ವರ್ಣಭೇದ ನೀತಿ ಕುರಿತಂತೆ ಅಚ್ಚರಿಯ ಹೇಳಿಕೆ ನೀಡಿದ ಕ್ರಿಕೆಟ್ ದಿಗ್ಗಜ ಮೈಕೆಲ್ ಹೋಲ್ಡಿಂಗ್

By Suvarna NewsFirst Published Jun 28, 2021, 4:41 PM IST
Highlights

* ವರ್ಣಭೇದ ನೀತಿ ಈಗಲೂ ಜಾರಿಯಲ್ಲಿದೆ ಎಂದ ಮೈಕಲ್‌ ಹೋಲ್ಡಿಂಗ್

* ಜನರ ಮನಸ್ಥಿತಿ ಬದಲಾಗಲೂ ಮತ್ತಷ್ಟು ಸಮಯ ಬೇಕಿದೆ ಎಂದ ವಿಂಡೀಸ್‌ ದಿಗ್ಗಜ ವೇಗಿ

* ವಿಂಡೀಸ್ ಪರ 60 ಟೆಸ್ಟ್ ಪಂದ್ಯಗಳನ್ನಾಡಿ 249 ವಿಕೆಟ್ ಕಬಳಿಸಿರುವ ಮೈಕೆಲ್ ಹೋಲ್ಡಿಂಗ್ 

ಜಮೈಕಾ(ಜೂ.28): ಮಾನವ ಜನಾಂಗದ ನಿಜವಾದ ಇತಿಹಾಸ ತಿಳಿಯುವವರೆಗೂ ಕ್ರಿಕೆಟ್ ಸೇರಿದಂತೆ ಎಲ್ಲಾ ರಂಗಗಳಲ್ಲೂ ವರ್ಣಭೇದ ನೀತಿಯ ಘಟನೆಗಳು ನಡೆಯುತ್ತಲೇ ಇರುತ್ತದೆ. ಒಂದಲ್ಲಾ ಒಂದು ದಿನ ಇದು ಬದಲಾಗುತ್ತದೆ ಅಲ್ಲಿಯವರೆಗೂ ಭರವಸೆ ಕಳೆದುಕೊಳ್ಳಬಾರದು ಎಂದು ವೆಸ್ಟ್‌ ಇಂಡೀಸ್‌ ದಿಗ್ಗಜ ವೇಗಿ ಮೈಕೆಲ್ ಹೋಲ್ಡಿಂಗ್ ಅಭಿಪ್ರಾಯಪಟ್ಟಿದ್ದಾರೆ.

ಇತ್ತೀಚೆಗಷ್ಟೇ ಮುಕ್ತಾಯವಾದ ಭಾರತ ಹಾಗೂ ನ್ಯೂಜಿಲೆಂಡ್‌ ನಡುವಿನ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ ಪಂದ್ಯದ ವೇಳೆಯಲ್ಲೂ ಜನಾಂಗೀಯ ನಿಂದನೆಯ ಘಟನೆಯೊಂದು ಬೆಳಕಿಗೆ ಬಂದಿತ್ತು. ಸೌಥಾಂಪ್ಟನ್‌ನ ಏಜೀಸ್‌ ಬೌಲ್ ಸ್ಟೇಡಿಯಂನಲ್ಲಿದ್ದ ಇಬ್ಬರು ವ್ಯಕ್ತಿಗಳು ಕಿವೀಸ್ ಅನುಭವಿ ಬ್ಯಾಟ್ಸ್‌ಮನ್‌ ರಾಸ್ ಟೇಲರ್ ಅವರನ್ನು ಜನಾಂಗೀಯವಾಗಿ ನಿಂದಿಸಿದ ಘಟನೆ ನಡೆದಿತ್ತು. ತಕ್ಷಣವೇ ಎಚ್ಚೆತ್ತುಕೊಂಡ ಐಸಿಸಿ ಆ ಇಬ್ಬರು ವ್ಯಕ್ತಿಗಳನ್ನು ಮೈದಾನದಿಂದ ಹೊರದಬ್ಬಲಾಗಿತ್ತು.

ರಾಸ್ ಟೇಲರ್ ವಿಚಾರದಲ್ಲಿ ಏನು ನಡೆದಿತ್ತು ಎನ್ನುವುದು ನನಗೆ ಸರಿಯಾಗಿ ಗೊತ್ತಿಲ್ಲ. ಟೆಸ್ಟ್‌ ಫೈನಲ್‌ ಪಂದ್ಯಕ್ಕೆ ಮಳೆ ಪದೇ ಪದೇ ಅಡ್ಡಿಪಡಿಸಿದ್ದರಿಂದಾಗಿ ನಾನು ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ ನೋಡಲಾಗಲಿಲ್ಲ. ಅದೇನೇ ಇರಲಿ, ನಾವೆಲ್ಲ ಹೇಳುವಂತೆ ಈ ರೀತಿಯ ಮನಸ್ಥಿತಿ ಬದಲಾಗಬೇಕು. ಆದರೆ ದಿನಕಳೆದು ಬೆಳಕಾಗುವಷ್ಟರಲ್ಲಿ ಇದೆಲ್ಲ ಬದಲಾಗಬೇಕು ಎಂದರೆ ಸಾಧ್ಯವಿಲ್ಲ ಎಂದು ಹೋಲ್ಡಿಂಗ್ ಸ್ಪೋರ್ಟ್ಸ್‌ ಟುಡೆಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ. ಈ ಮೂಲಕ 21ನೇ ಶತಮಾನದಲ್ಲೂ ವರ್ಣಭೇದ ನೀತಿ ಜೀವಂತವಾಗಿದೆ ಎನ್ನುವ ಅಚ್ಚರಿಯ ಹೇಳಿದ್ದಾರೆ.

ವಿಂಡೀಸ್ ಪರ 60 ಟೆಸ್ಟ್ ಪಂದ್ಯಗಳನ್ನಾಡಿ 249 ವಿಕೆಟ್ ಕಬಳಿಸಿರುವ ಮೈಕೆಲ್ ಹೋಲ್ಡಿಂಗ್ ತಮ್ಮ ಹೊಸ ಪುಸ್ತಕ, 'Why We Kneel, How We Rise' ಪುಸ್ತಕದಲ್ಲಿ ವರ್ಣಭೇದ ನೀತಿಯ ಕುರಿತಂತೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ

ರಾಸ್ ಟೇಲರ್‌ ವಿರುದ್ಧ ನಿಂದನೆ: 2 ಪ್ರೇಕ್ಷಕರನ್ನು ಹೊರದಬ್ಬಿದ ಐಸಿಸಿ !

ನಾವೆಲ್ಲ ಯಾವಾಗಲೂ ವರ್ಣಭೇದ ನೀತಿಯ ಕುರಿತಂತೆ ವಿಚಾರಗಳನ್ನು ಕೇಳುತ್ತಲೇ ಬರುತ್ತಿದ್ದೇವೆ. ಯಾಕೆಂದರೆ ಶತಮಾನಗಳಿಂದ ಈ ಜಗತ್ತೇ ಆ ರೀತಿ ಬೆಳೆದುಬಂದಿದೆ. ಈ ವಿಚಾರವನ್ನು ಶತಮಾನಗಳಿಂದ ಜನರ ತಲೆಗೆ ತುಂಬಲಾಗಿದೆ. ಹೀಗಾಗಿ ಈ ವಿಚಾರವನ್ನು ಜನರು ಕೆಲವು ತಿಂಗಳು ಅಥವಾ ವರ್ಷದಲ್ಲಿ ಅರ್ಥಮಾಡಿಕೊಳ್ಳುತ್ತಾರೆ ಎಂದು ನನಗನಿಸುತ್ತಿಲ್ಲ. ಮಾನವ ಜನಾಂಗದ ನಿಜವಾದ ಇತಿಹಾಸವನ್ನು ತಿಳಿದಾಗ ಮಾತ್ರ ಈ ವಿಚಾರದಲ್ಲಿ ನಿಜಕ್ಕೂ ಬದಲಾವಣೆಯಾಗಲಿದೆ ಎಂದು 67 ವರ್ಷದ ಮಾಜಿ ವೇಗಿ ತಿಳಿಸಿದ್ದಾರೆ.

ವರ್ಣಭೇದ ನೀತಿಯ ವಿರುದ್ದ ಶಾಲಾ ಹಂತದಿಂದಲೇ ಮಕ್ಕಳಲ್ಲಿ ತಿಳುವಳಿಕೆ ಮೂಡಿಸಬೇಕು ಎಂದು ಹೋಲ್ಡಿಂಗ್ಸ್ ಅಭಿಪ್ರಾಯಪಟ್ಟಿದ್ದಾರೆ. ಶಾಲೆಯಲ್ಲಿ ಶಿಕ್ಷಕರು ಹಾಗೂ ದೊಡ್ಡವರು ಏನು ಹೇಳುತ್ತಾರೋ ಅದನ್ನೇ ನಂಬುತ್ತಾರೆ. ಶಾಲಾ ಹಂತದಲ್ಲಿ ತಪ್ಪು ವಿಚಾರಗಳನ್ನು ಅವರಲ್ಲಿ ತುಂಬಿದರೆ, ದೊಡ್ಡವರಾದ ಬಳಿಕ ಅವರು ಸಮಾಜದಲ್ಲಿ ಕೆಟ್ಟ ವಿಚಾರಗಳನ್ನೇ ನಂಬುತ್ತಾರೆ. ಕಂದು ಅಥವಾ ಕಪ್ಪು ಬಣ್ಣದವರಿಗಿಂತ ಬಿಳಿ ಜನಾಂಗದವೇ ಶ್ರೇಷ್ಠ ಎನ್ನುವ ಮಾತನ್ನು ಶತಮಾನಗಳಿಂದ ನಂಬಿಸುತ್ತಾ ಬರಲಾಗಿದೆ. ಈ ವಿಚಾರವನ್ನು ಹೊಡೆದುಹಾಕಿ ನಾವೆಲ್ಲರೂ ಒಂದೇ ಮಾನವ ಕುಲದವರು ಎನ್ನುವ ಭಾವನೆಯನ್ನು ಬಿತ್ತಬೇಕು. ಇದು ಶಾಲೆ ಹಂತದಲ್ಲೇ ಆರಂಭವಾಗಬೇಕು ಎಂದು ಹೋಲ್ಡಿಂಗ್ ಅಭಿಪ್ರಾಯಪಟ್ಟಿದ್ದಾರೆ. 
 

click me!