
ಬೆಂಗಳೂರು (ಜು.2): ಆತ ಸಾಮಾನ್ಯ ಕ್ರಿಕೆಟಿಗನಾಗಿರಲಿಲ್ಲ. ಸ್ಪುರದ್ರೂಪಿ. ಟೀಮ್ ಇಂಡಿಯಾ ಆಡಿದ್ದ ಇತಿಹಾಸದ ಮೊಟ್ಟಮೊದಲ ಟಿ20 ಅಂತಾರಾಷ್ಟ್ರೀಯ ಪಂದ್ಯದಲ್ಲಿ ಆಡಿದ್ದ ಆಟಗಾರ. ತಮ್ಮ ಕ್ರಿಕೆಟ್ ಜೀವನದಲ್ಲಿ ಅವರು ಆಡಿದ್ದ ಟಿ20 ಅಂತಾರಾಷ್ಟ್ರೀಯ ಪಂದ್ಯ ಅದೊಂದೆ. ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಭಾರತ ಗೆದ್ದರೂ ಈ ಪ್ಲೇಯರ್ ಪಂದ್ಯದಲ್ಲಿ 45 ಎಸೆತಗಳಲ್ಲಿ 38 ರನ್ ಬಾರಿಸಿದ್ದರು. ಆ ಬಳಿಕ ಅವರು ಎಲ್ಲೂ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಕಾಣಿಸಿಕೊಳ್ಳಲಿಲ್ಲ. ಹೊಸ ತಲೆಮಾರಿನ ಪ್ಲೇಯರ್‌ಗಳಿಗೆ ಟೀಮ್ ಇಂಡಿಯಾ ಬಾಗಿಲು ತೆಗೆಯುತ್ತಿದ್ದಂತೆ, ಟೀಮ್ ಇಂಡಿಯಾದಲ್ಲಿ ಧೋನಿ ಯುಗ ಆರಂಭವಾಗುತ್ತಿದ್ದಂತೆ ಈ ಪ್ಲೇಯರ್ ತೆರೆಮರೆಗೆ ಸರಿದು ಹೋದರು. ಟೀಮ್ ಇಂಡಿಯಾಕ್ಕೆ ಆಡಲು ಮತ್ತೆ ಅವಕಾಶ ಬರಬಹುದು ಎನ್ನುತ್ತಾ ಕಾಯುತ್ತಲೇ 2019ರಲ್ಲಿ ಎಲ್ಲಾ ಮಾದರಿಯ ಕ್ರಿಕೆಟ್‌ಗೆ ನಿವೃತ್ತಿ ಹೇಳಿದರು.
ಇಷ್ಟೆಲ್ಲಾ ಹೇಳುತ್ತಿದ್ದ ಹಾಗೆ ಈ ಆಟಗಾರ ಯಾರು ಅನ್ನೋದರ ಸಣ್ಣ ಸೂಚನೆ ಸಿಕ್ಕಿರಬಹುದು. ಹೌದು. ಮೇಲಿನ ಚಿತ್ರದಲ್ಲಿರುವ ಪ್ಲೇಯರ್ ದಿನೇಶ್ ಮೋಂಗಿಯಾ. 2002ರಲ್ಲಿ ಭಾರತ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಜಂಟಿ ಚಾಂಪಿಯನ್ ಆದಾಗ ಅವರು ತಂಡದ ಭಾಗವಾಗಿದ್ದರು. ಅದಲ್ಲದೆ, 2003ರ ಏಕದಿನ ವಿಶ್ವಕಪ್‌ನಲ್ಲಿ ಭಾರತ ರನ್ನರ್‌ಅಪ್ ಆಗಿದ್ದಾಗ ಆ ಟೀಮ್‌ನಲ್ಲೂ ದಿನೇಶ್ ಮೋಂಗಿಯಾ ಇದ್ದರು. ಅವರ ವೃತ್ತಿಜೀವನದ ಹೈಲೈಟ್ ಆಗುವ ಅಂಶ ಇವೆರಡು ಮಾತ್ರ.
2019ರಲ್ಲಿ ಎಲ್ಲಾ ಮಾದರಿಯ ಕ್ರಿಕೆಟ್‌ಗೆ ನಿವೃತ್ತಿ ಹೇಳಿದ ಬಳಿಕ 2021ರಲ್ಲಿ ಸಣ್ಣ ಮಟ್ಟಿಗೆ ರಾಜಕೀಯದಲ್ಲೂ ಅದೃಷ್ಟ ಪರೀಕ್ಷೆಗೆ ಇಳಿದಿದ್ದರು. 2022ರ ಪಂಜಾಬ್ ಚುನಾವಣೆಗೂ ಮುನ್ನ ಅವರು ಬಿಜೆಪಿ ಸೇರಿ ರಾಜಕಾರಣದ ಪರೀಕ್ಷೆಗೆ ಇಳಿದಿದ್ದರು. ಇಂದಿಗೂ ಕೂಡ ಅವರು ಬಿಜೆಪಿಯ ಜೊತೆ ಸಂಬಂಧ ಹೊಂದಿದ್ದಾರೆ. ಪ್ರಸ್ತುತ ದಿನೇಶ್ ಮೋಂಗಿಯಾ ಹೊಸ ತಲೆಮಾರಿನ ಕ್ರಿಕೆಟಿಗರಿಗೆ ತರಬೇತಿ ನೀಡುವ ಕೆಲಸ ಮಾಡುತ್ತಿದ್ದಾರೆ. ಚಂಡೀಗಢ ಪಂಜಾಬ್ ವಲಯದಲ್ಲಿರುವ ಸೆಕ್ಟರ್ 87ನ ಏಸ್ ಕ್ರಿಕೆಟ್ ಮೈದಾನದಲ್ಲಿ ಮೋಂಗಿಯಾ ಸ್ಕೂಲ್ ಆಫ್ ಕ್ರಿಕೆಟ್ ಎಕ್ಸಲೆನ್ಸ್‌ನಲ್ಲಿ ಕೋಚಿಂಗ್ ಕೆಲಸ ಮಾಡುತ್ತಿದ್ದಾರೆ.
ನಿವೃತ್ತಿಯ ಬಳಿಕ ಅರುಣಾಚಲ ಪ್ರದೇಶ, ಒಡಿಶಾ ಹಾಗೂ ಗೋವಾ ಕ್ರಿಕೆಟ್ ಟೀಮ್‌ನ ಮುಖ್ಯ ಕೋಚ್ ಆಗಿ ಕೆಲಸ ಮಾಡಿದ್ದರು. ಅದಲ್ಲದೆ, ತಮ್ಮದೇ ಹೆಸರಿನ ಕ್ರಿಕೆಟ್ ಕಿಟ್ ಬ್ರ್ಯಾಂಡ್‌ಅನ್ನೂ ದಿನೇಶ್ ಮೋಂಗಿಯಾ ಹೊಂದಿದ್ದಾರೆ. ಅದಲ್ಲದೆ, ತಮ್ಮ ಅಕಾಡೆಮಿಯಲ್ಲಿ ಹಾಗೂ ಆನ್‌ಲೈನ್‌ನಲ್ಲಿ DM ಹೆಸರಿನ ಕಿಟ್ ಬ್ರ್ಯಾಂಡ್‌ಅನ್ನು ಮಾರಾಟ ಮಾಡುತ್ತಿದ್ದಾರೆ.
ಐಪಿಎಲ್ ಬರೋದಕ್ಕಿಂತ ಮುಂಚೆ ಭಾರತೀಯ ಕ್ರಿಕೆಟ್ ಅಭಿಮಾನಿಗಳ ಗಮನಸೆಳೆದಿದ್ದ ಇಂಡಿಯನ್ ಕ್ರಿಕೆಟ್ ಲೀಗ್ ಎಂದರೆ ಐಸಿಎಲ್‌ನಲ್ಲಿ ಚಂಡೀಗಢ ಲಯನ್ಸ್ ತಂಡವನ್ನು ಪ್ರತಿನಿಧಿಸಿದ್ದರು. ಆದರೆ, 2008ರ ಅಕ್ಟೋಬರ್‌ನಲ್ಲಿ ಈ ಲೀಗ್‌ಅನ್ನು ಬ್ಯಾನ್ ಮಾಡಿದಾಗ ದಿನೇಶ್ ಮೋಂಗಿಯಾ ಕೂಡ ಸಸ್ಪೆಂಡ್ ಆಗಿದ್ದರು. ಅದಾದ ಬಳಿಕ, ಬಿಸಿಸಿಐ ಐಸಿಎಲ್‌ನಲ್ಲಿ ಆಡಿದ ಆಟಗಾರರಿಗೆ ವಿನಾಯಿತಿ ನೀಡಿತಾದರೂ ದಿನೇಶ್ ಮೋಂಗಿಯಾ ಐಪಿಎಲ್‌ನಲ್ಲಾಗಲಿ, ಐಪಿಎಲ್ ಬ್ರಾಡ್‌ಕಾಸ್ಟಿಂಗ್ ಟೀಮ್‌ನಲ್ಲಾಗಲಿ ಕಾಣಿಸಿಕೊಳ್ಳಲಿಲ್ಲ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.