ಬೆಂಗಳೂರಿನ ಮಲ್ಲೇಶ್ವರಂನಲ್ಲಿ ಬಿಬಿಎಂಪಿ ಮೈದಾನದ ಗೇಟ್ ಬಿದ್ದು 10 ವರ್ಷದ ಬಾಲಕ ಸಾವನ್ನಪ್ಪಿದ ಹೃದಯ ವಿದ್ರಾವಕ ಘಟನೆ ನಡೆದಿದೆ. ನಿರಂಜನ್ ಮೃತ ಬಾಲಕ.
ಬೆಂಗಳೂರು (ಸೆ.21): ಬೆಂಗಳೂರಿನ ಮಲ್ಲೇಶ್ವರಂನಲ್ಲಿ ಬಿಬಿಎಂಪಿ ಮೈದಾನದ ಗೇಟ್ ಬಿದ್ದು 10 ವರ್ಷದ ಬಾಲಕ ಸಾವನ್ನಪ್ಪಿದ ಹೃದಯ ವಿದ್ರಾವಕ ಘಟನೆ ನಡೆದಿದೆ. ನಿರಂಜನ್ ಮೃತ ಬಾಲಕ. ವಿಜಯಕುಮಾರ್ ಮತ್ತು ಪ್ರಿಯಾ ದಂಪತಿಯ ಮಗುವಾದ ನಿರಂಜನ್, ಆಟ ಆಡಲು ಮೈದಾನದ ಗೇಟ್ ಓಪನ್ ಮಾಡುತ್ತಿದ್ದಂತೆ ಮಗುವಿನ ಮೇಲೆಯೇ ಗೇಟ್ ಬಿದ್ದಿದೆ. ಈ ವೇಳೆ ತಲೆಗೆ ತೀವ್ರ ಪೆಟ್ಟು ಬಿದ್ದಿದ್ದು, ಕೂಡಲೇ ಸ್ಥಳೀಯರು ಮಗುವನ್ನು ಕೆ.ಸಿ.ಜನರಲ್ ಆಸ್ಪತ್ರೆ ಕರೆದುಕೊಂಡು ಹೋಗಿದ್ದಾರೆ.
ಆದರೆ, ದುರಾದೃಷ್ಟವಶಾತ್ ಚಿಕಿತ್ಸೆ ಫಲಿಸದೇ ಮಗು ಕೊನೆಯುಸಿರೆಳೆದಿದೆ. ಮೃತ ನಿರಂಜನ್ ಮಲ್ಲೆಶ್ವರಂನ ಬಿಬಿಎಂಪಿ ಶಾಲೆಯಲ್ಲಿ 5 ನೇ ತರಗತಿಯಲ್ಲಿ ಓದುತ್ತಿದ್ದ. ಜೊತೆಗೆ ತಂದೆ ವಿಜಯಕುಮಾರ್ ಆಟೋ ಚಾಲಕರಾಗಿದ್ದು, ಮಲ್ಲೇಶ್ವರನ ಪೈಪ್ಲೈನ್ನಲ್ಲಿ ಈ ಕುಟುಂಬ ವಾಸವಾಗಿತ್ತು. ಇನ್ನು ಘಟನೆ ಬಳಿಕ ಸ್ಥಳಕ್ಕೆ ಮಲ್ಲೇಶ್ವರಂ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಮನೆಗೆ ವಾಪಾಸ್ ಬರಲೇ ಇಲ್ಲ: ಮಗನನ್ನ ಕಳೆದುಕೊಂಡಿದ್ದು ತುಂಬಾ ನೋವಾಗಿದೆ. ಪ್ರತಿದಿನ ಅದೇ ಆಟದ ಮೈದಾನಕ್ಕೆ ಆಟ ಆಡೋಕೆ ಹೋಗ್ತಿದ್ದ. ಮನೆಗೆ ವಾಪಾಸ್ ಬರಲೇ ಇಲ್ಲ . ಸಂಜೆ 4.05 ರ ಸುಮಾರಿಗೆ ಘಟನೆ ಬಗ್ಗೆ ವಿಷಯ ತಿಳಿಯಿತು. ಅಲ್ಲಿ ಇದ್ದವ್ರು ನಮಗೆ ಬಂದು ವಿಷಯ ತಿಳಿಸಿದ್ರು. ಆಸ್ಪತ್ರೆಗೆ ಕರೆದೋಯ್ಯುವ ಮೊದಲ ಅವನ ಜೀವ ಹೋಗಿತ್ತು ಎಂದು ಮೃತ ನಿರಂಜನ್ ತಾಯಿ ಪ್ರಿಯಾ ಭಾವುಕರಾಗಿ ಹೇಳಿದ್ದಾರೆ.
ಚಾಮರಾಜನಗರದ ಬಸವನಗುಡಿ ಗ್ರಾಮದಲ್ಲಿ ದಲಿತರಿಗೆಂದು ಮೀಸಲಿಟ್ಟಿದ್ದ ಸ್ಮಶಾನವೇ ಕಣ್ಮರೆ!
ಸಾಂತ್ವನ ಹೇಳಿದ್ರೂ ಅವರ ದುಃಖ ಕಡಿಮೆಯಾಗೊಲ್ಲ: ದುರ್ಘನೆಯೊಂದು ನಡೆದು ಹೋಗಿದೆ. ಅವರ ಕುಟುಂಬಸ್ಥರಿಗೆ ಈ ದುಃಖದಲ್ಲಿ ಸಾಂತ್ವನ ಹೇಳಿದ್ದೇನೆ. ಸಾಂತ್ವನ ಹೇಳಿದ್ರೂ ಅವರ ದುಃಖ ಕಡಿಮೆಯಾಗೊಲ್ಲ. ಘಟನೆ ಬಗ್ಗೆ ಮಾಹಿತಿ ಕಲೆಹಾಕುತ್ತೇವೆ. ಯಾರ ವೈಫಲ್ಯ ಎನ್ನುವ ಬಗ್ಗೆ ತದನಂತರ ನೋಡುತ್ತೇವೆ. ಗೇಟ್ ಹೇಗೆ ಬಿದ್ದಿದೆ ಅದು ಯಾವಾಗಿಂದ ಹಾಳಾಗಿತ್ತು ಎನ್ನುವ ಬಗ್ಗೆ ನೋಡುತ್ತೇವೆ. ಅನಂತರದಲ್ಲಿ ಕ್ರಮ ಕೈಗೊಳ್ಳುತ್ತೇವೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಕೆ.ಸಿ.ಜನರಲ್ ಆಸ್ಪತ್ರೆ ಬಳಿ ತಿಳಿಸಿದರು. ಜೊತೆಗೆ ಪರಿಹಾರದ ಬಗ್ಗೆ ಡಿಸಿಎಂ, ಬಿಬಿಎಂಪಿ ಕಮಿಷನರ್ ಜೊತೆ ಮಾತನಾಡ್ತೇವೆ ಎಂದರು.