ಟೀಂ ಇಂಡಿಯಾ ಹೆಡ್ ಕೋಚ್ ಗೌತಮ್ ಗಂಭೀರ್ ತಮಗೆ ಬೇಕಾದ ಸಹಾಯಕ ಸಿಬ್ಬಂದಿಗಳ ಹೆಸರನ್ನು ಬಿಸಿಸಿಐಗೆ ಶಿಫಾರಸು ಮಾಡಿತ್ತು. ಆದರೆ ಗಂಭೀರ್ ಬಹುತೇಕ ಬೇಡಿಕೆಗಳನ್ನು ಬಿಸಿಸಿಐ ರಿಜೆಕ್ಟ್ ಮಾಡಿದೆ ಎಂದು ವರದಿಯಾಗಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ
ನವದೆಹಲಿ: ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್, ಭಾರತ ಕ್ರಿಕೆಟ್ ತಂಡದ ನೂತನ ಹೆಡ್ ಕೋಚ್ ಆಗಿ ನೇಮಕವಾಗಿದ್ದಾರೆ. ಇದರ ಬೆನ್ನಲ್ಲೇ ಸಹಾಯಕ ಕೋಚ್‌ಗಳ ನೇಮಕ ಕೂಡಾ ಸರಾಗವಾಗಿ ನಡೆಯಲಿದೆ ಎಂದೇ ಭಾವಿಸಲಾಗಿತ್ತು. ಗೌತಮ್ ಗಂಭೀರ್ ಈಗಾಗಲೇ ತಮಗೆ ಬೇಕಾದ ಸಹಾಯಕ ಕೋಚ್‌ಗಳ ಹೆಸರುಗಳನ್ನು ಬಿಸಿಸಿಐಗೆ ಶಿಫಾರಸ್ಸು ಮಾಡಿದ್ದರು.
ಕೆಲ ಮಾಧ್ಯಮಗಳ ವರದಿ ಪ್ರಕಾರ, ಆರ್ ವಿನಯ್‌ಕುಮಾರ್, ಮಾರ್ನೆ ಮಾರ್ಕೆಲ್, ಅಭಿಷೇಕ್ ನಾಯರ್, ರಿಯಾನ್ ಟ್ಯಾನ್ ಡಸ್ಕೆಟ್, ಜಾಂಟಿ ರೋಡ್ಸ್ ಹಾಗೂ ಲಕ್ಷ್ಮಿಪತಿ ಬಾಲಾಜಿ ಅವರ ಹೆಸರನ್ನು ಗೌತಮ್ ಗಂಭೀರ್, ಟೀಂ ಇಂಡಿಯಾ ಸಹಾಯಕ ಕೋಚ್ ಹುದ್ದೆಗಳಿಗೆ ಶಿಫಾರಸು ಮಾಡಿದ್ದರು. ಈ ಇಷ್ಟು ಆಟಗಾರರ ಪೈಕಿ ಬಿಸಿಸಿಐ ಕೇವಲ ಒಬ್ಬ ಆಟಗಾರನ ಕುರಿತಾಗಿ ಗ್ರೀನ್ ಸಿಗ್ನಲ್ ನೀಡಿದೆ ಎಂದು ವರದಿಯಾಗಿದೆ.
Breaking: ಮಾಜಿ ಕ್ರಿಕೆಟಿಗನ ಮನೆಯಲ್ಲೇ ಶ್ರೀಲಂಕಾ ಆಟಗಾರನನ್ನು ಗುಂಡಿಕ್ಕಿ ಬರ್ಬರ ಹತ್ಯೆ..!
ಎಕಾನಮಿಕ್ ಟೈಮ್ಸ್ ವರದಿಯ ಪ್ರಕಾರ, ಗೌತಮ್ ಗಂಭೀರ್ ಮಾಡಿದ ಶಿಫಾರಸುಗಳ ಪೈಕಿ ಕೇವಲ ಒಂದನ್ನು ಬಿಟ್ಟು ಉಳಿದೆಲ್ಲಾ ಹೆಸರುಗಳನ್ನು ಬಿಸಿಸಿಐ ರಿಜೆಕ್ಟ್ ಮಾಡಿದೆ. ಕೋಲ್ಕತಾ ನೈಟ್ ರೈಡರ್ಸ್ ತಂಡದಲ್ಲಿ ಗೌತಮ್ ಗಂಭೀರ್ ಜತೆ ಸಹಾಯಕ ಕೋಚ್ ಆಗಿ ಕಾರ್ಯ ನಿರ್ವಹಿಸಿದ್ದ ಅಭಿಷೇಕ್ ನಾಯರ್ ಅವರನ್ನು ಟೀಂ ಇಂಡಿಯಾ ಬ್ಯಾಟಿಂಗ್ ಕೋಚ್ ಆಗಿ ನೇಮಿಸಿಕೊಳ್ಳಲು ಬಿಸಿಸಿಐ ಸಹಮತ ವ್ಯಕ್ತಪಡಿಸಿದೆ ಎಂದು ವರದಿಯಾಗಿದೆ. ಆದರೆ ಬಿಸಿಸಿಐ ಇದುವರೆಗೂ ಈ ಕುರಿತಂತೆ ಯಾವುದೇ ಅಧಿಕೃತ ಪ್ರಕಟಣೆ ಹೊರಡಿಸಿಲ್ಲ.
ಇನ್ನುಳಿದಂತೆ ಟೀಂ ಇಂಡಿಯಾ ಬೌಲಿಂಗ್ ಕೋಚ್ ಹಾಗೂ ಫೀಲ್ಡಿಂಗ್ ಕೋಚ್ ಕುರಿತಂತೆ ಇನ್ನು ಯಾವುದೇ ಹೆಸರು ಅಂತಿಮವಾಗಿಲ್ಲ ಎನ್ನಲಾಗುತ್ತಿದೆ. ಈ ಮೊದಲು ರವಿಶಾಸ್ತ್ರಿ ಹಾಗೂ ರಾಹುಲ್ ದ್ರಾವಿಡ್ ಟೀಂ ಇಂಡಿಯಾ ಹೆಡ್ ಕೋಚ್ ಆಗಿದ್ದ ಸಂದರ್ಭದಲ್ಲಿ ತಮಗೆ ಬೇಕಾದ ಸಹಾಯಕ ಕೋಚ್ ಆಯ್ಕೆ ಮಾಡಿಕೊಳ್ಳಲು ಮುಕ್ತ ಅವಕಾಶ ನೀಡಲಾಗಿತ್ತು. ಆದರೆ ಗೌತಮ್ ಗಂಭೀರ್ ವಿಚಾರದಲ್ಲಿ ಹಾಗಾದಂತೆ ಕಾಣಿಸುತ್ತಿಲ್ಲ.
ಟೀಂ ಇಂಡಿಯಾ ಬೌಲಿಂಗ್ ಕೋಚ್ ಆಗಿ ಮಾಜಿ ಕ್ರಿಕೆಟಿಗ ಜಹೀರ್ ಖಾನ್ ಅವರನ್ನು ನೇಮಿಸಿಕೊಳ್ಳಲು ಗೌತಮ್ ಗಂಭೀರ್‌ಗೆ ಬಿಸಿಸಿಐ ಸಲಹೆ ನೀಡಿದೆ ಎನ್ನಲಾಗುತ್ತಿದೆ. ಜಹೀರ್ ಖಾನ್ ಟೀಂ ಇಂಡಿಯಾ ಪರ 92 ಟೆಸ್ಟ್ ಪಂದ್ಯಗಳಿಂದ 311 ವಿಕೆಟ್ ಹಾಗೂ ಒಟ್ಟಾರೆ 309 ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿ 610 ವಿಕೆಟ್ ಕಬಳಿಸಿದ್ದಾರೆ. ಜಹೀರ್ ಖಾನ್ ಕ್ರಿಕೆಟ್ ಆಡುವ ಸಂದರ್ಭದಲ್ಲಿ ಭಾರತ ಕಂಡ ಶ್ರೇಷ್ಠ ಎಡಗೈ ವೇಗದ ಬೌಲರ್ ಆಗಿ ಗುರುತಿಸಿಕೊಂಡಿದ್ದರು.
ಕೊನೆಗೂ ತಪ್ಪೊಪ್ಪಿಕೊಂಡ ಕ್ರಿಕೆಟಿಗ ಅಮಿತ್ ಮಿಶ್ರಾ..!
ಈ ಮೊದಲು ರಾಹುಲ್ ದ್ರಾವಿಡ್ ಟೀಂ ಇಂಡಿಯಾ ಹೆಡ್ ಕೋಚ್ ಆಗಿದ್ದಾಗ ಪರಾಸ್ ಮಾಂಬ್ರೆ ಬೌಲಿಂಗ್ ಕೋಚ್ ಹಾಗೂ ಟಿ ದಿಲೀಪ್ ಫೀಲ್ಡಿಂಗ್ ಕೋಚ್ ಆಗಿ ಕಾರ್ಯನಿರ್ವಹಿಸಿ ಗಮನ ಸೆಳೆದಿದ್ದರು. ಕೆಲವು ವರದಿಗಳ ಪ್ರಕಾರ ಈ ಇಬ್ಬರನ್ನೇ ಮತ್ತೆ ಟೀಂ ಇಂಡಿಯಾ ಸಹಾಯಕ ಕೋಚ್ ಆಗಿ ನೇಮಕವಾಗುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.