Bengaluru: ಹೊಸ ವರ್ಷದ ಪಾರ್ಟಿಗೆಂದು ತಂದಿದ್ದ 2 ಕ್ವಿಂಟಲ್‌ ಡ್ರಗ್ಸ್‌ ವಶ: ಇಬ್ಬರ ಬಂಧನ

By Govindaraj SFirst Published Dec 25, 2022, 11:31 AM IST
Highlights

ನಗರದಲ್ಲಿ ಕ್ರಿಸ್‌ಮಸ್‌-ಹೊಸ ವರ್ಷದ ಪಾರ್ಟಿಗಳಿಗೆ ಮಾದಕ ವಸ್ತು ಪೂರೈಸುವ ಉದ್ದೇಶದಿಂದ ಭಾರೀ ಪ್ರಮಾಣದ ಮಾದಕವಸ್ತು ಸಂಗ್ರಹಿಸಿದ್ದ ಹೊರ ರಾಜ್ಯದ ಇಬ್ಬರು ಡ್ರಗ್ಸ್‌ ಪೆಡ್ಲರ್‌ಗಳನ್ನು ಕೋಣನಕುಂಟೆ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರು (ಡಿ.25): ನಗರದಲ್ಲಿ ಕ್ರಿಸ್‌ಮಸ್‌-ಹೊಸ ವರ್ಷದ ಪಾರ್ಟಿಗಳಿಗೆ ಮಾದಕ ವಸ್ತು ಪೂರೈಸುವ ಉದ್ದೇಶದಿಂದ ಭಾರೀ ಪ್ರಮಾಣದ ಮಾದಕವಸ್ತು ಸಂಗ್ರಹಿಸಿದ್ದ ಹೊರ ರಾಜ್ಯದ ಇಬ್ಬರು ಡ್ರಗ್ಸ್‌ ಪೆಡ್ಲರ್‌ಗಳನ್ನು ಕೋಣನಕುಂಟೆ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಒಡಿಶಾದ ಬಿಜಯ ನಗರದ ನಿವಾಸಿಗಳಾದ ಜಾಗಿಲ್‌ ಸೇಥಿ ಅಲಿಯಾಸ್‌ ಜಾಕಿಲ್‌ ಶೆಟ್ಟಿ (44) ಮತ್ತು ಮರುಳಿ ಬೆಹ್ರ ಅಲಿಯಾಸ್‌ ಮುರುಳಿ (26) ಬಂಧಿತರು. ಆರೋಪಿಗಳಿಂದ 35 ಲಕ್ಷ ರು. ಮೌಲ್ಯದ 263 ಕೆ.ಜಿ. ತೂಕದ ಗಾಂಜಾ ಜಪ್ತಿ ಮಾಡಲಾಗಿದೆ. ಕೋಣನಕುಂಟೆ ಠಾಣಾ ವ್ಯಾಪ್ತಿಯ ಪಿಳ್ಳಗಾನಹಳ್ಳಿ ಡಿಪೋ ಪಕ್ಕದ ಬಯಲು ಪ್ರದೇಶದಲ್ಲಿರುವ ಪಾಳು ಮನೆಯಲ್ಲಿ ಇಬ್ಬರು ಅಪರಿಚಿತರು ಭಾರೀ ಪ್ರಮಾಣದ ಮಾದಕವಸ್ತು ಸಂಗ್ರಹಿಸಿರುವ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿ ಇಬ್ಬರೂ ಆರೋಪಿಗಳನ್ನು ಮಾಲು ಸಹಿತ ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

2022ರಲ್ಲಿ ದಾಖಲೆಯ ಡ್ರಿಂಕ್ ಅಂಡ್ ಡ್ರೈವ್ ಕೇಸ್ ದಾಖಲು: 26 ಕೋಟಿಗೂ ಹೆಚ್ಚು ದಂಡ ಸಂಗ್ರಹ

ಆದಿವಾಸಿಗಳ ಬಳಿ ಖರೀದಿ: ಆರೋಪಿಗಳು ಹೊಸ ವರ್ಷ ಹಾಗೂ ಕ್ರಿಸ್‌ಮಸ್‌ ಹಿನ್ನೆಲೆಯಲ್ಲಿ ಭಾರೀ ಪ್ರಮಾಣದಲ್ಲಿ ಮಾದಕವಸ್ತು ಮಾರಾಟ ಮಾಡಿ ಅಕ್ರಮವಾಗಿ ಹಣ ಗಳಿಸುವ ಉದ್ದೇಶ ಹೊಂದಿದ್ದರು. ಈ ನಿಟ್ಟಿನಲ್ಲಿ ಒಡಿಶಾದ ಆದಿವಾಸಿಗಳು ಹಾಗೂ ಆಂಧ್ರಪ್ರದೇಶದ ಪೆಡ್ಲರ್‌ಗಳಿಂದ ಕಡಿಮೆ ಬೆಲೆಗೆ ಗಾಂಜಾ ಖರೀದಿಸಿದ್ದರು. ಬಳಿಕ ಖಾಸಗಿ ಬಸ್‌ ಹಾಗೂ ರೈಲುಗಳ ಮುಖಾಂತರ ಲಗೇಜ್‌ ಸೋಗಿನಲ್ಲಿ ಅಕ್ರಮವಾಗಿ ಗಾಂಜಾವನ್ನು ನಗರಕ್ಕೆ ಸಾಗಿಸಿ ಪಿಳ್ಳಗಾನಹಳ್ಳಿಯ ಬಯಲು ಪ್ರದೇಶದ ಪಾಳು ಮನೆಯಲ್ಲಿ ಸಂಗ್ರಹಿಸಿದ್ದರು. ಈ ಬಗ್ಗೆ ಬಾತ್ಮೀದಾರರಿಂದ ಸಿಕ್ಕ ಮಾಹಿತಿ ಮೇರೆಗೆ ಪಾಳು ಮನೆಯ ಮೇಲೆ ದಾಳಿ ಮಾಡಿದಾಗ ಇಬ್ಬರು ಆರೋಪಿಗಳು ಮಾಲು ಸಹಿತ ಸಿಕ್ಕಿಬಿದ್ದಿದ್ದಾರೆ.

ನ್ಯೂ ಇಯರ್‌ ಪಾರ್ಟಿಗೆ ಪೂರೈಕೆ: ಈ ಮಾದಕವಸ್ತು ಮಾರಾಟ ದಂಧೆಯ ಹಿಂದೆ ವ್ಯವಸ್ಥಿತ ದೊಡ್ಡ ಜಾಲವೊಂದು ಕಾರ್ಯ ನಿರ್ವಹಿಸುತ್ತಿದೆ. ಬಂಧಿತ ಆರೋಪಿಗಳಿಂದ ನಗರದ ಡ್ರಗ್‌ ಪೆಡ್ಲರ್‌ಗಳು ಈ ಮಾದಕವಸ್ತು ಖರೀದಿಸಿ, ಕ್ರಿಸ್‌ಮಸ್‌ ಹಾಗೂ ಹೊಸ ವರ್ಷದ ಪಾರ್ಟಿಗಳಿಗೆ ಪೂರೈಕೆ ಮಾಡುವ ಸಾಧ್ಯತೆಯಿತ್ತು. ಈ ನಿಟ್ಟಿನಲ್ಲಿ ಆರೋಪಿಗಳು ನಗರದಲ್ಲಿ ಯಾವ ವ್ಯಕ್ತಿಗಳ ಜತೆ ಸಂಪರ್ಕ ಸಾಧಿಸಿದ್ದರು ಎಂಬುದರ ಬಗ್ಗೆ ತನಿಖೆ ಮುಂದುವರೆದಿದೆ. ಆರೋಪಿಗಳ ಹೆಚ್ಚಿನ ವಿಚಾರಣೆ ಬಳಿಕ ಮತ್ತಷ್ಟುಮಾಹಿತಿ ಲಭ್ಯವಾಗಲಿದೆ. ಈ ಸಂಬಂಧ ಕೋಣನಕುಂಟೆ ಪೊಲೀಸ್‌ ಠಾಣೆಯಲ್ಲಿ ಎನ್‌ಡಿಪಿಎಸ್‌ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕೊಲೆ ಮೂಲಕ ಗಲಭೆ ಸೃಷ್ಟಿಸಿ ರಾಜಕೀಯ ಮಾಡಲಾಗ್ತಿದೆ: ಅಶ್ರಫ್ ಕಿನಾರ

ಮಾದಕ ವಸ್ತು ಮಾರಾಟಕ್ಕೆ ಬ್ರೇಕ್‌ ಹಾಕುವ ನಿಟ್ಟಿನಲ್ಲಿ ವಿಶೇಷ ಕಾರ್ಯಾಚರಣೆ ನಡೆಸಿ ಇಬ್ಬರು ಹೊರರಾಜ್ಯದ ಡ್ರಗ್‌ ಪೆಡ್ಲರ್‌ಗಳನ್ನು ಬಂಧಿಸಿ, ಭಾರೀ ಪ್ರಮಾಣದ ಗಾಂಜಾ ಜಪ್ತಿ ಮಾಡಲಾಗಿದೆ. ಈ ದಂಧೆಯಲ್ಲಿ ಇನ್ನೂ ಹಲವರು ಭಾಗಿಯಾಗಿರುವ ಸಾಧ್ಯತೆಯಿದ್ದು, ತನಿಖೆ ಮುಂದುವರೆದಿದೆ.
- ಕೃಷ್ಣಕಾಂತ್‌, ದಕ್ಷಿಣ ವಿಭಾಗದ ಡಿಸಿಪಿ

click me!