
ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರು ಟೆಕ್ಸ್ ಕ್ರಿಕೆಟ್‌ಗೆ ವಿದಾಯ ಹೇಳಿದ್ದು, ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಅಧಿಕೃತವಾಗಿ ಮಾಹಿತಿ ಹಂಚಿಕೊಂಡಿದ್ದಾರೆ.
ವಿರಾಟ್ ಕೊಹ್ಲಿ ಪೋಸ್ಟ್ ಹೀಗಿದೆ..!
ಟೆಸ್ಟ್ ಕ್ರಿಕೆಟ್‌ನಲ್ಲಿ ನಾನು ಮೊದಲ ಬಾರಿಗೆ ಗುಡ್ಡೆಯ ನೀಲಿ ಜರ್ಸಿ ಧರಿಸಿ 14 ವರ್ಷಗಳಾಗಿವೆ. ನಿಜವಾಗಿಯೂ, ಇದು ನನ್ನನ್ನು ಎಲ್ಲಿಗೆ ಕೊಂಡೊಯ್ಯುತ್ತದೆ ಎಂದು ನಾನು ಎಂದಿಗೂ ಊಹಿಸಿರಲಿಲ್ಲ. ಇದು ನನ್ನನ್ನು ಪರೀಕ್ಷಿಸಿದೆ, ರೂಪಿಸಿದೆ ಮತ್ತು ಜೀವನಪೂರ್ತಿ ನೆನಪಿನಲ್ಲಿರುವ ಪಾಠಗಳನ್ನು ಕಲಿಸಿದೆ.
ಬಿಳಿಯ ಉಡುಪಿನಲ್ಲಿ ಆಡುವುದರಲ್ಲಿ ಏನೋ ಆತ್ಮೀಯವಾದದ್ದು ಇದೆ. ಸದ್ದಿಲ್ಲದ ಕಠಿಣ ಶ್ರಮ, ದೀರ್ಘ ದಿನಗಳು, ಯಾರಿಗೂ ಕಾಣದ ಆದರೆ ಶಾಶ್ವತವಾಗಿ ನಿಮ್ಮೊಂದಿಗಿರುವ ಸಣ್ಣ ಕ್ಷಣಗಳು.
ಇದರಿಂದ ದೂರವಾಗುತ್ತಿರುವಾಗ, ಇದು ಸುಲಭವಲ್ಲ ಅಂತ ಗೊತ್ತಿದ್ದರೂ ಕೂಡ ನನಗೆ ಇದು ಸರಿಯೆನಿಸುತ್ತದೆ. ನಾನು ಎಲ್ಲವನ್ನೂ ನೀಡಿದ್ದೇನೆ, ಇದು ನಾನು ಆಶಿಸಿದ್ದಕ್ಕಿಂತ ಎಷ್ಟೋ ಹೆಚ್ಚಿನದನ್ನು ನನಗೆ ನೀಡಿದೆ.
ಆಟಕ್ಕಾಗಿ, ನಾನು ಮೈದಾನದಲ್ಲಿ ಹಂಚಿಕೊಂಡ ಜನರಿಗಾಗಿ, ಮತ್ತು ನನ್ನನ್ನು ಗಮನಿಸಿದ ಪ್ರತಿಯೊಬ್ಬ ವ್ಯಕ್ತಿಗಾಗಿ ನಾನು ಕೃತಜ್ಞತೆಯಿಂದ ತುಂಬಿದ ಹೃದಯದೊಂದಿಗೆ ಹೊರನಡೆಯುತ್ತಿದ್ದೇನೆ.
ನಾನು ಯಾವಾಗಲೂ ನನ್ನ ಟೆಸ್ಟ್ ವೃತ್ತಿಜೀವನವನ್ನು ಖುಷಿಯೊಂದಿಗೆ ನೆನಪಿಸಿಕೊಳ್ಳುತ್ತೇನೆ.
ಜೂನ್ 20, 2025 ರಿಂದ ಇಂಗ್ಲೆಂಡ್‌ನಲ್ಲಿ ಆರಂಭವಾಗಲಿರುವ ಐದು ಪಂದ್ಯಗಳ ಟೆಸ್ಟ್ ಸರಣಿಯ ಮೊದಲೇ ಕ್ರಿಕೆಟರ್ ವಿರಾಟ್ ಕೊಹ್ಲಿ ಅವರು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಗೆ (ಬಿಸಿಸಿಐ) ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತಿಯಾಗುವ ತಮ್ಮ ಉದ್ದೇಶವನ್ನು ತಿಳಿಸಿದ್ದರು. ರೋಹಿತ್ ಶರ್ಮಾ ಮತ್ತು ರವಿಚಂದ್ರನ್ ಅಶ್ವಿನ್‌ರ ಇತ್ತೀಚಿನ ಟೆಸ್ಟ್ ನಿವೃತ್ತಿಯ ನಂತರ ಈ ನಿರ್ಧಾರವು ಭಾರತೀಯ ಕ್ರಿಕೆಟ್‌ಗೆ ಒಂದು ಮಹತ್ವದ ಬದಲಾವಣೆ ಎನ್ನಬಹುದು.
ವಿರಾಟ್ ಕೊಹ್ಲಿಯ ದಾಖಲೆಯ ಸಾಧನೆಗಳು
ಭಾರತದ ಅತ್ಯಂತ ಯಶಸ್ವಿ ಟೆಸ್ಟ್ ನಾಯಕ ವಿರಾಟ್ ಕೊಹ್ಲಿ ಅವರು, 68 ಪಂದ್ಯಗಳಲ್ಲಿ 40 ಗೆಲುವುಗಳೊಂದಿಗೆ ದಾಖಲೆ ಮಾಡಿದ್ದಾರೆ. ಅವರ ನಾಯಕತ್ವದಲ್ಲಿ ಭಾರತವು ಟೆಸ್ಟ್ ಕ್ರಿಕೆಟ್‌ನಲ್ಲಿ ಪ್ರಾಬಲ್ಯವನ್ನು ಸಾಧಿಸಿತು, ವಿಶೇಷವಾಗಿ ವಿದೇಶದಲ್ಲಿ ಸ್ಮರಣೀಯ ಗೆಲುವುಗಳನ್ನು ದಾಖಲಿಸಿತು. 123 ಟೆಸ್ಟ್ ಪಂದ್ಯಗಳಲ್ಲಿ 46.85ರ ಸರಾಸರಿಯೊಂದಿಗೆ 9,230 ರನ್‌ಗಳನ್ನು ಕೊಹ್ಲಿ ಗಳಿಸಿದ್ದಾರೆ, ಇದರಲ್ಲಿ 30 ಶತಕಗಳು ಸೇರಿವೆ.
ನಿವೃತ್ತಿಯ ಹಿನ್ನೆಲೆ ಏನು?
ಆಸ್ಟ್ರೇಲಿಯಾದಲ್ಲಿ ನಡೆದ ಇತ್ತೀಚಿನ ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ ಕೊಹ್ಲಿಯ ಪ್ರದರ್ಶನ (ಐದು ಟೆಸ್ಟ್‌ಗಳಲ್ಲಿ 23.75 ಸರಾಸರಿ) ಹಾಗೂ ಕಳೆದ 5 ವರ್ಷಗಳಲ್ಲಿ ಫಾರ್ಮ್‌ನ ಕುಸಿತ (37 ಪಂದ್ಯಗಳಲ್ಲಿ 1,990 ರನ್‌ಗಳು) ಈ ನಿರ್ಧಾರಕ್ಕೆ ಕಾರಣವಾಗಿರಬಹುದು ಎನ್ನಲಾಗಿದೆ. ಆದರೆ, ಬಿಸಿಸಿಐ, ತಂಡದ ನಿರ್ವಹಣೆಯು ವಿರಾಟ್ ಕೊಹ್ಲಿಯನ್ನು ತಮ್ಮ ನಿರ್ಧಾರವನ್ನು ಮರುಪರಿಶೀಲಿಸಲು ಒತ್ತಾಯಿಸಿತ್ತು, ಇಂಗ್ಲೆಂಡ್ ಪ್ರವಾಸದಲ್ಲಿ ಅವರ ಅನುಭವವು ಯುವ ತಂಡಕ್ಕೆ ಮತ್ತು ಹೊಸ ನಾಯಕನಿಗೆ (ಬಹುಶಃ ಶುಭಮನ್ ಗಿಲ್) ಅತ್ಯಗತ್ಯ ಎಂದು ಒತ್ತಿಹೇಳಿತ್ತು. ಒಬ್ಬ ಅತ್ಯಂತ ಪ್ರಭಾವಿ ವ್ಯಕ್ತಿಯನ್ನು ಒಳಗೊಂಡು ಬಿಸಿಸಿಐ ವಿರಾಟ್ ಕೊಹ್ಲಿಯನ್ನು ಮನವೊಲಿಸುವ ಪ್ರಯತ್ನದಲ್ಲಿತ್ತು. ಆದಾಗ್ಯೂ, ಕೊಹ್ಲಿ ತಮ್ಮ ನಿರ್ಧಾರವನ್ನು ಬದಲಾಯಿಸಿಲ್ಲ.
ಕ್ರಿಕೆಟ್ ಲೋಕದ ಪ್ರತಿಕ್ರಿಯೆ
ಅಂಬಾಟಿ ರಾಯುಡು, ಬ್ರಿಯಾನ್ ಲಾರಾ, ನವಜೋತ್ ಸಿಂಗ್ ಸಿಧು ಮುಂತಾದ ಮಾಜಿ ಕ್ರಿಕೆಟಿಗರು ಮತ್ತು ಅಭಿಮಾನಿಗಳು ಕೂಡ ವಿರಾಟ್ ಕೊಹ್ಲಿಗೆ ಟೆಸ್ಟ್ ಕ್ರಿಕೆಟ್ ಮ್ಯಾಚ್‌ನಲ್ಲಿ ಮುಂದುವರಿಯಲು ಒತ್ತಾಯಿಸಿದ್ದರು. ಟೆಸ್ಟ್ ಕ್ರಿಕೆಟ್‌ಗೆ ಅವರು ಎಷ್ಟು ಮುಖ್ಯ ಎಂದು ಒತ್ತಿ ಹೇಳಿದ್ದರು. ಕೌಂಟಿ ಚಾಂಪಿಯನ್‌ಶಿಪ್‌ನ ಸೋಶಿಯಲ್ ಮೀಡಿಯಾ ಖಾತೆಯು ಇಂಗ್ಲೆಂಡ್‌ನ ವೇಗದ ಬೌಲರ್‌ಗಳನ್ನು ತಪ್ಪಿಸಲು ಕೊಹ್ಲಿ ನಿವೃತ್ತಿಯಾಗುತ್ತಿದ್ದಾರೆ ಎಂದು ಲೇವಡಿ ಮಾಡಿತ್ತು.
ಭಾರತೀಯ ಟೆಸ್ಟ್ ಕ್ರಿಕೆಟ್‌ನ ಭವಿಷ್ಯ
ವಿರಾಟ್ ಕೊಹ್ಲಿಯ ಈ ನಿರ್ಗಮನವು ಭಾರತದ ಟೆಸ್ಟ್ ತಂಡವನ್ನು ಶುಭಮನ್ ಗಿಲ್, ಯಶಸ್ವಿ ಜೈಸ್ವಾಲ್ ಮುಂತಾದ ಯುವ ಆಟಗಾರರ ಮೇಲೆ, ಕೆಎಲ್ ರಾಹುಲ್, ರಿಷಭ್ ಪಂತ್‌ರಂತಹ ಆಟಗಾರರ ಮೇಲೆ ಆಧಾರವಾಗಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.