ಇನ್ನು ಗಲಾಟೆಯಾದ ಬಗ್ಗೆ ಕಾಮಪ್ಪನ ಸ್ನೇಹಿತ ಪೊಲೀಸರಿಗೆ ಮಾಹಿತಿ ನೀಡಿದರೂ ಸಹ ಪೊಲೀಸರು ಯಾವುದೇ ಕೇಸ್ ದಾಖಲಿಸಿಕೊಂಡಿರಲಿಲ್ಲವಂತೆ. ಯುವಕನ ಮೃತದೇಹ ಪತ್ತೆಯಾದ ಬಳಿಕ ಕೊಲೆ ಪ್ರಕರಣ ದಾಖಲಿಸಿಕೊಂಡು ತನಿಖೆಗಿಳಿದಿದ್ದು ಇಬ್ಬರು ಶಂಕಿತ ಆರೋಪಿಗಳ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಚಿಕ್ಕೋಡಿ(ಸೆ.20): ಆತ ಬಡತನದಲ್ಲಿ ಹುಟ್ಟಿ ಬಡತನದಲ್ಲೇ ಬೆಳೆದಿದ್ದಾತ... ಕೂದಲು ಆರಿಸಿಕೊಂಡು ಅದನ್ನು ಮಾರಿ ಬಂದ ದುಡ್ಡಿನಲ್ಲಿ ಜೀವನ ಸಾಗಿಸುತ್ತಿದ್ದ. ಇದೇ ಕೂದಲು ಆಯುವ ಕಸಬು ಇಂದು ಆ ಬಾಲಕನ ಜೀವವೇ ಪಡೆದಿದೆ... ಅಷ್ಟಕ್ಕೂ ಏನಿದು ಘಟನೆ? ಈ ಸ್ಟೋರಿ ನೋಡಿ...
ಸುತ್ತಲು ಕಬ್ಬಿನ ಗದ್ದೆಯ ಮಧ್ಯೆ ಬೃಹದಾಕಾರದ ಬಾವಿ... ಬಾವಿಯಲ್ಲಿ ತೇಲಾಡುತ್ತಿರುವ ಬಾಲಕನ ಮೃತದೇಹ.. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿರುವ ಪೊಲೀಸರು... ಮುಗಿಲು ಮುಟ್ಟಿದ ಸಂಬಂಧಿಕರ ಆಕ್ರಂದನ ಈ ಎಲ್ಲ ದೃಶ್ಯಗಳು ಕಂಡು ಬಂದಿದ್ದು ಬೆಳಗಾವಿ ಜಿಲ್ಲೆ ರಾಯಬಾಗ ತಾಲೂಕಿನ ಹಾರೂಗೇರಿ ಹೊರವಲಯದ ಲಾಲ್ಯಾನಕೋಡಿಯಲ್ಲಿ. ಹೀಗೆ ಕೊಲೆಯಾದ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾದವನ ಹೆಸರು ಕಾಮಪ್ಪ ಕುಂಚಿಕೊರವ ವಯಸ್ಸು ಜಸ್ಟ್ 17. ಮೂಲತಃ ವಿಜಯಪುರ ನಗರ ನಿವಾಸಿಯಾಗಿದ್ದ ಕಾಮಪ್ಪ ಕೂದಲು ಆಯ್ದುಕೊಂಡು ಅದನ್ನು ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದ.
ಹೆಂಡ್ತಿ ಮೇಲೆ ಅನುಮಾನ: ಗರ್ಭಿಣಿ ಪತ್ನಿ, ಮಗಳನ್ನೇ ಕೊಲೆ ಮಾಡಿದ ಯೋಧ
ಎರಡು ದಿನಗಳ ಹಿಂದೆ ವಿಜಯಪುರದಿಂದ ಸ್ನೇಹಿತನ ಜೊತೆ ಬೆಳಗಾವಿ ಜಿಲ್ಲೆ ರಾಯಬಾಗ ತಾಲೂಕಿನ ಹಾರೂಗೇರಿ ಪಟ್ಟಣಕ್ಕೆ ಬಸ್‌ನಲ್ಲಿ ಆಗಮಿಸಿದ್ದ ಈತ ಸಲೂನ್ ಶಾಪ್ ಸೇರಿದಂತೆ ವಿವಿಧೆಡೆ ತೆರಳಿ ಕೂದಲು ಆಯುತ್ತಿದ್ದರು. ಈ ವೇಳೆ ಹಾರೂಗೇರಿ ಪಟ್ಟಣದಲ್ಲಿ ಕೂದಲು ಆಯುವ ಸ್ಥಳೀಯರು ಇದಕ್ಕೆ ಕ್ಯಾತೆ ತಗೆದು ಕಾಮಪ್ಪ ಹಾಗೂ ಆತನ ಜೊತೆ ಜಗಳ ಶುರು ಮಾಡಿದ್ದಾರಂತೆ. ಈ ವೇಳೆ ಕಾಮಪ್ಪನ ಸ್ನೇಹಿತ ತಪ್ಪಿಸಿಕೊಂಡು ಹಾರೂಗೇರಿ ಪೊಲೀಸ್ ಠಾಣೆಗೆ ಆಗಮಿಸಿದ್ದಾನೆ. ಪೊಲೀಸರಿಗೆ ನಡೆದ ಘಟನೆ ವಿವರಿಸಿದ್ದಾನೆ. ಬಳಿಕ ಪೊಲೀಸರು ಈತ ಏನೋ ಹೇಳುತ್ತಿದ್ದಾನೆ ಅಂತಾ ನಿರ್ಲಕ್ಷ್ಯ ಮಾಡಿದ್ದಾರೆ. ಯಾವಾಗ ಆತ ಊರಿನವರಿಗೆ ವಿಷಯ ಮುಟ್ಟಿಸಿದ್ದಾನೋ ಊರಿನವರು ಸಹ ಆಗಮಿಸಿ ಹುಡುಕಾಟ ನಡೆಸಿದ್ದಾರೆ. ಇಂದು ಬೆಳಗ್ಗೆ ಹಾರೂಗೇರಿ ಪಟ್ಟಣದ ಹೊರವಲಯದ ಲಾಲ್ಯಾನಕೋಡಿ ಬಳಿ ಕಬ್ಬಿನ ಗದ್ದೆಯ ಬಳಿ ಬಾವಿಯಲ್ಲಿ ಯುವಕನ ಮೃತದೇಹ ಪತ್ತೆಯಾಗಿದೆ. ಬಳಿಕ ಪೊಲೀಸರು ಕುಟುಂಬಸ್ಥರಿಗೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ಆಗಮಿಸಿದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಈ ವೇಳೆ ಮಾತನಾಡಿದ ಕಾಮಪ್ಪನ ತಾಯಿ ದುರ್ಗವ್ವಾ ಗಣೇಶ ಹಬ್ಬ ಇದೆ ಹೋಗಬೇಡ ಅಂತಾ ಹೇಳಿದರೂ ಒಂದು ದಿನ ಹೋಗಿ ಬರ್ತೀನಿ ಅಂತಾ ಹೋದ. ಆದ್ರೆ ಇಂದು ಕೊಲೆಯಾಗಿ ಹೋಗಿದ್ದಾನೆ ಎಂದು ಕೊಲೆಯಾದ ಕಾಮಪ್ಪ ತಾಯಿ ದುರ್ಗವ್ವ ಕಣ್ಣೀರಿಟ್ಟಿದ್ದಾರೆ.
ಹುನಗುಂದ: ಚಿಕನ್ ಕಬಾಬ್ ಕೊಡದ್ದಕ್ಕೆ ಚಾಕುವಿನಿಂದ ಇರಿದು ವ್ಯಕ್ತಿಯ ಕೊಲೆ
ಭಾನುವಾರ ದಿನದಂದು ಬಸ್‌ನಲ್ಲಿ ಕೂದಲು ಆರಿಸಲು ಬಂದಿದ್ದ. ಈ ವೇಳೆ ಹಾರೂಗೇರಿ ಪಟ್ಟಣದಲ್ಲಿ ಕೂದಲು ಆರಿಸುವವರು ನೀವೇಕೆ ನಮ್ಮ ಏರಿಯಾಕೆ ಬರ್ತೀಯಾ ಅಂತಾ ಈ ಮುಂಚೆಯೂ ಗಲಾಟೆ ಮಾಡಿದ್ದರಂತೆ. ಭಾನುವಾರ ಬಂದ ವೇಳೆ ಸುಮಾರು ಹದಿನೈದು ಜನರ ತಂಡ ಇಬ್ಬರನ್ನೂ ಅಟ್ಟಾಡಿಸಿ ಹೊಡೆದಿದ್ದಾರೆ. ಈ ವೇಳೆ ಒಬ್ಬ ತಪ್ಪಿಸಿಕೊಂಡು ಹೋಗಿದ್ದಾನೆ. ಕೈಗೆ ಸಿಕ್ಕ ಕಾಮಪ್ಪನನ್ನು ಹೊಡೆದು ಬಾವಿಯಲ್ಲಿ ಬೀಸಾಕಿದ್ದಾರೆ ಅಂತಾ ಸಂಬಂಧಿಕರು ಆರೋಪಿಸುತ್ತಿದ್ದಾರೆ. ಎರಡು ದಿನಗಳ ಕಾಲ ನಿರಂತರವಾಗಿ ಹುಡುಕಾಟ ನಡೆಸಿದರೂ ಸಿಕ್ಕಿರಲಿಲ್ಲ. ಇಂದು ಬೆಳಗ್ಗೆ ಬಾವಿಯಲ್ಲಿ ಮೃತದೇಹ ಪತ್ತೆಯಾಗಿದೆ. ಬೇರೆ ಏನೂ ದ್ವೇಷ ಇರಲಿಲ್ಲ ಬೇರೆ ಊರಿನವರು ನಮ್ಮ ಊರಿಗೆ ಬಂದು ಏಕೆ ಕೂದಲು ಸಂಗ್ರಹಿಸುತ್ತೀರಿ ಅಂತಾ ಗಲಾಟೆ ಮಾಡಿ ಹತ್ಯೆ ಮಾಡಿದ್ದಾಗಿ ಸಂಬಂಧಿಕರಾದ ಕೊಲೆಯಾದ ಕಾಮಪ್ಪ ಸಂಬಂಧಿ ಶಿಂಗಪ್ಪ ಆರೋಪಿಸುತ್ತಿದ್ದಾರೆ.
ಇನ್ನು ಗಲಾಟೆಯಾದ ಬಗ್ಗೆ ಕಾಮಪ್ಪನ ಸ್ನೇಹಿತ ಪೊಲೀಸರಿಗೆ ಮಾಹಿತಿ ನೀಡಿದರೂ ಸಹ ಪೊಲೀಸರು ಯಾವುದೇ ಕೇಸ್ ದಾಖಲಿಸಿಕೊಂಡಿರಲಿಲ್ಲವಂತೆ. ಯುವಕನ ಮೃತದೇಹ ಪತ್ತೆಯಾದ ಬಳಿಕ ಕೊಲೆ ಪ್ರಕರಣ ದಾಖಲಿಸಿಕೊಂಡು ತನಿಖೆಗಿಳಿದಿದ್ದು ಇಬ್ಬರು ಶಂಕಿತ ಆರೋಪಿಗಳ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಅದೇನೇ ಇರಲಿ ಕೂದಲು ಆಯುವ ವಿಚಾರದಲ್ಲಿ ಏನೇ ಗಲಾಟೆ ಇದ್ದರೂ ಮಾತುಕತೆ ಮೂಲಕ ಬಗೆಹರಿಸಿಕೊಳ್ಳಬಹುದಿತ್ತು. ಆದ್ರೆ ಬಾಳಿ ಬದುಕಬೇಕಿದ್ದ ಬಾಲಕನ ಹತ್ಯೆ ಮಾಡಿದ್ದು ದುರಂತ. ಆರೋಪಿಗಳನ್ನು ತಕ್ಷಣ ಬಂಧಿಸಿ ಪೊಲೀಸರು ಕ್ರಮ ಕೈಗೊಳ್ಳಲಿ ಎಂಬುದು ಸಾರ್ವಜನಿಕರ ಆಗ್ರಹ.