ಮಹಿಳಾ ಐಪಿಎಲ್‌ನ 5 ತಂಡಗಳ ಹರಾಜು ಇಂದು; ರೇಸ್‌ನಲ್ಲಿವೆ 17 ಸಂಸ್ಥೆಗಳು..!

By Naveen Kodase  |  First Published Jan 25, 2023, 10:42 AM IST

ಇಂದು ಬಹಿರಂಗವಾಗಲಿದೆ ಚೊಚ್ಚಲ ಮಹಿಳಾ ಐಪಿಎಲ್ ಟೂರ್ನಿಯಲ್ಲಿ ಪಾಲ್ಗೊಳ್ಳಲಿರುವ ತಂಡಗಳು
5 ತಂಡಗಳನ್ನು ಖರೀದಿಸಲು 17 ಸಂಸ್ಥೆಗಳ ನಡುವೆ ಪೈಪೋಟಿ
ಪುರುಷರ ಐಪಿಎಲ್‌ನ 7 ಫ್ರಾಂಚೈಸಿಗಳು ಸೇರಿ ಒಟ್ಟು 17 ಸಂಸ್ಥೆಗಳು ರೇಸ್‌ನಲ್ಲಿ


ಮುಂಬೈ(ಜ.25): ಬಹುನಿರೀಕ್ಷಿತ ಮಹಿಳಾ ಐಪಿಎಲ್‌ನ ತಂಡಗಳ ಹರಾಜಿಗೆ ಕ್ಷಣಗಣನೆ ಆರಂಭವಾಗಿದ್ದು, ಬುಧವಾರ ಮುಂಬೈನಲ್ಲಿ 5 ತಂಡಗಳ ಹರಾಜು ಪ್ರಕ್ರಿಯೆ ನಡೆಯಲಿದೆ. ಕಳೆದ ವರ್ಷ ಪುರುಷರ ಐಪಿಎಲ್‌ನ 2 ಹೊಸ ತಂಡಗಳಿಂದ ಬಂಪರ್‌ ಹೊಡೆದಿದ್ದ ಬಿಸಿಸಿಐ ಮತ್ತೆ ಭರ್ಜರಿ ಲಾಭ ಗಳಿಸುವ ನಿರೀಕ್ಷೆಯಲ್ಲಿದೆ. ಪ್ರತಿ ತಂಡ ಸುಮಾರು 500ರಿಂದ 800 ಕೋಟಿ ರು.ಗೆ ಬಿಕರಿಯಾಗಬಹುದು ಎಂದು ಹೇಳಲಾಗುತ್ತಿದೆ.

ತಂಡಗಳ ಖರೀದಿಗೆ ಆರಂಭದಲ್ಲಿ 30ಕ್ಕೂ ಹೆಚ್ಚು ಸಂಸ್ಥೆಗಳು ಆಸಕ್ತಿ ವಹಿಸಿವೆ ಎಂದು ಹೇಳಲಾಗಿತ್ತು. ಸದ್ಯ ಪುರುಷರ ಐಪಿಎಲ್‌ನ 7 ಫ್ರಾಂಚೈಸಿಗಳು ಸೇರಿ ಒಟ್ಟು 17 ಸಂಸ್ಥೆಗಳು ರೇಸ್‌ನಲ್ಲಿವೆ. ತಂಡ ಖರೀದಿಗೆ ಬಿಸಿಸಿಐ ಯಾವುದೇ ಮೂಲ ಬೆಲೆ ನಿಗದಿಮಾಡಿಲ್ಲ. ಹರಾಜಿನಲ್ಲಿರುವ ಸಂಸ್ಥೆಗಳು ಮುಚ್ಚಿದ ಲಕೋಟೆಯಲ್ಲಿ ತಮ್ಮ ಬಿಡ್‌ ಮೊತ್ತ ಸಲ್ಲಿಸಲಿದ್ದು, ಅತಿ ಹೆಚ್ಚು ಬಿಡ್‌ ಸಲ್ಲಿಸಿದ ಸಂಸ್ಥೆಗೆ ತಂಡಗಳ ಮಾಲಿಕತ್ವ ದೊರೆಯಲಿದೆ. ಬಿಡ್‌ ಮಾಡಿದ ಹಣವನ್ನು ಫ್ರಾಂಚೈಸಿಗಳು ಸಮ ಕಂತುಗಳಲ್ಲಿ 10 ವರ್ಷ ಪಾವತಿಸಲಿವೆ.

Tap to resize

Latest Videos

ಇಂದೋರ್‌ನಲ್ಲಿ ಭಾರತಕ್ಕೆ ಭರ್ಜರಿ ಜಯ, ಟಿ20, ಏಕದಿನದಲ್ಲಿ ಟೀಂ ಇಂಡಿಯಾ ನಂ.1!

ರೇಸ್‌ನಲ್ಲಿದೆ ಆರ್‌ಸಿಬಿ!

ಪುರುಷರ ಐಪಿಎಲ್‌ನ ಆರ್‌ಸಿಬಿ, ರಾಜಸ್ಥಾನ, ಡೆಲ್ಲಿ, ಪಂಜಾಬ್‌, ಹೈದರಾಬಾದ್‌, ಕೋಲ್ಕತಾ ಹಾಗೂ ಮುಂಬೈ ಫ್ರಾಂಚೈಸಿಗಳು ಹರಾಜಿನಲ್ಲಿ ಪಾಲ್ಗೊಳ್ಳಲಿವೆ. ಉಳಿದಂತೆ ಅದಾನಿ ಗ್ರೂಪ್‌, ಜೆಕೆ ಸಿಮೆಂಟ್‌, ಅಪೋಲೊ ಟಯ​ರ್ಸ್ ಸಂಸ್ಥೆಗಳು ಕೂಡಾ ರೇಸ್‌ನಲ್ಲಿವೆ. ಪುರುಷರ ಐಪಿಎಲ್‌ ತಂಡ ಹೊಂದಿರುವ ಚೆನ್ನೈ, ಗುಜರಾತ್‌ ಹಾಗೂ ಲಖನೌ ಫ್ರಾಂಚೈಸಿಗಳು ಬಿಡ್ಡಿಂಗ್‌ನಲ್ಲಿ ಪಾಲ್ಗೊಳ್ಳುವುದಿಲ್ಲ ಎನ್ನುವುದು ಖಚಿತವಾಗಿದೆ.

ವರ್ಷದ ಏಕದಿನ ತಂಡ: ಹರ್ಮನ್‌ಪ್ರೀತ್‌ ನಾಯಕಿ

ದುಬೈ: 2022ನೇ ಸಾಲಿನ ಐಸಿಸಿ ವರ್ಷದ ಮಹಿಳಾ ಏಕದಿನ ತಂಡಕ್ಕೆ ಭಾರತದ ಹರ್ಮನ್‌ಪ್ರೀತ್‌ ಕೌರ್‌ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ತಂಡದಲ್ಲಿ ಸ್ಮೃತಿ ಮಂಧನಾ ಹಾಗೂ ರೇಣುಕಾ ಸಿಂಗ್‌ ಕೂಡಾ ಇದ್ದಾರೆ. ಇನ್ನು ಪುರುಷರ ವರ್ಷದ ಏಕದಿನ ತಂಡದಲ್ಲಿ ಶ್ರೇಯಸ್‌ ಅಯ್ಯರ್‌, ಮೊಹಮದ್‌ ಸಿರಾಜ್‌, ವರ್ಷದ ಟೆಸ್ಟ್‌ ತಂಡದಲ್ಲಿ ರಿಷಭ್‌ ಪಂತ್‌ ಸ್ಥಾನ ಪಡೆದಿದ್ದಾರೆ.

ತ್ರಿಕೋನ ಟಿ20 ಸರಣಿ: ಭಾರತಕ್ಕೆ 2ನೇ ಗೆಲುವು

ಈಸ್ಟ್‌ ಲಂಡನ್‌: ಸ್ಮೃತಿ ಮಂಧನಾ(74*), ಹರ್ಮನ್‌ಪ್ರೀತ್‌ ಕೌರ್‌(56*) ತಲಾ ಅರ್ಧಶತಕಗಳ ನೆರವಿನಿಂದ ತ್ರಿಕೋನ ಟಿ20 ಸರಣಿಯ ವೆಸ್ಟ್‌ವಿಂಡೀಸ್‌ ವಿರುದ್ಧದ ಪಂದ್ಯದಲ್ಲಿ ಭಾರತ 56 ರನ್‌ ಗೆಲುವು ಸಾಧಿಸಿದೆ. ಭಾರತ 2 ವಿಕೆಟ್‌ಗೆ 167 ರನ್‌ ಕಲೆ ಹಾಕಿತು. ವಿಂಡೀಸ್‌ 4 ವಿಕೆಟ್‌ಗೆ 111 ರನ್‌ ಗಳಿಸಿತು. ಕ್ಯಾಂಬೆಲ್‌(47) ಹೋರಾಟ ವ್ಯರ್ಥವಾಯಿತು. ದೀಪ್ತಿ 2 ವಿಕೆಟ್‌ ಕಿತ್ತರು. ಭಾರತ ತನ್ನ 3ನೇ ಪಂದ್ಯದಲ್ಲಿ ಶನಿವಾರ ದ.ಆಫ್ರಿಕಾ ವಿರುದ್ಧ ಆಡಲಿದೆ.

ಟಿ20ಯಲ್ಲಿ 500 ವಿಕೆಟ್‌: ರಶೀದ್‌ ಖಾನ್ 2ನೇ ಬೌಲರ್‌

ಕೇಪ್‌ಟೌನ್‌: ಆಫ್ಘಾನಿಸ್ತಾನದ ಲೆಗ್‌ ಸ್ಪಿನ್ನರ್‌ ರಶೀದ್‌ ಖಾನ್‌ ಟಿ20 ಕ್ರಿಕೆಟಲ್ಲಿ 500 ವಿಕೆಟ್‌ ಪೂರೈಸಿದ್ದು, ಈ ಸಾಧನೆ ಮಾಡಿದ ವಿಶ್ವದ 2ನೇ ಬೌಲರ್‌ ಎನಿಸಿದ್ದಾರೆ. ದ.ಆಫ್ರಿಕಾ ಟಿ20 ಲೀಗ್‌ನಲ್ಲಿ ಎಂಐ ಕೇಪ್‌ಟೌನ್‌ ಪರ ಆಡುತ್ತಿರುವ 24 ವರ್ಷದ ರಶೀದ್‌, ಪ್ರಿಟೋರಿಯಾ ವಿರುದ್ಧದ ಪಂದ್ಯದಲ್ಲಿ ಈ ಮೈಲಿಗಲ್ಲು ತಲುಪಿದರು. ರಶೀದ್‌ ಒಟ್ಟು 371 ಪಂದ್ಯಗಳಲ್ಲಿ 500 ವಿಕೆಟ್‌ ಕಿತ್ತಿದ್ದಾರೆ. ವಿಂಡೀಸ್‌ನ ಡ್ವೇನ್‌ ಬ್ರಾವೋ ಟಿ20ಯಲ್ಲಿ 614 ವಿಕೆಟ್‌(554 ಪಂದ್ಯ) ಕಬಳಿಸಿದ್ದಾರೆ.
 

click me!