
ಬೆಂಗಳೂರು: ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಈ ಬಾರಿಯ ಐಪಿಎಲ್ ಮಿನಿ ಹರಾಜಿನಲ್ಲಿ ಸಾಕಷ್ಟು ಕಮ್ಮಿ ಪರ್ಸ್‌ನೊಂದಿಗೆ ಬಂದಿತ್ತು. ಮಿನಿ ಹರಾಜಿಗೂ ಮುನ್ನ ಆರ್‌ಸಿಬಿ ಪ್ರಮುಖ ಆಟಗಾರರನ್ನು ಉಳಿಸಿಕೊಂಡಿತ್ತು. ಹೀಗಾಗಿ ಹರಾಜಿಗೆ ಕೇವಲ 16.40 ಕೋಟಿ ರುಪಾಯಿಗಳನ್ನು ಮಾತ್ರ ಉಳಿಸಿಕೊಂಡಿತ್ತು. ಇದರ ಪರಿಣಾಮ ಹರಾಜಿ ಆರಂಭದಲ್ಲೇ ಗಮನಕ್ಕೆ ಬಂದಿತು.
ಕಡಿಮೆ ಪರ್ಸ್ ಹೊರತಾಗಿಯೂ ಆರ್‌ಸಿಬಿ ಫ್ರಾಂಚೈಸಿಯು ಸಾಕಷ್ಟು ಅಳೆದು ತೂಗಿ ಕೆಲವು ಸ್ಟಾರ್ ಆಟಗಾರರನ್ನು ಖರೀದಿಸುವಲ್ಲಿ ಆರ್‌ಸಿಬಿ ಯಶಸ್ವಿಯಾಗಿದೆ. ಈ ಬಾರಿಯ ಮಿನಿ ಹರಾಜಿನಲ್ಲಿ ದೇವದತ್ ಪಡಿಕ್ಕಲ್ ಹಾಗೂ ರಜತ್ ಪಾಟೀದಾರ್‌ಗೆ ಬ್ಯಾಕ್‌ಅಪ್ ಆಟಗಾರರನ್ನು ಖರೀದಿಸುವಲ್ಲಿ ಆರ್‌ಸಿಬಿ ಫ್ರಾಂಚೈಸಿಯು ಯಶಸ್ವಿಯಾಗಿದೆ. ಈ ಬಾರಿಯ ಮಿನಿ ಹರಾಜಿನಲ್ಲಿ ಆರ್‌ಸಿಬಿ ಫ್ರಾಂಚೈಸಿಯು ಮಧ್ಯಪ್ರದೇಶದ ಆಟಗಾರರತ್ತ ಹೆಚ್ಚು ಆಸಕ್ತಿ ತೋರಿದ್ದು ವಿಶೇಷ.
ಈ ಬಾರಿಯ ಮಿನಿ ಹರಾಜಿನಲ್ಲಿ ಹಾಲಿ ಚಾಂಪಿಯನ್ ಆರ್‌ಸಿಬಿ ತಮ್ಮ ಕಡಿಮೆ ಪರ್ಸ್‌ನಲ್ಲಿ ಯಾವೆಲ್ಲಾ ಆಟಗಾರರನ್ನು ಖರೀದಿಸಲಿದೆ ಎನ್ನುವ ಕುತೂಹಲ ಜೋರಾಗಿತ್ತು. ಕಳೆದ ಐಪಿಎಲ್ ಮೆಗಾ ಹರಾಜಿನಲ್ಲಿ ಆರ್‌ಸಿಬಿ ಫ್ರಾಂಚೈಸಿ ವೆಂಕಟೇಶ್ ಅಯ್ಯರ್ ಖರೀದಿಸಲು ಕೆಕೆಆರ್ ಜತೆ ಪೈಪೋಟಿ ನಡೆಸಿ ಕೊನೆಯ ಕ್ಷಣದಲ್ಲಿ ಸುಮ್ಮನಾಗಿತ್ತು. ಕೊನೆಗೆ ವೆಂಕಿ ಅಯ್ಯರ್ ಕಳೆದ ಐಪಿಎಲ್ ಹರಾಜಿನಲ್ಲಿ 23.75 ಕೋಟಿ ರುಪಾಯಿ ನೀಡಿ ಖರೀದಿಸಿತ್ತು. ಇದೀಗ ಕೇವಲ 7 ಕೋಟಿಗೆ ವೆಂಕಿ ಅಯ್ಯರ್ ಖರೀದಿಸುವ ಮೂಲಕ ಆರ್‌ಸಿಬಿ ಫ್ರಾಂಚೈಸಿಯು ತನ್ನ ಬ್ಯಾಟಿಂಗ್ ಬಲವನ್ನು ಮತ್ತಷ್ಟು ಭದ್ರಪಡಿಸಿಕೊಂಡಿದೆ. ವೆಂಕಟೇಶ್ ಅಯ್ಯರ್ ಅವರನ್ನು ದೇವದತ್ ಪಡಿಕ್ಕಲ್ ಹಾಗೂ ರಜತ್ ಪಾಟೀದಾರ್‌ಗೆ ಬ್ಯಾಕ್‌ಅಪ್ ರೂಪದಲ್ಲಿ ಖರೀದಿಸಿದೆ ಎನ್ನಲಾಗುತ್ತಿದೆ.
ಇನ್ನುಳಿದಂತೆ ಜೋಶ್ ಹೇಜಲ್‌ವುಡ್‌ಗೆ ಬ್ಯಾಕ್‌ಅಪ್ ಆಗಿ ಕಿವೀಸ್ ಜೇಕಬ್ ಡಫಿಗೆ 2 ಕೋಟಿ ರುಪಾಯಿ ನೀಡಿ ಖರೀದಿಸಿದೆ. ಇನ್ನು ಮಧ್ಯಪ್ರದೇಶ ಮೂಲದ ಎಡಗೈ ವೇಗಿ ಮಂಗೇಶ್ ಯಾದವ್‌ಗೆ 5.20 ಕೋಟಿ ರುಪಾಯಿ ನೀಡಿ ಖರೀದಿಸಿದೆ. ಯಶ್ ದಯಾಳ್‌ಗೆ ಬ್ಯಾಕ್‌ಅಪ್ ಆಗಿ ಮಂಗೇಶ್ ಯಾದವ್ ಅವರನ್ನು ಖರೀದಿಸಿದೆ. ಇನ್ನುಳಿದಂತೆ ಭಾರತ ಅಂಡರ್-19 ಸ್ಟಾರ್‌ಗಳಾದ ಕನಿಷ್ಕ್ ಚೌಹ್ಹಾಣ್, ವಿಹಾನ್ ಮಲ್ಹೋತ್ರಾ ತಲಾ 30 ಲಕ್ಷ ರುಪಾಯಿ ನೀಡಿ ಖರೀದಿಸಿದೆ. ಇದರ ಜತೆಗೆ ಪುದುಚೆರಿ ಮೂಲದ 18 ವರ್ಷದ ಸಾತ್ವಿಕ್ ದೇಶ್ವಾಲ್, ವಿಕ್ಕಿ ಕೌಶಲ್‌ಗೆ ತಲಾ 30 ಲಕ್ಷ ರುಪಾಯಿಗೆ ಖರೀದಿಸಿದೆ. ಇನ್ನು ಇಂಗ್ಲೆಂಡ್ ಮೂಲದ ವಿಕೆಟ್ ಕೀಪರ್ ಬ್ಯಾಟರ್ ಜೋರ್ಡನ್ ಕಾಕ್ಸ್‌ಗೆ 75 ಲಕ್ಷ ರುಪಾಯಿ ನೀಡಿ ಖರೀದಿಸಿದೆ.
ರಜತ್ ಪಾಟೀದಾರ್(ನಾಯಕ), ವಿರಾಟ್ ಕೊಹ್ಲಿ, ದೇವದತ್ ಪಡಿಕ್ಕಲ್, ಫಿಲ್ ಸಾಲ್ಟ್, ಜಿತೇಶ್ ಶರ್ಮಾ(ವಿಕೆಟ್ ಕೀಪರ್), ಕೃನಾಲ್ ಪಾಂಡ್ಯ, ಸ್ವಪ್ನಿಲ್ ಸಿಂಗ್, ಟಿಮ್ ಡೇವಿಡ್, ರೊಮ್ಯಾರಿಯೋ ಶಫರ್ಡ್, ಜೆಕಬ್ ಬೆಥೆಲ್, ಜೋಶ್ ಹೇಜಲ್‌ವುಡ್, ಯಶ್ ದಯಾಳ್, ಭುವನೇಶ್ವರ್ ಕುಮಾರ್, ನುವಾನ್ ತುಷಾರ, ರಸಿಕ್ ಧರ್, ಅಭಿನಂದನ್ ಸಿಂಗ್, ಸುಯಾಶ್ ಶರ್ಮಾ, ವೆಂಕಟೇಶ್ ಅಯ್ಯರ್, ಮಂಗೇಶ್ ಯಾದವ್, ಜೋರ್ಡನ್ ಕಾಕ್ಸ್, ಸಾತ್ವಿಕ್ ದೇಶ್ವಾಲ್, ವಿಹಾನ್ ಮಲ್ಹೋತ್ರಾ, ವಿಕ್ಕಿ ಕೌಶಲ್, ಕನಿಷ್ಕ್ ಚೌಹ್ಹಾಣ್.
ಈ ತಂಡವನ್ನು ಇಟ್ಟುಕೊಂಡು ಆರ್‌ಸಿಬಿ ತಂಡವು 19ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಮತ್ತೊಂದು ಐಪಿಎಲ್ ಟ್ರೋಫಿ ಜಯಿಸುತ್ತಾ ಎನ್ನುವುದನ್ನು ಕಾದು ನೋಡಬೇಕಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.