WTC Final: ವಿಶ್ವ ಟೆಸ್ಟ್‌ ಚಾಂಪಿಯನ್‌ಷಿಪ್‌ ಗೆಲುವಿನಿಂದ 280 ರನ್‌ ದೂರದಲ್ಲಿ ಭಾರತ!

By Santosh Naik  |  First Published Jun 10, 2023, 11:39 PM IST

ವಿರಾಟ್‌ ಕೊಹ್ಲಿ ಹಾಗೂ ಅಜಿಂಕ್ಯ ರಹಾನೆ ಆಸ್ಟ್ರೇಲಿಯಾ ತಂಡಕ್ಕೆ ಪ್ರತಿರೋಧ ನೀಡಿದ್ದರೂ, ವಿಶ್ವ ಟೆಸ್ಟ್‌ ಚಾಂಪಿಯನ್‌ಷಿಪ್‌ ಫೈನಲ್‌ನಲ್ಲಿ ಆಸೀಸ್‌ ತಂಡ ಮುನ್ನಡೆಯಲ್ಲಿದೆ. ಆಸೀಸ್‌ ಗೆಲುವಿಗೆ 7 ವಿಕೆಟ್‌ ಅಗತ್ಯವಿದ್ದರೆ, ಭಾರತಕ್ಕೆ 280 ರನ್‌ ಬೇಕಿದೆ.
 


ಲಂಡನ್‌ (ಜೂ.10): ವಿಶ್ವ ಟೆಸ್ಟ್‌ ಚಾಂಪಿಯನ್‌ಷಿಪ್‌ನಲ್ಲಿ ನಾಲ್ಕು ದಿನದ ಆಟ ಮುಗಿದಿದ್ದರೂ ಯಾವ ದಿನದಲ್ಲೂ ಭಾರತ ಹಿಡಿತ ಸಾಧಿಸಿದ ಲಕ್ಷಣ ಕಂಡಿರಲಿಲ್ಲ. ಆದರೆ, ಭಾರತ ಪಾಲಿಗೆ ಇಡೀ ಪಂದ್ಯದ ದಿಕ್ಕನ್ನೇ ಬದಲಾಯಿಸುವ ಏಕೈಕ ಅವಕಾಶ ಭಾನುವಾರ ಸಿಗಲಿದೆ. ಆಸ್ಟ್ರೇಲಿಯಾ ತಂಡದ ವಿಶ್ವ ಟೆಸ್ಟ್‌ ಚಾಂಪಿಯನ್‌ಷಿಪ್‌ನಲ್ಲಿ ಭಾರತ ತಂಡದ ಗೆಲುವಿಗೆ 444 ರನ್‌ಗಳ ದಾಖಲೆಯ ಗುರಿ ನೀಡಿದ್ದು, ಪ್ರಸ್ತುತ ಭಾರತ ತಂಡ 280 ರನ್‌ಗಳಿಂದ ದೂರದಲ್ಲಿದೆ. ಮೂರು ವಿಕೆಟ್‌ ಕಳೆದುಕೊಂಡಿರುವ ಭಾರತ ತಂಡ ಉಳಿದ ಏಳು ವಿಕೆಟ್‌ಗಳಿಂದ ಭಾನುವಾರ 280 ರನ್‌ ಬಾರಿಸಲು ಯಶಸ್ವಿಯಾದಲ್ಲಿ ತನ್ನ ಈವರೆಗಿನ ಸ್ಮರಣೀಯ ಟೆಸ್ಟ್‌ ಗೆಲುವು ದಾಖಲಿಸುವುದು ಮಾತ್ರವಲ್ಲದೆ, ವಿಶ್ವ ಟೆಸ್ಟ್‌ ಚಾಂಪಿಯನ್‌ಷಿಪ್‌ನ ಕಿರೀಟವನ್ನು ಮುಡಿಗೇರಿಸಿಕೊಳ್ಳಲಿದೆ. ಹಾಗಾಗಿ ಪಂದ್ಯದ ಐದನೇ ದಿನಕ್ಕೆ ಬ್ಯಾಟಿಂಗ್‌ ಕಾಯ್ದುಕೊಂಡಿರುವ ಅನುಭವಿ ಬ್ಯಾಟ್ಸ್‌ಮನ್‌ಗಳಾದ ಅಜಿಂಕ್ಯ ರಹಾನೆ ಹಾಗೂ ವಿರಾಟ್‌ ಕೊಹ್ಲಿ ದೊಡ್ಡ ಇನ್ನಿಂಗ್ಸ್‌ ಆಡಿದರೆ ಭಾರತದ ಪಾಲಿಗೆ ಈ ಗೆಲುವು ದೊಡ್ಡ ವಿಷಯವೂ ಅಲ್ಲ. 

ಕೆನ್ನಿಂಗ್ಟನ್‌ ಓವಲ್‌ ಮೈದಾನದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ನಾಲ್ಕನೇ ದಿನವಾದ ಶನಿವಾರ 6 ವಿಕಟ್‌ಗೆ 296 ರನ್‌ಗಳಿಂದ ದಿನದಾಟ ಆರಂಭಿಸಿದ ಆಸ್ಟ್ರೇಲಿಯಾ ತಂಡ ಭಾರತ ತಂಡದ ಶಿಸ್ತಿನ ಬೌಲಿಂಗ್‌ ಎದುರು 8 ವಿಕೆಟ್‌ಗೆ 270 ರನ್‌ ಬಾರಿಸಿ ಡಿಕ್ಲೇರ್‌ ಘೋಷಣೆ ಮಾಡಿಕೊಂಡಿತು. ಇದರಿಂದಾಗಿ ಟೀಮ್‌ ಇಂಡಿಯಾ ಗೆಲುವಿಗೆ 444 ರನ್‌ಗಳ ಗುರಿ ಪಡೆದುಕೊಂಡಿತು. ಚೇಸಿಂಗ್‌ ಆರಂಭ ಮಾಡಿದ ಭಾರತ ತಂಡಕ್ಕೆ ರೋಹಿತ್‌ ಶರ್ಮ (43) ಹಾಗೂ ಶುಭ್‌ಮನ್‌ ಗಿಲ್‌ (18) ಮೊದಲ ವಿಕೆಟ್‌ಗೆ 41 ರನ್‌ ಜೊತೆಯಾಟವಾಡಿದರು. ಈ ವೇಳೆ ಸ್ಲಿಪ್‌ನಲ್ಲಿ ಕ್ಯಾಮರೂನ್‌ ಗ್ರೀನ್‌ ಹಿಡಿದ ಅನುಮಾನಸ್ಪದ ಕ್ಯಾಚ್‌ಗೆ ಥರ್ಡ್‌ ಅಂಪೈರ್‌ ಕೂಡ ಅಚ್ಚರಿ ಎನ್ನುವಂತೆ ಔಟ್‌ ತೀರ್ಪು ನೀಡಿದರು.

ಬಳಿಕ ರೋಹಿತ್‌ ಶರ್ಮಗೆ ಜೊತೆಯಾದ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ ಚೇತೇಶ್ವರ ಪೂಜಾರ 47 ಎಸೆತಗಳಲ್ಲಿ 5 ಬೌಂಡರಿಯೊಂದಿಗೆ 27 ರನ್‌ ಬಾರಿಸಿದರೆ, ರೋಹಿತ್ ಶರ್ಮ 60 ಎಸೆತಗಳಲ್ಲಿ 7 ಬೌಂಡರಿ, 1 ಸಿಕ್ಸರ್‌ನೊಂದಿಗೆ 43 ರನ್‌ ಬಾರಿಸಿದರು. ಆದರೆ, ಇಬ್ಬರೂ ಕೂಡ ಒಂದೇ ರನ್‌ ಅಂತರದಲ್ಲಿ ವಿಕೆಟ್‌ ಒಪ್ಪಿಸಿದ್ದು ಆತಂಕ ಮೂಡಿಸಿತು. ಬಳಿಕ ಜೊತೆಯಾದ ವಿರಾಟ್‌ ಕೊಹ್ಲಿ ಹಾಗೂ ಅಜಿಂಕ್ಯ ರಹಾನೆ ಅಂದಾಜು 20 ಓವರ್‌ಗಳ ಕಾಲ ಬ್ಯಾಟಿಂಗ್‌ ನಡೆಸಿ 71 ರನ್‌ ಜೊತೆಯಾಟವಾಡುವ ಮೂಲಕ ಹೆಚ್ಚಿನ ಆಘಾತವಾಗದಂತೆ ನೋಡಿಕೊಂಡಿದ್ದು ಮಾತ್ರವಲ್ಲದೆ, ಅಂತಿಮ ದಿನ ಗೆಲುವಿಗೆ 280 ರನ್‌ ಸವಾಲು ಇರುವಂತೆ ನೋಡಿಕೊಂಡರು. 44 ರನ್‌ ಬಾರಿಸಿರುವ ವಿರಾಟ್‌ ಕೊಹ್ಲಿ ಹಾಗೂ 20 ರನ್‌ ಬಾರಿಸಿರುವ ಅಜಿಂಕ್ಯ ರಹಾನೆ 5ನೇ ದಿನಕ್ಕೆ ಬ್ಯಾಟಿಂಗ್‌ ಕಾಯ್ದುಕೊಂಡಿದ್ದಾರೆ. ಭಾರತ 3 ವಿಕೆಟ್‌ಗ 164 ರನ್‌ನೊಂದಿಗೆ 4ನೇ ದಿನದಾಟ ಮುಗಿಸಿದೆ.

ಇದಕ್ಕೂ ಮುನ್ನ ಆಸೀಸ್‌ ಬ್ಯಾಟಿಂಗ್‌ ವೇಳೆ ಮಾರ್ನ್‌ ಲಬುಶೇನ್‌ ವಿಕೆಟ್‌ಅನ್ನು ಬೇಗನೆ ಉರುಳಿಸುವ ಮೂಲಕ ಉಮೇಶ್‌ ಯಾದವ್‌ ಭಾರತಕ್ಕೆ ಮೇಲುಗೈ ನೀಡಿದರು. ಬಳಿಕ ಕ್ಯಾಮರೂನ್‌ ಗ್ರೀನ್‌ ಹಾಗೂ ಅಲೆಕ್ಸ್‌ ಕ್ಯಾರಿ ಕೆಲ ಹೊತ್ತು ಭಾರತದ ಬೌಲಿಂಗ್‌ಅನ್ನು ಎದುರಿಸಿದರು. ಕೊನೆಗೆ ಕ್ಯಾಮರೂನ್‌ ಗ್ರೀನ್‌, ರವೀಂದ್ರ ಜಡೇಜಾಗೆ ಬಲಿಯಾದರು. ಚೆಂಡನ್ನು ಪ್ಯಾಡ್‌ ಮಾಡುವ ಯತ್ನದಲ್ಲಿ ವಿಫಲವಾದ ಗ್ರೀನ್‌ ಬೌಲ್ಡ್‌ ಆಗಿ ಹೊರನಡೆದರು.

Watch: ಬ್ಯಾಡ್ಮಿಂಟನ್‌ ಆಡುವಾಗಲೇ ಹಾರ್ಟ್‌ಅಟ್ಯಾಕ್‌, ಕೋರ್ಟ್‌ನಲ್ಲಿಯೇ ಸಿಪಿಆರ್‌ ಕೊಟ್ರೂ ಪ್ರಯೋಜನವಾಗ್ಲಿಲ್ಲ!

Latest Videos

undefined

ಬಳಿಕ ಮಿಚೆಲ್‌ ಸ್ಟಾರ್ಕ್‌ ಮತ್ತು ಅಲೆಕ್ಸ್‌ ಕ್ಯಾರಿ ಬಿರುಸಿನ ರನ್‌ ಬಾರಿಸುವ ಮೂಲಕ ಆಸೀಸ್‌ನ ರನ್‌ ವೇಗವನ್ನು ಏರಿಸಿದರು. ಈ ಹಂತದಲ್ಲಿ ಮೊಹಮದ್‌ ಶಮಿ, ಮಿಚೆಲ್‌ ಸ್ಟಾರ್ಕ್‌ನ ವಿಕೆಟ್‌ಅನ್ನು ಒಪ್ಪಿಸಿದರು. ಆ ಬಳಿಕ ಬ್ಯಾಟಿಂಗ್‌ಗೆ ಇಳಿದ ಪ್ಯಾಟ್‌ ಕಮ್ಮಿನ್ಸ್‌, ತಂಡದ ಮುನ್ನಡೆ 443 ರನ್‌ ಆಗಿದ್ದಾಗ ಡಿಕ್ಲೇರ್‌ ಘೋಷಣೆ ಮಾಡುವ ನಿರ್ಧಾರ ಮಾಡಿದರು.

WTC Final: ಭಾರತದ ಹೋರಾಟ, ಆಸೀಸ್‌ನ ಬಿಗಿ ಹಿಡಿತ!

ಸ್ಕೋರ್‌: ಭಾರತ 296 ಮತ್ತು 3 ವಿಕೆಟ್‌ಗೆ 164 (ವಿರಾಟ್‌ ಕೊಹ್ಲಿ 44*, ರೋಹಿತ್‌ ಶರ್ಮ 43, ನಥಾನ್‌ ಲ್ಯಾನ್‌ 32ಕ್ಕೆ 1), ಗೆಲುವಿಗೆ ಇನ್ನೂ 280 ರನ್‌ ಬೇಕಿದೆ. ಆಸ್ಟ್ರೇಲಿಯಾ: 469 ಮತ್ತು 8 ವಿಕೆಟ್‌ಗೆ 270 ಡಿಕ್ಲೇರ್‌ (ಅಲೆಕ್ಸ್‌ ಕ್ಯಾರಿ 66*, ಮಿಚೆಲ್‌ ಸ್ಟಾರ್ಕ್‌ 41, ರವೀಂದ್ರ ಜಡೇಜಾ 58ಕ್ಕೆ 3).

click me!