
ಆ್ಯಂಟಿಗಾ(ಫೆ.06): ಐಸಿಸಿ ಟೂರ್ನಿಗಳಲ್ಲಿ ಭಾರತ ಹಿರಿಯರ ತಂಡ ಹಲವು ವರ್ಷಗಳಿಂದ ವೈಫಲ್ಯ ಅನುಭವಿಸುತ್ತಿದ್ದರೂ ಕಿರಿಯರು ಮಾತ್ರ ಯಶಸ್ಸಿನ ಉತ್ತುಂಗ ಏರುತ್ತಲೇ ಇದ್ದಾರೆ. ಕೋಟ್ಯಾಂತರ ಭಾರತೀಯರ ನಿರೀಕ್ಷೆಯಂತೆಯೇ ಕಿರಿಯರು 5ನೇ ಬಾರಿ ವಿಶ್ವ ಕಿರೀಟಕ್ಕೆ ಮುತ್ತಿಕ್ಕಿದ್ದಾರೆ. 14ನೇ ಆವೃತ್ತಿಯ ಅಂಡರ್ 19 ವಿಶ್ವಕಪ್ ಟೂರ್ನಿಯಲ್ಲಿ (ICC U-19 World Cup) ಭಾರತ, ಇಂಗ್ಲೆಂಡ್ ತಂಡವನ್ನು 4 ವಿಕೆಟ್‌ಗಳಿಂದ ಮಣಿಸಿ ಚಾಂಪಿಯನ್ ಪಟ್ಟ ಅಲಂಕರಿಸಿದೆ.
ಸತತ ನಾಲ್ಕನೇ ಹಾಗೂ ಒಟ್ಟಾರೆ 8ನೇ ಬಾರಿ ಫೈನಲ್ ಪ್ರವೇಶಿಸಿದ್ದ ಭಾರತ, 1998ರ ಚಾಂಪಿಯನ್ ಇಂಗ್ಲೆಂಡ್‌ಗೆ ಮತ್ತೊಮ್ಮೆ ಪ್ರಶಸ್ತಿ ಗೆಲ್ಲಲು ಅವಕಾಶ ನೀಡಲಿಲ್ಲ. ಕಳೆದ ಬಾರಿ ಬಾಂಗ್ಲಾದೇಶ ವಿರುದ್ದ ಫೈನಲ್‌ನಲ್ಲಿ ಸೋತಿದ್ದ ಟೀಂ ಇಂಡಿಯಾ, ಈ ಬಾರಿ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ 44.5 ಓವರ್‌ಗಳಲ್ಲಿ 189 ರನ್‌ಗಳಿಗೆ ಆಲೌಟಾಯಿತು. ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ಯಶ್ ಧುಳ್ ನಾಯಕತ್ವದ ಭಾರತ ಕಿರಿಯರ ತಂಡವು 47.4 ಓವರ್‌ಗಳಲ್ಲಿ ಜಯಭೇರಿ ಬಾರಿಸಿತು.
ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ಭಾರತದ (Indian Cricket Team) ಆರಂಭ ಉತ್ತಮವಾಗಿರಲಿಲ್ಲ. ಮೊದಲ ಓವರ್‌ನ ಎರಡನೇ ಎಸೆತದಲ್ಲೇ ರಘುವನ್ಶಿ ಶೂನ್ಯಕ್ಕೆ ನಿರ್ಗಮಿಸಿದರು. ಈ ವೇಳೆ ಎಚ್ಚರಿಕೆಯ ಆಟವಾಡಿದ ಹರ್ನೂರ್ ಸಿಂಗ್ 46 ಎಸೆತಗಳಲ್ಲಿ 21 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಕಳೆದ ಪಂದ್ಯದಲ್ಲಿ 94 ರನ್ ಸಿಡಿಸಿದ್ದ ಉಪನಾಯಕ ಶೇಖ್ ರಶೀದ್ (50) ಸತತ ಎರಡನೇ ಅರ್ಧಶತಕ ಬಾರಿಸಿದರು. ಸೆಮಿಫೈನಲ್ ಪಂದ್ಯದ ಶತಕ ವೀರ ಯಶ್ ಧುಳ್(17), ರಶೀದ್ ನಿರ್ಗಮದ ಬೆನ್ನಲ್ಲೇ ಪೆವಿಲಿಯನ್ ಸೇರಿದರು. ತಂಡ ಸಂಕಷ್ಟಕ್ಕೆ ಸಿಲುಕಿದಾಗ ನಿಶಾಂತ್ ಸಿಂಧು ಹಾಗೂ ರಾಜ್ ಬವಾ 67 ರನ್‌ಗಳ ಅಮೂಲ್ಯ ಜತೆಯಾಟವಾಡುವ ಮೂಲಕ ಇಂಗ್ಲೆಂಡ್ ಗೆಲುವಿನ ಕನಸಿಗೆ ತಣ್ಣೀರೆರಚಿದರು. ರಾಜ್ 35 ರನ್ ಗಳಿಸಿ ಬೊಯ್ಡೆನ್‌ಗೆ ವಿಕೆಟ್ ಒಪ್ಪಿಸಿದರು. ಸಿಂಧು(50*) ಅಜೇಯ ಅರ್ಧಶತಕ ಚಚ್ಚಿದರೆ, ದಿನೇಶ್ ಬನಾ(13) ಕೊನೆಯಲ್ಲಿ ಉತ್ತಮ ಸಾಥ್ ನೀಡಿದರು. ಇದರ ಪರಿಣಾಮ ಇನ್ನೂ 14 ಎಸೆತಗಳು ಬಾಕಿ ಇರುವಂತೆಯೇ ಭಾರತ ತಂಡವನ್ನು ಈ ಜೋಡಿ ಗೆಲುವಿನ ದಡ ಸೇರಿಸಿತು.
ಆಂಗ್ಲರಿಗೆ ಶಾಕ್:
ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ ತಂಡದ (England Cricket Team) ಲೆಕ್ಕಾಚಾರವನ್ನು ಭಾರತದ ಬೌಲರ್‌ಗಳು ಆರಂಭದಲ್ಲೇ ಬುಡಮೇಲುಗೊಳಿಸಿದರು. 2ನೇ ಓವರ್‌ನಲ್ಲಿ ಜೇಕಬ್ ಬೆಥೆಲ್(02) ವಿಕೆಟ್ ಕಬಳಿಸಿದದ ರವಿ ಕುಮಾರ್, 4ನೇ ಓವರ್‌ನಲ್ಲಿ ನಾಯಕ ಟಾಮ್ ಪ್ರೆಸ್ಟ್‌ರನ್ನು ಶೂನ್ಯಕ್ಕೆ ಔಟ್ ಮಾಡಿ ತಂಡ ಮೇಲುಗೈ ಸಾಧಿಸಲು ನೆರವಾದರು. 27 ರನ್ ಗಳಿಸಿದ್ದ ಜಾಜ್‌ರ್ ಥಾಮಸ್, 13ನೇ ಓವರ್‌ನಲ್ಲಿ ರಾಜ್ ಬವಾ ಎಸೆತದಲ್ಲಿ ಔಟಾಗಿ ನಿರ್ಗಮಿಸಿದರು. ಮುಂದಿನ ಎಸೆತದಲ್ಲೇ ಜಾಜ್‌ರ್ ಬೆಲ್‌ರನ್ನು ಬವಾ ಪೆವಿಲಿಯನ್‌ಗೆ ಅಟ್ಟಿದರು. ಇಂಗ್ಲೆಂಡ್ 47ಕ್ಕೆ 5 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದಾಗ ರಿಹಾನ್ ಅಹಮದ್(10), ಅಲೆಕ್ಸ್ ಹಾರ್ಟನ್(10) ಅಲ್ಪ ಚೇತರಿಕೆ ನೀಡಿದರು.
ICC U-19 World Cup : ರಾಜ್ ಬಾವಾಗೆ ಐದು ವಿಕೆಟ್, ಭಾರತದ ಗೆಲುವಿಗೆ 190 ರನ್ ಗುರಿ ನೀಡಿದ ಇಂಗ್ಲೆಂಡ್!
ಜೀವ ತುಂಬಿದ ಜೇಮ್ಸ್ ಜೋಡಿ:
91ಕ್ಕೆ 7 ವಿಕೆಟ್ ಕಳೆದುಕೊಂಡ ತಂಡವನ್ನು ಜೇಮ್ಸ್ ರೆವ್-ಜೇಮ್ಸ್ ಸೇಲ್ಸ್ ಜೋಡಿ ಮೇಲಕ್ಕೆತ್ತಿತು. ಈ ಜೋಡಿ 8ನೇ ವಿಕೆಟ್‌ಗೆ ಭರ್ಜರಿ 93 ರನ್ ಜೊತೆಯಾಟವಾಡಿ ತಂಡ ಸ್ಪರ್ಧಾತ್ಮಕ ಮೊತ್ತ ಕಲೆ ಹಾಕಲು ನೆರವಾಯಿತು. ಆಕರ್ಷಕ ಆಟವಾಡಿದ ರೆವ್(95) ಶತಕದ ಅಂಚಿನಲ್ಲಿ ಎಡವಿದರು. 116 ಎಸೆತಗಳ ಇನ್ನಿಂಗ್ಸ್‌ನಲ್ಲಿ 12 ಬೌಂಡರಿ ಬಾರಿಸಿದ್ದ ಅವರನ್ನು ರವಿ ಕುಮಾರ್ ಔಟ್ ಮಾಡಿದರು. ಇವರ ನಿರ್ಗಮನದ ಬಳಿಕ ತಂಡ ಮತ್ತೆ ಕುಸಿಯಿತು. 65 ಎಸೆತಗಳಲ್ಲಿ 34 ರನ್ ಗಳಿಸಿದ ಸೇಲ್ಸ್ ಅಜೇಯವಾಗಿ ಉಳಿದರು. ರಾಜ್‌ಗೆ ಉತ್ತಮ ಬೆಂಬಲ ನೀಡಿದ ರವಿ ಕುಮಾರ್ 34 ರನ್ ನೀಡಿ 4 ವಿಕೆಟ್ ಕಿತ್ತರು. ಕೌಶಲ್ ತಾಂಬೆ 1 ವಿಕೆಟ್ ಪಡೆದರು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.