
ಬೆಂಗಳೂರು: ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ, ದಿಢೀರ್ ಎನ್ನುವಂತೆ ಟೆಸ್ಟ್ ಕ್ರಿಕೆಟ್ ಮಾದರಿಗೆ ದಿಢೀರ್ ವಿದಾಯ ಘೋಷಿಸಿದ್ದಾರೆ. ಕಳೆದ ಕೆಲ ದಿನಗಳ ಹಿಂದಷ್ಟೇ ನಾಯಕ ರೋಹಿತ್ ಶರ್ಮಾ ಕೂಡಾ ಟೆಸ್ಟ್ ಕ್ರಿಕೆಟ್ ಮಾದರಿಗೆ ಗುಡ್ ಬೈ ಹೇಳಿದ್ದರು. ಇದೀಗ ಇಂಗ್ಲೆಂಡ್ ಎದುರಿನ ಟೆಸ್ಟ್ ಸರಣಿಗೆ ಭಾರತ ತಂಡವನ್ನು ಘೋಷಿಸುವ ಮುನ್ನವೇ ಅಚ್ಚರಿಯ ರೀತಿಯಲ್ಲಿ ಟೆಸ್ಟ್ ಕ್ರಿಕೆಟ್‌ಗೆ ಕೊಹ್ಲಿ ನಿವೃತ್ತಿ ಘೋಷಿಸಿದ್ದಾರೆ. ಇನ್ನು ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಬೆನ್ನಲ್ಲೇ ಈ ಹಿಂದೆ ಸಂದರ್ಶನವೊಂದರಲ್ಲಿ ಟೆಸ್ಟ್ ಕ್ರಿಕೆಟ್ ಬಗ್ಗೆ ವಿರಾಟ್ ಕೊಹ್ಲಿ ಆಡಿದ ಮಾತುಗಳು ವೈರಲ್ ಆಗಿವೆ.
ಸ್ಟಾರ್ ಸ್ಪೋರ್ಟ್ಸ್ ಚಾನೆಲ್‌ನಲ್ಲಿ ಮಾತನಾಡಿದ್ದ ವಿರಾಟ್ ಕೊಹ್ಲಿ, ನಿಮಗೆ ನೀವು ಪ್ರಾಮಾಣಿಕವಾಗಿರಬೇಕು. ಅಂದರೆ ಟೆಸ್ಟ್ ಕ್ರಿಕೆಟ್ ಕಠಿಣ ಮಾದರಿ ಎನ್ನುವುದು ನಿಮಗೆ ಗೊತ್ತಿರಬೇಕು. ನೀವು ಜಗತ್ತಿನ ಬಲಿಷ್ಠ ತಂಡದ ಭಾಗವಾಗಿಯೇ ಇರಬಹುದು, ಅಥವಾ ಕಳೆದ ಕೆಲ ವರ್ಷಗಳಿಂದಲೂ ನೀವು ಜಗತ್ತಿನ ಬಲಿಷ್ಠ ತಂಡವೇ ಆಗಿರಬಹುದು. ಕೆಲವೊಂದು ಸಮಯದಲ್ಲಿ ನೀವು ಬಯಸದೇ ಇರುವ ಸ್ಥಳಕ್ಕೂ ನೀವು ಹೋಗಬಹುದು. ಮತ್ತೆ ನಾವು ಐದು ದಿನಗಳ ಕಾಲ ಆಡಬೇಕಾ ಎಂದು ನಿಮಗೂ ಭಾಸವಾಗಬಹುದು.
ಇದೇ ಕಾರಣಕ್ಕೆ ನಾನು ಹೇಳಿದ್ದು, ನಮಗೆ ನಾವು ಪ್ರಾಮಾಣಿಕವಾಗಿರಬೇಕು ಎಂದು. ಯಾಕೆಂದರೆ ನಾವು ಕಠಿಣ ಸವಾಲನ್ನು ಮೆಟ್ಟಿನಿಲ್ಲಲು ರೆಡಿಯಿರಬೇಕು. ಮೂರನೇ ದಿನದಾಟದಲ್ಲಿ ನಿಮ್ಮ ತಂಡದ ಪರಿಸ್ಥಿತಿ ಹದಗೆಟ್ಟಾಗಲೂ, ಒಂದು ಬ್ಯಾಟಿಂಗ್ ಯೂನಿಟ್ ಆಗಿ ತಂಡಕ್ಕೆ ಕೊಡುಗೆ ನೀಡಲು ಸಿದ್ದವಿರಬೇಕು. ನೀವು 100 ರನ್ ಗಳಿಸಲು ಹೋಗುತ್ತಿದ್ದಿರೋ ಅಥವಾ ತಂಡಕ್ಕಾಗಿ 150 ರನ್ ಗಳಿಸಲು ಹೋಗುತ್ತಿದ್ದಿರೋ ಎನ್ನುವುದು ಮುಖ್ಯವಾಗುತ್ತದೆ. ಅದು ಎಷ್ಟು ಕಠಿಣವಾಗಿರುತ್ತದೆ ಎನ್ನುವುದು ನಿಮಗೆ ಗೊತ್ತಿರಬೇಕು ಎಂದು ಹೇಳಿದ್ದರು. ಈ ವಿಡಿಯೋವೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ವಿರಾಟ್ ಕೊಹ್ಲಿ ಕೊನೆಯದಾಗಿ ಆಸ್ಟ್ರೇಲಿಯಾ ಎದುರು ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯಲ್ಲಿ ಪಾಲ್ಗೊಂಡಿದ್ದರು. ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯಲ್ಲಿ ಟೀಂ ಇಂಡಿಯಾ ಸೋಲು ಅನುಭವಿಸಿತ್ತು. ಇದರ ಜತೆಗೆ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೇರುವ ಅವಕಾಶವನ್ನು ಕೈಚೆಲ್ಲಿತ್ತು. ಆಸ್ಟ್ರೇಲಿಯಾ ಎದುರು ಟೆಸ್ಟ್ ಸರಣಿ ಸೋಲುತ್ತಿದ್ದಂತೆಯೇ ಹಿರಿಯ ಆಟಗಾರರ ಮೇಲೆ ಟೀಕೆಗಳು ಕೇಳಿ ಬಂದಿದ್ದವು. ರವಿಚಂದ್ರನ್ ಅಶ್ವಿನ್, ಬಾರ್ಡರ್-ಗವಾಸ್ಕರ್ ಸರಣಿಯ ಮಧ್ಯದಲ್ಲಿಯೇ ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದರು. ಇನ್ನು ಹಿಟ್‌ಮ್ಯಾನ್ ಖ್ಯಾತಿಯ ರೋಹಿತ್ ಶರ್ಮಾ ಕೆಲ ದಿನಗಳ ಹಿಂದಷ್ಟೇ ಟೆಸ್ಟ್ ಮಾದರಿಗೆ ಗುಡ್‌ಬೈ ಹೇಳಿದ್ದರು. ಇದೀಗ ಕೊಹ್ಲಿ ಕೂಡಾ ನಿವೃತ್ತಿ ಘೋಷಿಸಿರುವುದು ಭಾರತ ತಂಡದ ಪಾಲಿಗೆ ಇಂಗ್ಲೆಂಡ್ ಪ್ರವಾಸದಲ್ಲಿ ಕೊಂಚ ಹಿನ್ನಡೆಯಾಗಿ ಪರಿಣಮಿಸುವ ಸಾಧ್ಯತೆಯಿದೆ.
ವಿರಾಟ್‌ಗೆ 10 ಸಾವಿರ ರನ್ ಕ್ಲಬ್ ಸೇರಲು ಕೊಹ್ಲಿ ಫೇಲ್
ವಿರಾಟ್ ಕೊಹ್ಲಿ ಟೆಸ್ಟ್ ವೃತ್ತಿಜೀವನ ಅದ್ಭುತವಾಗಿದೆ. ಅವರು 123 ಪಂದ್ಯಗಳ 210 ಇನ್ನಿಂಗ್ಸ್‌ಗಳಲ್ಲಿ 46.85 ಸರಾಸರಿಯಲ್ಲಿ 9230 ರನ್ ಗಳಿಸಿದ್ದಾರೆ. ಅವರ ಅತ್ಯಧಿಕ ವೈಯಕ್ತಿಕ ಸ್ಕೋರ್ 254*. ಈ ಮಾದರಿಯಲ್ಲಿ ಅವರ ಬ್ಯಾಟ್‌ನಿಂದ 30 ಶತಕ ಮತ್ತು 31 ಅರ್ಧಶತಕಗಳು ಬಂದಿವೆ. ಕೊಹ್ಲಿ ರೆಡ್ ಬಾಲ್ ಕ್ರಿಕೆಟ್‌ನಲ್ಲಿ 10 ಸಾವಿರ ರನ್‌ಗಳ ಸಮೀಪದಲ್ಲಿದ್ದರು. 10 ಸಾವಿರ ರನ್ ಬಾರಿಸಿದ ಆಟಗಾರ ಎನಿಸಿಕೊಳ್ಳಲು ಕೊಹ್ಲಿಗೆ ಕೇವಲ 770 ರನ್ ಅಗತ್ಯವಿತ್ತು. ಆದ್ರೆ ಕೊಹ್ಲಿ ಇದೀಗ ದಿಢೀರ್ ವಿದಾಯ ಘೋಷಿಸಿ ಎಲ್ಲರನ್ನೂ ಆಶ್ಚರ್ಯಚಕಿತರನ್ನಾಗಿಸಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.