ಪಂದ್ಯವಾಡಿಸಿ ಹಣ ಸಂಗ್ರಹಿಸುವ ಅವಶ್ಯಕತೆ ಭಾರತಕ್ಕಿಲ್ಲ; ಅಕ್ತರ್‌ಗೆ ಕಪಿಲ್ ದೇವ್ ತಿರುಗೇಟು!

By Suvarna News  |  First Published Apr 9, 2020, 9:08 PM IST

ಕೊರೋನಾ ವೈರಸ್ ಹರಡದಂತೆ ತಡೆಯಲು ಸಾಮಾಜಿಕ ಅಂತರ ಒಂದೇ ಮಾರ್ಗ. ಹೀಗಿರುವಾಗ ಪಾಕಿಸ್ತಾನ ಮಾಜಿ ಕ್ರಿಕೆಟಿಗ ಶೋಯೆಬ್ ಅಕ್ತರ್ ಭಾರತ -ಪಾಕಿಸ್ತಾನ ದ್ವಿಪಕ್ಷೀಯ ಸರಣಿ ಪ್ಲಾನ್ ಮಂದಿಟ್ಟಿದ್ದರು. ಈ ಮೂಲಕ ಕೊರೋನಾ ವೈರಸ್ ಹೋರಾಟಕ್ಕೆ ಹಣ ಸಂಗ್ರಹಿಸಲು ಬಿಸಿಸಿಐ ಮುಂದಾಗಬೇಕು ಎಂದಿದ್ದರು. ಇದೀಗ ಅಕ್ತರ್ ಹೇಳಿಕೆಗೆ ಟೀಂ ಇಂಡಿಯಾ ಮಾಜಿ ನಾಯಕ ಕಪಿಲ್ ದೇವ್ ತಿರುಗೇಟು ನೀಡಿದ್ದಾರೆ.


ದೆಹಲಿ(ಏ.09): ಕೊರೋನಾ ವೈರಸ್‌ಗೆ ಭಾರತಕ್ಕಿಂತ ಪಾಕಿಸ್ತಾನ ಹೆಚ್ಚು ನಲುಗಿ ಹೋಗಿದೆ. ಪಾಕಿಸ್ತಾನದಲ್ಲಿ ಸೂಕ್ತ ಚಿಕಿತ್ಸೆ, ಆಸ್ಪತ್ರೆ, ಸೌಲಭ್ಯ ಜೊತೆಗೆ ಆರ್ಥಿಕ ಪರಿಸ್ಥಿತಿಯೂ ನೆಟ್ಟಗಿಲ್ಲ. ಇದರ ಬೆನ್ನಲ್ಲೇ ಪಾಕಿಸ್ತಾನ ಮಾಜಿ ಕ್ರಿಕೆಟಿಗ ಶೋಯೆಬ್ ಅಕ್ತರ್ ಕೊರೋನಾ ವೈರಸ್ ವಿರುದ್ಧದ ಹೋರಾಟಕ್ಕೆ ಹಣ ಸಂಗ್ರಹಿಸಲು ಭಾರತ ಹಾಗೂ ಪಾಕಿಸ್ತಾನ 3 ಪಂದ್ಯಗಳ ಏಕದಿನ ಸರಣಿ ಆಯೋಜಿಸಬೇಕು ಎಂದಿದ್ದರು. ಇದೀಗ ಅಕ್ತರ್ ಹೇಳಿಕೆಗೆ ವಿಶ್ವಕಪ್ ವಿಜೇತ ನಾಯಕ, ಭಾರತ ತಂಡದ ಮಾಜಿ ಕ್ರಿಕೆಟಿಗ ಕಪಿಲ್ ದೇವ್ ತಿರುಗೇಟು ನೀಡಿದ್ದಾರೆ.

ಕೊರೋನಾ ವಿರುದ್ಧದ ಹೋರಾಟಕ್ಕೆ ಧುಮುಕಿದ ಸನ್‌ರೈಸರ್ಸ್; ಶಹಬ್ಬಾಸ್ ಎಂದ ನಾಯಕ ವಾರ್ನರ್!.

Latest Videos

undefined

ಕೊರೋನಾ ವೈರಸ್ ಹರಡುತ್ತಿರುವ ಈ ಸಂದರ್ಭದಲ್ಲಿ ಭಾರತ ಪಾಕಿಸ್ತಾನ ಪಂದ್ಯವಾಡಿಸುವುದು ಮತ್ತಷ್ಟು ಅಪಾಯ. ಇದರಿಂದ ಆಟಗಾರರು ಅಪಾಯದಲ್ಲಿ ಸಿಲುಕಲಿದ್ದಾರೆ. ಇನ್ನು ಪಂದ್ಯ ಆಡಿಸಿ ಹಣ ಸಂಗ್ರಹಿಸುವ ಅವಶ್ಯಕತೆ ಭಾರತಕ್ಕಿಲ್ಲ. ಕೊರೋನಾ ವೈರಸ್ ವಿರುದ್ಧದ ಹೋರಾಟಕ್ಕೆ ಭಾರತ ಆರ್ಥಿಕವಾಗಿ ಸದೃಢವಾಗಿದೆ ಎಂದು ಕಪಿಲ್ ದೇವ್ ಹೇಳಿದ್ದಾರೆ.

ಸದ್ಯ ಭಾರತೀಯರು ಕೇಂದ್ರ ಸರ್ಕಾರ ಕೈಗೊಳ್ಳುವ ನಿರ್ಧಾರಕ್ಕೆ ಬದ್ಧರಾಗಿದ್ದಾರೆ. ಇದೀಗ ಸಂಘಟಿತ ಹೋರಾಟದಿಂದ ಮಾತ್ರ ಕೊರೋನಾ ವೈರಸ್ ತೊಲಗಿಸಲು ಸಾಧ್ಯ. ಸದ್ಯ ಬಿಸಿಸಿಐ ಕ್ರಿಕೆಟ್ ಕುರಿತು ಯಾವುದೇ ಆಲೋಚನ ಮಾಡುತ್ತಿಲ್ಲ. ಮೊದಲು ಆರೋಗ್ಯ ಮುಖ್ಯ. ತುರ್ತು ಪರಿಸ್ಥಿತಿಯಲ್ಲಿ ಅಸಂಬದ್ದ ಹೇಳಿಕೆಗಳಿಂದ ಜನರಲ್ಲಿ ಗೊಂದಲ ಮೂಡಿಸುವುದು ಸರಿಯಲ್ಲ ಎಂದು ಕಪಿಲ್ ದೇವ್ ಹೇಳಿದ್ದಾರೆ.

ಕೊರೋನಾ ವೈರಸ್ ವಿರುದ್ಧದ ಹೋರಾಟಕ್ಕೆ ಬಿಸಿಸಿಐ 51 ಕೋಟಿ ರೂಪಾಯಿ ದೇಣಿಗೆ ನೀಡಿದೆ. ಸಚಿನ್ ತೆಂಡುಲ್ಕರ್, ಸುರೇಶ್ ರೈನಾ ಸೇರಿದಂತೆ ಬಹುತೇಕ ಕ್ರಿಕೆಟಿಗರು ಪ್ರಧಾನಿ ಪರಿಹಾರ ನಿಧಿಗೆ ದೇಣಿಗೆ ನೀಡಿದ್ದಾರೆ. 

click me!