
ಗುವಾಹಟಿ: ಮಳೆ ಬಾಧಿತ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಅಬ್ಬರಿಸಿದ ರಾಜಸ್ಥಾನ ರಾಯಲ್ಸ್ ತಂಡ 27 ರನ್‌ಗಳಿಂದ ಗೆಲುವು ಸಾಧಿಸಿ ಅಂಕಪಟ್ಟಿಯಲ್ಲಿ ಮತ್ತೆ ಅಗ್ರಸ್ಥಾನಕ್ಕೇರಿದೆ. ತಂಡ ಹ್ಯಾಟ್ರಿಕ್ ಗೆಲುವು ಸಾಧಿಸಿದರೆ, ಮುಂಬೈ ಸತತ 2ನೇ ಪಂದ್ಯದಲ್ಲೂ ಪರಾಭವಗೊಂಡಿತು.
ಮೊದಲು ಬ್ಯಾಟ್ ಮಾಡಿದ ರಾಜಸ್ಥಾನ 11 ಓವರ್‌ಗಳಲ್ಲಿ 3 ವಿಕೆಟ್‌ಗೆ 150 ರನ್ ಗಳಿಸಿತು. ಆರಂಭಿಕ ಜೋಡಿ ಯಶಸ್ವಿ ಜೈಸ್ವಾಲ್-ವೈಭವ್ ಸೂರ್ಯವಂಶಿ ಕೇವಲ 4.6 ಓವರ್‌ಗಳಲ್ಲಿ 80 ರನ್ ಜೊತೆಯಾಟವಾಡಿ ಭದ್ರಬುನಾದಿ ಹಾಕಿಕೊಟ್ಟಿತು. ವೈಭವ್ ಕೇವಲ 14 ಎಸೆತಗಳಲ್ಲಿ 39 ರನ್ ಸಿಡಿಸಿ ಔಟಾದರೆ, ಕೊನೆವರೆಗೂ ಅಬ್ಬರಿಸಿದ ಜೈಸ್ವಾಲ್ 32 ಎಸೆತಕ್ಕೆ ಔಟಾಗದೆ 77 ರನ್ ಚಚ್ಚಿದರು. ನಾಯಕ ರಿಯಾನ್ ಪರಾಗ್ 20 ರನ್ ಕೊಡುಗೆ ನೀಡಿದರು.
ದೊಡ್ಡ ಗುರಿ ಬೆನ್ನತ್ತಿದ ಮುಂಬೈ 11 ಓವರ್‌ನಲ್ಲಿ 9 ವಿಕೆಟ್‌ಗೆ 123 ರನ್ ಗಳಿಸಿ ಸೋಲೊಪ್ಪಿಕೊಂಡಿತು. 2.3 ಓವರ್‌ಗಳಲ್ಲೇ ಪ್ರಮುಖ 3 ವಿಕೆಟ್ ಕಳೆದುಕೊಂಡ ತಂಡ ಬಳಿಕ ಚೇತರಿಸಿಕೊಳ್ಳಲೇ ಇಲ್ಲ. ರೋಹಿತ್(5), ರಿಕೆಲ್ಟನ್(8), ಸೂರ್ಯಕುಮಾರ್(6), ಹಾರ್ದಿಕ್(9) ವೈಫಲ್ಯ ತಂಡವನ್ನು ಸೋಲಿನತ್ತ ನೂಕಿತು.
ಸ್ಕೋರ್: ರಾಜಸ್ಥಾನ 11 ಓವರ್‌ನಲ್ಲಿ 150/3 (ಜೈಸ್ವಾಲ್ 77, ವೈಭವ್ 39, ಘಜಾನ್‌ಫರ್ 2-21), ಮುಂಬೈ 11 ಓವರ್‌ನಲ್ಲಿ 123/9 (ನಮನ್ 25, ಬರ್ಗರ್: 21/2 ಬಿಷ್ಣೋಯ್ 25/2 )
ಪಂದ್ಯಶ್ರೇಷ್ಠ: ಯಶಸ್ವಿ ಜೈಸ್ವಾಲ್
ಭಾರೀ ಮಳೆಯಿಂದಾಗಿ ಪಂದ್ಯ ಬರೋಬ್ಬರಿ 2 ಗಂಟೆ, 40 ನಿಮಿಷ ತಡವಾಗಿ ಆರಂಭವಾಯಿತು. ನಿಗದಿತ ಸಮಯ 7:30ಕ್ಕೆ ಆರಂಭಗೊಳ್ಳಬೇಕಿದ್ದ ಮಳೆ ಕಾರಣದಿಂದ ಪಂದ್ಯ ರಾತ್ರಿ 10:10ಕ್ಕೆ ಶುರುವಾಯಿತು. ತಲಾ 11 ಓವರ್ ಪಂದ್ಯ ಆಡಿಸಲಾಯಿತು.
ರಾಜಸ್ಥಾನ ಕೇವಲ 2.4 ಓವರ್‌ಗಳಲ್ಲೇ ಅರ್ಧಶತಕ ಪೂರ್ಣಗೊಳಿಸಿದ್ದು, ಐಪಿಎಲ್ ಇತಿಹಾಸದಲ್ಲೇ 2ನೇ ಅತಿ ವೇಗದ ಫಿಫ್ಟಿ ಎನಿಸಿಕೊಂಡಿದೆ. 2011ರಲ್ಲಿ ಕೊಚ್ಚಿ ಟಸ್ಕರ್ಸ್ ಕೇರಳ ವಿರುದ್ಧ ಆರ್‌ಸಿಬಿ 2.3 ಓವರ್‌ಗಳಲ್ಲೇ ಅರ್ಧಶತಕ ಗಳಿಸಿದ್ದು ಈಗಲೂ ದಾಖಲೆ. 2023ರಲ್ಲಿ ಕೆಕೆಆರ್ ವಿರುದ್ಧ ರಾಜಸ್ಥಾನ 2.4 ಓವರ್‌ಗಳಲ್ಲಿ 50 ರನ್ ಪೂರ್ಣಗೊಳಿಸಿತ್ತು. ಈಗ ಮತ್ತೊಮ್ಮೆ ಅದೇ ಸಾಧನೆ ಮಾಡಿದೆ.
ಪಂದ್ಯದಲ್ಲಿ ಬುಮ್ರಾ ಎಸೆತವನ್ನು 15 ವರ್ಷದ ವೈಭವ್ ಹೇಗೆ ಎದುರಿಸಲಿದ್ದಾರೆ ಎಂಬ ಕುತೂಹಲವಿತ್ತು. ಆದರೆ ಬುಮ್ರಾರ ಮೊದಲ ಎಸೆತವನ್ನೇ ಸಿಕ್ಸರ್‌ಗೆ ಅಟ್ಟುವ ಮೂಲಕ ವೈಭವ್ ಎಲ್ಲರ ಗಮನ ಸೆಳೆದರು. ಬಳಿಕ ಆ ಓವರ್‌ನ 4 ಎಸೆತದಲ್ಲೂ ವೈಭವ್ ಸಿಕ್ಸರ್ ಸಿಡಿಸಿದರು. ಸ್ಟಾರ್ ಕ್ರಿಕೆಟಿಗರಾದ ಟ್ರ್ಯಾವಿಸ್ ಹೆಡ್, ನಿಕೋಲಸ್ ಪೂರನ್, ಅಭಿಷೇಕ್ ಶರ್ಮಾ, ಶುಭ್‌ಮನ್ ಗಿಲ್ ಐಪಿಎಲ್‌ನಲ್ಲಿ ಇದುವರೆಗೂ ಬುಮ್ರಾ ಎದುರು ಸಿಕ್ಸರ್ ಸಿಡಿಸಿಲ್ಲ. ಆದರೆ ವೈಭವ್ ತಾವೆದುರಿಸಿದ ಬುಮ್ರಾ ಮೊದಲ ಎಸೆತವನ್ನೇ ಸಿಕ್ಸರ್‌ಗಟ್ಟಿ ತಾನು ಯಾರಿಗೂ ಹೆದರೊಲ್ಲ ಎನ್ನುವ ಸ್ಪಷ್ಟ ಸಂದೇಶವನ್ನು ರವಾನಿಸಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.