ದಾಳಿ ನಡೆಸಿ ಮನೆಯಲ್ಲಿದ್ದ 76 ಕೆಜಿ ಒಣ ಹಾಗೂ 46 ಕೆಜಿ ಹಸಿ ಒಟ್ಟು 122 ಕೆಜಿ ಗಾಂಜಾ ವಶಪಡಿಸಿಕೊಂಡ ಪೊಲೀಸರು
ಸುರಪುರ(ಸೆ.02): ಅಕ್ರಮವಾಗಿ ಮನೆಯಲ್ಲಿ ಶೇಖರಿಸಿಟ್ಟಿದ್ದ ಮತ್ತು ಹೊಲದಲ್ಲಿ ಬೆಳೆದಿದ್ದ ಕೋಟ್ಯಂತರ ರು.ಗಳು ಬೆಲೆ ಬಾಳುವ ಗಾಂಜಾವನ್ನು ಪೊಲೀಸರು ನಿರಂತರವಾಗಿ ಕೆಲ ದಿನಗಳ ಕಾಲ ವೀಕ್ಷಿಸಿ ವಶಕ್ಕೆ ಪಡೆದು ಓರ್ವನನ್ನು ಬಂಧಿಸಿದ ಘಟನೆ ಮಂಗಳವಾರ ಸಂಜೆ ಕಕ್ಕೇರಾ ಪುರಸಭೆ ವ್ಯಾಪ್ತಿಯಲ್ಲಿ ನಡೆದಿದೆ.
ದೂರು ಬಂದ ಹಿನ್ನೆಲೆಯಲ್ಲಿ ಎರಡ್ಮೂರು ತಿಂಗಳಿಂದ ಆರೋಪಿಯ ಮನೆಯ ನಿಗಾವಹಿಸಲಾಗಿತ್ತು. ಖಚಿತ ಮಾಹಿತಿ ದೊರೆತ ಬಳಿಕ ಮಂಗಳವಾರ ಸಂಜೆ ಮನೆಯ ಮೇಲೆ ದಾಳಿ ನಡೆಸಿ 1.6 ಕೋಟಿ ರು.ಗಳ ಮೌಲ್ಯದ ಹಸಿ ಮತ್ತು ಒಣ ಗಾಂಜಾವನ್ನು ವಶಕ್ಕೆ ಪಡೆದು ಓರ್ವನನ್ನು ಬಂಧಿಸಲಾಗಿದೆ ಎಂದು ಸುರಪುರ ಡಿವೈಎಸ್ಪಿ ಮಂಜುನಾಥ ಟಿ. ತಿಳಿಸಿದ್ದಾರೆ.
ಯಾದಗಿರಿ ಜಿಲ್ಲಾ ಎಸ್ಪಿ ಡಾ. ಸಿ.ಬಿ. ವೇದಮೂರ್ತಿ ಮಾರ್ಗದರ್ಶನದಲ್ಲಿ ಪುರಸಭೆ ವ್ಯಾಪ್ತಿಯ 17ನೇ ವಾರ್ಡ್‌ನ ಗೊಲಪಲ್ಲೇರದೊಡ್ಡಿಯ ನಿವಾಸಿ ಹನಮಂತರಾಯ ಗೋನಾಟ್(40) ಎಂಬುವರ ಮನೆಯ ಮೇಲೆ ದಾಳಿ ನಡೆಸಿ ಮನೆಯಲ್ಲಿದ್ದ 76 ಕೆಜಿ ಒಣ ಹಾಗೂ 46 ಕೆಜಿ ಹಸಿ ಒಟ್ಟು 122 ಕೆಜಿ ಗಾಂಜಾ ವಶಪಡಿಸಿಕೊಳ್ಳಲಾಗಿದೆ.
ತುಮಕೂರು: ಪದೇ ಪದೇ ಮೂತ್ರ ಮಾಡಿದ ಬಾಲಕನ ಗುಪ್ತಾಂಗ ಸುಟ್ಟ ಶಿಕ್ಷಕಿ
ಹುಣಸಗಿ ವೃತ್ತ ಸಿಪಿಐ ಎಂ.ಬಿ. ಚಿಕ್ಕಣ್ಣನವರ್, ಪಿಐ ಸುನೀಲಕುಮಾರ ಮೂಲಿಮನಿ, ಕೊಡೇಕಲ್ ಪಿಎಸ್‌ಐ ಶ್ರೀಶೈಲ್ ಅಂಬಾಟೆ, ಎಎಸ್‌ಐಗಳಾದ ಮಧುನಾಯಕ, ಮಡಿವಾಳಪ್ಪ, ಬಸನಗೌಡ, ಪುರಸಭೆ ಮುಖ್ಯಾಧಿಕಾರಿ ಪ್ರವೀಣಕುಮಾರ, ಸಿಬ್ಬಂದಿಗಳಾದ ಶಾಂತಪ್ಪ, ಇಮಾಮಸಾಬ್, ರಾಜೇಸಾಬ್, ಬಸವರಾಜ ಜಾಲಹಳ್ಳಿ, ಪರಮಾನಂದ, ಪ್ರಭುಗೌಡ, ಬಸಟ್ಟೆಪ್ಪ ಸೇರಿದಂತೆ ಇತರರು ಕಾರ್ಯಾಚರಣೆಯಲ್ಲಿದ್ದರು. ಕೊಡೇಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣ ಭೇದಿಸಿದ ಪೊಲೀಸ್ ಸಿಬ್ಬಂದಿಗಳ ಕಾರ್ಯವೈಖರಿ ಮೆಚ್ಚಿ ಎಸ್ಪಿ ಡಾ. ಸಿ.ಬಿ. ವೇದಮೂರ್ತಿ ಬಹುಮಾನ ಘೋಷಿಸಿದ್ದಾರೆ.
ಗುರುಮಠಕಲ್‌ನಲ್ಲಿ ಓರ್ವನ ಬಂಧನ:
ಗುರುಮಠಕಲ್ ಪಟ್ಟಣದ ಇಂದಿರಾನಗರ ಬಡಾವಣೆಯಲ್ಲಿ ಗಾಂಜಾ ಮಾರಾಟದ ವ್ಯವಹಾರ ಮಾಡುತ್ತಿರುವ ಕುರಿತು ಖಚಿತ ಮಾಹಿತಿಯಂತೆ ಬುಧವಾರ ದಾಳಿ ಮಾಡಿದ ಪೊಲೀಸರು 7,58,000 ರು.ಗಳ ಮೌಲ್ಯದ ಗಾಂಜಾ ಜಪ್ತಿ ಮಾಡಿ, ಓರ್ವನನ್ನು ವಶಕ್ಕೆ ಪಡೆದಿದ್ದಾರೆ.
ಮಹಿಪಾಲ ಮುಕುಡಿ (23) ಬಂಧಿತ ಆರೋಪಿ. ಗಾಂಜಾ ತಂದುಕೊಟ್ಟಮಲ್ಲಿಕಾರ್ಜುನ ಮೇತ್ರಿ ಹಾಗೂ ವ್ಯವಹಾರದಲ್ಲಿ ಭಾಗಿಯಾಗಿದ್ದ ನವೀನ ರಾಮುಲು ಪಾಲಮೂರಿ ಪರಾರಿಯಾಗಿದ್ದಾರೆ. ಇಂದಿರಾನಗರ ಬಡಾವಣೆ ಆಶ್ರಯ ಮನೆಯಲ್ಲಿ ಗಾಂಜಾ ಮಾರಾಟದ ವ್ಯವಹಾರ ನಡೆಯುತ್ತಿರುವಾಗ ದಾಳಿ ಮಾಡಿದಾಗ 758 ಗ್ರಾಂ ಒಣ ಗಾಂಜಾ ಪತ್ತೆಯಾಗಿದ್ದು, ಮೂವರ ವಿರುದ್ಧ ಪ್ರಕರಣ ದಾಖಲಾಗಿದೆ. ಒಬ್ಬರನ್ನು ವಶಕ್ಕೆ ಪಡೆದಿದ್ದು, ಪರಾರಿಯಾದ ಉಳಿದಿಬ್ಬರನ್ನು ವಶಕ್ಕೆ ಪಡೆಯಲು ತನಿಖೆ ನಡೆಸುತ್ತಿದ್ದಾರೆ ಎಂದು ಪೊಲೀಸ್ ಇಲಾಖೆ ಮಾಹಿತಿ ನೀಡಿದೆ. ಗುರುಮಠಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.