* ಮೊಹಾಲಿ ಟಿ20 ಪಂದ್ಯದಲ್ಲಿ ಆಸೀಸ್ ಎದುರು ಟೀಂ ಇಂಡಿಯಾಗೆ ಆಘಾತಕಾರಿ ಸೋಲು
* ಬೌಲಿಂಗ್ ಹಾಗೂ ಫೀಲ್ಡಿಂಗ್ ಬಗ್ಗೆ ಬೇಸರ ಹೊರಹಾಕಿದ ನಾಯಕ ರೋಹಿತ್ ಶರ್ಮಾ
* 200+ ರನ್‌ಗಳನ್ನು ನಮ್ಮ ತಂಡ ಕಾಪಾಡಿಕೊಳ್ಳಬಹುದಿತ್ತು ಎಂದ ಹಿಟ್‌ಮ್ಯಾನ್
ಮೊಹಾಲಿ(ಸೆ.21): ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳ ನಡುವಿನ ಮೂರು ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯಾ ಎದುರು ಆತಿಥೇಯ ಟೀಂ ಇಂಡಿಯಾ ಆಘಾತಕಾರಿ ಸೋಲು ಅನುಭವಿಸಿದೆ. ಟೀಂ ಇಂಡಿಯಾ ನೀಡಿದ್ದ 209 ರನ್‌ಗಳ ಗುರಿ, ಆರೋನ್ ಫಿಂಚ್ ನೇತೃತ್ವದ ಆಸ್ಟ್ರೇಲಿಯಾ ತಂಡದ ಪಾಲಿಗೆ ಸವಾಲೆನಿಸಲೇ ಇಲ್ಲ. 200+ ರನ್ ರಕ್ಷಿಸಿಕೊಳ್ಳಲು ವಿಫಲವಾದ ಬೌಲರ್‌ಗಳು ಹಾಗೂ ಮಹತ್ವದ ಕ್ಯಾಚ್‌ಗಳನ್ನು ಕೈಚೆಲ್ಲಿದ್ದರ ಬಗ್ಗೆ ಭಾರತ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮಾ ತಮ್ಮ ಅಸಮಾಧಾನ ಹೊರಹಾಕಿದ್ದಾರೆ.
ಇಲ್ಲಿನ ಮೊಹಾಲಿ ಸ್ಟೇಡಿಯಂನಲ್ಲಿ ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಟೀಂ ಇಂಡಿಯಾಗೆ ಉಪನಾಯಕ ಕೆ ಎಲ್ ರಾಹುಲ್, ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಸ್ಪೋಟಕ ಅರ್ಧಶತಕ ಹಾಗೂ ಸೂರ್ಯಕುಮಾರ್ ಯಾದವ್ ಅವರ ಆಕರ್ಷಕ ಬ್ಯಾಟಿಂಗ್ ನೆರವಿನಿಂದ 208 ರನ್‌ಗಳ ಸವಾಲಿನ ಮೊತ್ತ ಕಲೆಹಾಕಿತು. ಇನ್ನು ಕಠಿಣ ಗುರಿ ಬೆನ್ನತ್ತಿದ ಆಸ್ಟ್ರೇಲಿಯಾ ತಂಡಕ್ಕೆ ನಾಯಕ ಆರೋನ್ ಫಿಂಚ್ ಹಾಗೂ ಮೊದಲ ಬಾರಿಗೆ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಆರಂಭಿಕನಾಗಿ ಕಣಕ್ಕಿಳಿದ ಕ್ಯಾಮರೋನ್ ಗ್ರೀನ್ ವಿಸ್ಪೋಟಕ ಆರಂಭ ಒದಗಿಸಿಕೊಟ್ಟರು. ಇನ್ನು ಕೊನೆಯಲ್ಲಿ ಮ್ಯಾಥ್ಯೂ ವೇಡ್, ಆಕರ್ಷಕ ಬ್ಯಾಟಿಂಗ್ ನಡೆಸುವ ಮೂಲಕ ಇನ್ನೂ 4 ಎಸೆತಗಳು ಬಾಕಿ ಇರುವಂತೆಯೇ ಆಸ್ಟ್ರೇಲಿಯಾ ತಂಡವು ಗೆಲುವಿನ ಕೇಕೆ ಹಾಕುವಂತೆ ಮಾಡಿದರು. ಈ ಗೆಲುವಿನೊಂದಿಗೆ ಆಸ್ಟ್ರೇಲಿಯಾ ಕ್ರಿಕೆಟ್ ತಂಡವು 3 ಪಂದ್ಯಗಳ ಟಿ20 ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.
ಟೀಂ ಇಂಡಿಯಾ ಪರ ಹಾರ್ದಿಕ್ ಪಾಂಡ್ಯ, ಸೂರ್ಯಕುಮಾರ್ ಯಾದವ್ ಹಾಗೂ ಕೆ ಎಲ್ ರಾಹುಲ್ ಚುರುಕಾಗಿ ಬ್ಯಾಟ್ ಬೀಸುವ ಮೂಲಕ ತಂಡದ ಮೊತ್ತವನ್ನು ಇನ್ನೂರರ ಗಡಿ ದಾಟಿಸುವಲ್ಲಿ ಯಶಸ್ವಿಯಾದರು. ಆದರೆ ಬೌಲರ್‌ಗಳು ಪವರ್‌ಪ್ಲೇ ಹಾಗೂ ಡೆತ್ ಓವರ್‌ನಲ್ಲಿ ದುಬಾರಿಯಾಗುವ ನಿರಾಸೆ ಮೂಡಿಸಿದರು. ಭುವನೇಶ್ವರ್ ಕುಮಾರ್ 4 ಓವರ್‌ನಲ್ಲಿ 52 ರನ್ ಬಿಟ್ಟುಕೊಟ್ಟರೆ, ಡೆತ್ ಓವರ್ ಸ್ಪೆಷಲಿಸ್ಟ್ ಎನಿಸಿಕೊಂಡಿರುವ ಹರ್ಷಲ್ ಪಟೇಲ್ 49 ರನ್ ನೀಡಿ ದುಬಾರಿ ಎನಿಸಿಕೊಂಡರು. ಇನ್ನು ಫೀಲ್ಡಿಂಗ್‌ನಲ್ಲಿ ಕೆ ಎಲ್ ರಾಹುಲ್, ಹರ್ಷಲ್ ಪಟೇಲ್ ಸೇರಿದಂತೆ ಮಹತ್ವದ ಸಂದರ್ಭದಲ್ಲಿ ಫೀಲ್ಡರ್‌ಗಳು ಕ್ಯಾಚ್ ಕೈಚೆಲ್ಲಿದ್ದು, ಟೀಂ ಇಂಡಿಯಾ ಪಾಲಿಗೆ ಮುಳುವಾಗಿ ಪರಿಣಮಿಸಿತು.
ಈ ಸೋಲಿನೊಂದಿಗೆ ಟೀಂ ಇಂಡಿಯಾ, ಟಿ20 ಕ್ರಿಕೆಟ್‌ನಲ್ಲಿ ಕ್ಯಾಲೆಂಡರ್ ವರ್ಷವೊಂದರಲ್ಲಿ ಒಂದಕ್ಕಿಂತ ಹೆಚ್ಚು ಬಾರಿ ತವರಿನಲ್ಲಿ 200ಕ್ಕೂ ಅಧಿಕ ರನ್‌ಗಳನ್ನು ಕಾಪಾಡಿಕೊಳ್ಳಲು ವಿಫಲವಾಗುವ ಮೂಲಕ ಮುಖಭಂಗ ಅನುಭವಿಸಿತು. ಪಂದ್ಯ ಮುಕ್ತಾಯದ ಬಳಿಕ ಮಾತನಾಡಿದ ನಾಯಕ ರೋಹಿತ್ ಶರ್ಮಾ, ತಮ್ಮ ತಂಡದ ಬೌಲಿಂಗ್ ಪಡೆಯ ಬಗ್ಗೆ ತಮ್ಮ ಅಸಮಾಧಾನ ಹೊರಹಾಕಿದ್ದಾರೆ.
IND vs AUS ಏಷ್ಯಾಕಪ್ ಬಳಿಕ ಆಸ್ಟ್ರೇಲಿಯಾ ವಿರುದ್ಧವೂ ಮುಗ್ಗರಿಸಿದ ಭಾರತ!
ನಾವು ಚೆನ್ನಾಗಿ ಬೌಲಿಂಗ್ ಮಾಡಿದೆವು ಎಂದು ನನಗನಿಸುತ್ತಿಲ್ಲ. 200 ರನ್ ಡಿಫೆಂಡ್ ಮಾಡಿಕೊಳ್ಳಬಹುದಾದ ಸ್ಕೋರ್ ಆಗಿತ್ತು. ಆದರೆ ನಾವು ಮೈದಾನದಲ್ಲಿ ಉತ್ತಮ ಪ್ರದರ್ಶನ ತೋರಲು ಎಡವಿದೆವು. ನಮ್ಮ ತಂಡದ ಬ್ಯಾಟರ್‌ಗಳು ಉತ್ತಮ ಪ್ರದರ್ಶನ ತೋರಿದರು, ಆದರೆ ಬೌಲರ್‌ಗಳಿಂದ ನಿರೀಕ್ಷಿತ ಪ್ರದರ್ಶನ ಮೂಡಿ ಬರಲಿಲ್ಲ. ಈ ಬಗ್ಗೆ ನಾವು ಗಮನ ಹರಿಸಬೇಕಿದೆ. ಆದರೆ ನಾವು ಈ ಪಂದ್ಯದಲ್ಲಿ ಎಲ್ಲಿ ತಪ್ಪು ಮಾಡಿದೆವು ಎಂದು ತಿಳಿದುಕೊಳ್ಳಲು ಇದು ಸಹಕಾರಿಯಾಗಲಿದೆ. ಇಲ್ಲಿ ದೊಡ್ಡ ಮೊತ್ತ ಗಳಿಸುವ ಪಿಚ್ ಎನ್ನುವುದು ನಮಗೆ ಗೊತ್ತಿದೆ. 200 ರನ್ ಗಳಿಸಿದ ಮಾತ್ರಕ್ಕೆ ರಿಲ್ಯಾಕ್ಸ್ ಆಗುವ ಹಾಗಿಲ್ಲ. ನಾವು ಇನ್ನಷ್ಟು ವಿಕೆಟ್ ಉರುಳಿಸಬೇಕಿತ್ತು, ಆದರೆ ಅವರು ತುಂಬಾ ಚೆನ್ನಾಗಿ ಆಡಿದರು ಎಂದು ರೋಹಿತ್ ಶರ್ಮಾ ಹೇಳಿದರು.
ಆಸ್ಟ್ರೇಲಿಯಾ ತಂಡದವರು ಅದ್ಭುತ ಶಾಟ್‌ಗಳನ್ನು ಬಾರಿಸುವ ಮೂಲಕ ಚೆನ್ನಾಗಿ ಆಡಿದರು. ನಾನು ಅವರ ತಂಡದಲ್ಲಿದ್ದರೆ, ನಾನು ಕೂಡಾ ಈ ಗುರಿ ಬೆನ್ನಟ್ಟಬೇಕು ಎಂದು ಬಯಸುತ್ತಿದ್ದೆ. ಕೊನೆಯ 4 ಓವರ್‌ನಲ್ಲಿ 60 ರನ್ ಬಾರಿಸುವುದು ಕಷ್ಟವೇನಲ್ಲ. ಆದರೆ ಆ ಸಂದರ್ಭದಲ್ಲಿ ಒಂದು ವಿಕೆಟ್ ಕಬಳಿಸಿದ್ದರೆ ಪರಿಸ್ಥಿತಿ ಬೇರೆಯದ್ದೇ ಆಗುತ್ತಿತ್ತು. ಅದೇ ಟರ್ನಿಂಗ್ ಪಾಯಿಂಟ್ ಎನಿಸಿತು. ನೀವು ಪ್ರತಿದಿನ 200 ರನ್ ಬಾರಿಸಲು ಸಾಧ್ಯವಿಲ್ಲ. ಇನ್ನು ಹಾರ್ದಿಕ್ ಪಾಂಡ್ಯ ಉತ್ತಮವಾಗಿ ಬ್ಯಾಟಿಂಗ್ ಮಾಡುವ ಮೂಲಕ ನಮ್ಮ ತಂಡಕ್ಕೆ ದೊಡ್ಡ ಮೊತ್ತ ಕಲೆಹಾಕಲು ನೆರವಾದರು. ಮುಂದಿನ ಪಂದ್ಯಕ್ಕೂ ಮುನ್ನ ನಾವು ನಮ್ಮ ಬೌಲಿಂಗ್ ಬಗ್ಗೆ ಗಮನ ಹರಿಸಬೇಕಿದೆ ಎಂದು ರೋಹಿತ್ ಶರ್ಮಾ ಹೇಳಿದ್ದಾರೆ.