Ind vs Pak: "ಕಣ್ಣೀರಲ್ಲೇ ಹೊಟ್ಟೆ ತುಂಬೋಯ್ತಾ?"; ಪಾಕ್‌ ಫುಡ್‌ ಡೆಲಿವರಿ Appಗೆ Zomato ಏಟು

Published : Oct 24, 2022, 04:51 PM ISTUpdated : Oct 24, 2022, 05:23 PM IST
Ind vs Pak: "ಕಣ್ಣೀರಲ್ಲೇ ಹೊಟ್ಟೆ ತುಂಬೋಯ್ತಾ?"; ಪಾಕ್‌ ಫುಡ್‌ ಡೆಲಿವರಿ Appಗೆ Zomato ಏಟು

ಸಾರಾಂಶ

Zomato vs Careem Pakistan: ಪಾಕಿಸ್ತಾನದ ಫುಡ್‌ ಡೆಲಿವರಿ ಆಪ್‌ನ್ನು ಜೊಮ್ಯಾಟೊ ರಾಯಲ್‌ ಆಗಿ ಟ್ರೋಲ್‌ ಮಾಡಿದೆ. ವಿಶ್ವಕಪ್‌ನಲ್ಲಿ ಭಾರತ ಪಾಕಿಸ್ತಾನದ ವಿರುದ್ಧ ಗೆದ್ದ ನಂತರ ಜೊಮ್ಯಾಟೊ ಕರೀಂ ಪಾಕಿಸ್ತಾನದ ಕಾಲೆಳೆದಿದೆ. ಇದು ಸಿಕ್ಕಾಪಟ್ಟೆ ವೈರಲ್‌ ಆಗಿದೆ.

ಬೆಂಗಳೂರು: ಜೊಮ್ಯಾಟೊ ಕೇವಲ ಆಹಾರವನ್ನಷ್ಟೇ ಡೆಲಿವರ್‌ ಮಾಡಲ್ಲ ಆಗಾಗ ಪಕ್ಕದ ರಾಷ್ಟ್ರ ಪಾಕಿಸ್ತಾನದ ಟ್ರೋಲ್‌ ಕೂಡ ಡೆಲಿವರಿ ಮಾಡುತ್ತದೆ. ಜೊಮ್ಯಾಟೊದಂತೆ ಪಾಕಿಸ್ತಾನದಲ್ಲಿ ಕರೀಂ ಪಾಕಿಸ್ತಾನ್‌ ಎಂಬ ಫುಡ್‌ ಡೆಲಿವರಿ ಆಪ್‌ ಒಂದಿದೆ. ಅದು ಆಗಾಗ ಜೊಮ್ಯಾಟೊ ಕಾಲೆಳೆಯಲು ಬಂದು ನಂತರ ತಾನೇ ಟ್ರೋಲ್‌ ಆಗಿ ವಾಪಸ್‌ ಹೋಗುತ್ತದೆ. ಏಷ್ಯಾ ಕಪ್‌ನಲ್ಲಿ ಪಾಕ್‌ ವಿರುದ್ಧ ಭಾರತ ಸೋತಾಗ ಜೊಮ್ಯಾಟೊ ಕಾಲನ್ನು ಕರೀಂ ಪಾಕಿಸ್ತಾನ ಎಳೆದಿತ್ತು. ಅದಕ್ಕೆ ಜೊಮ್ಯಾಟೊ ಅಲ್ಲೇ ಉತ್ತರ ಕೂಡ ನೀಡಿತ್ತು. T-20 ವಿಶ್ವಕಪ್‌ನಲ್ಲೂ ಇಬ್ಬರ ನಡುವಿನ ಟ್ವಿಟ್ಟರ್‌ ವಾರ್‌ ಮುಂದುವರೆದಿದೆ. 

ಪಂದ್ಯಕ್ಕೂ ಮುನ್ನ ಜೊಮ್ಯಾಟೊ ತನ್ನ ಫಾಲೋವರ್ಸ್‌ಗಳಿಗೆ ಲೈಟ್‌ ಹಚ್ಚಿ ಆಯ್ತಾ ಎಂಬ ಪ್ರಶ್ನೆ ಕೇಳಿ ಟ್ವೀಟ್‌ ಮಾಡಿತ್ತು. ಇದಕ್ಕೆ ಕರೀಂ ಪಾಕಿಸ್ತಾನ ಪ್ರತಿಕ್ರಿಯೆ ನೀಡಿ "ದೀಪಾವಳಿ ಮುನ್ನ ನಾವು ಕೊಡೋ ಗಿಫ್ಟ್‌ಗೆ ನೀವು ಸಿದ್ಧರಾಗಿದ್ದೀರಿ ಎಂದಿಕೊಳ್ಳುತ್ತೇವೆ (ಗಿಫ್ಟ್‌ ಎಂದರೆ ಸೋಲು ಎಂದು ಓದಿ)," ಎಂದು ಕಮೆಂಟ್‌ ಮಾಡಿತ್ತು. ಅದಕ್ಕೆ ಜೊಮ್ಯಾಟೊ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ. ಪಂದ್ಯ ನಡೆದು ಫಲಿತಾಂಶ ಬರಲಿ ಎಂದು ಜೊಮ್ಯಾಟೊ ಸುಮ್ಮನಾಗಿತ್ತು.

 

ಕರೀಂ ಪಾಕಿಸ್ತಾನದ ದುರಾದೃಷ್ಟಕ್ಕೆ ವಿರಾಟ್‌ ಕೊಹ್ಲಿ ತಮ್ಮ ವಿರಾಟ ದರ್ಶನ ತೋರಿಸಿ ಸೋಲುತ್ತಿದ್ದ ಪಂದ್ಯವನ್ನು ಗೆಲ್ಲಿಸಿಬಿಟ್ಟರು. ಅಲ್ಲಿಯವರೆಗೆ ಸುಮ್ಮನಿದ್ದ ಜೊಮ್ಯಾಟೊ ಕರೀಂ ಪಾಕಿಸ್ತಾನಕ್ಕೆ ಆಗ ಉತ್ತರಿಸಿದೆ. "ದೀಪಾವಳಿಯ ಹಾರ್ದಿಕ ಶುಭಕಾಮನೆಗಳು. ನೀವು ಸಿಹಿ ಏನನ್ನಾದರೂ ತಿನ್ನುತ್ತೀರಾ ಅಥವಾ ಕಣ್ಣೀರಿನಿಂದಲೇ ಹೊಟ್ಟೆ ತುಂಬಿಸಿಕೊಂಡಿದ್ದೀರಾ," ಎಂದು ಜೊಮ್ಯಾಟೊ ಕರೀಂ ಪಾಕಿಸ್ತಾನದ ಕಾಲೆಳೆದಿದೆ. ಕರೀಂ ಪಾಕಿಸ್ತಾನ ಟ್ವಿಟ್ಟರ್‌ ಹ್ಯಾಂಡಲ್‌ಗೆ ಉತ್ತರಿಸಲೂ ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಬಹುಶಃ ಭಾರತ ಪಾಕಿಸ್ತಾನದ ಮುಂದಿನ ಪಂದ್ಯಕ್ಕಾಗಿ ಕರೀಂ ಪಾಕಿಸ್ತಾನ ಕಾಯುತ್ತಿರಬಹುದು. 

ಇದನ್ನೂ ಓದಿ: Ind vs Pak ಮತ್ತೆ ಮತ್ತೆ ನೋಡಬೇಕೆನಿಸುವ ಆ ಕೊನೆಯ 8 ಎಸೆತ..! ಕಿಂಗ್

ಏಷ್ಯಾ ಕಪ್‌ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಭಾರತ ಸೋತಾಗ, ಕರೀಂ ಪಾಕಿಸ್ತಾನ ಮೀಮ್‌ ಒಂದನ್ನು ಪೋಸ್ಟ್‌ ಮಾಡಿತ್ತು. ಬಾಲಿವುಡ್‌ನ ಖ್ಯಾತ ಸಿನೆಮಾ ಹೇರಾ ಪೇರಿ ಚಿತ್ರದ ಪರೇಶ್‌ ರಾವಲ್‌ರ ಒಂದು ಫೋಟೊ ಹಾಕಿದ್ದರು. ಅದರಲ್ಲಿ "ಇದು ಯಾರೋ ಅಳುತ್ತಿರುವ ಧ್ವನಿ," ಎಂದ ಅದರಲ್ಲಿತ್ತು. ಕ್ಯಾಪ್ಷನ್‌ನಲ್ಲಿ "ನಾವು ಫುಡ್‌ ಆರ್ಡರ್‌ ಕೇಳಲು ಕರೆ ಮಾಡಿದ್ದು," ಎಂದು ಕೊಡಲಾಗಿತ್ತು. ಇದಕ್ಕೆ ತಕ್ಷಣ ಪ್ರತಿಕ್ರಿಯೆ ನೀಡಿದ್ದ ಜೊಮ್ಯಾಟೊ "ಮೀಮ್‌ ಟೆಂಪ್ಲೇಟ್‌ ಆದರೂ ಸ್ವಂತದ್ದು ಬಳಸಿ," ಎಂದು ಹೇಳಿತ್ತು. ಆದರೂ ಕರೀಂ ಪಾಕಿಸ್ತಾನದ ಮುಂದೆ ಜೊಮ್ಯಾಟೊ ಮುಜುಗರಕ್ಕೊಳಗಾಗಿತ್ತು. ಕರೀಂ ಪಾಕಿಸ್ತಾನದ ವಿರುದ್ಧ ಸೇಡು ತೀರಿಸಿಕೊಳ್ಳಲಿ ಕಾಯುತ್ತಿದ್ದ ಜೊಮ್ಯಾಟೊಗೆ ವಿರಾಟ್‌ ಕೊಹ್ಲಿ ದೀಪಾವಳಿ ಗಿಫ್ಟ್‌ ನೀಡಿದ್ದಾರೆ. ಇದೇ ಅವಕಾಶಕ್ಕಾಗಿ ಕಾಯುತ್ತಿದ್ದ ಜೊಮ್ಯಾಟೊ ಕರೀಂ ಪಾಕಿಸ್ತಾನವನ್ನು ರೋಸ್ಟ್‌ ಮಾಡಿದೆ.

 

ಕಳೆದೆರಡು ವರ್ಷಗಳಲ್ಲಿ ಶತಕಗಳಿಸಲು ವಿಫಲವಾಗಿದ್ದ ವಿರಾಟ್ ಕೊಹ್ಲಿ, ಯುಎಇನಲ್ಲಿ ನಡೆದ ಏಷ್ಯಾಕಪ್ ಟಿ20 ಟೂರ್ನಿಯಲ್ಲಿ ಭರ್ಜರಿಯಾಗಿ ಶತಕ ಸಿಡಿಸುವ ಫಾರ್ಮ್‌ಗೆ ಮರಳುವಲ್ಲಿ ಯಶಸ್ವಿಯಾಗಿದ್ದರು. ಇನ್ನು ಕಳೆದ ವರ್ಷ ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ, ಮೊದಲ ಬಾರಿಗೆ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಪಾಕಿಸ್ತಾನ ಎದುರು ಮುಗ್ಗರಿಸಿತ್ತು. ಹೀಗಾಗಿ ಇದೀಗ ಮತ್ತೊಮ್ಮೆ ಭಾರತ ಹಾಗೂ ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಿದ್ದಾಗ ಭಾರತದ ಮೇಲೆ ಒಂದು ಪಟ್ಟು ಒತ್ತಡ ಹೆಚ್ಚಿತ್ತು. ಇನ್ನು ಮಾಜಿ ನಾಯಕ ವಿರಾಟ್ ಕೊಹ್ಲಿ ಮೇಲೆ ಬೆಟ್ಟದಷ್ಟು ಬಾರ ಬಿದ್ದಿತ್ತು. ಯಾಕೆಂದರೆ 160 ರನ್ ಬೆನ್ನತ್ತಿದ ಟೀಂ ಇಂಡಿಯಾ ಮೊದಲ 7 ಓವರ್‌ಗಳಲ್ಲಿ ಕೇವಲ 31 ರನ್‌ಗಳಿಗೆ ಪ್ರಮುಖ 4 ವಿಕೆಟ್ ಕಳೆದುಕೊಂಡು ಒತ್ತಡಕ್ಕೆ ಸಿಲುಕಿತ್ತು. ಆದರೆ ವಿರಾಟ್ ಕೊಹ್ಲಿ ಹಾಗೂ ಹಾರ್ದಿಕ್ ಪಾಂಡ್ಯ 5ನೇ ವಿಕೆಟ್‌ಗೆ ಕೇವಲ 78 ಎಸೆತಗಳಲ್ಲಿ 113 ರನ್‌ಗಳ ಸಮಯೋಚಿತ ಜತೆಯಾಟವಾಡುವ ಮೂಲಕ ಪಂದ್ಯದ ದಿಕ್ಕನ್ನೇ ಬದಲಿಸಿ ಬಿಟ್ಟರು. ಅದರಲ್ಲೂ ಮಾಜಿ ನಾಯಕ ವಿರಾಟ್ ಕೊಹ್ಲಿ ಕೇವಲ 53 ಎಸೆತಗಳಲ್ಲಿ 6 ಬೌಂಡರಿ ಹಾಗು 4 ಸಿಕ್ಸರ್ ಸಹಿತ ಅಜೇಯ 82 ರನ್ ಬಾರಿಸಿ ತಂಡದ ಗೆಲುವಿನ ರೂವಾರಿ ಎನಿಸಿಕೊಂಡರು. ಇದಷ್ಟೇ ಅಲ್ಲದೇ  ಟಿ20 ವಿಶ್ವಕಪ್‌ ಇತಿಹಾಸದಲ್ಲಿ 6ನೇ ಬಾರಿಗೆ ಪಂದ್ಯ ಶ್ರೇಷ್ಠ ಪ್ರಶಸ್ತಿ ತಮ್ಮದಾಗಿಸಿಕೊಳ್ಳುವಲ್ಲಿಯೂ ಯಶಸ್ವಿಯಾದರು.

ಮತ್ತೆ ಮತ್ತೆ ನೋಡಬೇಕೆನಿಸುವ ಕೊನೆಯ ಆ 8 ಎಸೆತಗಳು: 

ಹ್ಯಾರಿಸ್‌ ರೌಫ್‌ ಎಸೆದ 19ನೇ ಓವರ್‌ನ ಮೊದಲ 4 ಎಸೆತದಲ್ಲಿ ಭಾರತ 3 ರನ್‌ ಮಾತ್ರ ಗಳಿಸಿತ್ತು. ಕೊನೆಯ 8 ಎಸೆತಗಳಲ್ಲಿ ಭಾರತ ಗೆಲ್ಲಲು ಬರೋಬ್ಬರಿ 28 ರನ್‌ಗಳ ಅಗತ್ಯವಿತ್ತು.  19ನೇ ಓವರ್‌ನ ಕೊನೆ 2 ಎಸೆತಗಳನ್ನು ಕೊಹ್ಲಿ ಸಿಕ್ಸರ್‌ಗಟ್ಟುವ ಮೂಲಕ ಭಾರತದ ಮೇಲಿದ್ದ ಒತ್ತಡವನ್ನು ಪಾಕಿಸ್ತಾನದ ಮೇಲೆ ಹೇರುವಲ್ಲಿ ಯಶಸ್ವಿಯಾದರು. ಕೊಹ್ಲಿ 2 ಸಿಕ್ಸರ್‌ ಬಾರಿಸಿದ ಪರಿಣಾಮ ಕೊನೆ ಓವರಲ್ಲಿ ಗೆಲ್ಲಲು 16 ರನ್‌ ಉಳಿಯಿತು.

Virat Kohli Six: ಶಾಟ್‌ ಆಫ್‌ ದ ಸೆಂಚುರಿ... ಕೊಹ್ಲಿ ಬ್ಯಾಕ್‌ಫುಟ್‌ ಲಾಂಗ್‌ ಆನ್‌ ಸಿಕ್ಸ್‌ಗೆ ಸೋಷಿಯಲ್‌ ಮೀಡಿಯಾ ಫಿದಾ!

20ನೇ ಓವರ್ ಬೌಲಿಂಗ್ ಜವಾಬ್ದಾರಿ ಹೊತ್ತುಕೊಂಡ ಮೊಹಮ್ಮದ್ ನವಾಜ್‌ ಮೊದಲ ಎಸೆತದಲ್ಲೇ ಹಾರ್ದಿಕ್‌ರನ್ನು ಔಟ್‌ ಮಾಡಿದರು. 2ನೇ ಎಸೆತದಲ್ಲಿ ಕಾರ್ತಿಕ್‌ 1 ರನ್‌ ಪಡೆದರೆ, 3ನೇ ಎಸೆತದಲ್ಲಿ ಕೊಹ್ಲಿ 2 ರನ್‌ ಕದ್ದರು. ಕೊನೆ 3 ಎಸೆತದಲ್ಲಿ 13 ರನ್‌ ಬೇಕಿತ್ತು. ನೋಬಾಲ್‌ ಆದ 4ನೇ ಎಸೆತದಲ್ಲಿ ವಿರಾಟ್‌ ಸಿಕ್ಸರ್‌ ಸಿಡಿಸಿದರು. 3 ಎಸೆತಗಳಲ್ಲಿ 6 ರನ್‌ ಬೇಕಿದ್ದಾಗ ನವಾಜ್‌ ವೈಡ್‌ ಎಸೆದರು. ಆ ನಂತರ ಫ್ರೀ ಹಿಟ್‌ನಲ್ಲಿ ಕೊಹ್ಲಿ ಬೌಲ್ಡ್‌ ಆದರೂ ಬೈ ಮೂಲಕ 3 ರನ್‌ ತಂಡದ ಮೊತ್ತಕ್ಕೆ ಸೇರ್ಪಡೆಗೊಂಡಿತು. ಇನ್ನು 5ನೇ ಎಸೆತದಲ್ಲಿ ಕಾರ್ತಿಕ್‌ ರನೌಟ್ ಆದಾಗ 1 ಎಸೆತದಲ್ಲಿ 2 ರನ್‌ ಬೇಕಿತ್ತು. ನವಾಜ್‌ ಮತ್ತೊಂದು ವೈಡ್‌ ಎಸೆದರು. ಕೊನೆ ಎಸೆತದಲ್ಲಿ ಬೇಕಿದ್ದ ಒಂದು ರನ್‌ ಅನ್ನು ಅಶ್ವಿನ್‌ ಗಳಿಸಿ ತಂಡವನ್ನು ಜಯದ ದಡ ದಾಟಿಸಿದರು.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಚಿನ್ನಸ್ವಾಮಿಯಲ್ಲಿ ಮತ್ತೆ ಐಪಿಎಲ್ : ಇಂದು ನಿರ್ಧಾರ
ಸಂಜು ಸ್ಯಾಮ್ಸನ್ ನನ್ನ ಅಣ್ಣನಿದ್ದಂತೆ; ಇಬ್ಬರ ಪೈಪೋಟಿ ಬಗ್ಗೆ ಮನಬಿಚ್ಚಿ ಮಾತಾಡಿದ ಜಿತೇಶ್ ಶರ್ಮಾ