ಮಹಿಳಾ ಏಷ್ಯಾಕಪ್ ಟೂರ್ನಿಗೆ ಭಾರತ ಕ್ರಿಕೆಟ್ ತಂಡ ಪ್ರಕಟ; ಕನ್ನಡತಿ ಗಾಯಕ್ವಾಡ್‌ಗೆ ಸ್ಥಾನ

By Naveen KodaseFirst Published Sep 21, 2022, 2:14 PM IST
Highlights

ಮಹಿಳಾ ಏಷ್ಯಾಕಪ್ ಕ್ರಿಕೆಟ್ ಟೂರ್ನಿ ಅಕ್ಟೋಬರ್ 01ರಿಂದ ಆರಂಭ
ಮಹಿಳಾ ಏಷ್ಯಾಕಪ್ ಟೂರ್ನಿಗೆ ಭಾರತ ಮಹಿಳಾ ಕ್ರಿಕೆಟ್ ತಂಡ
ಆರು ಬಾರಿ ಏಷ್ಯಾಕಪ್ ಚಾಂಪಿಯನ್ ಆಗಿರುವ ಭಾರತ ಮಹಿಳಾ ಕ್ರಿಕೆಟ್ ತಂಡ

ಮುಂಬೈ(ಸೆ.21): ಮುಂಬರುವ ಅಕ್ಟೋಬರ್ 01ರಿಂದ ಬಾಂಗ್ಲಾದೇಶದಲ್ಲಿ ಆರಂಭವಾಗಲಿರುವ ಮಹಿಳಾ ಏಷ್ಯಾಕಪ್ ಕ್ರಿಕೆಟ್ ಟೂರ್ನಿಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ), 15 ಆಟಗಾರ್ತಿಯರನ್ನೊಳಗೊಂಡ ಭಾರತ ತಂಡವನ್ನು ಪ್ರಕಟಿಸಲಾಗಿದೆ. ಹರ್ಮನ್‌ಪ್ರೀತ್ ಕೌರ್, 15 ಆಟಗಾರ್ತಿಯರನ್ನೊಳಗೊಂಡ ಭಾರತ ಮಹಿಳಾ ಕ್ರಿಕೆಟ್ ತಂಡವನ್ನು ನಾಯಕಿಯಾಗಿ ಮುನ್ನಡೆಸಲಿದ್ದಾರೆ. ಭಾರತ ಮಹಿಳಾ ಕ್ರಿಕೆಟ್ ತಂಡವು 6 ಬಾರಿ ಏಷ್ಯಾಕಪ್ ಚಾಂಪಿಯನ್ ಆಗಿಹೊರಹೊಮ್ಮಿದ್ದು, ಏಳನೇ ಟ್ರೋಫಿ ಮೇಲೆ ಕಣ್ಣಿಟ್ಟಿದೆ.

ಭಾರತ ಮಹಿಳಾ ತಂಡದಲ್ಲಿ ಯಾವುದೇ ಬದಲಾವಣೆಗಳಾಗಿಲ್ಲ. ಇಂಗ್ಲೆಂಡ್ ವಿರುದ್ದ ನಡೆಯುತ್ತಿರುವ ಟಿ20 ಸರಣಿಗೆ ಆಯ್ಕೆಯಾದ ತಂಡವನ್ನೇ ಏಷ್ಯಾಕಪ್ ಮಹಿಳಾ ಟಿ20 ಟೂರ್ನಿಗೆ ಆಯ್ಕೆ ಮಾಡಲಾಗಿದೆ. ಇನ್ನುಳಿದಂತೆ ವಿಕೆಟ್ ಕೀಪರ್ ತಾನಿಯಾ ಭಾಟಿಯಾ ಹಾಗೂ ಬೌಲರ್‌ ಸಿಮ್ರನ್ ಬಹುದ್ದೂರ್ ಅವರನ್ನು ಮೀಸಲು ಆಟಗಾರ್ತಿಯರನ್ನಾಗಿ ನೇಮಕ ಮಾಡಿಕೊಳ್ಳಲಾಗಿದೆ. ಈ ಇಬ್ಬರು ಆಟಗಾರ್ತಿಯರು, ಇಂಗ್ಲೆಂಡ್ ಎದುರಿನ 3 ಪಂದ್ಯಗಳ ಸರಣಿಯಲ್ಲಿ ಸ್ಥಾನ ಪಡೆದಿದ್ದಾರೆ.

ಹರ್ಮನ್‌ಪ್ರೀತ್ ಕೌರ್, ಏಷ್ಯಾಕಪ್ ಟೂರ್ನಿಯಲ್ಲಿ ಭಾರತ ಮಹಿಳಾ ಕ್ರಿಕೆಟ್ ತಂಡವನ್ನು ಮುನ್ನಡೆಸಲಿದ್ದಾರೆ. ಏಷ್ಯಾಕಪ್ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ತೋರುವ ಮೂಲಕ ಮತ್ತೊಮ್ಮೆ ಏಷ್ಯಾದ ಬಲಿಷ್ಠ ತಂಡವೆನಿಸಿಕೊಳ್ಳುವ ಉತ್ಸಾಹದಲ್ಲಿದೆ ಭಾರತ ತಂಡ. ಇನ್ನು ಅದ್ಭುತ ಫಾರ್ಮ್‌ನಲ್ಲಿರುವ ಆರಂಭಿಕ ಬ್ಯಾಟರ್ ಸ್ಮೃತಿ ಮಂಧನಾ, ಭಾರತ ಮಹಿಳಾ ಕ್ರಿಕೆಟ್ ತಂಡದ ಉಪನಾಯಕಿಯಾಗಿ ಕಾರ್ಯ ನಿರ್ವಹಿಸಲಿದ್ದಾರೆ.

ಮಹಿಳಾ ಏಷ್ಯಾಕಪ್‌ ಟೂರ್ನಿ ವೇಳಾಪಟ್ಟಿ ಪ್ರಕಟ: ಅಕ್ಟೋಬರ್ 7ಕ್ಕೆ ಭಾರತ-ಪಾಕಿಸ್ತಾನ ಪಂದ್ಯ

ಭಾರತ ತಂಡದಲ್ಲಿ ರೇಣುಕಾ ಸಿಂಗ್, ಪೂಜಾ ವಸ್ತ್ರಾಕರ್, ಮೆಘನಾ ಸಿಂಗ್ ಮೂವರು ವೇಗದ ದಾಳಿಯ ವಿಭಾಗದಲ್ಲಿ ಸ್ಥಾನ ಪಡೆದರೆ, ರಾಧಾ ಯಾದವ್, ಸ್ನೆಹ್ ರಾಣಾ ಹಾಗೂ ರಾಜೇಶ್ವರಿ ಗಾಯಕ್ವಾಡ್‌, ಸ್ಪಿನ್ನರ್‌ಗಳ ರೂಪದಲ್ಲಿ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಇನ್ನು ರಿಚಾ ಘೋಷ್ ಅವರನ್ನು ಮೊದಲ ಆಯ್ಕೆಯ ವಿಕೆಟ್ ಕೀಪರ್ ಆಗಿ ಸ್ಥಾನ ಪಡೆದಿದ್ದಾರೆ.

ಅಕ್ಟೋಬರ್ 1ರಿಂದ ಆರಂಭಗೊಳ್ಳಲಿರುವ ಟೂರ್ನಿಯು 15 ದಿನಗಳ ಕಾಲ ನಡೆಯಲಿದ್ದು, ಒಟ್ಟು 7 ತಂಡಗಳು ಸೆಣಸಲಿವೆ. ಟೂರ್ನಿಯು ರೌಂಡ್‌ ರಾಬಿನ್‌ ಮಾದರಿಯಲ್ಲಿ ನಡೆಯಲಿದ್ದು ಅಗ್ರ 4 ತಂಡಗಳು ಸೆಮಿಫೈನಲ್‌ ಪ್ರವೇಶಿಸಲಿವೆ. ಭಾರತ, ಪಾಕಿಸ್ತಾನ, ಬಾಂಗ್ಲಾದೇಶ, ಶ್ರೀಲಂಕಾ, ಯುಎಇ, ಥಾಯ್ಲೆಂಡ್‌ ಮತ್ತು ಮಲೇಷ್ಯಾ ತಂಡಗಳು ಪಾಲ್ಗೊಳ್ಳಲಿವೆ. 

ಹರ್ಮನ್‌ಪ್ರೀತ್ ಕೌರ್ ನೇತೃತ್ವದ ಭಾರತ ಮಹಿಳಾ ಕ್ರಿಕೆಟ್ ತಂಡವು ಏಷ್ಯಾಕಪ್ ಟೂರ್ನಿಯ ಮೊದಲ ಪಂದ್ಯದಲ್ಲಿ ಶ್ರೀಲಂಕಾ(ಅಕ್ಟೋಬರ್ 01). ಎರಡನೇ ಪಂದ್ಯದಲ್ಲಿ ಮೇಲಷ್ಯಾ(ಅಕ್ಟೋಬರ್ 03), ಯುಎಇ(ಅಕ್ಟೋಬರ್ 4). ಪಾಕಿಸ್ತಾನ(ಅಕ್ಟೋಬರ್ 07) ಬಾಂಗ್ಲಾದೇಶ(ಅಕ್ಟೋಬರ್ 08) ಹಾಗೂ ಥಾಯ್ಲೆಂಡ್(ಅಕ್ಟೋಬರ್ 10) ವಿರುದ್ದ ಸೆಣಸಾಟ ನಡೆಸಲಿದೆ.

ಮಹಿಳಾ ಏಷ್ಯಾಕಪ್ ಟೂರ್ನಿಗೆ ಭಾರತ ತಂಡ ಹೀಗಿದೆ ನೋಡಿ

ಹರ್ಮನ್‌ಪ್ರೀತ್ ಕೌರ್(ನಾಯಕಿ), ಸ್ಮೃತಿ ಮಂಧನಾ(ಉಪನಾಯಕಿ), ದೀಪ್ತಿ ಶರ್ಮಾ, ಶಫಾಲಿ ವರ್ಮಾ, ಜೆಮಿಮಾ ರೋಡ್ರಿಗಸ್, ಶಬ್ಬಿನೇನ್ ಮೆಘಾನ್, ರಿಚಾ ಘೋಷ್(ವಿಕೆಟ್ ಕೀಪರ್), ಸ್ನೆಹ್ ರಾಣಾ, ಡಿ ಹೇಮಲತಾ, ಮೆಘನಾ ಸಿಂಗ್, ರೆಣುಕಾ ಠಾಕೂರ್, ಪೂಜಾ ವಸ್ತ್ರಾಕರ್, ರಾಜೇಶ್ವರಿ ಗಾಯಕ್ವಾಡ್, ರಾಧಾ ಯಾದವ್, ಕೆ.ಪಿ. ನವಗಿರೆ.

ಮೀಸಲು ಆಟಗಾರ್ತಿಯರು: ತಾನ್ಯಾ ಭಾಟಿಯಾ, ಸಿಮ್ರನ್ ದಿಲ್ ಬಹುದ್ದೂರ್.

click me!