Mangaluru: ಕೊಲೆ ಮೂಲಕ ಗಲಭೆ ಸೃಷ್ಟಿಸಿ ರಾಜಕೀಯ ಮಾಡಲಾಗ್ತಿದೆ: ಅಶ್ರಫ್ ಕಿನಾರ
ಸುರತ್ಕಲ್‌ನಲ್ಲಿ ದುಷ್ಕರ್ಮಿಗಳು ಸಿನಸಿ ಅಂಗಡಿ ವ್ಯಾಪಾರಸ್ಥ ಜಲೀಲ್ ಹತ್ಯೆ ಮಾಡಿರುವುದನ್ನು ಕರ್ನಾಟಕ ಮುಸ್ಲಿಂ ಜಮಾತ್‌ನ ರಾಜ್ಯ ಸಮಿತಿ ಸದಸ್ಯ ಅಶ್ರಫ್ ಕಿನಾರ ತೀವ್ರವಾಗಿ ಖಂಡಿಸಿದ್ದಾರೆ.
ಮಂಗಳೂರು (ಡಿ.25): ಸುರತ್ಕಲ್‌ನಲ್ಲಿ ದುಷ್ಕರ್ಮಿಗಳು ಸಿನಸಿ ಅಂಗಡಿ ವ್ಯಾಪಾರಸ್ಥ ಜಲೀಲ್ ಹತ್ಯೆ ಮಾಡಿರುವುದನ್ನು ಕರ್ನಾಟಕ ಮುಸ್ಲಿಂ ಜಮಾತ್‌ನ ರಾಜ್ಯ ಸಮಿತಿ ಸದಸ್ಯ ಅಶ್ರಫ್ ಕಿನಾರ ತೀವ್ರವಾಗಿ ಖಂಡಿಸಿದ್ದಾರೆ. ಸಿಎಂ ಕ್ರಿಯೆಗೆ ಪ್ರತಿಕ್ರಿಯೆ ಪ್ರಚೋದನೆ ಬಳಿಕ ಈ ಘಟನೆಗಳಾಗ್ತಿವೆ. ಆರೋಪಿಗಳಿಗೆ ಜಾಮೀನು ನೀಡಿ ಅವರಿಗೆ ರಕ್ಷಣೆ ಮಾಡಲಾಗ್ತಿದೆ. ಕೊಲೆ ಮೂಲಕ ಗಲಭೆ ಸೃಷ್ಟಿಸಿ ರಾಜಕೀಯ ಮಾಡಲಾಗ್ತಿದೆ. ಆದರೆ ಇನ್ನು ಮುಂದೆ ರಾಜಕೀಯದ ಈ ಆಟ ನಡೆಯಲ್ಲ ಎಂದರು.
ನಿಮ್ಮ ರಾಜಕೀಯಕ್ಕೆ ಬಡಪಾಯಿ ಜೀವ ಬಲಿ ತೆಗೆದುಕೊಳ್ಳಬೇಡಿ. ಇಂಥದ್ದರಿಂದ ನಿಮಗೆ ಓಟ್ ಲಾಸ್ ಅಲ್ಲದೇ ಲಾಭವಿಲ್ಲ.ನೀವು ಯಾರ ಜೀವ ತೆಗೆದರೂ ನಾವು ಬೀದಿಗಿಳಿದು ಗಲಾಟೆ ಮಾಡಲ್ಲ. ಈ ಮೂಲಕ ನಿಮ್ಮ ರಾಜಕೀಯ ಆಟಕ್ಕೆ ಲಾಭ ಮಾಡಲ್ಲ.ನಾವು ಇನ್ನು ಮುಂದೆ ಕಾನೂನು ಹೋರಾಟ ಮಾಡ್ತೇವೆ. ನಮ್ಮ ಎಲ್ಲಾ ಸಮುದಾಯದ ಜನರಿಗೆ ಅದನ್ನೇ ಹೇಳ್ತೇವೇ ಎಂದು ಅಶ್ರಫ್ ಕಿನಾರ ಹೇಳಿದರು.
ಅವನಿಗೆ ಶತ್ರುಗಳು ಅಂತ ಯಾರೂ ಇರಲೇ ಇಲ್ಲ: ಮೃತ ಜಲೀಲ್ ಸಹೋದರ ಮಹಮ್ಮದ್
ನಾವು ಮನೆಯಲ್ಲಿ ಇದ್ದ ವೇಳೆ ಜಲೀಲ್ ಕೊಲೆಯಾಗಿದೆ ಅಂದ್ರು. ಅವನು ಯಾವುದೇ ಗಲಾಟೆಗೆ ಹೋಗದ ಬಡಪಾಯಿ. ಬೆಳಿಗ್ಗೆ ಅಂಗಡಿಗೆ ಬಂದು ವ್ಯವಹಾರ ಮಾಡಿ ರಾತ್ರಿ ಮನೆಗೆ ಹೋಗ್ತಾನೆ. ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ಎಲ್ಲರಿಗೂ ಬೇಕಾದವನು. ಯಾವುದೇ ಚಟುವಟಿಕೆಗೆ ಹೋಗದ ಶಾಂತಿಪ್ರಿಯ ಅವನು. ಯಾರ ಜೊತೆಗೂ ಜೋರಾಗಿಯೂ ಮಾತನಾಡದ ಅವನನ್ನೇ ಬಿಡಲಿಲ್ಲ. ಇಬ್ಬರು ಬೈಕ್‌ನಲ್ಲಿ ಬಂದು ಕೊಲೆ ಮಾಡಿ ಹೋಗಿದ್ದಾರೆ ಎಂದು ಮೃತ ಜಲೀಲ್ ಸಹೋದರ ಮಹಮ್ಮದ್ ಆಸ್ಪತ್ರೆ ಬಳಿ ತಿಳಿಸಿದ್ದಾರೆ.
Mangaluru: ಜಲೀಲ್ ಹತ್ಯೆ ಪ್ರಕರಣ: ಸುರತ್ಕಲ್ ಸುತ್ತಾಮುತ್ತಾ 144 ಸೆಕ್ಷನ್ ಜಾರಿ
ಅವನು ಪತ್ನಿ ಮತ್ತು ಮಗನ ಜೊತೆ ಮನೆಯಲ್ಲಿ ವಾಸವಾಗಿದ್ದ. ಕಾಟಿಪಳ್ಳ ನಾಲ್ಕನೇ ಬ್ಲಾಕ್‌ನಲ್ಲಿ ಅವನ ಮನೆ ಇತ್ತು. ಯಾವುದೇ ಸಂಘಟನೆ, ರಾಜಕೀಯದಲ್ಲಿ ಅವನು ಇಲ್ಲ. ಸುಮಾರು 10-15 ವರ್ಷದಿಂದ ಅವನು ಅಲ್ಲಿ ಅಂಗಡಿ ನಡೆಸ್ತಾ ಇದ್ದ. ಅವನಿಗೆ ಶತ್ರುಗಳು ಅಂತ ಯಾರೂ ಇರಲೇ ಇಲ್ಲ. ಇದು ರಾಜಕಾರಣಕ್ಕಾಗಿ ಅಮಾಯಕನ ಕೊಲೆಯಾಗಿದೆ. ನಮಗೆ ಸರ್ಕಾರ ನ್ಯಾಯ ಕೊಡಬೇಕು, ನೈಜ ಆರೋಪಿ ಬಂಧಿಸಬೇಕು. ಯಾರ್ಯಾರನ್ನೋ ಹಿಡಿಯೋ ಅಗತ್ಯವಿಲ್ಲ, ನೈಜ ಆರೋಪಿಗಳನ್ನು ಹಿಡಿಯಿರಿ ಎಂದು ಈ ವೇಳೆ ಹೇಳಿದರು.
2006ರ ಬಳಿಕ ನಮ್ಮಲ್ಲಿ ಕೋಮು ಗಲಭೆ ಆಗಿಲ್ಲ: ಮುಸ್ಲಿಂ ಸಂಘಟನೆ ಒಕ್ಕೂಟದ ದ.ಕ ಜಿಲ್ಲಾಧ್ಯಕ್ಷ ಅಶ್ರಫ್
ಇದೊಂದು ಖೇದಕರ ಮತ್ತು ಅತ್ಯಂತ ದುಃಖದ ವಿಷಯ. ಸಿಎಂ ಕ್ರಿಯೆಗೆ ಪ್ರತಿಕ್ರಿಯೆ ಹೇಳಿದ ಮೇಲೆ ಇಲ್ಲಿ ಈ ರೀತಿ ಆಗ್ತಾ ಇದೆ. ಕೊಲೆ, ನೈತಿಕ ಪೊಲೀಸ್ ಗಿರಿ ನಿತ್ಯ ಹೆಚ್ಚುತ್ತಲೇ ಇದೆ. ಹೀಗಿದ್ದರೂ ಇಲ್ಲಿನ ಪೊಲೀಸ್ ಇಲಾಖೆ ಏನು ಮಾಡ್ತಿದೆ. ತಲೆ, ಕಾಲು ಕಡೀತಿವಿ ಅಂದ್ರೂ ಅವರ ಮೇಲೆ ಕ್ರಮ ಆಗಲ್ಲ. ಪೊಲೀಸ್ ಇಲಾಖೆ ಇಲ್ವಾ? ಸರ್ಕಾರ ಗೂಂಡಾಗಳ ಕೈಯ್ಯಲ್ಲಿ ಇದ್ಯಾ?. ಸರ್ಕಾರ ಗಂಭೀರವಾಗಿ ತೆಗೆದುಕೊಳ್ಳದೇ ಇದೆಲ್ಲಾ ಆಗ್ತಾ ಇದೆ ಎಂದು ಮುಸ್ಲಿಂ ಸಂಘಟನೆ ಒಕ್ಕೂಟದ ದ.ಕ ಜಿಲ್ಲಾಧ್ಯಕ್ಷ ಅಶ್ರಫ್ ಹೇಳಿದ್ದಾರೆ.
ಮುಸಲ್ಮಾನರು ಮೌನವಾಗಿದ್ದಾರೆ, ಹಾಗಂತ ಇದು ನಮ್ಮ ಸಮಸ್ಯೆ ಅಲ್ಲ. 2006ರ ಬಳಿಕ ನಮ್ಮಲ್ಲಿ ಕೋಮು ಗಲಭೆ ಆಗಿಲ್ಲ. ಅಮಾಯಕರ ಹತ್ಯೆ ಮೂಲಕ ಕೋಮು ಗಲಭೆ ಸೃಷ್ಟಿ ಇವರ ಉದ್ದೇಶ. ಸಿಎಂ ಇವತ್ತು ಮಂಗಳೂರಿಗೆ ಬರ್ತಾ ಇದಾರೆ. ಅವರು ಜಲೀಲ್ ಮನೆಗೆ ಭೇಟಿ ನೀಡಿ ಪರಿಹಾರ ಘೋಷಿಸಬೇಕು. ಫಾಜಿಲ್ ಹತ್ಯೆ ಆದಾಗಲೂ ಪರಿಹಾರ ಘೋಷಿಸದೇ ತಾರತಮ್ಯ ಎಸಗಲಾಗಿತ್ತು ಎಂದು ತಿಳಿಸಿದರು.
ಸುರತ್ಕಲ್: ಚೂರಿ ಇರಿತಕ್ಕೊಳಗಾಗಿದ್ದ ಜಲೀಲ್ ಸಾವು
ಏನಿದು ಘಟನೆ: ಶನಿವಾರ ರಾತ್ರಿ ಜಲೀಲ್ ಅವರ ಮೇಲೆ ಇಬ್ಬರು ದುಷ್ಕರ್ಮಿಗಳ ತಂಡ ಏಕಾಏಕಿ ದಾಳಿ ಮಾಡಿ ಚೂರಿ ಇರಿದು ಪರಾರಿಯಾಗಿದೆ. ಗಂಭೀರ ಗಾಯಗೊಂಡ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ. ಮೃತ ಜಲೀಲ್ ದಿನಸಿ ವ್ಯಾಪಾರ ಹೊಂದಿದ್ದಾರೆ. ಅವರು ಅಂಗಡಿಯಲ್ಲಿದ್ದ ವೇಳೆ ಸಂಜೆ ಏಕಾಏಕಿ ನುಗ್ಗಿದ ದುಷ್ಕರ್ಮಿಗಳು ಚೂರಿಯಿಂದ ಇರಿದು ಪರಾರಿಯಾಗಿದ್ದರು. ಘಟನೆಗೆ ಕಾರಣ ತಿಳಿದು ಬಂದಿಲ್ಲ. ಸುರತ್ಕಲ್ ಪರಿಸರದಲ್ಲಿ ಉದ್ವಿಗ್ನ ಪರಿಸ್ಥಿತಿ ನೆಲೆಸಿದೆ. ಘಟನಾ ಸ್ಥಳಕ್ಕೆ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿದ್ದು, ಪರಿಶೀಲನೆ ಕೈಗೊಂಡಿದ್ದು, ಆರೋಪಿಗಳ ಬಂಧನಕ್ಕೆ ಪೊಲೀಸರು ಕಾರ್ಯಾಚರಣೆ ಕೈಗೊಂಡಿದ್ದಾರೆ ಎಂದು ಪೊಲೀಸ್ ಕಮೀಷನರ್ ಶಶಿಕುಮಾರ್ ತಿಳಿಸಿದ್ದರು.