
ವಿಶಾಖಪಟ್ಟಣಂ(ಫೆ.02): ಮೊದಲ ಪಂದ್ಯದ ಸೋಲಿನಿಂದ ಆತ್ಮವಿಶ್ವಾಸ ಕಳೆದುಕೊಂಡಂತಿರುವ ಟೀಂ ಇಂಡಿಯಾ, ಶುಕ್ರವಾರದಿಂದ ವಿಶಾಖಪಟ್ಟಣಂ ಕ್ರೀಡಾಂಗಣದಲ್ಲಿ ಆರಂಭಗೊಳ್ಳಲಿರುವ ಇಂಗ್ಲೆಂಡ್ ವಿರುದ್ಧದ 2ನೇ ಟೆಸ್ಟ್ ಪಂದ್ಯದಲ್ಲಿ ಕಣಕ್ಕಿಳಿಯಲಿದೆ. ಮೊದಲ ಪಂದ್ಯದ ಸೋಲಿಗೆ ಸೇಡು ತೀರಿಸಿ ಸರಣಿ ಸಮಬಲಗೊಳಿಸಲು ಭಾರತ ಕಾಯುತ್ತಿದ್ದರೆ, ಇಂಗ್ಲೆಂಡ್ ಮತ್ತೊಂದು ಜಯದ ಮೂಲಕ 2-0 ಮುನ್ನಡೆಯ ಕಾತರದಲ್ಲಿದೆ.
ಕೆ.ಎಲ್.ರಾಹುಲ್, ರವೀಂದ್ರ ಜಡೇಜಾ ಗೈರಾಗಲಿರುವ ಕಾರಣ ಈ ಪಂದ್ಯದಲ್ಲಿ ಭಾರತ ಆಯ್ಕೆ ಗೊಂದಲದಲ್ಲಿದೆ. ಸರ್ಫರಾಜ್ ಖಾನ್, ರಜತ್ ಪಾಟೀದಾರ್ ಪಾದಾರ್ಪಣೆ ನಿರೀಕ್ಷೆಯಲ್ಲಿದ್ದಾರೆ. ವಿಶಾಖಪಟ್ಟಣಂ ಪಿಚ್ ಸ್ಪಿನ್ನರ್‌ಗಳಿಗೆ ಹೆಚ್ಚಿನ ನೆರವು ನೀಡುವುದಾದರೆ ಬೌಲಿಂಗ್ ವಿಭಾಗದಲ್ಲೂ ಬದಲಾವಣೆ ನಿರೀಕ್ಷಿಸಬಹುದು. ಶುಭ್‌ಮನ್ ಗಿಲ್, ಶ್ರೇಯಸ್ ಅಯ್ಯರ್ ಕಳಪೆ ಲಯದಲ್ಲಿದ್ದು, ತಂಡದಲ್ಲಿ ಸ್ಥಾನ ಗಟ್ಟಿಗೊಳಿಸಬೇಕಿದ್ದರೆ ಈ ಪಂದ್ಯದಲ್ಲಿ ದೊಡ್ಡ ಮೊತ್ತ ಗಳಿಸುವ ಅನಿವಾರ್ಯತೆ ಇದೆ.
ವೈಜಾಗ್‌ನಲ್ಲಿ ಭಾರತ vs ಇಂಗ್ಲೆಂಡ್ ಎರಡನೇ ಟೆಸ್ಟ್‌ಗೆ ಕ್ಷಣಗಣನೆ..!
ಆಡಿರುವ ಎರಡೂ ಪಂದ್ಯ ಗೆದ್ದಿರುವ ಟೀಂ ಇಂಡಿಯಾ
ಭಾರತ ವಿಶಾಖಪಟ್ಟಣಂ ಕ್ರೀಡಾಂಗಣದಲ್ಲಿ 2 ಟೆಸ್ಟ್ ಪಂದ್ಯಗಳನ್ನಾಡಿದ್ದು, ಎರಡರಲ್ಲೂ ಗೆಲುವು ಸಾಧಿಸಿದೆ. 2016ರಲ್ಲಿ ಇಂಗ್ಲೆಂಡ್ ವಿರುದ್ಧ ನಡೆದ ಪಂದ್ಯದಲ್ಲಿ ಟೀಂ ಇಂಡಿಯಾ 246 ರನ್‌ಗಳ ಬೃಹತ್ ಜಯ ದಾಖಲಿಸಿತ್ತು. ಬಳಿಕ ದಕ್ಷಿಣ ಆಫ್ರಿಕಾ ವಿರುದ್ಧ 2019ರಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ಭಾರತ 203 ರನ್‌ಗಳಿಂದ ಗೆದ್ದು ಬೀಗಿತ್ತು.
ಇಂಗ್ಲೆಂಡ್ ತಂಡಕ್ಕೆ ವೇಗಿ ಆಂಡರ್‌ಸನ್
2ನೇ ಪಂದ್ಯಕ್ಕೆ ಇಂಗ್ಲೆಂಡ್ ಆಡುವ 11ರ ಬಳಗ ಪ್ರಕಟಗೊಂಡಿದ್ದು, ಅನುಭವಿ ಜೇಮ್ಸ್ ಆ್ಯಂಡರ್‌ಸನ್ ತಂಡಕ್ಕೆ ಮರಳಿದ್ದಾರೆ. ಮಾರ್ಕ್ ವುಡ್ ಈ ಪಂದ್ಯದಿಂದ ಹೊರಗುಳಿಯಲಿದ್ದಾರೆ. ಗಾಯದ ಕಾರಣಕ್ಕೆ ಜ್ಯಾಕ್ ಲೀಚ್ ಗೈರಾಗಲಿದ್ದು, ಶೋಯೆಬ್ ಬಶೀರ್ ಪಾದಾರ್ಪಣೆ ಮಾಡಲಿದ್ದಾರೆ. ಉಳಿದಂತೆ ಮೊದಲ ಪಂದ್ಯದಲ್ಲಿ ಆಡಿದ ತಂಡವನ್ನೇ ಉಳಿಸಿಕೊಳ್ಳಲಾಗಿದೆ.
ವೈಜಾಗ್ ಟೆಸ್ಟ್ ಪಂದ್ಯಕ್ಕೆ ಬಲಾಢ್ಯ ಇಂಗ್ಲೆಂಡ್ ತಂಡ ಪ್ರಕಟ; ಎರಡು ಮಹತ್ವದ ಬದಲಾವಣೆ..!
ಸಂಭವನೀಯ ಆಟಗಾರರ ಪಟ್ಟಿ
ಭಾರತ: ರೋಹಿತ್ ಶರ್ಮಾ(ನಾಯಕ), ಯಶಸ್ವಿ ಜೈಸ್ವಾಲ್, ಶುಭ್‌ಮನ್ ಗಿಲ್, ಶ್ರೇಯಸ್ ಅಯ್ಯರ್, ರಜತ್ ಪಾಟೀದಾರ್/ಸರ್ಫರಾಜ್ ಖಾನ್, ಕೆ ಎಸ್ ಭರತ್, ವಾಷಿಂಗ್ಟನ್ ಸುಂದರ್, ಅಕ್ಷರ್ ಪಟೇಲ್, ರವಿಚಂದ್ರನ್ ಅಶ್ವಿನ್, ಜಸ್ಪ್ರೀತ್ ಬುಮ್ರಾ, ಕುಲ್ದೀಪ್ ಯಾದವ್.
ಎರಡನೇ ಟೆಸ್ಟ್‌ಗೆ ಇಂಗ್ಲೆಂಡ್ ತಂಡ ಹೀಗಿದೆ
ಜಾಕ್ ಕ್ರಾಲಿ, ಬೆನ್ ಡಕೆಟ್, ಓಲಿ ಪೋಪ್, ಜೋ ರೂಟ್, ಜಾನಿ ಬೇರ್‌ಸ್ಟೋವ್, ಬೆನ್ ಸ್ಟೋಕ್ಸ್(ನಾಯಕ), ಬೆನ್ ಫೋಕ್ಸ್, ರೆಹನ್ ಅಹಮ್ಮದ್, ಟಾಮ್ ಹಾರ್ಟ್ಲಿ, ಶೋಯೆಬ್ ಬಷೀರ್, ಜೇಮ್ಸ್ ಆಂಡರ್‌ಸನ್.
ಪಂದ್ಯ: ಬೆಳಗ್ಗೆ 9.30ಕ್ಕೆ
ನೇರಪ್ರಸಾರ: ಸ್ಪೋರ್ಟ್ಸ್ 18, ಜಿಯೋ ಸಿನಿಮಾ
ಪಿಚ್ ರಿಪೋರ್ಟ್
ವಿಶಾಖಪಟ್ಟಣಂ ಕ್ರೀಡಾಂಗಣದ ಪಿಚ್ ಬ್ಯಾಟಿಂಗ್ ಸ್ನೇಹಿಯಾಗಿದ್ದು, ದೊಡ್ಡ ಮೊತ್ತ ಹರಿದು ಬರುವ ನಿರೀಕ್ಷೆಯಿದೆ. ಇಲ್ಲಿ ಸ್ಪಿನ್ನರ್‌ಗಳು ಕೂಡಾ ಹೆಚ್ಚಿನ ಪ್ರಾಬಲ್ಯ ಸಾಧಿಸಿದ ಉದಾಹರಣೆ ಇದೆ. ಪಂದ್ಯ ಸಾಗಿದಂತೆ ಪಿಚ್ ಹೆಚ್ಚಿನ ತಿರುವು ಪಡೆಯಲಿರುವ ಕಾರಣ ಸ್ಪಿನ್ನರ್‌ಗಳ ಪ್ರದರ್ಶನ ನಿರ್ಣಾಯಕ ಎನಿಸಿಕೊಳ್ಳಬಹುದು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.