ವಿರಾಟ್‌ ಕೊಹ್ಲಿಯ ಅತ್ಯಂತ ಕೆಟ್ಟ ಐಸಿಸಿ ಟೂರ್ನಿ ಆಗಲಿದ್ಯಾ ಈ ಬಾರಿಯ ಟಿ20 ವಿಶ್ವಕಪ್‌?

By Santosh Naik  |  First Published Jun 29, 2024, 1:23 PM IST

Virat Kohli Form 2014ರ ಬಳಿಕ ಭಾರತ ತಂಡ ಇದೇ ಮೊದಲ ಬಾರಿಗೆ ಟಿ20 ವಿಶ್ವಕಪ್‌ನಲ್ಲಿ ಫೈನಲ್‌ ಸಾಧನೆ ಮಾಡಿದೆ. ಆದರೆ, ಟೀಮ್‌ ಇಂಡಿಯಾದ ಅಗ್ರ ಆಟಗಾರ ವಿರಾಟ್‌ ಕೊಹ್ಲಿಯ ಫಾರ್ಮ್‌ ಟೀಮ್‌ಗೆ ಅತ್ಯಂತ ಕಳವಳಕಾರಿಯಾಗಿದೆ.


ಬೆಂಗಳೂರು (ಜೂ.29): 1, 4, 0, 24 37, 0, 9.. ಇದು ಯಾವುದೇ ಮೊಬೈಲ್‌ ಫೋನ್‌ ನಂಬರ್‌ ಅಲ್ಲ. ಹಾಲಿ ಟಿ20 ವಿಶ್ವಕಪ್‌ನಲ್ಲಿ ಟೀಮ್‌ ಇಂಡಿಯಾದ ಅಗ್ರ ಪ್ಲೇಯರ್‌ ವಿರಾಟ್‌ ಕೊಹ್ಲಿ ಬಾರಿಸಿರುವ ರನ್‌ಗಳು. ಐಸಿಸಿ ಟೂರ್ನಿಯಲ್ಲಿ ವಿರಾಟ್‌ ಕೊಹ್ಲಿಯ ಅತ್ಯಂತ ಕೆಟ್ಟ ಟೂರ್ನಿ ಇದಾಗಿದೆ. ಫೈನಲ್‌ ಪಂದ್ಯ ಒಂದೇ ಬಾಕಿ ಉಳಿದಿದ್ದು, ಅತ್ಯಂತ ಕೆಟ್ಟ ದಾಖಲೆಯನ್ನು ಅವರು ತಪ್ಪಿಸಿಕೊಳ್ಳುತ್ತಾರಾ ಎನ್ನುವ ಕುತೂಹಲ ಎಲ್ಲರಲ್ಲಿದೆ. 2014ರ ಬಳಿಕ ಇದೇ ಮೊದಲ ಬಾರಿಗಡ ಟೀಮ್‌ ಇಂಡಿಯಾ ಟಿ20 ವಿಶ್ವಕಪ್‌ನಲ್ಲಿ ಫೈನಲ್‌ ಸಾಧನೆ ಮಾಡಿದೆ. ಇನ್ನೊಂದೆಡೆ 2013ರ ಬಳಿಕ ಮೊದಲ ಬಾರಿಗೆ ಐಸಿಸಿ ಟ್ರೋಫಿ ಗೆಲ್ಲುವ ಇರಾದೆಯಲ್ಲಿ ಭಾರತ ತಂಡವಿದೆ. ಇದೆಲ್ಲದರ ನಡುವೆ ತಂಡದ ಆತಂಕಕ್ಕೆ ಕಾರಣವಾಗಿರುವುದು ವಿರಾಟ್‌ ಕೊಹ್ಲಿಯ ಕೆಟ್ಟ ಫಾರ್ಮ್‌. ವಿರಾಟ್‌ ಕೊಹ್ಲಿ ತಮ್ಮ ವೃತ್ತಿಜೀವನದಲ್ಲಿಆಡುತ್ತಿರುವ 13ನೇ ಐಸಿಸಿ ಟೂರ್ನಿ ಇದು. ಆದರೆ, ಹಿಂದಿನ ಎಲ್ಲಾ ಐಸಿಸಿ ಟೂರ್ನಿಯಲ್ಲೂ ಅವರ ಬ್ಯಾಟ್‌ನಿಂದ ಕನಿಷ್ಠ 1 ಅರ್ಧಶತಕವಾದರೂ ದಾಖಲಾಗಿತ್ತು. ಹಾಗೇನಾದರೂ ಅವರು ಫೈನಲ್‌ನಲ್ಲಿ ಅರ್ಧಶತಕ ಬಾರಿಸಲು ವಿಫಲರಾದಲ್ಲಿ, ಕನಿಷ್ಠ 50 ಕೂಡ ಇಲ್ಲದೆ ಮುಗಿಸಿದ ಮೊದಲ ಐಸಿಸಿ ಟೂರ್ನಿ ಎನಿಸಲಿದೆ. 

ಇನ್ನೊಂದೆಡೆ ವಿಶ್ವದ ದಿಗ್ಗಜ ಆಟಗಾರರು ವಿರಾಟ್‌ ಕೊಹ್ಲಿಯ ಕಳಪೆ ಫಾರ್ಮ್‌ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಇಂಗ್ಲೆಂಡ್‌ ತಂಡದ ಮಾಜಿ ನಾಯಕ ನಾಸಿರ್‌ ಹುಸೇನ್‌, ವಿರಾಟ್‌ ಕೊಹ್ಲಿಯನ್ನು ಫಾರ್ಮ್‌ ಬಗ್ಗೆ  ಅವಗಣನೆ ಮಾಡುವ ಅಗತ್ಯವೇ ಇಲ್ಲ. ಅವರು ಎಂಥಾ ಅಟಗಾರ ಎಂದರೆ, ಯಾವ ಕ್ಷಣದಲ್ಲಿ ಬೇಕಾದರೂ ತಂಡದ ಪಾಲಿಗೆ ನಿಂತು ದೊಡ್ಡ ಇನ್ನಿಂಗ್ಸ್‌ ಆಟಗಾರ ಎಂದು ಹೇಳಿದ್ದಾರೆ. ಆ ಮೂಲಕ ಫೈನಲ್‌ ಪಂದ್ಯಕ್ಕೂ ಮುನ್ನ ದಕ್ಷಿಣ ಆಫ್ರಿಕಾಕ್ಕೆ ಎಚ್ಚರಿಕೆ ನೀಡಿದ್ದಾರೆ.

ಇನ್ನು ಕೊಹ್ಲಿಯ ಹಿಂದಿನ 12 ಐಸಿಸಿ ಟೂರ್ನಿಗಳ ವಿವರಗಳನ್ನು ನೋಡುವುದಾದರೆ, 2009ರ ಚಾಂಪಿಯನ್ಸ್‌ ಟ್ರೋಫಿಯಲ್ಲಿ ವಿರಾಟ್‌ ಕೊಹ್ಲಿ ಆಡಿದ 2 ಇನ್ನಿಂಗ್‌ನಿಂದ 1 ಅರ್ಧಶತಕದೊಂದಿಗೆ 95 ರನ್‌ ಬಾರಿಸಿದ್ದರು. ಇದು ಅವರ ಮೊದಲ ಐಸಿಸಿ ಟೂರ್ನಿ ಆಗಿತ್ತು. 2011ರ ಏಕದಿನ ವಿಶ್ವಕಪ್‌ ಟೂರ್ನಿಯಲ್ಲಿ ಆಡಿದ 9 ಇನ್ನಿಂಗ್ಸ್‌ಗಳಲ್ಲಿ ತಲಾ ಒಂದು ಅರ್ಧಶತಕ ಹಾಗೂ ಶತಕದೊಂದಿಗೆ ಅವರು 282 ರನ್‌ ಬಾರಿಸಿದ್ದರು.

2012ರ ಟಿ20 ವಿಶ್ವಕಪ್‌ನಲ್ಲಿ ವಿರಾಟ್‌ ಕೊಹ್ಲಿ 5 ಇನ್ನಿಂಗ್ಸ್‌ ಆಡಿದ್ದರು. ಎರಡು ಅದ್ಭುತ ಅರ್ಧಶತಕದೊಂದಿಗೆ ಕಿಂಗ್‌ ಕೊಹ್ಲಿ 185 ರನ್‌ ಸಿಡಿಸಿದ್ದರು. ಇನ್ನು ಭಾರತ ಕೊನೆಯ ಬಾರಿಗೆ ಐಸಿಸಿ ಟೂರ್ನಿ ಗೆದ್ದ 2013ರ ಚಾಂಪಿಯನ್ಸ್‌ ಟ್ರೋಫಿಯಲ್ಲಿ ಆಡಿದ 5 ಇನ್ನಿಂಗ್ಸ್‌ಗಳಲ್ಲಿ 1 ಅರ್ಧಶತಕದೊಂದಿಗೆ 176 ರನ್‌ ಬಾರಿಸಿದ್ದರು. 2014ರಲ್ಲಿ ಬಾಂಗ್ಲಾದೇಶದ ಆತಿಥ್ಯದಲ್ಲಿ ನಡೆದ ಟಿ20 ವಿಶ್ವಕಪ್‌ನಲ್ಲಿ ಅಮೋಘ ಲಯದಲ್ಲಿದ್ದ ಕಿಂಗ್‌ ಕೊಹ್ಲಿ 4 ಅರ್ಧಶತಕದೊಂದಿಗೆ 319 ರನ್‌ ಬಾರಿಸಿದ್ದರು. ಆದರೆ, ಟೀಮ್‌ ಫೈನಲ್‌ನಲ್ಲಿ ಸೋಲು ಕಂಡಿತ್ತು.

2015ರ ಏಕದಿನ ವಿಶ್ವಕಪ್‌ ಕೊಹ್ಲಿ ಪಾಲಿಗೆ ಮತ್ತೊಂದು ಮಹತ್ವದ ಟೂರ್ನಿ ಆಗಿತ್ತು. 1 ಶತಕದೊಂದಿಗೆ ಆಡಿದ 8 ಇನ್ನಿಂಗ್ಸ್‌ನಿಂದ ಕೊಹ್ಲಿ 305 ರನ್‌ ಬಾರಿಸಿದ್ದರು. ಭಾರತದ ಆತಿಥ್ಯದಲ್ಲಿ ನಡೆದ 2016ರ ಟಿ20 ವೊಶ್ವಕಪ್‌ನಲ್ಲಿ 5 ಇನ್ನಿಂಗ್ಸ್‌ನಲ್ಲಿ 3 ಅರ್ಧಶತಕದೊಂದಿಗೆ 273 ರನ್ ಬಾರಿಸಿದ್ದರು. 2017ರ ಚಾಂಪಿಯನ್‌ ಟ್ರೋಫಿಯಲ್ಲಿ 5 ಇನ್ನಿಂಗ್ಸ್‌ ಆಡಿದ್ದ ಕೊಹ್ಲಿ 3 ಫಿಫ್ಟಿಯೊಂದಿಗೆ 258 ರನ್‌ ಬಾರಿಸಿದ್ದರು. 2019ರ ಏಕದಿನ ವಿಶ್ವಕಪ್‌ ಕೊಹ್ಲಿ ಬ್ಯಾಟಿಂಗ್‌ ಪ್ರಾಬಲ್ಯಕ್ಕೆ ಮತ್ತೊಮ್ಮೆ ಸಾಕ್ಷಿಯಾಗಿತ್ತು. ಆಡಿದ 9 ಇನ್ನಿಂಗ್ಸ್‌ಗಳಿಂದ 5 ಫಿಫ್ಟಿಯೊಂದಿಗೆ 443 ರನ್‌ ಬಾರಿಸಿದ್ದರಯ. 2021ರ ಟಿ20 ವಿಶ್ವಕಪ್‌ನಲ್ಲಿ 1 ಫಿಫ್ಟಿಯೊಂದಿಗೆ ಆಡಿದ 3 ಇನ್ನಿಂಗ್ಸ್‌ಗಳಲ್ಲಿ 68 ರನ್‌, 2022ರ ಟಿ20 ವಿಶ್ವಕಪ್‌ನಲ್ಲಿ 6 ಇನ್ನಿಂಗ್ಸ್‌ಗಳಲ್ಲಿ 4 ಫಿಫ್ಟಿಯೊಂದಿಗೆ 296 ರನ್‌ ಬಾರಿಸಿದ್ದರು.

ಕೊನೆಯ ಬಾರಿಗೆ ಟಿ20 ವಿಶ್ವಕಪ್ ಫೈನಲ್‌ನಲ್ಲಾದ್ರೂ ಅಬ್ಬರಿಸುತ್ತಾರಾ ವಿರಾಟ್ ಕೊಹ್ಲಿ..?

ಭಾರತ ಫೈನಲ್‌ಗೆ ಬಂದು ಸೋಲು ಕಂಡ 2023ರ ಏಕದಿನ ವಿಶ್ವಕಪ್‌ನಲ್ಲಿ 11 ಇನ್ನಿಂಗ್ಸ್‌ ಆಡಿದ ಕೊಹ್ಲಿ 3 ಶತಕ, 6 ಫಿಫ್ಟಿಯೊಂದಿಗೆ 765 ರನ್‌ ಬಾರಿಸಿ ಗಮನಸೆಳೆದಿದ್ದರು. ಹಾಲಿ ಟಿ20 ವಿಶ್ವಕಪ್‌ನಲ್ಲಿ ಕೊಹ್ಲಿ ಈವರೆಗೂ 75 ರನ್‌ ಬಾರಿಸಿದ್ದು, 6 ಇನ್ನಿಂಗ್ಸ್‌ ಆಡಿದ್ದಾರೆ. ಒಂದೇ ಒಂದು ಫಿಫ್ಟಿ ಕೂಡ ಅವರ ಬ್ಯಾಟ್‌ನಿಂದ ಬಂದಿಲ್ಲ.

Tap to resize

Latest Videos

'ನಾವು ಸೆಮೀಸ್‌ ಸೋತಿದ್ದೇ ಹೀಗಾಗಿ': ಭಾರತ ಎದುರಿನ ಸೋಲಿಗೆ ಕಾರಣ ಬಿಚ್ಚಿಟ್ಟ ಇಂಗ್ಲೆಂಡ್ ನಾಯಕ ಜೋಸ್ ಬಟ್ಲರ್..!

click me!