
ಅಬುದಾಬಿ: ಐಪಿಎಲ್ ಹರಾಜು ಇತಿಹಾಸದಲ್ಲಿ ಅತಿ ಹೆಚ್ಚು ಮೊತ್ತಕ್ಕೆ ಮಾರಾಟವಾದ ವಿದೇಶಿ ಆಟಗಾರ ಎಂಬ ದಾಖಲೆಯನ್ನು ಆಸ್ಟ್ರೇಲಿಯಾದ ಆಲ್‌ರೌಂಡರ್ ಕ್ಯಾಮರೂನ್ ಗ್ರೀನ್ ಮಾಡಿದಾಗ, ಅದಕ್ಕೆ ಮುನ್ನುಡಿ ಬರೆದಿದ್ದು ಮುಂಬೈ ಇಂಡಿಯನ್ಸ್. ಎರಡು ಕೋಟಿ ಮೂಲ ಬೆಲೆ ಹೊಂದಿದ್ದ ಗ್ರೀನ್‌ಗಾಗಿ ಇತರ ತಂಡಗಳು ಪೈಪೋಟಿಗೆ ಇಳಿಯುವುದು ಖಚಿತವಾಗಿತ್ತು.
ನಿನ್ನೆ ಅಬುದಾಬಿಯಲ್ಲಿ ನಡೆದ ಐಪಿಎಲ್ ಮಿನಿ ಹರಾಜಿನಲ್ಲಿ, ಹರಾಜುಗಾರ್ತಿ ಮಲ್ಲಿಕಾ ಸಾಗರ್ ಮೊದಲ ಸೆಟ್‌ನ ಐದನೇ ಆಟಗಾರನಾಗಿ ಗ್ರೀನ್ ಹೆಸರನ್ನು ಕೂಗಿದಾಗ, ಮೊದಲು ಮೌನ ಆವರಿಸಿತ್ತು. ಮೊದಲ ಕೆಲವು ಕ್ಷಣಗಳಲ್ಲಿ ಯಾವುದೇ ಪ್ರತಿಕ್ರಿಯೆ ಇರಲಿಲ್ಲ. ಆದರೆ ಅದು ಬಿರುಗಾಳಿಯ ಮುಂಚಿನ ಶಾಂತತೆ ಎಂದು ನಂತರ ಸ್ಪಷ್ಟವಾಯಿತು. ಕೈಯಲ್ಲಿ ಕೇವಲ 2.75 ಕೋಟಿ ಇದ್ದ ಮುಂಬೈ ಇಂಡಿಯನ್ಸ್, ಗ್ರೀನ್‌ಗಾಗಿ ಎರಡು ಕೋಟಿಗೆ ಮೊದಲ ಬಿಡ್ ಮಾಡಿತ್ತು. ನಂತರ ಕೋಲ್ಕತಾ ನೈಟ್ ರೈಡರ್ಸ್ ಮತ್ತು ರಾಜಸ್ಥಾನ ರಾಯಲ್ಸ್ ತಂಡಗಳು ಗ್ರೀನ್‌ಗಾಗಿ ಸ್ಪರ್ಧೆಗೆ ಇಳಿದಾಗ ಮುಂಬೈ ಹಿಂದೆ ಸರಿಯಿತು.
ಆದರೆ, ಕೇವಲ 2.75 ಕೋಟಿ ರೂಪಾಯಿ ಕೈಯಲ್ಲಿಟ್ಟುಕೊಂಡು ಎರಡು ಕೋಟಿ ಮೂಲ ಬೆಲೆಯ ಗ್ರೀನ್‌ಗಾಗಿ ಯಾಕೆ ಪ್ರಯತ್ನಿಸಿದಿರಿ ಎಂಬ ಪ್ರಶ್ನೆಗೆ ಮುಂಬೈ ಇಂಡಿಯನ್ಸ್ ಮಾಲೀಕ ಆಕಾಶ್ ಅಂಬಾನಿ ಉತ್ತರಿಸಿದ್ದಾರೆ. ಗ್ರೀನ್ ಮೇಲಿನ ಗೌರವವನ್ನು ತೋರಿಸಲು ಸಾಂಕೇತಿಕವಾಗಿ ಬಿಡ್ ಮಾಡಿದ್ದಾಗಿ ಆಕಾಶ್ ಅಂಬಾನಿ ಕ್ರಿಕ್‌ಇನ್ಫೋಗೆ ತಿಳಿಸಿದರು. 'ನಮ್ಮ ಪರ್ಸ್‌ನಲ್ಲಿ ಕ್ಯಾಮರೂನ್ ಗ್ರೀನ್ ಸಿಗುವುದಿಲ್ಲ ಎಂದು ನಮಗೆ ತಿಳಿದಿತ್ತು. ಆದರೆ, ನಾವು ಗ್ರೀನ್‌ರನ್ನು ಗೌರವಿಸುತ್ತೇವೆ ಎಂದು ತೋರಿಸಲು ಮೊದಲ ಬಿಡ್ ಮಾಡಿದೆವು. ಯಾಕಂದ್ರೆ, ಗ್ರೀನ್ ಐಪಿಎಲ್‌ಗೆ ಪಾದಾರ್ಪಣೆ ಮಾಡಿದ್ದು ಮುಂಬೈ ಇಂಡಿಯನ್ಸ್ ಮೂಲಕ. ನಾವು ಅವರನ್ನು ಈಗಲೂ ಗೌರವಿಸುತ್ತೇವೆ. ಹಾಗಾಗಿ, ಹರಾಜಿನಲ್ಲಿ ಗ್ರೀನ್ ಹೆಸರು ಬಂದಾಗಲೆಲ್ಲಾ ನಾವು ಅವರಿಗಾಗಿ ಪ್ಯಾಡಲ್ ಎತ್ತುತ್ತೇವೆ' ಎಂದು ಆಕಾಶ್ ಅಂಬಾನಿ ಹೇಳಿದರು.
2024ರ ಐಪಿಎಲ್ ಟೂರ್ನಿಯಲ್ಲಿ ಕ್ಯಾಮರೋನ್ ಗ್ರೀನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಪ್ರತಿನಿಧಿಸಿದ್ದರು. ಆದರೆ ಫಿಟ್ನೆಸ್ ಸಮಸ್ಯೆಯಿಂದಾಗಿ ಗ್ರೀನ್ 2025ರ ಐಪಿಎಲ್ ಟೂರ್ನಿಯಲ್ಲಿ ಪಾಲ್ಗೊಂಡಿರಲಿಲ್ಲ. ಹೀಗಿದ್ದೂ 2026ರ ಐಪಿಎಲ್ ಟೂರ್ನಿಯಲ್ಲಿ ಬಹುಬೇಡಿಕೆಯ ಆಟಗಾರನಾಗಿ ಬಿಡ್ ಆಗಿದ್ದು ಎಲ್ಲರಲ್ಲೂ ಅಚ್ಚರಿ ಮೂಡಿಸಿತು. ಅದರಲ್ಲೂ ಮಿನಿ ಹರಾಜಿಗೂ ಮುನ್ನ ಕೋಲ್ಕತಾ ನೈಟ್ ರೈಡರ್ಸ್ ಫ್ರಾಂಚೈಸಿಯು ಆಂಡ್ರೆ ರಸೆಲ್ ಅವರನ್ನು ತಂಡದಿಂದ ರಿಲೀಸ್ ಮಾಡಿದ್ದರಿಂದ ಅವರಿಗೆ ಬದಲಿಯಾಗಿ ಸ್ಟಾರ್ ಆಲ್ರೌಂಡರ್ ಹುಡುಕಾಟದಲ್ಲಿತ್ತು. ಇದೇ ಕಾರಣಕ್ಕೆ ದೊಡ್ಡ ಮೊತ್ತ ನೀಡಿ ಕ್ಯಾಮರೋನ್ ಗ್ರೀನ್ ಖರೀದಿಸುವಲ್ಲಿ ಕೋಲ್ಕತಾ ನೈಟ್ ರೈಡರ್ಸ್ ಫ್ರಾಂಚೈಸಿಯು ಯಶಸ್ವಿಯಾಗಿದೆ.
ಗ್ರೀನ್ 25.20 ಕೋಟಿ ಪಡೆಯುವ ಮೂಲಕ ಐಪಿಎಲ್ ಇತಿಹಾಸದಲ್ಲೇ ಅತಿ ದುಬಾರಿ ವಿದೇಶಿ ಆಟಗಾರ ಎನಿಸಿಕೊಂಡರು. 2023ರಲ್ಲಿ ಕೋಲ್ಕತಾ ನೈಟ್ ರೈಡರ್ಸ್ ತಂಡ ಬರೋಬ್ಬರಿ 24.75 ಕೋಟಿ ರು. ನೀಡಿ ಮಿಚೆಲ್ ಸ್ಟಾರ್ಕ್‌ರನ್ನು ಖರೀದಿಸಿದ್ದು ಈವರೆಗಿನ ದಾಖಲೆ ಎನಿಸಿಕೊಂಡಿತ್ತು.
ಮಿನಿ ಹರಾಜಿನಲ್ಲಿ ಮುಂಬೈ ಇಂಡಿಯನ್ಸ್ ಖರೀದಿಸಿದ ಆಟಗಾರರ ಬಗ್ಗೆ ಆಕಾಶ್ ಅಂಬಾನಿ ತೃಪ್ತಿ ವ್ಯಕ್ತಪಡಿಸಿದರು. 19 ವರ್ಷಗಳಲ್ಲೇ ಅತಿ ಕಡಿಮೆ ಹಣದೊಂದಿಗೆ ಮುಂಬೈ ಈ ಬಾರಿ ಹರಾಜಿಗೆ ಬಂದಿತ್ತು. ತಂಡದ ಹೆಚ್ಚಿನ ಆಟಗಾರರನ್ನು ಉಳಿಸಿಕೊಂಡಿದ್ದರಿಂದ, ಮುಂಬೈ ಪರ್ಸ್‌ನಲ್ಲಿ ಕೇವಲ 2.75 ಕೋಟಿ ರೂಪಾಯಿ ಮಾತ್ರ ಉಳಿದಿತ್ತು. ಇದರ ಹೊರತಾಗಿಯೂ ಮುಂಬೈ ಇಂಡಿಯನ್ಸ್ ಫ್ರಾಂಚೈಸಿಯು ಒಂದು ಕೋಟಿ ರುಪಾಯಿ ಮೂಲ ಬೆಲೆಗೆ ದಕ್ಷಿಣ ಆಫ್ರಿಕಾ ಮೂಲದ ವಿಕೆಟ್ ಕೀಪರ್ ಬ್ಯಾಟರ್ ಕ್ವಿಂಟನ್ ಡಿ ಕಾಕ್ ಖರೀದಿಸುವಲ್ಲಿ ಯಸಸ್ವಿಯಾಯಿತು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.