
ಬೆಂಗಳೂರು: ತಮ್ಮ ವಿಸ್ಪೋಟಕ ಬ್ಯಾಟಿಂಗ್ ಮೂಲಕವೇ ಎದುರಾಳಿ ಬೌಲರ್‌ಗಳ ಎದೆಯಲ್ಲಿ ನಡುಕ ಹುಟ್ಟಿಸಿದ್ದ ವಿರೇಂದ್ರ ಸೆಹ್ವಾಗ್ ಅವರನ್ನು ಯಾವ ಕ್ರಿಕೆಟ್ ಅಭಿಮಾನಿಯೂ ಮರೆಯಲು ಸಾಧ್ಯವಿಲ್ಲ. ಇದೀಗ ಸೆಹ್ವಾಗ್ ಪುತ್ರ ಆರ್ಯವೀರ್ ಸೆಹ್ವಾಗ್, ಅಂಡರ್-19 ಕ್ರಿಕೆಟ್‌ನಲ್ಲಿ ಭಾರತ ಪರ ಪಾದಾರ್ಪಣೆ ಮಾಡಿ ಗಮನ ಸೆಳೆಯುತ್ತಿದ್ದಾರೆ. ಆಸ್ಟ್ರೇಲಿಯಾ ಅಂಡರ್-19 ತಂಡದ ವಿರುದ್ದ ಆರ್ಯವೀರ್ ಸೆಹ್ವಾಗ್ ಮೂರು ಪಂದ್ಯಗಳನ್ನಾಡಿ ಭಾರತ ಅಂಡರ್-19 ತಂಡವು 3-0 ಅಂತರದಲ್ಲಿ ಕ್ಲೀನ್ ಸ್ವೀಪ್ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಮೂರು ಪಂದ್ಯಗಳಿಂದ ಆರ್ಯವೀರ್ ಸೆಹ್ವಾಗ್ 109 ರನ್ ಸಿಡಿಸಿ ಗಮನ ಸೆಳೆದಿದ್ದಾರೆ. ಇದರ ಬೆನ್ನಲ್ಲೇ ತಮ್ಮ ಮಗ ಆರ್ಯವೀರ್‌ಗೆ, ವಿರೇಂದ್ರ ಸೆಹ್ವಾಗ್ ಅಚ್ಚರಿಯ ಕಿವಿಮಾತು ಹೇಳಿದ್ದಾರೆ.
ಎನ್‌ಡಿಟಿವಿ ಜತೆಗಿನ ಸಂದರ್ಶನ ವೇಳೆಯಲ್ಲಿ ವಿರೇಂದ್ರ ಸೆಹ್ವಾಗ್, ತಮ್ಮ ಮಗನ ಕ್ರಿಕೆಟ್ ಜರ್ನಿಯ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ. 'ತಮ್ಮ ಮಗನ ಕ್ರಿಕೆಟ್ ಪಯಣದ ಬಗ್ಗೆ ನನಗೆ ನಿಜಕ್ಕೂ ಹೆಮ್ಮೆಯಿದೆ. ಖಂಡಿತವಾಗಿಯೂ ನಿನ್ನ ಮೇಲೆ ಒತ್ತಡವಿದೆ ಎಂದು ನನಗೆ ಗೊತ್ತಿದೆ. ಆದರೆ ನೀನು ಆ ಒತ್ತಡವನ್ನು ಬದಿಗಿಟ್ಟು, ಮೈದಾನಕ್ಕಿಳಿದು ಮುಕ್ತವಾಗಿ ನಿನ್ನಿಷ್ಟದಂತೆ ಆಡು. ದೊಡ್ಡ ಸ್ಕೋರ್ ಬಂದಿಲ್ಲವೆಂದರೂ ಜಾಸ್ತಿ ಚಿಂತೆ ಮಾಡಬೇಡ. ನೀನು ನಿನ್ನ ಆಟವನ್ನು ಆಡಿದರೆ, ಸಹಜವಾಗಿಯೇ ದೊಡ್ಡ ಇನ್ನಿಂಗ್ಸ್ ಬಂದೇ ಬರುತ್ತದೆ. ಆದ್ರೆ ನೀನು ದೊಡ್ಡ ಇನ್ನಿಂಗ್ಸ್ ಬಗ್ಗೆಯೇ ಯೋಚನೆ ಮಾಡುತ್ತಿದ್ದರೇ, ಅಂತಹ ಇನ್ನಿಂಗ್ಸ್ ಮೂಡಿಬರುವುದು ಕೊಂಚ ಕಷ್ಟವಾಗಬಹುದು" ಎಂದು ಮಗ ಆರ್ಯವೀರ್‌ಗೆ ವಿರೇಂದ್ರ ಸೆಹ್ವಾಗ್ ಕಿವಿ ಮಾತು ಹೇಳಿದ್ದಾರೆ.
ಇನ್ನು ಮುಂದುವರೆದು, ಸೆಹ್ವಾಗ್ ತಮ್ಮ ಮಗ ಆರ್ಯವೀರ್, ಚಾಚೂ ತಪ್ಪದೇ ತಮ್ಮ ಮಾತನ್ನು ಗಂಭೀರವಾಗಿ ಕೇಳುವುದರ ಬಗ್ಗೆ ಖುಷಿ ವ್ಯಕ್ತಪಡಿಸಿದ್ದಾರೆ. ಏನೇ ಟೀಕೆಗಳು ಕೇಳಿ ಬಂದರೂ ಅದರ ಬಗ್ಗೆ ಹೆಚ್ಚು ಗಮನ ಕೊಡದೇ ಕ್ರಿಕೆಟ್ ಕಡೆ ಚಿತ್ತ ಹರಿಸಿರುವುದರ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ. 'ನಾನು ಹೇಳುವುದನ್ನೂ ಕಿವಿಗೊಟ್ಟು ಕೇಳುತ್ತಾನೆ. ಆತ ಈಗಾಗಲೇ ಡೆಲ್ಲಿ ಪರ ಅಂಡರ್-19 ಕ್ರಿಕೆಟ್ ಆಡಿದ್ದಾನೆ. ಕೆಲವೊಮ್ಮೆ ರನ್ ಗಳಿಸಿದ್ದಾನೆ, ಮತ್ತೆ ಕೆಲವೊಮ್ಮೆ ರನ್ ಗಳಿಸಲು ಸಾಧ್ಯವಾಗಿಲ್ಲ. ಆದ್ರೆ ಯಾವುದಕ್ಕೂ ರಿಯಾಕ್ಟ್ ಮಾಡೊಲ್ಲ. ಅದೇ ಒಳ್ಳೆಯ ಕೆಲಸ. ಕೆಲವೊಮ್ಮೆ ಆತ ಅಪ್‌ಸೆಟ್ ಆಗ್ತಾನೆ. ಎಲ್ಲರಂತೆ ಅವನು ಹುಡುಗ ಅಲ್ಲವೇ. ಆತನಿಗಿನ್ನೂ 18 ವರ್ಷ, ಈತ ಕಲಿಯುತ್ತಿದ್ದಾನೆ ಎಂದು ವಿರೇಂದ್ರ ಸೆಹ್ವಾಗ್ ಹೇಳಿದ್ದಾರೆ.
ಆರ್ಯವೀರ್ ಸೆಹ್ವಾಗ್, ಟೀಂ ಇಂಡಿಯಾ ದಿಗ್ಗಜ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್ ಅವರ ಹಿರಿಯ ಪುತ್ರ. ಆರ್ಯವೀರ್ ಸೆಹ್ವಾಗ್ 2007ರ ಅಕ್ಟೋಬರ್‌ನಲ್ಲಿ ಜನಿಸಿದರು. ತಂದೆಯ ಹೆಜ್ಜೆಯನ್ನೇ ಹಿಂಬಾಲಿಸುತ್ತಿರುವ ಆರ್ಯವೀರ್, ಈಗಾಗಲೇ ಡೆಲ್ಲಿ ಪರ ಅಂಡರ್-19 ತಂಡವನ್ನು ಪ್ರತಿನಿಧಿಸಿದ್ದಾರೆ. ಇದಷ್ಟೇ ಅಲ್ಲದೇ ಡೆಲ್ಲಿ ಪ್ರೀಮಿಯರ್ ಲೀಗ್‌ನಲ್ಲೂ ಅಬ್ಬರಿಸಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.