ಬೆಂಗಳೂರು: ನೌಕರರಿಂದಲೇ ಜಲಮಂಡಳಿಗೆ 1 ಕೋಟಿ ಟೋಪಿ..!

By Kannadaprabha NewsFirst Published Dec 29, 2022, 4:30 AM IST
Highlights

ಬಿಲ್‌ ಕಲೆಕ್ಟರ್‌ಗಳಿಂದ ಗ್ರಾಹಕರಿಂದ ತೆರಿಗೆ ವಸೂಲಿ, ಜಲಮಂಡಳಿ ಸಾಫ್ಟ್‌ವೇರಲ್ಲಿ ಹಣ ವಸೂಲಿ ನಮೂದು, ಆದರೆ ಹಣ ಸ್ವಂತ ಖಾತೆಗೆ, ಬಾಕಿ ಉಳಿಸಿಕೊಂಡಿದ್ದ ಗ್ರಾಹಕರಿಗೆ ರಿಯಾಯಿತಿ ನೀಡೋದಾಗಿ ಹಣ ಸುಲಿಗೆ, ಎಫ್‌ಡಿಎ, ಬಿಲ್‌ ಕಲೆಕ್ಟರ್‌, ಹೊರಗುತ್ತಿಗೆ ನೌಕರರ ಬಂಧನ. 

ಬೆಂಗಳೂರು(ಡಿ.29):  ಗ್ರಾಹಕರಿಂದ ನೀರಿನ ಕರ ವಸೂಲಿ ಮಾಡಿ ಸರ್ಕಾರಕ್ಕೆ ಪಾವತಿಸದೆ ವಂಚಿಸಿದ ಆರೋಪದ ಮೇರೆಗೆ ಜಲಮಂಡಳಿಯ ಪ್ರಥಮ ದರ್ಜೆ ಸಹಾಯಕಿ ಸೇರಿದಂತೆ 9 ಮಂದಿಯನ್ನು ಬೊಮ್ಮನಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಜಲಮಂಡಳಿಯ ಕೋಡಿಚಿಕ್ಕನಹಳ್ಳಿ ಉಪ ವಿಭಾಗದ ಪ್ರಥಮ ದರ್ಜೆ ಸಹಾಯಕಿ ನಾಗವೇಣಿ, ಬಿಲ್‌ ಕಲೆಕ್ಟರ್‌ ಬಸವರಾಜು, ಹೊರಗುತ್ತಿಗೆ ನೌಕರರಾದ ಉಮೇಶ್‌, ಮಹದೇವಸ್ವಾಮಿ, ಚೌಡೇಶ್‌, ಮಂಜುನಾಥ್‌, ಕಿರಣ್‌ ಕುಮಾರ್‌, ವರದರಾಜು ಹಾಗೂ ನಿರ್ಮಲ್‌ ಕುಮಾರ್‌ ಬಂಧಿತರಾಗಿದ್ದು, ಈ ವಂಚನೆ ಕೃತ್ಯದ ಬಗ್ಗೆ ಬೊಮ್ಮನಹಳ್ಳಿ ಠಾಣೆಗೆ ಜಲಮಂಡಳಿಯ ಕೋಡಿಚಿಕ್ಕಹಳ್ಳಿ ಉಪ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ನಾಗರಾಜ್‌ ದೂರು ದಾಖಲಿಸಿದ್ದರು. ಅದರನ್ವಯ ತನಿಖೆ ನಡೆಸಿದ ಪೊಲೀಸರು, ಎಫ್‌ಡಿಎ ನಾಗವೇಣಿ ತಂಡವನ್ನು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

BWSSB: ಕಾವೇರಿ ನೀರಿನಂತೆಯೇ ವಾಟರ್‌ ಬಿಲ್‌ ಸಹ ಸೋರಿಕೆ: ಭ್ರಷ್ಟರ ಪಾಲಾಗುತ್ತಿದೆ ಸಾರ್ವಜನಿಕರ ಹಣ

ಹೇಗೆ ವಂಚನೆ:

ಜಲಮಂಡಳಿಯ ಮಂಡಳಿಯ ಸಾಫ್‌್ಟವೇರ್‌ನಲ್ಲಿ ಗ್ರಾಹಕರಿಂದ ಕರ ವಸೂಲಿ ಬಳಿಕ ಮಾಹಿತಿಯನ್ನು ಅಧಿಕಾರಿಗಳು ದಾಖಲಿಸಬೇಕಿದೆ. ಆದರೆ ಕೋಡಿಚಿಕ್ಕಹಳ್ಳಿ ಉಪ ವಿಭಾಗದ ಕಂದಾಯ ವ್ಯವಸ್ಥಾಪಕರಿಂದ ಜಲಮಂಡಳಿಯ ಲಾಗ್‌ಇನ್‌ ಯೂಸರ್‌ ಐಡಿ ಮತ್ತು ಪಾಸ್‌ವರ್ಡನ್ನು ಪಡೆದ ಎಫ್‌ಡಿಎ ನಾಗವೇಣಿ ಹಾಗೂ ಬಿಲ್‌ ಕಲೆಕ್ಟರ್‌ ಬಸವರಾಜು ಅವರು, ಗ್ರಾಹಕರಿಂದ ನೀರಿನ ಕರ ವಸೂಲಿ ಮಾಡದೆ ಕರ ವಸೂಲಿಯಾಗಿದೆ ಎಂದು ಸಾಫ್‌್ಟವೇರ್‌ನಲ್ಲಿ ಸುಳ್ಳು ಮಾಹಿತಿಯನ್ನು ನಮೂದಿಸುತ್ತಿದ್ದರು. ಈ ಮೂಲಕ ತಾವು ಗ್ರಾಹಕರಿಂದ ವಸೂಲಿ ಮಾಡಿದ ಹಣವನ್ನು ಸ್ವಂತ ಬ್ಯಾಂಕ್‌ ಖಾತೆಗಳಿಗೆ ವರ್ಗಾಯಿಸಿ ಕೊಂಡಿದ್ದರು. ಇನ್ನೊಂದೆಡೆ ಸಾವಿರಾರು ಮೊತ್ತದ ಕರ ಬಾಕಿ ಉಳಿಸಿಕೊಂಡಿದ್ದ ಗ್ರಾಹಕರಿಗೆ ಕರ ಪಾವತಿಯಲ್ಲಿ ರಿಯಾಯಿತಿ ಕೊಡುವುದಾಗಿ ನಂಬಿಸಿ ಹಣ ಪಡೆದು ವಂಚಿಸಿದ್ದರು. ಇದರಿಂದ ಸರ್ಕಾರ ಬೊಕ್ಕಸಕ್ಕೆ ಭಾರಿ ಮೊತ್ತದ ನಷ್ಟವಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಲೆಕ್ಕ ಪರಿಶೋಧನೆಯಲ್ಲಿ ವಂಚನೆ ಬಯಲಿಗೆ

ಇತ್ತೀಚೆಗೆ ಜಲಮಂಡಳಿಯಲ್ಲಿ ಲೆಕ್ಕಪರಿಶೋಧನೆ ವೇಳೆ ಕರ ವಂಚನೆ ಕೃತ್ಯ ಪತ್ತೆಯಾಗಿದೆ. ಬಳಿಕ ಇಲಾಖಾ ಮಟ್ಟದ ಆಂತರಿಕ ವಿಚಾರಣೆ ನಡೆಸಿದಾಗ ಕೃತ್ಯದಲ್ಲಿ ಎಫ್‌ಡಿಎ ನಾಗವೇಣಿ ಹಾಗೂ ಬಿಲ್‌ ಕಲೆಕ್ಟರ್‌ ಬಸವರಾಜು ಹಾಗೂ ಮೇ.ನವೋದ ಸವೀರ್‍ಸ್‌ ಏಜೆನ್ಸಿ ಮೂಲಕ ಹೊರಗುತ್ತಿಗೆ ಆಧಾರದಡಿ ಮೀಟರ್‌ ರೀಡರ್‌ಗಳಾಗಿ ನೇಮಕಗೊಂಡಿದ್ದ ಏಳು ಮಂದಿ ಪಾತ್ರವಹಿಸಿರುವುದು ಜಲಮಂಡಳಿಯ ಅಧಿಕಾರಿಗಳಿಗೆ ಗೊತ್ತಾಗಿದೆ. ಈ ವರದಿ ಆಧರಿಸಿ ಬೊಮ್ಮನಹಳ್ಳಿ ಠಾಣೆಗೆ ಎಇಇ ನಾಗರಾಜ್‌ ದೂರು ನೀಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

Bengaluru: ಜಲಮಂಡಳಿಯಲ್ಲಿ ಕೆಲಸದ ಆಮಿಷ ತೋರಿ 1 ಕೋಟಿ ವಂಚನೆ: ದೂರು

80 ಲಕ್ಷದಿಂದ 1 ಕೋಟಿ ವಂಚನೆ

ಆರೇಳು ತಿಂಗಳಿಂದ ನೀರಿನ ಕರ ವಂಚನೆ ಕೃತ್ಯದಲ್ಲಿ ನಾಗವೇಣಿ ತಂಡ ತೊಡಗಿದ್ದು, ಇದುವರೆಗೆ ತನಿಖೆಯಲ್ಲಿ 80 ಲಕ್ಷದಿಂದ 1 ಕೋಟಿ ವರೆಗೆ ಸರ್ಕಾರಕ್ಕೆ ನಷ್ಟವಾಗಿರುವುದು ಪತ್ತೆಯಾಗಿದೆ. ಆರೋಪಿಗಳ ಹಣಕಾಸು ವ್ಯವಹಾರದ ಬಗ್ಗೆ ಕೂಡಾ ಮಾಹಿತಿ ಕಲೆ ಹಾಕಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.

5 ಠಾಣೆಗಳಲ್ಲಿ ಕೇಸ್‌

ಜಲಮಂಡಳಿಯ ಎಲ್ಲ ಉಪ ವಿಭಾಗಗಳಲ್ಲಿ ಕೂಡಾ ನೀರಿನ ಕರ ಸಂಗ್ರಹ ಹೆಸರಿನಲ್ಲಿ ಅಕ್ರಮ ನಡೆದಿರುವ ಬಗ್ಗೆ ಅನುಮಾನ ವ್ಯಕ್ತವಾಗಿದೆ. ಈ ಸಂಬಂಧ ಬೊಮ್ಮನಹಳ್ಳಿ, ಕೋಣನಕುಂಟೆ, ಬಸವನಗುಡಿ, ಕೊಡಿಗೇಹಳ್ಳಿ ಹಾಗೂ ಜೆ.ಪಿ.ನಗರ ಠಾಣೆಗಳಲ್ಲಿ ಎಫ್‌ಐಆರ್‌ ದಾಖಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

click me!