಾಗ್ ಪೊಲೀಸ್ ಠಾಣೆಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಶಂತನು ಹುಡುಗಿಯನ್ನು ಬೆನ್ನಟ್ಟಲು ಶುರು ಮಾಡಿದಾಗ ಅಲ್ಲಿದ್ದವರೆಲ್ಲಾ ಬೊಬ್ಬೆ ಹಾಕಿ ಎಚ್ಚರಿಸಿದ್ದಾರೆ. ಅಲ್ಲದೇ ಕೆಲವರು ಮಧ್ಯೆಪ್ರವೇಶಿಸಲು ರಸ್ತೆಯಲ್ಲಿ ಹಿಂದೆಯಿಂದ ಓಡಿದ್ದಾರೆ. ಈ ವೇಳೆ ಕೆಳಗೆ ಬಿದ್ದ ಪರಿಣಾಮ ಆತನ ಕೈಗೆ ಆಕೆ ಸಿಕ್ಕಿದ್ದು, ಆಕೆಯ ತಲೆಗೆ ಆತ ಹೊಡೆದಿದ್ದಾನೆ. ಅಷ್ಟೊತ್ತಿಗಾಗಲೇ ಕೆಲವು ಯುವಕರು ಶಂತನುವನ್ನು ತಡೆದು ಮಚ್ಚನ್ನು ಕಿತ್ತುಕೊಳ್ಳುವ ಪ್ರಯತ್ನ ಆರಂಭಿಸಿದ್ದಾರೆ. ಅಲ್ಲದೇ ಆತನಿಗೆ ಸರಿಯಾಗಿ ಥಳಿಸಿ ಪೆರುಗೇಟ್ ಪೊಲೀಸ್ ಚೌಕಿಯಲ್ಲಿ (Perugate police chowky) ಪೊಲೀಸರಿಗೆ ಒಪ್ಪಿಸಿದ್ದಾರೆ.
ಎಸ್ಸೆಸ್ಸೆಲ್ಸಿ ವಿದ್ಯಾರ್ಥಿ ಕೊಲೆಗೆ ಟ್ವಿಸ್ಟ್; ಕಾಲೇಜು ಹುಡುಗಿಗೋಸ್ಕರ ಸಹಪಾಠಿಯನ್ನೇ ಕೊಂದ ಶಾಲಾ ಮಕ್ಕಳು
ಘಟನೆಯಲ್ಲಿ ಯುವತಿಯ ತಲೆ ಹಾಗೂ ಕೈಗಳಿಗೆ ಗಾಯಗಳಾಗಿದ್ದು, ಆಕೆಗೆ ಸಮೀಪದ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಪ್ರಸ್ತುತ ಆಕೆಯ ಆರೋಗ್ಯ ಸ್ಥಿರವಾಗಿದೆ, ಆಕೆ ಅಪಾಯದಿಂದ ಪಾರಾಗಿದ್ದಾಳೆ. ಘಟನೆ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಹಿರಿಯ ಪೊಲೀಸ್ ಇನ್ಸ್‌ಪೆಕ್ಟರ್ ದಾದಾಸಾಹೇಬ್ ಗಾಯಕ್‌ವಾಡ್ (Dadasaheb Gaikwad) ಹೇಳಿದ್ದಾರೆ. ಯುವಕನ ವಿರುದ್ಧ ಭಾರತೀಯ ದಂಡ ಸಂಹಿತೆಯಡಿ ಕೊಲೆ ಯತ್ನ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ