ಕೇರಳದಲ್ಲಿ ಬಾಲಕನ ಕಿತಾಪತಿ: ಆಸ್ಪತ್ರೆಯ ಆಂಬ್ಯುಲೆನ್ಸ್ ರಸ್ತೆಗಿಳಿಸಿ 8 Km ರೈಡ್

By Anusha KbFirst Published Dec 13, 2022, 9:58 PM IST
Highlights

ಕೇರಳದಲ್ಲಿ 15 ವರ್ಷದ ಬಾಲಕನೋರ್ವ ಆಸ್ಪತ್ರೆಯ ಆಂಬುಲೆನ್ಸ್ ಏರಿ 8  ಕಿಲೋ ಮೀಟರ್‌ವರೆಗೆ ವಾಹನವನ್ನು ಚಾಲನೆ ಮಾಡಿಕೊಂಡು ಹೋದ ಘಟನೆ ತ್ರಿಶೂರ್‌ನಲ್ಲಿ ನಡೆದಿದೆ.

ತಿರುವನಂತಪುರ: ಕೇರಳದಲ್ಲಿ 15 ವರ್ಷದ ಬಾಲಕನೋರ್ವ ಆಸ್ಪತ್ರೆಯ ಆಂಬುಲೆನ್ಸ್ ಏರಿ 8  ಕಿಲೋ ಮೀಟರ್‌ವರೆಗೆ ವಾಹನವನ್ನು ಚಾಲನೆ ಮಾಡಿಕೊಂಡು ಹೋದ ಘಟನೆ ತ್ರಿಶೂರ್‌ನಲ್ಲಿ ನಡೆದಿದೆ. 15 ವರ್ಷದ ಬಾಲಕ ತ್ರಿಶೂರ್ ಜಿಲ್ಲಾಸ್ಪತ್ರೆಗೆ ಸೇರಿದ ಆಂಬುಲೆನ್ಸ್‌ನ್ನು ಏರಿ ಸುಮಾರು 8 ಕಿಲೋ ಮೀಟರ್ ವರೆಗೆ ಚಾಲನೆ ಮಾಡಿದ್ದಾನೆ. ಈತ ಆಸ್ಪತ್ರೆಯ ಉದ್ಯೋಗಿಯೊಬ್ಬರ ಪುತ್ರನಾಗಿದ್ದು, ಈ ಹಿಂದೆ ಜ್ವರದ ಕಾರಣಕ್ಕೆ ಔಷಧಿ ಪಡೆಯಲು ಆಸ್ಪತ್ರೆಗೆ ಬಂದಿದ್ದ. ಈ ಬಾಲಕನಿಗೆ ಚಾಲನೆ ತಿಳಿದಿದ್ದ ಕಾರಣ ವಾಹನವನ್ನು ಸುಲಭವಾಗಿ ಓಡಿಸಿದ್ದ, ಆಸ್ಪತ್ರೆಯ ಆವರಣದಲ್ಲಿ ಆಂಬುಲೆನ್ಸ್ ಅನ್ನು ನಿಲ್ಲಿಸಲಾಗಿದ್ದು, ಅದರೊಳಗೆ ಕೀ ಇರುವುದನ್ನು ಬಾಲಕ ಗಮನಿಸಿದ್ದ, ಕೀ ನೋಡಿದ ಕೂಡಲೇ ವಾಹನ ಏರಿದ ಬಾಲಕ ಆಂಬುಲೆನ್ಸ್‌ನ್ನು ರಸ್ತೆಗಿಳಿಸಿ ನಗರದಲ್ಲಿ ಪಂಟರ್ ತರ ಓಡಿಸಿದ್ದಾರೆ. 

ಆದರೆ ಈ ಆಂಬುಲೆನ್ಸ್ (Ambulance) ರಸ್ತೆ ಮಧ್ಯೆ ಸಡನ್ ಆಗಿ ಸ್ಥಗಿತಗೊಂಡಿದೆ. ಈ ವೇಳೆ ಅಲ್ಲಿದ್ದವರೆಲ್ಲಾ ಬಂದು ಚಾಲಕ ಯಾರು ಎಂದು ನೋಡಿದಾಗ ಅಪ್ರಾಪ್ತ ಬಾಲಕ ಗಾಡಿ ಚಾಲನೆ ಮಾಡುತ್ತಿರುವುದು ಗಮನಕ್ಕೆ ಬಂದಿದೆ. ಕೂಡಲೇ ಸ್ಥಳೀಯರು ಪೊಲೀಸರಿಗೆ ದೂರು ನೀಡಿದ್ದಾರೆ. ಆಂಬುಲೆನ್ಸ್ ಸೇವೆಯನ್ನು ಆನ್‌ಲೈನ್‌ಗೊಳಿಸಲಾಗಿದ್ದು, ಕೇರಳ ರಾಜ್ಯ ವೈದ್ಯಕೀಯ ಸೇವಾ ಸಂಸ್ಥೆಗೆ ತಮ್ಮ ಆಂಬುಲೆನ್ಸ್ ಒಂದು ಜನಾದೇಶವಿಲ್ಲದೇ ರಸ್ತೆಗಿಳಿದಿರುವುದು ತಿಳಿದು ಬಂದಿದೆ. ನಂತರ ಆನ್‌ಲೈನ್‌ನಲ್ಲೇ ಆಂಬುಲೆನ್ಸ್ ಲೋಕೇಷನ್ ಗಮನಿಸಿದ ಸಿಬ್ಬಂದಿ ಕೂಡಲೇ ಸ್ಥಳಕ್ಕೆ ಆಗಮಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ತ್ರಿಶೂರ್ (Trissur) ಪೂರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆಂಬ್ಯುಲೆನ್ಸ್‌ನ ನೋಂದಾಯಿತ ಚಾಲಕನಿಗೆ ಘಟನೆಯ ವಿವರಣೆಯನ್ನು ಕೇಳಲಾಗಿದೆ ಮತ್ತು ನೋಟಿಸ್ ನೀಡಲಾಗಿದೆ.

ಯೂಟ್ಯೂಬ್ ನೋಡಿ ಬಾಲಕನ ಕಿತಾಪತಿ: ಅಗ್ನಿಶಾಮಕ ಸಿಬ್ಬಂದಿ ಕರೆಸಿದ ವೈದ್ಯರು

8 ವರ್ಷದ ಬಾಲಕಿಗೆ ಡ್ರಗ್ಸ್‌ ನೀಡಿ, ಆಕೆಯ ಬ್ಯಾಗ್‌ನಲ್ಲಿಯೇ ಮಾದಕ ವಸ್ತು ಸಾಗಣೆ, ಆರೋಪಿಯ ಬಿಡುಗಡೆ!

click me!