
ಮುಂಬೈ(ಮಾ.06): ಚೊಚ್ಚಲ ಆವೃತ್ತಿಯ ವುಮೆನ್ಸ್ ಪ್ರೀಮಿಯರ್ ಲೀಗ್(ಡಬ್ಲ್ಯುಪಿಎಲ್)ನಲ್ಲಿ ರನ್ ಹೊಳೆ ಹರಿಯಲು ಮಾಸ್ಟರ್ ಪ್ಲ್ಯಾನ್ ಮಾಡಿರುವ ಬಿಸಿಸಿಐ, ಕ್ರೀಡಾಂಗಣದ ಬೌಂಡರಿಗಳ ದೂರವನ್ನು ಕಡಿತಗೊಳಿಸಿದೆ. ಟೂರ್ನಿಯ ಪಂದ್ಯಗಳಿಗೆ ಆತಿಥ್ಯ ವಹಿಸುತ್ತಿರುವ ಡಿ.ವೈ.ಪಾಟೀಲ್ ಹಾಗೂ ಬ್ರೆಬೋರ್ನ್ ಕ್ರೀಡಾಂಗಣದಲ್ಲಿ ಪಿಚ್‌ನಿಂದ ಬೌಂಡರಿ ದೂರವನ್ನು 50ರಿಂದ 55 ಮೀಟರ್ಗೆ ಸೀಮಿತಗೊಳಿಸಿದೆ.
ಸಾಮಾನ್ಯವಾಗಿ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಕನಿಷ್ಠ 55 ಮೀಟರ್‌ನಿಂದ 60 ಮೀಟರ್ ಬೌಂಡರಿ ಇರಲಿದೆ. ಇತ್ತೀಚೆಗೆ ನಡೆದ ಮಹಿಳಾ ಟಿ20 ವಿಶ್ವಕಪ್ನಲ್ಲೂ ಬೌಂಡರಿ 60 ಮೀಟರ್ ಇತ್ತು. ಕಳೆದ ವರ್ಷ ಪುರುಷರ ಐಪಿಎಲ್ ನಡೆದಾಗ ಈ ಎರಡೂ ಕ್ರೀಡಾಂಗಣಗಳಲ್ಲಿ ಬೌಂಡರಿ ದೂರ 70 ಮೀಟರ್ ಇರಿಸಲಾಗಿತ್ತು.
ಬಿಸಿಸಿಐನ ಯೋಜನೆ ಕೈಹಿಡಿದಿದ್ದು, ಆರಂಭಿಕ ಪಂದ್ಯದಲ್ಲೇ ಮುಂಬೈ ಇಂಡಿಯನ್ಸ್ 207 ರನ್ ಕಲೆಹಾಕಿತ್ತು. ಇನ್ನು ಭಾನುವಾರ ಆರ್‌ಸಿಬಿ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ 223 ರನ್ ಚಚ್ಚಿತ್ತು. ಆರ್‌ಸಿಬಿ ದಿಢೀರ್ ಕುಸಿತ ಕಂಡರೂ, ತಂಡದ ಇನ್ನಿಂಗ್‌್ಸನಲ್ಲಿ ಬೌಂಡರಿ ಹಾಗೂ ಸಿಕ್ಸರ್‌ಗಳಿಗೆ ಕೊರತೆ ಇರಲಿಲ್ಲ. ಮೊದಲೆರಡು ಪಂದ್ಯಗಳಲ್ಲೇ ಬರೋಬ್ಬರಿ 87 ಬೌಂಡರಿ, 18 ಸಿಕ್ಸರ್‌ಗಳು ದಾಖಲಾದವು.
ವೈಡ್, ನೋಬಾಲ್‌ಗೂ ಡಿಆರ್‌ಎಸ್: ಹೊಸತು
ಮಹಿಳಾ ಐಪಿಎಲ್ ಮೂಲಕ ಬಿಸಿಸಿಐ ಹೊಸ ನಿಯಮಗಳನ್ನು ಅಳವಡಿಸಿದ್ದು, ವೈಡ್, ನೋಬಾಲ್‌ಗೂ ಡಿಆರ್‌ಎಸ್(ಅಂಪೈರ್ ತೀರ್ಪು ಮರುಪರಿಶೀಲನಾ ನಿಮಯ) ಪಡೆದುಕೊಳ್ಳಲು ಅವಕಾಶ ನೀಡಿದೆ. ಹೊಸ ನಿಯಮದ ಪ್ರಕಾರ ಅಂಪೈರ್ನ ವೈಡ್, ನೋಬಾಲ್ ಸೇರಿದಂತೆ ಯಾವುದೇ ನಿರ್ಧಾರದಲ್ಲಿ ಅತೃಪ್ತಿ ಇದ್ದರೆ ಆಟಗಾರ್ತಿಯರು ಡಿಆರ್‌ಎಸ್ ಪಡೆಯಬಹುದು. ಉದ್ಘಾಟನಾ ಪಂದ್ಯದಲ್ಲಿ ಗುಜರಾತ್ ವಿರುದ್ಧ 13ನೇ ಓವರ್ ವೇಳೆ ಮುಂಬೈ ನಾಯಕಿ ಹರ್ಮನ್ಪ್ರೀತ್ ವೈಡ್ ಕರೆ ವಿರುದ್ಧ ಮೊದಲ ಬಾರಿ ಡಿಆರ್‌ಎಸ್ ಪಡೆದರು. ಆರ್‌ಸಿಬಿ ವಿರುದ್ಧ ಡೆಲ್ಲಿಯ ಜೆಮಿಮಾ ನೋಬಾಲ್ ತೀರ್ಪಿನ ಬಗ್ಗೆ ಡಿಆರ್‌ಎಸ್ ಮೊರೆ ಹೋದರು.
ಚೊಚ್ಚಲ ಆವೃತ್ತಿಯ ವುಮೆನ್ಸ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ 20 ಲೀಗ್ ಪಂದ್ಯಗಳು ಹಾಗೂ ಎರಡು ಪ್ಲೇ ಆಫ್ ಪಂದ್ಯಗಳು ಸೇರಿದಂತೆ ಒಟ್ಟು 22 ಪಂದ್ಯಗಳು ಜರುಗಲಿವೆ. 23 ದಿನಗಳ ಕಾಲ ನಡೆಯಲಿರುವ ಈ ಐತಿಹಾಸಿಕ ಮಹಿಳಾ ಟಿ20 ಲೀಗ್ ಟೂರ್ನಿಯಲ್ಲಿ ಒಟ್ಟು 87 ಆಟಗಾರ್ತಿಯರು ಪಾಲ್ಗೊಂಡಿದ್ದು, ಭಾರತ ಸೇರಿದಂತೆ ಏಳು ದೇಶದ ಆಟಗಾರ್ತಿಯರು ಈ ಟೂರ್ನಿಯಲ್ಲಿ ಪಾಲ್ಗೊಂಡಿದ್ದಾರೆ.
WPL: ಆರ್‌ಸಿಬಿ ವಿರುದ್ಧ ಐವರು ವಿದೇಶಿ ಆಟಗಾರ್ತಿಯರನ್ನು ಆಡಿಸಿ ನಿಯಮ ಮೀರಿತಾ ಡೆಲ್ಲಿ!
ಡಬಲ್ ರೌಂಡ್ ರಾಬಿನ್ ಮಾದರಿಯಲ್ಲಿ ಲೀಗ್ ಹಂತ ನಡೆಯಲಿದ್ದು, ಪ್ರತಿ ತಂಡ ಇತರ 4 ತಂಡಗಳ ವಿರುದ್ಧ ತಲಾ 2 ಬಾರಿ ಸೆಣಸಲಿದೆ. ಲೀಗ್ ಹಂತದಲ್ಲಿ ಅಗ್ರಸ್ಥಾನ ಪಡೆದ ತಂಡ ನೇರವಾಗಿ ಫೈನಲ್ ಪ್ರವೇಶಿಸಲಿದ್ದು, 2 ಮತ್ತು 3ನೇ ಸ್ಥಾನ ಪಡೆವ ತಂಡಗಳು ಎಲಿಮಿನೇಟರ್ನಲ್ಲಿ ಸೆಣಸಲಿವೆ. ನಾಕೌಟ್ ಪಂದ್ಯಕ್ಕೂ ಮುನ್ನ ಪ್ರತಿ ತಂಡವು 8 ಪಂದ್ಯಗಳನ್ನಾಡಲಿದೆ.
ಮೈದಾನದಲ್ಲಿ WPL ಟೂರ್ನಿ ಕಣ್ತುಂಬಿಕೊಳ್ಳಲು ಆನ್‌ಲೈನ್ ಮೂಲಕ ಟಿಕೆಟ್ ಮಾರಾಟ ಆರಂಭಗೊಂಡಿದೆ. ಮಹಿಳಾ ಪ್ರೀಮಿಯರ್ ಲೀಗ್ ಟೂರ್ನಿಗೆ ಅಭಿಮಾನಿಗಳನ್ನು ಸೆಳೆಯಲು ಬಿಸಿಸಿಐ ಅತೀ ಕಡಿಮೆ ಮೊತ್ತದ ಟಿಕೆಟ್ ಘೋಷಿಸಿದೆ. ಮಹಿಳಾ ಪ್ರಿಮಿಯರ್ ಲೀಗ್ ಟೂರ್ನಿಯ ಎಲ್ಲಾ 20 ಪಂದ್ಯದ ಟಿಕೆಟ್ 100 ರೂಪಾಯಿಯಿಂದ ಆರಂಭಗೊಳ್ಳುತ್ತಿದೆ. ಟಿಕೆಟ್ ಆನ್‌ಲೈನ್ ಬುಕಿಂಗ್ ಆರಂಭಗೊಂಡಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.