
ನವದೆಹಲಿ: 2027ರ ವಿಶ್ವಕಪ್ ತಂಡದಲ್ಲಿ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾಗೆ ಸ್ಥಾನ ಸಿಗಲಿದೆಯೇ ಎಂಬುದು ಕೆಲ ತಿಂಗಳುಗಳ ಹಿಂದೆ ಭಾರತೀಯ ಕ್ರಿಕೆಟ್ ವಲಯದಲ್ಲಿ ಹೆಚ್ಚು ಚರ್ಚೆ ಆಗುತ್ತಿದ್ದ ವಿಷಯ. ಆದರೆ ಕೊಹ್ಲಿ ವಿಚಾರದಲ್ಲಿ ಈ ಬಗ್ಗೆ ಹೆಚ್ಚು ಕಡಿಮೆ ತೀರ್ಮಾನ ಆದಂತಿದ್ದು, ಅವರು ವಿಶ್ವಕಪ್ ಆಡಲಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ.
ಇತ್ತೀಚೆಗೆ ಆಸ್ಟ್ರೇಲಿಯಾ ವಿರುದ್ಧ ಏಕದಿನ ಸರಣಿ ಮೊದಲೆರಡು ಪಂದ್ಯಗಳಲ್ಲಿ ಕೊಹ್ಲಿ ಸೊನ್ನೆ ಸುತ್ತಿದ್ದರು. ಆದರೆ ಸರಣಿಯ ಕೊನೆ ಪಂದ್ಯ, ಬಳಿಕ ನಡೆದ ದ.ಆಫ್ರಿಕಾ ಹಾಗೂ ನ್ಯೂಜಿಲೆಂಡ್ ಸರಣಿಯಲ್ಲಿ ಕೊಹ್ಲಿ ಅಬ್ಬರಿಸಿದ್ದರು. ಕೊನೆ 7 ಪಂದ್ಯಗಳಲ್ಲಿ 616 ರನ್ ಕಲೆಹಾಕಿರುವ ಕೊಹ್ಲಿಯೇ ಈ ಭಾರತದ ಆಧಾರ ಸ್ತಂಭವಾಗಿದ್ದು, ತಂಡ ಅವರ ಮೇಲೆ ಹೆಚ್ಚು ಅವಲಂಬಿತವಾಗಿದೆ ಎಂಬುದು ಸ್ಪಷ್ಟ. ಹೀಗಾಗಿ ಸದ್ಯಕ್ಕೆ ಅವರ ನಿವೃತ್ತಿ ಬಗ್ಗೆ ಮಾತುಗಳು ಕೇಳಿಬರುವ ಸಾಧ್ಯತೆಯಿಲ್ಲ. ಅಲ್ಲದೆ ಬಿಸಿಸಿಐ, ಆಯ್ಕೆ ಸಮಿತಿ ಕೂಡಾ ನಿವೃತ್ತಿಗೆ ಸೂಚನೆ ನೀಡುವ ಸಾಧ್ಯತೆಯೂ ಇಲ್ಲ ಎಂದೇ ಹೇಳಲಾಗುತ್ತಿದೆ.
ಇನ್ನು, ರೋಹಿತ್ ಈಗ ಸಾಧಾರಣ ಆಟವಾಡುತ್ತಿದ್ದಾರೆ. ಕಳೆದ 15 ಪಂದ್ಯಗಳಲ್ಲಿ 1 ಶತಕ ಮಾತ್ರ ದಾಖಲಾಗಿದೆ. ಹೀಗಾಗಿ ಅವರು ವಿಶ್ವಕಪ್‌ವರೆಗೂ ತಂಡದಲ್ಲಿ ಮುಂದುವರಿಯುವ ಬಗ್ಗೆ ಪ್ರಶ್ನೆಗಳು ಉದ್ಭವಿಸಿರುವುದು ಸಹಜ. ಆದರೆ 2027ರ ವಿಶ್ವಕಪ್‌ಗೂ ಮುನ್ನ ಭಾರತ 5 ಸರಣಿಗಳಲ್ಲಿ 15 ಏಕದಿನ ಪಂದ್ಯಗಳನ್ನಾಡಲಿದೆ. ಈ ಸರಣಿಗಳಲ್ಲಿ ಉತ್ತಮ ಪ್ರದರ್ಶನ ನೀಡಿದರೆ ಇಬ್ಬರೂ ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆಯಬಹುದು ಎಂದು ವಿಶ್ಲೇಷಿಸಲಾಗುತ್ತಿದೆ.
ರೋಹಿತ್ ಶರ್ಮಾ ಕಳೆದ ಐದು ಪಂದ್ಯಗಳಲ್ಲಿ ಒಮ್ಮೆ ಮಾತ್ರ ಅರ್ಧಶತಕ ಸಿಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ದಕ್ಷಿಣ ಆಫ್ರಿಕಾ ಎದುರಿನ ಕೊನೆಯ ಎರಡು ಪಂದ್ಯಗಳಲ್ಲಿ ಹಿಟ್‌ಮ್ಯಾನ್ ಖ್ಯಾತಿಯ ರೋಹಿತ್ ಮಂದಗತಿಯಲ್ಲಿ ರನ್ ಗಳಿಸಿದ್ದರು. ಹರಿಣಗಳ ಎದುರಿನ ಎರಡನೇ ಪಂದ್ಯದಲ್ಲಿ 8 ಎಸೆತಗಳಲ್ಲಿ 14 ರನ್ ಗಳಿಸಿದ್ದ ರೋಹಿತ್, ಇದಾದ ಬಳಿಕ ಕೊನೆಯ ಏಕದಿನ ಪಂದ್ಯಗಳಲ್ಲಿ 73 ಎಸೆತಗಳನ್ನು ಎದುರಿಸಿ 75 ರನ್ ಗಳಿಸಿದ್ದರು. ಇನ್ನು ಇದಾದ ಬಳಿಕ ಕಿವೀಸ್ ಎದುರು ರೋಹಿತ್ ಶರ್ಮಾ ಕ್ರಮವಾಗಿ 29 ಎಸೆತಗಳಲ್ಲಿ 26, 38 ಎಸೆತಗಳಲ್ಲಿ 24 ಹಾಗೂ 13 ಎಸೆತಗಳಲ್ಲಿ 11 ರನ್ ಗಳಿಸಿ ವಿಕೆಟ್ ಒಪ್ಪಿಸುವ ಮೂಲಕ ನಿರಾಸೆ ಮೂಡಿಸಿದ್ದಾರೆ.
ರೋಹಿತ್ ಶರ್ಮಾ ಇದುವರೆಗೂ ಭಾರತ ಪರ ಏಷ್ಯಾಕಪ್, ಐಸಿಸಿ ಟಿ20 ವಿಶ್ವಕಪ್ ಹಾಗೂ ಐಸಿಸಿ ಚಾಂಪಿಯನ್ಸ್ ಟ್ರೋಫಿ ಗೆದ್ದಿದ್ದಾರೆ. ಆದರೆ ಇದುವರೆಗೂ ಹಿಟ್‌ಮ್ಯಾನ್‌ಗೆ ಐಸಿಸಿ ಏಕದಿನ ವಿಶ್ವಕಪ್ ಗೆಲ್ಲುವ ಕನಸು ಕನಸಾಗಿಯೇ ಉಳಿದಿದೆ. 2011ರಲ್ಲಿ ಭಾರತ ಏಕದಿನ ವಿಶ್ವಕಪ್ ಗೆದ್ದಾಗ ರೋಹಿತ್ ಶರ್ಮಾ ಭಾರತ ತಂಡದಲ್ಲಿ ಸ್ಥಾನ ಪಡೆದಿರಲಿಲ್ಲ. ಇನ್ನು 2015, 2019ರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ರೋಹಿತ್ ಶರ್ಮಾ ಭಾರತ ತಂಡದಲ್ಲಿ ಸ್ಥಾನ ಪಡೆದಿದ್ದರಾದರೂ ತಂಡ ಸೆಮಿಫೈನಲ್‌ನಲ್ಲೇ ಮುಗ್ಗರಿಸಿ ನಿರಾಸೆ ಎದುರಿಸಿತ್ತು.
ಇನ್ನು 2023ರ ಐಸಿಸಿ ಏಕದಿನ ವಿಶ್ವಕಪ್‌ನಲ್ಲಿ ರೋಹಿತ್ ಶರ್ಮಾ ನಾಯಕನಾಗಿ ತಂಡವನ್ನು ಫೈನಲ್‌ಗೆ ಕೊಂಡೊಯ್ದಿದ್ದರು. ಆದರೆ ಫೈನಲ್‌ನಲ್ಲಿ ಆಸೀಸ್ ಎದುರು ಮುಗ್ಗರಿಸುವ ಮೂಲಕ ಕಪ್ ಗೆಲ್ಲುವ ಅವಕಾಶದಿಂದ ವಂಚಿತರಾಗಿದ್ದರು. ಹೀಗಾಗಿ ಈಗಾಗಲೇ ಟೆಸ್ಟ್ ಹಾಗೂ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ಗೆ ವಿದಾಯ ಹೇಳಿ, ಏಕದಿನ ಕ್ರಿಕೆಟ್‌ನತ್ತ ಮಾತ್ರ ರೋಹಿತ್ ಶರ್ಮಾ ಗಮನ ಹರಿಸಿದ್ದಾರೆ. ಒಟ್ಟಿನಲ್ಲಿ ಶತಾಯಗತಾಯ 2027ರ ಏಕದಿನ ವಿಶ್ವಕಪ್ ಗೆಲ್ಲುವುದು ರೋಹಿತ್ ಗುರಿಯಾಗಿದೆ. ಅಲ್ಲಿಯವರೆಗೆ ಭಾರತ ತಂಡದಲ್ಲಿ ರೋಹಿತ್ ಶರ್ಮಾ ಸ್ಥಾನ ಉಳಿಸಿಕೊಳ್ಳುತ್ತಾರಾ ಎನ್ನುವುದನ್ನು ಕಾದು ನೋಡಬೇಕಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.