IPL 2026 ನಿನ್ನೆ ನಡೆದ ಲಖನೌ-ಕೆಕೆಆರ್ ನಡುವಿನ ಸೂಪರ್ ಓವರ್ ಮ್ಯಾಚ್ ಗೆದ್ದಿದ್ದು ಯಾರು?

Kannadaprabha News   | Kannada Prabha
Published : Apr 27, 2026, 08:08 AM IST
LSG vs KKR Match Result

ಸಾರಾಂಶ

ಲಖನೌ ವಿರುದ್ಧದ ಐಪಿಎಲ್ ಪಂದ್ಯದಲ್ಲಿ ಕೋಲ್ಕತಾ ನೈಟ್ ರೈಡರ್ಸ್ ಸೂಪರ್ ಓವರ್‌ನಲ್ಲಿ ರೋಚಕ ಗೆಲುವು ಸಾಧಿಸಿತು. ರಿಂಕು ಸಿಂಗ್ ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಪಂದ್ಯ ಟೈ ಆದ ನಂತರ, ಕೆಕೆಆರ್ ಸೂಪರ್ ಓವರ್‌ನಲ್ಲಿ ಸುಲಭವಾಗಿ ಜಯಭೇರಿ ಬಾರಿಸಿತು.

ಲಖನೌ: ಭಾನುವಾರ ಲಖನೌ ವಿರುದ್ಧ ಐಪಿಎಲ್‌ ಪಂದ್ಯದಲ್ಲಿ ಕೋಲ್ಕತಾ ಸೂಪರ್‌ ಓವರ್‌ನಲ್ಲಿ ಗೆಲುವು ಸಾಧಿಸಿದೆ. ಕೆಕೆಆರ್‌ 8ರಲ್ಲಿ 2ನೇ ಗೆಲುವು ಸಾಧಿಸಿದರೆ, ಲಖನೌ ಸತತ 5ನೇ ಸೋಲು ಅನುಭವಿಸಿತು.

ಮೊದಲು ಬ್ಯಾಟ್‌ ಮಾಡಿದ ಕೋಲ್ಕತಾ 7 ವಿಕೆಟ್‌ಗೆ 155 ರನ್‌ ಕಲೆಹಾಕಿತು. 18 ಓವರ್‌ಗೆ 112 ರನ್‌ ಗಳಿಸಿದ್ದ ತಂಡ ಕೊನೆ 2 ಓವರ್‌ನಲ್ಲಿ ಅಬ್ಬರಿಸಿತು. ರಿಂಕು ಸಿಂಗ್‌(51 ಎಸೆತಗಳಲ್ಲಿ ಔಟಾಗದೆ 83) ಕೊನೆ ಓವರ್‌ನಲ್ಲಿ ದಿಗ್ವೇಶ್‌ರ ಸತತ 4 ಎಸೆತಗಳಲ್ಲಿ ಸಿಕ್ಸರ್‌ ಬಾರಿಸಿ ತಂಡಕ್ಕೆ ಆಸರೆಯಾದರು. ಮೊಹ್ಸಿನ್‌ ಖಾನ್‌ 23 ರನ್‌ ನೀಡಿ 5 ವಿಕೆಟ್‌ ಕಿತ್ತರು.

ಪಂದ್ಯ ಟೈ ಮಾಡಿಕೊಂಡ ಎಲ್‌ಎಸ್‌ಜಿ

ಸ್ಪರ್ಧಾತ್ಮಕ ಗುರಿ ಪಡೆದರೂ ಬ್ಯಾಟಿಂಗ್‌ ವೈಫಲ್ಯ ಅನುಭವಿಸಿದ ಲಖನೌ 8 ವಿಕೆಟ್‌ಗೆ 155 ರನ್‌ ಗಳಿಸಿ ಪಂದ್ಯ ಟೈ ಮಾಡಿಕೊಂಡಿತು. ರಿಷಭ್‌ 42, ಮಾರ್ಕ್‌ರಮ್‌ 31 ರನ್‌ ಗಳಿಸಿದರು. ಕೊನೆ ಓವರ್‌ಗೆ 17 ರನ್‌ ಬೇಕಿದ್ದಾಗಿ ಕಾರ್ತಿಕ್‌ ತ್ಯಾಗಿ 2 ಬೀಮರ್‌ ನೋಬಾಲ್‌ ಎಸೆದರು. ಬಳಿಕ ಅನುಕೂಲ್‌ ರಾಯ್ ಓವರ್‌ ಮುಂದುವರಿಸಿದರು. ಕೊನೆ ಎಸೆತಕ್ಕೆ 7 ರನ್‌ ಬೇಕಿದ್ದಾಗ ಶಮಿ ಸಿಕ್ಸರ್‌ ಸಿಡಿಸಿ ಪಂದ್ಯ ಟೈ ಮಾಡಿಕೊಂಡರು.

ಸೂಪರ್‌ ಓವರ್‌ನಲ್ಲಿ ಮೊದಲು ಬ್ಯಾಟ್‌ ಮಾಡಿದ ಲಖನೌ 3 ಎಸೆತದಲ್ಲಿ ಕೇವಲ 1 ರನ್‌ ಗಳಿಸಿ 2 ವಿಕೆಟ್‌(ಆಲೌಟ್‌) ಕಳೆದುಕೊಂಡಿತು. 2 ರನ್‌ ಗುರಿ ಪಡೆದ ಕೆಕೆಆರ್‌ಗೆ ರಿಂಕು ಮೊದಲ ಎಸೆತದಲ್ಲೇ ಗೆಲುವು ತಂದುಕೊಟ್ಟರು.

ರಬಾಡ, ಸುದರ್ಶನ್‌ ಮಿಂಚು: ಗುಜರಾತ್‌ಗೆ 8 ವಿಕೆಟ್‌ ಜಯ

ಚೆನ್ನೈ: ಈ ಬಾರಿ ಐಪಿಎಲ್‌ನಲ್ಲಿ ಚೆನ್ನೈ ತಂಡ 5ನೇ ಸೋಲನುಭವಿಸಿದೆ. ಭಾನುವಾರ ಸಿಎಸ್‌ಕೆ ವಿರುದ್ಧ ಗುಜರಾತ್‌ ಟೈಟಾನ್ಸ್‌ 8 ವಿಕೆಟ್‌ ಅಂತರದಲ್ಲಿ ಗೆದ್ದಿತು. 8ರಲ್ಲಿ 4ನೇ ಗೆಲುವು ಸಾಧಿಸಿದ ಗುಜರಾತ್‌, ಅಂಕಪಟ್ಟಿಯಲ್ಲಿ 5ನೇ ಸ್ಥಾನಕ್ಕೇರಿತು.

ಮೊದಲು ಬ್ಯಾಟ್ ಮಾಡಿದ ಸಿಎಸ್‌ಕೆ 7 ವಿಕೆಟ್‌ ನಷ್ಟದಲ್ಲಿ ಕಲೆಹಾಕಿದ್ದು 158 ರನ್‌. ಪವರ್‌-ಪ್ಲೇನಲ್ಲೇ 3 ವಿಕೆಟ್‌ ಕಳೆದುಕೊಂಡ ತಂಡ, 12 ಓವರ್‌ಗಳಲ್ಲಿ 4 ವಿಕೆಟ್‌ಗೆ 51 ರನ್‌ ಗಳಿಸಿತ್ತು. 49 ಎಸೆತಗಳಲ್ಲಿ 50 ರನ್‌ ಬಾರಿಸಿ, ಈ ಬಾರಿ ಐಪಿಎಲ್‌ನ ಅತ್ಯಂತ ನಿಧಾನಗತಿ ಅರ್ಧಶತಕ ಸಿಡಿಸಿದ ಋತುರಾಜ್‌ ಗಾಯಕ್ವಾಡ್ ಒಟ್ಟು 60 ಎಸೆತಗಳಲ್ಲಿ ಔಟಾಗದೆ 74 ರನ್‌ ಗಳಿಸಿದರು. ರಬಾಡ 25 ರನ್‌ಗೆ 3 ವಿಕೆಟ್‌ ಕಿತ್ತರು.

ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ಗುಜರಾತ್‌ 16.4 ಓವರ್‌ಗಳಲ್ಲಿ 2 ವಿಕೆಟ್‌ ನಷ್ಟದಲ್ಲಿ ಗೆಲುವು ತನ್ನದಾಗಿಸಿಕೊಂಡಿತು. ಶುಭ್‌ಮನ್‌ ಗಿಲ್‌(33) ಔಟಾದ ಬಳಿಕ ಜೋಸ್‌ ಬಟ್ಲರ್‌ ಹಾಗೂ ಸಾಯಿ ಸುದರ್ಶನ್ 2ನೇ ವಿಕೆಟ್‌ಗೆ 97 ರನ್‌ ಸೇರಿಸಿದರು. ಸುದರ್ಶನ್‌ 46 ಎಸೆತಕ್ಕೆ 87 ರನ್‌ ಸಿಡಿಸಿದರೆ, ಬಟ್ಲರ್ ಔಟಾಗದೆ 39 ರನ್‌ ಗಳಿಸಿದರು.

ಸ್ಕೋರ್‌: ಸಿಎಸ್‌ಕೆ 20 ಓವರ್‌ಗಳಲ್ಲಿ 158/7 (ಋತುರಾಜ್‌ ಔಟಾಗದೆ 74, ದುಬೆ 22, ರಬಾಡ 3-25, ಅರ್ಶದ್‌ 2-43), ಗುಜರಾತ್‌ 16.4 ಓವರ್‌ಗಳಲ್ಲಿ 162/2 (ಸುದರ್ಶನ್‌ 87, ಬಟ್ಲರ್‌ ಔಟಾಗದೆ 39, ನೂರ್‌ 1-29)

ಪಂದ್ಯಶ್ರೇಷ್ಠ: ಕಗಿಸೊ ರಬಾಡ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಬೆಂಗಳೂರು RCB ಮ್ಯಾಚ್‌; ಅನುಷ್ಕಾ ಶರ್ಮಾ ಧರಿಸಿದ್ದ ವಾಚ್‌ ಬೆಲೆಗೆ, VIP ಗ್ಯಾಲರಿಯ 53 ಟಿಕೆಟ್‌ ಬರುತ್ತೆ!
ಐಪಿಎಲ್‌ನಲ್ಲಿ ಒಂದೇ ಓವರ್‌ನಲ್ಲಿ 6 ಬೌಂಡರಿ ಬಾರಿಸಿದ ಟಾಪ್-3 ಬ್ಯಾಟರ್‌ಗಳಿವರು! ಮೊದಲು ಬಾರಿಸಿದ್ದು ಯಾರು?