
ಬೆಂಗಳೂರು: ಹಾಲಿ ಚಾಂಪಿಯನ್ ಆರ್‌ಸಿಬಿ ಡಬ್ಲ್ಯುಪಿಎಲ್ 3ನೇ ಆವೃತ್ತಿಯಲ್ಲಿ ಹ್ಯಾಟ್ರಿಕ್ ಸೋಲು ಅನುಭವಿಸಿದೆ. ವಡೋದರಾದಲ್ಲಿ ನಡೆದ ಮೊದಲೆರಡು ಪಂದ್ಯಗಳಲ್ಲಿ ಗೆದ್ದಿದ್ದ ಆರ್‌ಸಿಬಿ, ತವರಿನಲ್ಲಿ ಆಡಿರುವ ಮೂರೂ ಪಂದ್ಯಗಳಲ್ಲಿ ಸೋತು ನಿರಾಸೆಗೊಂಡಿದೆ. ಗುರುವಾರ ನಡೆದ ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದಲ್ಲಿ ಸ್ಮೃತಿ ಮಂಧನಾ ಪಡೆಗೆ 6 ವಿಕೆಟ್‌ಗಳ ಹೀನಾಯ ಸೋಲು ಎದುರಾಯಿತು.
ಮೊದಲು ಬ್ಯಾಟ್ ಮಾಡಿದ ಆರ್‌ಸಿಬಿ 20 ಓವರಲ್ಲಿ 7 ವಿಕೆಟ್‌ಗೆ 125 ರನ್‌ಗಳ ಸಾಧಾರಣ ಮೊತ್ತ ಪೇರಿಸಿತು. ಗುಜರಾತ್ ಇನ್ನೂ 3.3 ಓವರ್ ಬಾಕಿ ಇರುವಂತೆಯೇ ಗುರಿ ತಲುಪಿತು.
ಇದನ್ನೂ ಓದಿ: ಚಾಂಪಿಯನ್ಸ್ ಟ್ರೋಫಿ: ಆಫ್ಘಾನ್ ಗೆಲ್ಲುತ್ತಿದ್ದಂತೆ ತಲೆಕೆಳಗಾದ ಸೆಮೀಸ್ ಲೆಕ್ಕಾಚಾರ! ಗ್ರೂಪ್ ಹಂತದಲ್ಲೇ ಹೊರಬೀಳುತ್ತಾ ಆಸೀಸ್?
ಅಗ್ರ ಕ್ರಮಾಂಕ ಫ್ಲಾಪ್: ಆರ್‌ಸಿಬಿಗೆ ಅಗ್ರ ಕ್ರಮಾಂಕ ಕೈಕೊಟ್ಟಿತು. ಡ್ಯಾನಿಯಲ್ ವ್ಯಾಟ್ 4, ಎಲ್ಲೀಸ್ ಪೆರ್ರಿ 0, ಸ್ಮೃತಿ ಮಂಧನಾ 10 ರನ್‌ಗೆ ಔಟಾದರು. ಮೊದಲ 6 ಓವರಲ್ಲಿ ಆರ್‌ಸಿಬಿ 3 ವಿಕೆಟ್‌ಗೆ ಕೇವಲ 26 ರನ್ ಗಳಿಸಿತು. ರಾಘವಿ ಬಿಸ್ತ್ (22), ಕನಿಕಾ ಅಹುಜಾ (33), ಜಾರ್ಜಿಯಾ ವೇರ್‌ಹ್ಯಾಮ್ (20*), ಕಿಮ್ ಗಾರ್ಥ್ (14) ಹೋರಾಟ ನಡೆಸಿ ತಂಡದ ಮೊತ್ತ 100 ರನ್ ದಾಟಲು ನೆರವಾದರು.
ಸುಲಭ ಗುರಿ ಬೆನ್ನತ್ತಿದ ಗುಜರಾತ್‌ಗೆ ನಾಯಕಿ ಆಶ್ಲೆ ಗಾರ್ಡ್ನರ್‌ರ ಅರ್ಧಶತಕ ನೆರವಾಯಿತು. ಕೇವಲ 31 ಎಸೆತದಲ್ಲಿ 6 ಬೌಂಡರಿ, 3 ಸಿಕ್ಸರ್‌ನೊಂದಿಗೆ 58 ರನ್ ಸಿಡಿಸಿ, ಈ ಆವೃತ್ತಿಯಲ್ಲಿ 3ನೇ ಅರ್ಧಶತಕ ದಾಖಲಿಸಿದರು. ಫೋಬ್ ಲಿಚ್‌ಫೀಲ್ಡ್ ಔಟಾಗದೆ 30 ರನ್ ಕೊಡುಗೆ ನೀಡಿದರು.
ಆರ್‌ಸಿಬಿಗೆ ಲೀಗ್ ಹಂತದಲ್ಲಿ ಇನ್ನು 3 ಪಂದ್ಯ ಬಾಕಿ ಇದ್ದು, ಅಂಕಪಟ್ಟಿಯಲ್ಲಿ ಅಗ್ರ-3ರೊಳಗೆ ಸ್ಥಾನ ಉಳಿಸಿಕೊಂಡು ಪ್ಲೇ-ಆಫ್ ಪ್ರವೇಶಿಸಬೇಕಿದ್ದರೆ ಬಾಕಿ ಇರುವ ಮೂರೂ ಪಂದ್ಯಗಳನ್ನು ಗೆಲ್ಲಬೇಕಿದೆ.
ಇದನ್ನೂ ಓದಿ: ಮುಗ್ಗರಿಸಿ ಬಿದ್ರೂ ಸೊಕ್ಕು ಅಡಗಿಲ್ಲ; ಚಾಂಪಿಯನ್ಸ್ ಟ್ರೋಫಿ ಸೋತ್ರೂ ಭಾರತದ ಮೇಲೆ ಗೂಬೆ ಕೂರಿಸಿದ ಪಾಕ್!
ಸ್ಕೋರ್: ಆರ್‌ಸಿಬಿ 20 ಓವರಲ್ಲಿ 125/7 (ಕನಿಕಾ 33, ರಾಘವಿ 22, ತನುಜಾ 2-16, ಡಾಟಿನ್ 2-31), ಗುಜರಾತ್ 16.3 ಓವರಲ್ಲಿ 126/4 (ಗಾರ್ಡ್ನರ್ 58, ಲಿಚ್‌ಫೀಲ್ಡ್ 30*, ರೇಣುಕಾ 2-24)
ಅಗ್ರಸ್ಥಾನಕ್ಕಾಗಿಂದು ಡೆಲ್ಲಿ-ಮುಂಬೈ ಫೈಟ್
ಹರ್ಮನ್‌ಪ್ರೀತ್ ಕೌರ್ ನೇತೃತ್ವದ ಮುಂಬೈ ತಂಡವಿಂದು ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಎದುರಿಸಲಿದೆ. ಸದ್ಯ ಮುಂಬೈ 4 ಪಂದ್ಯಗಳನ್ನಾಡಿ ಮೂರು ಗೆಲುವು ಹಾಗೂ ಒಂದು ಸೋಲು ಸಹಿತ 6 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಇನ್ನೊಂದೆಡೆ ಡೆಲ್ಲಿ ಕ್ಯಾಪಿಟಲ್ಸ್ ತಂಡವು 5 ಪಂದ್ಯಗಳನ್ನಾಡಿ ಮೂರು ಗೆಲುವು ಹಾಗೂ ಎರಡು ಸೋಲು ಸಹಿತ 6 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿವೆ. ಇಂದಿನ ಪಂದ್ಯ ಗೆಲ್ಲುವ ತಂಡವು ಅಗ್ರಸ್ಥಾನವನ್ನು ಮತ್ತಷ್ಟು ಭದ್ರಪಡಿಸಿಕೊಳ್ಳಲಿವೆ.
ಇಂದಿನ ಪಂದ್ಯ: ಮುಂಬೈ ಇಂಡಿಯನ್ಸ್ vs ಡೆಲ್ಲಿ ಕ್ಯಾಪಿಟಲ್ಸ್, ಸಂಜೆ 7.30ಕ್ಕೆ
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.