ಐಸಿಸಿ ಹೊಸ ಮುಖ್ಯಸ್ಥ ಆಗ್ತಾರಾ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ?

By Kannadaprabha News  |  First Published Jul 18, 2024, 1:47 PM IST

ಐಸಿಸಿ ನೂತನ ಅಧ್ಯಕ್ಷರಾಗಿ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ನೇಮಕವಾಗುವ ಸಾಧ್ಯತೆಯಿದೆ. ಈ ಕುರಿಯಾದ ಹೊಸ ಅಪ್‌ಡೇಟ್ ಇಲ್ಲಿದೆ ನೋಡಿ


ನವದೆಹಲಿ: ಬಿಸಿಸಿಐ ಕಾರ್ಯದರ್ಶಿಯಾಗಿರುವ ಜಯ್ ಶಾ ಅವರು ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ)ನ ನೂತನ ಮುಖ್ಯಸ್ಥರಾಗಿ ಆಯ್ಕೆಯಾಗುವ ಸಾಧ್ಯತೆಯಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಶುಕ್ರವಾರದಿಂದ ಕೊಲಂಬೊದಲ್ಲಿ 4 ದಿನಗಳ ಐಸಿಸಿ ವಾರ್ಷಿಕ ಮಹಾಸಭೆ ಆರಂಭ ಗೊಳ್ಳಲಿದ್ದು, ಸಭೆಯಲ್ಲಿ ನೂತನ ಮುಖ್ಯಸ್ಥರ ಆಯ್ಕೆ ಬಗ್ಗೆಯೂ ಚರ್ಚೆ ನಡೆಯಲಿದೆ ಎಂದು ಹೇಳಲಾಗುತ್ತಿದೆ. ಸಭೆಯಲ್ಲಿ ಜಯ್ ಶಾ ಕೂಡಾ ಪಾಲ್ಗೊಳ್ಳಲಿದ್ದಾರೆ.

ಸದ್ಯ ನ್ಯೂಜಿಲೆಂಡ್‌ನ ಗ್ರೆಕ್‌ ಬಾರ್ಕ್‌ಲೆ ಐಸಿಸಿ ಮುಖ್ಯಸ್ಥರಾಗಿದ್ದಾರೆ. ಅವರ ಅವಧಿ ಈ ವರ್ಷದ ಕೊನೆವರೆಗೆ ಇದೆ. ಅವರು 3ನೇ ಅವಧಿಗೆ ಅಂದರೆ 2024 ಡಿಸೆಂಬರ್‌ನಿಂದ 2026ರ ಡಿಸೆಂಬರ್ ವರೆಗೆ ಅಧಿಕಾರ ವಹಿಸುವ ಅವಕಾಶವಿದೆ. ಅತ್ತ ಜಯ್ ಶಾ ಅವರ ಬಿಸಿಸಿಐ ಕಾರ್ಯದರ್ಶಿ ಅವಧಿ 2025ರ ವರೆಗೂ ಇದೆ. ಒಂದು ವೇಳೆ ಶಾ ಬಿಸಿಸಿಐ ಕಾರ್ಯದರ್ಶಿ ಹುದ್ದೆ ತೊರೆದು ಮುಂದಿನ ವರ್ಷ ಐಸಿಸಿ ಮುಖಸ್ಥನಾಗಲು ಬಯಸಿದರೆ, ಬಾರ್ಕ್‌ 3ನೇ ಅವಧಿ ಪೂರ್ತಿಗೊಳಿಸುವ ಸಾಧ್ಯತೆ ಕಡಿಮೆ. ಬದಲಾಗಿ 2025ರಲ್ಲಿ ಜಯ್ ಶಾಗೆ ಸ್ಥಾನ ಬಿಟ್ಟುಕೊಡುವ ಸಾಧ್ಯತೆ ಯಿದೆ. ಈ ಬಗ್ಗೆ ವಾರ್ಷಿಕ ಸಭೆಯಲ್ಲಿ
ಚರ್ಚೆ ನಡೆಯಲಿದೆ ಎಂದು ತಿಳಿದುಬಂದಿದೆ.

Tap to resize

Latest Videos

ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ 117 ಭಾರತೀಯರ ಸ್ಪರ್ಧೆ

ಇದೇ ವೇಳೆ ಸಭೆಯಲ್ಲಿ ಭಾರತ ತಂಡ ಚಾಂಪಿಯನ್ಸ್ ಟ್ರೋಫಿ ಆಡಲು ಪಾಕಿಸ್ತಾನಕ್ಕೆ ತೆರಳುವ ಬಗ್ಗೆಯೂ ಚರ್ಚೆ ನಡೆಯಲಿದೆ ಎಂದು ತಿಳಿದುಬಂದಿದೆ. ಟಿ20 ವಿಶ್ವಕಪ್‌ನ ಅಮೆರಿಕ ಚರಣದ ವೇಳೆ ಐಸಿಸಿಗೆ ಉಂಟಾದ ನಷ್ಟದ ಬಗ್ಗೆಯೂ ಸಭೆಯಲ್ಲಿ ಚರ್ಚೆ ನಡೆಯಲಿದೆ.

ಶ್ರೀಲಂಕಾ ಸರಣಿಗೆ ಭಾರತ ತಂಡ ಪ್ರಕಟ ಮತ್ತಷ್ಟು ವಿಳಂಬ: ಇಂದು ಪ್ರಕಟ?

ನವದೆಹಲಿ: ಜುಲೈ 27ರಿಂದ ಆರಂಭಗೊಳ್ಳಲಿರುವ ಶ್ರೀಲಂಕಾ ವಿರುದ್ಧ ಟಿ20 ಹಾಗೂ ಏಕದಿನ ಸರಣಿಗೆ ಭಾರತ ತಂಡ ಪ್ರಕಟ ವಿಳಂಬವಾಗಿದೆ. ವರದಿಗಳ ಪ್ರಕಾರ ಬುಧವಾರ ಬಿಸಿಸಿಐ ಎರಡೂ ಸರಣಿಗೆ ತಂಡ ಘೋಷಿಸಬೇಕಿತ್ತು. ಆದರೆ ಆಯ್ಕೆ ಸಮಿತಿ ಸಭೆ ಮುಂದೂಡಿಕೆಯಾದ ಕಾರಣ ತಂಡ ಪ್ರಕಟ ವಿಳಂಬವಾಗಿದೆ ಎಂದು ಹೇಳಲಾಗುತ್ತಿದೆ.

ವರದಿಗಳ ಪ್ರಕಾರ ಬುಧವಾರ ಆಯ್ಕೆ ಸಮಿತಿ ಸದಸ್ಯರು ಹಾಗೂ ನೂತನ ಕೋಚ್‌ ಗೌತಮ್‌ ಗಂಭೀರ್‌ ತಂಡದ ಆಯ್ಕೆ ಬಗ್ಗೆ ಸಭೆ ನಡೆಸಬೇಕಿತ್ತು. ಆದರೆ ಟಿ20 ನಾಯಕತ್ವ ವಿಚಾರದಲ್ಲಿ ಒಮ್ಮತ ಮೂಡದ ಕಾರಣ ಸಭೆ ಗುರುವಾರಕ್ಕೆ ಮುಂದೂಡಿಕೆಯಾಗಿದೆ ಎಂದು ತಿಳಿದುಬಂದಿದೆ. ಗುರುವಾರ ಸಭೆ ನಡೆಸಿ, ಬಳಿಕ ತಂಡದ ಆಟಗಾರರನ್ನು ಪ್ರಕಟಿಸುವ ಸಾಧ್ಯತೆಯಿದೆ.

ಟಿ20 ನಾಯಕತ್ವಕ್ಕೆ ಸೂರ್ಯಕುಮಾರ್‌ ಯಾದವ್‌ ಹಾಗೂ ಹಾರ್ದಿಕ್‌ ಪಾಂಡ್ಯ ನಡುವೆ ಪೈಪೋಟಿ ಇದೆ. ರೋಹಿತ್‌ ಶರ್ಮಾ ಸರಣಿಗೆ ಗೈರಾದರೆ ಏಕದಿನ ನಾಯಕನಾಗಿ ಕೆ.ಎಲ್‌.ರಾಹುಲ್‌ ಆಯ್ಕೆಯಾಗುವ ನಿರೀಕ್ಷೆಯಿದೆ.

ಐಸಿಸಿ ಟಿ20 ರ್‍ಯಾಂಕಿಂಗ್‌: 6ನೇ ಸ್ಥಾನಕ್ಕೆ ಜೈಸ್ವಾಲ್‌

ದುಬೈ: ಜಿಂಬಾಬ್ವೆ ವಿರುದ್ಧ ಸರಣಿಯಲ್ಲಿ ಅಮೋಘ ಪ್ರದರ್ಶನ ನೀಡಿದ ಭಾರತದ ತಾರಾ ಬ್ಯಾಟರ್‌ ಯಶಸ್ವಿ ಜೈಸ್ವಾಲ್‌ ಐಸಿಸಿ ಟಿ20 ರ್‍ಯಾಂಕಿಂಗ್‌ನಲ್ಲಿ ಜೀವನಶ್ರೇಷ್ಠ 6ನೇ ಸ್ಥಾನಕ್ಕೇರಿದ್ದಾರೆ.

ಬುಧವಾರ ಪ್ರಕಟಗೊಂಡ ನೂತನ ರ್‍ಯಾಂಕಿಂಗ್‌ ಪಟ್ಟಿಯಲ್ಲಿ 21ರ ಜೈಸ್ವಾಲ್‌ 4 ಸ್ಥಾನ ಪ್ರಗತಿ ಸಾಧಿಸಿದ್ದಾರೆ. ಆಸ್ಟ್ರೇಲಿಯಾದ ಟ್ರ್ಯಾವಿಸ್‌ ಹೆಡ್‌ ಅಗ್ರಸ್ಥಾನದಲ್ಲಿದ್ದು, ಸೂರ್ಯಕುಮಾರ್‌ ಯಾದವ್‌ 2ನೇ ಸ್ಥಾನದಲ್ಲೇ ಮುಂದುವರಿದಿದ್ದಾರೆ. ಋತುರಾಜ್‌ ಗಾಯಕ್ವಾಡ್‌ 1 ಸ್ಥಾನ ಕುಸಿದು 8ನೇ ಸ್ಥಾನ ಪಡೆದುಕೊಂಡಿದ್ದಾರೆ. ಶುಭ್‌ಮನ್‌ ಗಿಲ್‌ ಬರೋಬ್ಬರಿ 36 ಸ್ಥಾನ ಜಿಗಿತ ಕಂಡು 37ನೇ ಸ್ಥಾನ ತಲುಪಿದ್ದಾರೆ.

ಬೌಲಿಂಗ್‌ ರ್‍ಯಾಂಕಿಂಗ್‌ನಲ್ಲಿ ಭಾರತದ ಯಾರೊಬ್ಬರೂ ಅಗ್ರ-10ರಲ್ಲಿಲ್ಲ. ಅಕ್ಷರ್‌ ಪಟೇಲ್‌ 9ರಿಂದ 13ನೇ ಸ್ಥಾನಕ್ಕೆ ಕುಸಿದಿದ್ದಾರೆ. ಕುಲ್ದೀಪ್‌ ಯಾದವ್‌ 15ನೇ ಸ್ಥಾನದಲ್ಲಿದ್ದಾರೆ. ಆಲ್ರೌಂಡರ್‌ಗಳ ಪಟ್ಟಿಯಲ್ಲಿ ಹಾರ್ದಿಕ್‌ ಪಾಂಡ್ಯ 4 ಸ್ಥಾನ ಕುಸಿದು 6ನೇ ಸ್ಥಾನ ತಲುಪಿದ್ದಾರೆ. ಅಕ್ಷರ್‌ 13ನೇ ಸ್ಥಾನಕ್ಕೆ ಕುಸಿದಿದ್ದಾರೆ.
 

click me!