
ಕೋಲ್ಕತ್ತಾ (ನ.10): ನ್ಯೂಜಿಲೆಂಡ್ ತಂಡ ಬೆಂಗಳೂರಿನಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ಶ್ರೀಲಂಕಾ ತಂಡವನ್ನು ದೊಡ್ಡ ಅಂತರದಲ್ಲಿ ಸೋಲಿಸಿರುವ ಕಾರಣ ಪಾಕಿಸ್ತಾನ ತಂಡ ಏಕದಿನ ವಿಶ್ವಕಪ್ ಟೂರ್ನಿಯಿಂದ ಬಹುತೇಕವಾಗಿ ಹೊರಬಿದ್ದಿದೆ. ಪಾಕಿಸ್ತಾನ ತಂಡ ನಾಕೌಟ್‌ಗೇರುವ ಚಾನ್ಸ್‌ಗಳು ಕ್ಷೀಣವಾದ ಬಳಿಕ, ಟೀಮ್ ಇಂಡಿಯಾ ಮಾಜಿ ಆರಂಭಿಕ ಬ್ಯಾಟ್ಸ್‌ಮನ್ ವೀರೇಂದ್ರ ಸೆಹ್ವಾಗ್ ಕಿಚಾಯಿಸಿ ಟ್ವೀಟ್ ಮಾಡಿದ್ದರು. ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಟ್ರೋಲ್ ಟ್ವೀಟ್‌ಗಳಿಗೆ ಹೆಸರುವಾಸಿಯಾಗಿರುವ ವೀರೇಂದ್ರ ಸೆಹ್ವಾಗ್, ಬಾಬರ್ ಅಜಮ್ ನೇತೃತ್ವದ ಟೀಮ್‌ಅನ್ನು ಕಿಚಾಯಿಸಿ ಮಾಡಿರುವ ಪೋಸ್ಟ್ ಸಖತ್ ವೈರಲ್ ಆಗಿದೆ. ಆದರೆ, ಸೆಹ್ವಾಗ್ ಅವರ ಟ್ವೀಟ್‌ಗೆ ಪಾಕಿಸ್ತಾನದ ಕ್ರಿಕೆಟ್ ಅಭಿಮಾನಿಗಳು ಹಾಗೂ ಪತ್ರಕರ್ತರು ಉರಿದುಬಿದ್ದಿದ್ದಾರೆ. ಭಾರತದಲ್ಲಿ ಮುಸ್ಲಿಮರು ಸೇಫ್ ಅಲ್ಲ ಎನ್ನುವುದನ್ನು ಇದು ತೋರಿಸುತ್ತದೆ ಎಂದು ಪಾಕಿಸ್ತಾನದ ಪ್ರಖ್ಯಾತ ನಿರೂಪಕ ವಜಹತ್ ಕಜ್ಮಿ ತಮ್ಮ ಟ್ವೀಟ್‌ನಲ್ಲಿ ಬರೆದಿದ್ದಾರೆ.
ಪಾಕಿಸ್ತಾನ ತಂಡ ಶನಿವಾರ ಈಡನ್ ಗಾರ್ಡನ್ಸ್‌ನಲ್ಲಿ ನಡೆಯಲಿರುವ ತನ್ನ ಅಂತಿಮ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಇಂಗ್ಲೆಂಡ್ ತಂಡವನ್ನು ಎದುರಿಸಲಿದೆ. ಪೇಪರ್ ಮೇಲೆ ಪಾಕಿಸ್ತಾನ ಸೆಮಿಫೈನಲ್‌ಗೇರುವ ಚಾನ್ಸ್‌ಗಳಿದ್ದರೂ, ಅದು ಅಸಾಧ್ಯವಾದ ಮಾತಾಗಿದೆ. ಇಂಗ್ಲೆಂಡ್‌ಅನ್ನು ದೊಡ್ಡ ಅಂತರದಲ್ಲಿ ಸೋಲಿಸಬೇಕಿರುವ ಪಾಕಿಸ್ತಾನ ತಂಡ ಹಾಗೇನಾದರೂ ಚೇಸಿಂಗ್ ಮಾಡುತ್ತಿದ್ದಲ್ಲಿ ಅಸಾಧ್ಯವಾದ ಚೇಸಿಂಗ್ ಮಾಡಬೇಕಿದೆ. 'ಬೈ ಬೈ ಪಾಕಿಸ್ತಾನ' ಎನ್ನುವ ಎಡಿಟೆಡ್ ಚಿತ್ರವನ್ನು ಸೆಹ್ವಾಗ್ ಹಂಚಿಕೊಂಡಿದ್ದರು. ಅದರೊಂದಿಗೆ 'ಪಾಕಿಸ್ತಾನ್ ಜಿಂದಾಭಾಗ್, ವಾಪಾಸ್ ಮನೆಗೆ ನೆಮ್ಮದಿಯಿಂದ ಹೋಗಿ..!' ಎಂದು ಅದರ ಜೊತೆ ಬರೆದುಕೊಂಡಿದ್ದರು. ಬಳಿಕ ಮತ್ತೊಂದು ಟ್ವೀಟ್ ಮಾಡಿರುವ ಸೆಹ್ವಾಗ್, 'ಪಾಕಿಸ್ತಾನದ ವಿಶೇಷತೆ ಏನೆಂದರೆ, ಪಾಕಿಸ್ತಾನ ಯಾವ ಟೀಮ್‌ಗೆ ಸಪೋರ್ಟ್ ಮಾಡುತ್ತದೆಯೋ, ಆ ತಂಡ ಪಾಕಿಸ್ತಾನದ ರೀತಿಯಲ್ಲಿಯೇ ಆಡಲು ಶುರು ಮಾಡುತ್ತದೆ. ಸಾರಿ ಶ್ರೀಲಂಕಾ' ಎಂದು ಕಿಚಾಯಿಸಿದ್ದಾರೆ.
ಇನ್ನು ಇನ್ಸ್‌ಟಾಗ್ರಾಮ್‌ನಲ್ಲೂ ಇದೇ ರೀತಿಯ ಪೋಸ್ಟ್‌ಅನ್ನು ಸೆಹ್ವಾಗ್ ಮಾಡಿದ್ದಾರೆ. 'ಪಾಕಿಸ್ತಾನ್ ಜಿಂದಾಭಾಗ್, ಪಾಕ್ ತಂಡಕ್ಕೆಎಷ್ಟು ಶಕ್ತಿ ಇತ್ತೋ ಅದು ಇಲ್ಲಿಯವರೆಗೆ ಬಂದಿದೆ. ಭಾರತದಲ್ಲಿ ನೀವು ಬಿರಿಯಾನಿ ಹಾಗೂ ನಮ್ಮ ಆತಿಥ್ಯವನ್ನು ಎಂಜಾಯ್ ಮಾಡಿದ್ದೀರಿ ಎಂದುಕೊಳ್ಳುತ್ತೇನೆ. ಪಾಕಿಸ್ತಾನಕ್ಕೆ ಸುರಕ್ಷಿತವಾಗಿ ತೆರಳಿ. ಬೈ ಬೈ ಪಾಕಿಸ್ತಾನ' ಎಂದು ಬರೆದಿದ್ದಾರೆ
ಆದರೆ, ಸೆಹ್ವಾಗ್ ಅವರ ಟ್ವೀಟ್ ಪಾಕಿಸ್ತಾನದ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಈ ಬಗ್ಗೆ ಬರೆದುಕೊಂಡಿರುವ ವಜಹತ್, 'ಅಸಹ್ಯಕರ! ಭಾರತದ ಮಾಜಿ ಅಂತರಾಷ್ಟ್ರೀಯ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್, ಪಾಕಿಸ್ತಾನ ತಂಡದ ಆಟಗಾರರಿಗೆ ಭಾರತದಿಂದ ಜೀವಂತವಾಗಿ ತಪ್ಪಿಸಿಕೊಂಡು ಹೋಗುವಂತೆ ಬೆದರಿಕೆ ಹಾಕುತ್ತಿದ್ದಾರೆ. ಪಾಕಿಸ್ತಾನ ಕ್ರಿಕೆಟ್ ತಂಡದ ಸುರಕ್ಷತೆಗಾಗಿ ಐಸಿಸಿ ಮತ್ತು ವಿದೇಶಾಂಗ ಕಚೇರಿ ತಕ್ಷಣದ ಸೂಚನೆ ನೀಡಬೇಕು. ಮುಸ್ಲಿಮರಿಗೆ ಭಾರತ ಎಷ್ಟು ಅಸುರಕ್ಷಿತವಾಗಿದೆ ಎನ್ನುವುದನ್ನು ಇದು ತೋರಿಸುತ್ತದೆ' ಎಂದು ಅವರು ಬರೆದಿದ್ದಾರೆ.
ಬೆಂಗಳೂರಿನಲ್ಲಿ ಅಜ್ಜಿಯಿಂದ ದೃಷ್ಟಿ ತೆಗಿಸಿಕೊಂಡು ಜೈ ಶ್ರೀರಾಮ್ ಎಂದ ರಚಿನ್ ರವೀಂದ್ರ..! ವಿಡಿಯೋ ವೈರಲ್
ಶನಿವಾರ ಇಂಗ್ಲೆಂಡ್ ವಿರುದ್ಧ ಪಾಕಿಸ್ತಾನ ಮೊದಲು ಬ್ಯಾಟಿಂಗ್ ಮಾಡಬೇಕಿರುವುದು ಮಾತ್ರವಲ್ಲ ಕನಿಷ್ಠ 287 ರನ್‌ಗಳಿಂದ ಗೆದ್ದರೆ ಮಾತ್ರವೇ ಮುಂದಿನ ಹಂತಕ್ಕೆ ಹೋಗಬಹುದು. ಹಾಗೇನಾದರೂ ಪಾಕಿಸ್ತಾನ 300 ರನ್ ಬಾರಿಸಿದರೆ, ಇಂಗ್ಲೆಂಡ್‌ಅನ್ನು 13 ರನ್‌ಗೆ ಆಲೌಟ್ ಮಾಡಬೇಕು. ಆದರೆ, ಹಾಗೇನಾದರೂ ಮೊದಲು ಪಾಕಿಸ್ತಾನ ತಂಡ ಬೌಲಿಂಗ್ ಮಾಡಿದರೆ ತಂಡದ ಚಾನ್ಸ್ ಇನ್ನಷ್ಟು ಕಡಿಮೆ ಆಗುತ್ತದೆ. ಅದಕ್ಕೆ ಕಾರಣ ಪಾಕ್ ಟೀಮ್ ಇಂಗ್ಲೆಂಡ್‌ಅನ್ನು 100 ರನ್‌ಗೆ ಆಲೌಟ್ ಮಾಡಿದರೆ, ಇದನ್ನು ಕೇವಲ 17 ಎಸೆತಗಳಲ್ಲಿ ತಂಡ ಚೇಸ್ ಮಾಡಬೇಕಿದೆ.
ಶ್ರೀಲಂಕಾ ವಿರುದ್ಧ 160 ಎಸೆತಗಳು ಬಾಕಿ ಇರುವಂತೆಯೇ ನ್ಯೂಜಿಲೆಂಡ್‌ನ ಐದು ವಿಕೆಟ್‌ಗಳ ಜಯವು ಅವರ ನೆಟ್ ರನ್ ರೇಟ್‌ಅನ್ನು (NRR) +0.743 ಕ್ಕೆ ಹೆಚ್ಚಿಸಿದೆ ಮತ್ತು ICC ಪುರುಷರ ಕ್ರಿಕೆಟ್ ವಿಶ್ವಕಪ್ 2023 ರಲ್ಲಿ ಸೆಮಿ-ಫೈನಲ್ ಸ್ಥಾನವನ್ನು ಬಹುತೇಕ ಖಚಿತಪಡಿಸಿದೆ.
ಶ್ರೀಲಂಕಾ ವಿರುದ ಗೆದ್ದ ನ್ಯೂಜಿಲೆಂಡ್, ಪಾಕಿಸ್ತಾನದ ಸೆಮೀಸ್ ದಾರಿ ಬಹುತೇಕ ಬಂದ್!
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.