ಅಫಜಲ್ಪುರ: ಲೋಡೋ ಗೇಮ್‌ ಜಗಳ ಕೊಲೆಯಲ್ಲಿ ಅಂತ್ಯ

By Kannadaprabha News  |  First Published Jun 10, 2022, 2:51 PM IST

*  ಅಫಜಲಪುರ ತಾಲೂಕಿನ ಮಾಶಾಳ ಗ್ರಾಮದಲ್ಲಿ ನಡೆದ ಘಟನೆ
*  ಗೇಮ್‌ ಆಡುವಾಗ ಇಬ್ಬರ ನಡುವೆ ನಡೆದ ಜಗಳ 
*  ಈ ಸಂಬಂಧ ಅಫಜಲಪುರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲು 


ಅಫಜಲ್ಪುರ(ಜೂ.10):  ಲೋಡೋ ಗೇಮ್‌ ಆಡುವಾಗ ಇಬ್ಬರ ನಡುವೆ ನಡೆದ ಜಗಳ ಬಾಲಕನ ಕೊಲೆಯಲ್ಲಿ ಅಂತ್ಯವಾದ ಧಾರುಣ ಘಟನೆ ತಾಲೂಕಿನ ಮಾಶಾಳ ಗ್ರಾಮದಲ್ಲಿ ಬುಧವಾರ ರಾತ್ರಿ ನಡೆದಿದೆ. ಶಾಮರಾಯ ಸಿದ್ದಪ್ಪ ಪರೀಟ್‌ (16) ಕೊಲೆಯಾದ ಬಾಲಕ. ಈ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚೀನ್‌ ಶರಣಪ್ಪ ಕಿರಸಾವಳಗಿ (20) ಎಂಬಾತನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.

ಲೋಡೋ ಗೇಮ್‌ ಆಡುವಾಗ ಶಾಮರಾಯ ಮತ್ತು ಸಚಿನ್‌ ನಡುವೆ ಜಗಳ ನಡೆದಿತ್ತು. ಜಗಳದ ನಂತರ ಶಾಮರಾಯ ಸಹೋದರ ಇಬ್ಬರನ್ನು ಸಮಾಧಾನ ಪಡಿಸಿದ್ದ. ಕಳೆದ ರಾತ್ರಿ ಮತ್ತೆ ಇಬ್ಬರ ನಡುವೆ ಜಗಳ ನಡೆದಿದೆ. ಈ ವೇಳೆ ಸಚೀನ್‌ ಮನೆಯಿಂದ ಚಾಕು ತಂದು ಶಾಮರಾಯನ ಎದೆಗೆ ಇರಿದು ಕೊಲೆ ಮಾಡಿದ್ದಾನೆ ಎಂದು ತಿಳಿದುಬಂದಿದೆ.

Tap to resize

Latest Videos

Davanagere: ಚಿಕನ್ ಮಾಡಿಲ್ಲ ಎಂಬ ಕ್ಷುಲ್ಲಕ ಕಾರಣಕ್ಕೆ ಪತ್ನಿಯನ್ನು ಕೊಂದ ಕಿರಾತಕ ಪತಿ

ಪೊಲೀಸರು ನೀಡಿದ ಮಾಹಿತಿ ಅನುಸಾರ ಇದು ಲೋಡೋ ಗೇಮ್‌ ವಿಷಯಕ್ಕೆ ನಡೆದ ಕೊಲೆ ಅಲ್ಲ. ಶಾಮರಾಯ ಮತ್ತು ಸಚಿನ್‌ ನಡುವೆ ಇತ್ತೀಚೆಗೆ ಕ್ಷುಲ್ಲಕ ವಿಷಯಕ್ಕೆ ಜಗಳ ನಡೆದಿತ್ತು. ಇದೇ ಕಾರಣಕ್ಕೆ ಕಳೆದ ರಾತ್ರಿ ಮತ್ತೆ ಇಬ್ಬರ ನಡುವೆ ಜಗಳ ನಡೆದು ಕೊಲೆಯಲ್ಲಿ ಅಂತ್ಯವಾಗಿದೆ. ಈ ಸಂಬಂಧ ಸಚೀನ್‌ ಕಿರಸಾವಳಗಿಯನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ವಿಚಾರಣೆ ನಡೆಸಲಾಗುತ್ತಿದೆ ಎಂದು ತಿಳಿದುಬಂದಿದೆ.

ಸುದ್ದಿ ತಿಳಿದು ಆಳಂದ ಡಿಎಸ್ಪಿ ರವೀಂದ್ರ ಶಿರೂರ, ಸಿಪಿಐ ಜಗದೇವಪ್ಪ ಪಾಳಾ ಮತ್ತು ಪಿಎಸ್‌ಐ ಸುರೇಶಕುಮಾರ ಚವ್ಹಾಣ್‌ ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದ್ದಾರೆ. ಅಫಜಲಪುರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆದಿದೆ.

click me!