ಐಪಿಎಲ್ ಆಡಲು ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಬೋರ್ಡ್ (ECB) ಜೊತೆ ನಾನು ನಡೆಸಿದ ಹೋರಾಟದಿಂದಾಗಿಯೇ ನನ್ನ ಅಂತರರಾಷ್ಟ್ರೀಯ ಕೆರಿಯರ್ ಬೇಗ ಮುಗಿದುಹೋಯ್ತು ಎಂದು ಇಂಗ್ಲೆಂಡ್ ತಂಡದ ಮಾಜಿ ನಾಯಕ ಕೆವಿನ್ ಪೀಟರ್ಸನ್ ಹೇಳಿದ್ದಾರೆ. ಫ್ರಾಂಚೈಸಿ ಕ್ರಿಕೆಟ್‌ಗೆ ತಾವು ಪ್ರಾಮುಖ್ಯತೆ ನೀಡಿದ್ದಕ್ಕೆ ಆಗ ಸಾಕಷ್ಟು ವಿರೋಧ ವ್ಯಕ್ತವಾಗಿತ್ತು. ಆದರೆ, ತಮ್ಮ ಆ ನಿಲುವಿನಿಂದಾಗಿ ನಂತರದ ಆಟಗಾರರಿಗೆ ಅಂತರರಾಷ್ಟ್ರೀಯ ಪಂದ್ಯಗಳ ಜೊತೆಗೆ ಟಿ20 ಲೀಗ್‌ಗಳನ್ನೂ ಆಡಲು ದಾರಿ ಸುಗಮವಾಯಿತು ಎಂದೂ ಅವರು ತಿಳಿಸಿದ್ದಾರೆ.
ಈ ಬಗ್ಗೆ ವಿವರಿಸಿದ ಪೀಟರ್ಸನ್, ಐಪಿಎಲ್ ಆಡಲು ನಾನು ದೊಡ್ಡ ತ್ಯಾಗವನ್ನೇ ಮಾಡಬೇಕಾಯ್ತು, ನನ್ನ ಕೆರಿಯರ್ ಅನ್ನೇ ಕಳೆದುಕೊಂಡೆ. ನಿಜ ಹೇಳಬೇಕೆಂದರೆ, ನಾನು 150-160 ಟೆಸ್ಟ್ ಪಂದ್ಯಗಳನ್ನು ಆಡಬೇಕಿತ್ತು. ಆಗ ನಾನು 12,000 ದಿಂದ 13,000 ರನ್ ಗಳಿಸಬಹುದಿತ್ತು, ಎಂದಿದ್ದಾರೆ. 'ಕ್ರಿಕೆಟ್ ಅಧಿಕಾರಿಗಳು ನನ್ನ ವಿರುದ್ಧ ತಿರುಗಿಬೀಳಲು ಇದೊಂದೇ ಕಾರಣವಾಗಿತ್ತು' ಎಂದು ಅವರು ಸೇರಿಸಿದರು. ಪೀಟರ್ಸನ್ ತಮ್ಮ 33ನೇ ವಯಸ್ಸಿನಲ್ಲಿ, 104 ಟೆಸ್ಟ್ ಪಂದ್ಯಗಳನ್ನು ಆಡಿ 8,181 ರನ್ ಗಳಿಸಿದ್ದಾಗ ಅವರ ಕೆರಿಯರ್ ಅಂತ್ಯಗೊಂಡಿತ್ತು.
2009ರ ಐಪಿಎಲ್ ಎರಡನೇ ಸೀಸನ್‌ನಲ್ಲಿ ಇಂಗ್ಲೆಂಡ್ ಆಟಗಾರರಿಗೆ ಕೇವಲ ಮೂರು ವಾರಗಳ ಕಾಲ ಆಡಲು ಮಾತ್ರ ಅವಕಾಶ ನೀಡಲಾಗಿತ್ತು. ಆದರೆ, ಆಗಿನ ಕೋಚ್ ಪೀಟರ್ ಮೂರ್ಸ್ ಜೊತೆಗಿನ ಜಗಳ ಮತ್ತು ರಾಷ್ಟ್ರೀಯ ತಂಡಕ್ಕಿಂತ ಐಪಿಎಲ್‌ಗೆ ಹೆಚ್ಚು ಆದ್ಯತೆ ನೀಡಿದ ಪೀಟರ್ಸನ್ ನಿರ್ಧಾರ, ಬೋರ್ಡ್ ಜೊತೆಗಿನ ಸಂಬಂಧವನ್ನು ಹಾಳುಮಾಡಿತು. ‘ಇಸಿಬಿ ನನ್ನನ್ನು ಟಾರ್ಗೆಟ್ ಮಾಡಲು ಮಾಧ್ಯಮಗಳನ್ನು ಬಳಸಿಕೊಂಡಿತು’ ಎಂದು ಪೀಟರ್ಸನ್ ಆರೋಪಿಸಿದ್ದಾರೆ.
ಐಪಿಎಲ್‌ನಲ್ಲಿ ಅವರು ರಾಯಲ್ ಚಾಲೆಂಜರ್ಸ್ ಬೆಂಗಳೂರು, ಡೆಲ್ಲಿ ಡೇರ್‌ಡೆವಿಲ್ಸ್ ಮತ್ತು ರೈಸಿಂಗ್ ಪುಣೆ ಸೂಪರ್‌ಜೈಂಟ್ಸ್ ತಂಡಗಳ ಪರ ಆಡಿದ್ದಾರೆ. ಇದೀಗ 2025ರ ಸೀಸನ್‌ಗೆ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಪೀಟರ್ಸನ್‌ರನ್ನು ಮೆಂಟರ್ ಆಗಿ ನೇಮಿಸಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.