ಮಹಾಲಿಂಗಪುರ ಮೂಲದ ಅಮೀನಗಡದ ವಾಸಿ ಗೈಬೂಸಾಬ್ ರಸೂಲಸಾಬ ಮುಲ್ಲಾ ಹತ್ಯೆಯಾದವ. ಪ್ರಕರಣಕ್ಕೆ ಸಂಬಂಧಿಸಿದಂತೆ ಮುಸ್ತಾಕ ರಾಜೇಸಾಬ ಜಂಗೀ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಈ ಕುರಿತು ಅಮೀನಗಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಮೀನಗಡ(ಸೆ.20): ಚಿಕನ್ ಕಬಾಬ್ ಖಾಲಿಯಾಗಿದೆ ಎಂಬ ವಿಚಾರಕ್ಕೆ ಎಗ್‌ರೈಸ್ ಅಂಗಡಿಯಲ್ಲಿದ್ದ ವ್ಯಕ್ತಿಯನ್ನು ಕುತ್ತಿಗೆಗೆ ಚಾಕು ಇರಿದು ಹತ್ಯೆ ಮಾಡಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಅಮೀನಗಡದಲ್ಲಿ ಭಾನುವಾರ ರಾತ್ರಿ ನಡೆದಿದೆ. ಮಹಾಲಿಂಗಪುರ ಮೂಲದ ಅಮೀನಗಡದ ವಾಸಿ ಗೈಬೂಸಾಬ್ ರಸೂಲಸಾಬ ಮುಲ್ಲಾ(29) ಹತ್ಯೆಯಾದವ. ಪ್ರಕರಣಕ್ಕೆ ಸಂಬಂಧಿಸಿದಂತೆ ಮುಸ್ತಾಕ ರಾಜೇಸಾಬ ಜಂಗೀ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಈ ಕುರಿತು ಅಮೀನಗಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಏನಿದು ಘಟನೆ?:
ಪಟ್ಟಣದ ಬಸ್ ನಿಲ್ದಾಣ ಪಕ್ಕದ ಲೋಕೋಪಯೋಗಿ ಇಲಾಖೆಯ ಕಾಂಪೌಂಡ್ ಬಳಿ ಹಮೀದ ಹುಸೇನ್ ನಜೀರ್ ಅಹಮದ್ ಕೊಣ್ಣೂರ ಎಂಬಾತನ ಎಗ್‌ರೈಸ್ ಅಂಗಡಿ ಇದೆ. ಈತನ ಅಂಗಡಿಗೆ ಮುಸ್ತಾಕ ರಾಜೇಸಾಬ ಜಂಗೀ ಎಂಬಾತ ರಾತ್ರಿ ಎಗ್ ರೈಸ್ ತಿಂದಿದ್ದಾನೆ. ನಂತರ ಚಿಕನ್ ಕಬಾಬ ಕೇಳಿದ್ದಾನೆ. ಅದಕ್ಕೆ ಮಾಲೀಕ ಖಾಲಿಯಾಗಿದೆ ಎಂದು ಹೇಳಿದ್ದಾನೆ. ಇದಕ್ಕೆ ರೋಷಗೊಂಡ ಆರೋಪಿ ಮುಸ್ತಾಕ ರಾಜೇಸಾಬ್ ಜಂಗಿ ಯಾಕೆ ಕೊಡುವುದಿಲ್ಲ ಎಂದು ಜಗಳವಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ಅಲ್ಲದೆ, ನಿನ್ನನ್ನು ನೋಡ್ಕೋತೀನಿ ಎಂದು ಬೈದು ತೆರಳಿದ್ದಾನೆ.
ಹೆಂಡ್ತಿ ಮೇಲೆ ಅನುಮಾನ: ಗರ್ಭಿಣಿ ಪತ್ನಿ, ಮಗಳನ್ನೇ ಕೊಲೆ ಮಾಡಿದ ಯೋಧ
ಅರ್ಧ ಗಂಟೆಯ ನಂತರ ಆತ ತನ್ನ ತಮ್ಮ ಆಸ್ಪಕ ಹಾಗೂ ಮತ್ತೊಬ್ಬನೊಂದಿಗೆ ಹಿಂದಿರುಗಿ ಬಂದ ಮುಸ್ತಾಕ ಜಂಗೀ ಜಗಳವಾಡಿ ಅವಾಚ್ಯ ಶಬ್ಧದಿಂದ ನಿಂದಿಸಿದ್ದಾನೆ. ಆದರೆ, ಎಗ್‌ರೈಸ್ ಅಂಗಡಿಯಲ್ಲಿದ್ದ ಗೈಬೂಸಾಬ್ ರಸೂಲಸಾಬ ಮುಲ್ಲಾ ಎಂಬಾತ ಆರೋಪಿ ಮುಸ್ತಾಕ ರಾಜೇಸಾಬ ಜಂಗಿಗೆ ಬಾಯಿಕೆ ಬಂದಂತೆ ಬೈಯ್ಯಬೇಡ ಎಂದಿದ್ದಾನೆ. ಇದರಿಂದ ಆಕ್ರೋಶಗೊಂಡ ಮುಸ್ತಾಕ ರಾಜೇಸಾಬ ಜಂಗಿ, ಗೈಬೂಸಾಬ್ ರಸೂಲಸಾಬ ಮುಲ್ಲಾ ಎಂಬಾತನ ಕುತ್ತಿಗೆಗೆ ಚಾಕುವಿನಿಂದ ಇರಿದು ಪರಾರಿಯಾಗಿದ್ದಾನೆ. ಹತ್ಯೆಗೊಳಗಾದ ಗೈಬೂಸಾಬ್‌ನನ್ನು ಬಾಗಲಕೋಟೆ ಆಸ್ಪತ್ರೆಗೆ ಸಾಗಿಸುವಾಗ ಶಿರೂರ ಬಳಿ ಸಾವನ್ನಪ್ಪಿದ್ದಾನೆ.
ಈ ಘಟನೆ ತಿಳಿದ ತಕ್ಷಣವೇ ಸ್ಥಳಕ್ಕೆ ಆಗಮಿಸಿದ ಅಮೀನಗಡ ಪೊಲೀಸರು ಕೇಸು ದಾಖಲಿಸಿ ಆರೋಪಿ ಮುಸ್ತಾಕ ರಾಜೇಸಾಬ ಜಂಗಿಯನ್ನು ಬಂಧಿಸಿ ಸೂಕ್ತ ಕ್ರಮಕೈಗೊಂಡಿದ್ದಾರೆ. ಘಟನಾ ಸ್ಥಳಕ್ಕೆ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಅಮರನಾಥ ರೆಡ್ಡಿ, ಹೆಚ್ಚುವರಿ ಎಸ್.ಪಿ.ಪ್ರಸನ್ನ ದೇಸಾಯಿ, ಹುನಗುಂದ ಡಿಎವೈಸ್ಪಿ ಪ್ರಭುಗೌಡ ಕಿರೇದಳ್ಳಿ, ಸಿಪಿಐ ಗುರುಶಾಂತ ದಾಶ್ಯಾಳ, ಅಮೀನಗಡ ಪಿಎಸೈ ಶಿವಾನಂದ ಸಿಂಗನ್ನವರ ಭೇಟಿ ನೀಡಿದ್ದರು.