
ರಾವಲ್ಪಿಂಡಿ: 29 ವರ್ಷ ಬಳಿಕ ಐಸಿಸಿ ಟೂರ್ನಿಯ ಆತಿಥ್ಯ ಸಿಕ್ಕಾಗ, ಬಿಸಿಸಿಐ ತೀವ್ರ ವಿರೋಧದ ನಡುವೆಯೂ ಪಟ್ಟು ಹಿಡಿದು ಆತಿಥ್ಯ ಹಕ್ಕು ಉಳಿಸಿಕೊಂಡಾಗ ಪಾಕಿಸ್ತಾನದ ಸಂಭ್ರಮಕ್ಕೆ ಪಾರವೇ ಇರಲಿಲ್ಲ. ಆದರೆ, ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಪಾಕಿಸ್ತಾನ ಒಂದೂ ಗೆಲುವು ಕಾಣದೆ ತನ್ನ ಅಭಿಯಾನ ಮುಕ್ತಾಯಗೊಳಿಸಿದೆ.
ಗುರುವಾರ ಬಾಂಗ್ಲಾದೇಶ ವಿರುದ್ದ ಇಲ್ಲಿ ನಡೆಯಬೇಕಿದ್ದ 'ಎ' ಗುಂಪಿನ ಪಂದ್ಯ ಮಳೆಯಿಂದಾಗಿ ರದ್ದಾಯಿತು. ಪಂದ್ಯ ಟಾಸ್ ಕೂಡ ಕಾಣಲಿಲ್ಲ. ಈ ಪಂದ್ಯಕ್ಕೂ ಮೊದಲೇ ಎರಡೂ ತಂಡಗಳು ಸೆಮಿಫೈನಲ್ ರೇಸ್‌ನಿಂದ ಹೊರಬಿದ್ದಿದ್ದವು. ಆದರೆ, ಈ ಪಂದ್ಯದಲ್ಲಿ ಜಯಿಸಿ ಸಮಾಧಾನಪಟ್ಟುಕೊಳ್ಳುವ ಆಸೆಯೂ ಈಡೇರಲಿಲ್ಲ. ರಾವಲ್ಪಿಂಡಿಯಲ್ಲಿ ಸತತ 2ನೇ ಪಂದ್ಯ ಮಳೆಗೆ ಬಲಿಯಾಯಿತು. ಆಸ್ಟ್ರೇಲಿಯಾ- ದಕ್ಷಿಣ ಆಫ್ರಿಕಾ ಪಂದ್ಯ ಕೂಡ ರದ್ದಾಗಿತ್ತು. ಪಂದ್ಯ ಭಾರತೀಯ ಕಾಲಮಾನ ಮಧ್ಯಾಹ್ನ 2.30ಕ್ಕೆ ಆರಂಭಗೊಳ್ಳಬೇಕಿತ್ತು. ಆದರೆ ನಿರಂತರವಾಗಿ ಮಳೆ ಸುರಿದ ಕಾರಣ, ಸ್ಥಳೀಯ ಕಾಲಮಾನ 4 ಗಂಟೆ ವೇಳೆಗೆ ಪಂದ್ಯವನ್ನು ರದ್ದುಗೊಳಿಸಲು ಅಂಪೈರ್‌ಗಳು ನಿರ್ಧರಿಸಿದರು.
ಇದನ್ನೂ ಓದಿ: ಚಾಂಪಿಯನ್ಸ್ ಟ್ರೋಫಿ: ಆಫ್ಘಾನ್ ಗೆಲ್ಲುತ್ತಿದ್ದಂತೆ ತಲೆಕೆಳಗಾದ ಸೆಮೀಸ್ ಲೆಕ್ಕಾಚಾರ! ಗ್ರೂಪ್ ಹಂತದಲ್ಲೇ ಹೊರಬೀಳುತ್ತಾ ಆಸೀಸ್?
ಪಾಕ್‌ಗೆ ಮುಖಭಂಗ: 'ಎ' ಗುಂಪಿನ ಅಂಕಪಟ್ಟಿಯಲ್ಲಿ ಪಾಕಿಸ್ತಾನ ಕೊನೆಯ ಸ್ಥಾನಕ್ಕೆ ತಳ್ಳಲ್ಪಟ್ಟಿತು. ಪಾಕ್ ಹಾಗೂ ಬಾಂಗ್ಲಾ ಎರಡೂ ತಂಡಗಳು ಕೇವಲ ಒಂದು ಅಂಕ ಗಳಿಸಿದರೂ, ನೆಟ್ ರನ್ ರೇಟ್‌ನಲ್ಲಿ ಬಾಂಗ್ಲಾ ಕೊಂಚ ಮುಂದಿದೆ. ಬಾಂಗ್ಲಾದ ನೆಟ್ ರನ್‌ರೇಟ್ -0.443 ಇದ್ದರೆ, ಪಾಕಿಸ್ತಾನದ ನೆಟ್ ರನ್‌ರೇಟ್ -1.087 ಇದೆ. ಮೊದಲ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ 60 ರನ್ ಗಳಿಂದ ಸೋತಿದ್ದ ಪಾಕಿಸ್ತಾನ, 2ನೇ ಪಂದ್ಯದಲ್ಲಿ ಭಾರತಕ್ಕೆ 6 ವಿಕೆಟ್‌ಗಳಿಂದ ಶರಣಾಗಿತ್ತು.
ಭಾರತ ವಿರುದ್ಧ ಒತ್ತಡವಿತ್ತು
ಈ ಟೂರ್ನಿಯಲ್ಲಿ ನಾವು ಉತ್ತಮವಾಗಿ ಆಡಲಿಲ್ಲ. ಹಲವು ಪ್ರಮುಖ ಆಟಗಾರರು ಗಾಯಗೊಂಡಿದ್ದ ಕಾರಣ ಅವರೆಲ್ಲರ ಅನುಪಸ್ಥಿತಿಯಲ್ಲಿ ನಾವು ಆಡಿದೆವು. ಭಾರತ ವಿರುದ್ಧದ ಪಂದ್ಯದಲ್ಲಿ ಭಾರೀ ಒತ್ತಡಕ್ಕೆ ಸಿಲುಕಿದ್ದೇ ನಮಗೆ ಸೋಲು ಎದುರಾಗಲು ಕಾರಣ.
• ಅಜರ್ ಮಹ್ಮದ್ ಪಾಕ್ ಸಹಾಯಕ ಕೋಚ್
ಇದನ್ನೂ ಓದಿ: ಮುಗ್ಗರಿಸಿ ಬಿದ್ರೂ ಸೊಕ್ಕು ಅಡಗಿಲ್ಲ; ಚಾಂಪಿಯನ್ಸ್ ಟ್ರೋಫಿ ಸೋತ್ರೂ ಭಾರತದ ಮೇಲೆ ಗೂಬೆ ಕೂರಿಸಿದ ಪಾಕ್!
ತುಂಬಾ ನೋವಾಗುತ್ತಿದೆ
ತವರಿನ ಅಭಿಮಾನಿಗಳ ಮುಂದೆ ಉತ್ತಮ ಆಟವಾಡಬೇಕು ಎನ್ನುವುದು ನಮ್ಮ ಗುರಿಯಾಗಿತ್ತು. ಆದರೆ ನಮ್ಮ ಪ್ರದರ್ಶನ ದಿಂದ ಅಭಿಮಾನಿಗಳಿಗೆ ಸಹಜವಾಗಿಯೇ ನಿರಾಸೆ ಯಾಗಿರಲಿದೆ. ಈ ಫಲಿತಾಂಶವು ನಮ್ಮೆಲ್ಲರಿಗೂ ಬಹಳ ನೋವುಂಟು ಮಾಡಿದೆ. ನಮ್ಮಿಂದಾಗಿರುವ ತಪ್ಪುಗಳನ್ನು ಸರಿಪಡಿಸಿಕೊಳ್ಳಲು ಪ್ರಯತ್ನಿಸುತ್ತೇವೆ.
• ಮೊಹಮದ್ ರಿಜ್ವಾನ್ ಪಾಕಿಸ್ತಾನದ ನಾಯಕ
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.