
ಬೆಂಗಳೂರು: ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿಯನ್ನು ಪ್ರವಾಸಿ ನ್ಯೂಜಿಲೆಂಡ್ ತಂಡವು 2-1 ಅಂತರದಲ್ಲಿ ಜಯಿಸುವಲ್ಲಿ ಯಶಸ್ವಿಯಾಗಿದೆ. ಮೊದಲ ಪಂದ್ಯದಲ್ಲಿ ಶುಭ್‌ಮನ್ ಗಿಲ್ ನೇತೃತ್ವದ ಟೀಂ ಇಂಡಿಯಾ ಗೆದ್ದು ಶುಭಾರಂಭ ಮಾಡಿತ್ತು. ಆದರೆ ಆ ಬಳಿಕ ಸತತ ಎರಡು ಪಂದ್ಯಗಳನ್ನು ಜಯಿಸುವ ಮೂಲಕ ಮಿಚೆಲ್ ಬ್ರೇಸ್‌ವೆಲ್ ನೇತೃತ್ವದ ನ್ಯೂಜಿಲೆಂಡ್ ತಂಡವು ಭಾರತದ ನೆಲದಲ್ಲಿ ಚೊಚ್ಚಲ ಏಕದಿನ ಸರಣಿ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಭಾರತ ತಂಡವು ಈ ರೀತಿಯ ಹೀನಾಯ ಪ್ರದರ್ಶನ ತೋರುತ್ತಿರುವ ಬೆನ್ನಲ್ಲೇ ತಂಡದ ಬಗ್ಗೆ ಹಾಗೂ ತಂಡದ ಆಯ್ಕೆಯ ಬಗ್ಗೆ ಹಿರಿಯ ಕ್ರಿಕೆಟಿಗರು ಹಾಗೂ ಕ್ರಿಕೆಟ್ ಅಭಿಮಾನಿಗಳು ಪ್ರಶ್ನೆ ಮಾಡಲಾರಂಭಿಸಿದ್ದಾರೆ.
ಇನ್ನು ಈ ಸರಣಿಯಲ್ಲಿ ಟೀಂ ಇಂಡಿಯಾದ ಹಿರಿಯ ಆಟಗಾರರಾದ ರೋಹಿತ್ ಶರ್ಮಾ ಹಾಗೂ ರವೀಂದ್ರ ಜಡೇಜಾ ನಿರೀಕ್ಷಿತ ಪ್ರದರ್ಶನ ತೋರಲು ವಿಫಲವಾಗಿದ್ದರು. ಆದರೆ ಇವರೇ ಟೀಂ ಇಂಡಿಯಾ ಸೋಲಿಗೆ ನೇರ ಕಾರಣವಲ್ಲ. ಇವರಿಗಿಂತ ಇಬ್ಬರು ಭಾರತ ಕ್ರಿಕೆಟ್ ತಂಡವನ್ನೇ ಹಾಳು ಮಾಡುತ್ತಿದ್ದಾರೇನೋ ಎನ್ನುವ ಅನುಮಾನ ಕಾಡಲಾರಂಭಿಸಿದೆ. ಯಾರವರು? ಅವರೇನು ಮಾಡಿದರು ಎನ್ನುವುದನ್ನು ನೋಡೋಣ ಬನ್ನಿ.
ನಾವು ಹೇಳಲು ಹೊರಟಿರುವುದು ಟೀಂ ಇಂಡಿಯಾ ಹೆಡ್ ಕೋಚ್ ಗೌತಮ್ ಗಂಭೀರ್ ಹಾಗೂ ಬಿಸಿಸಿಐ ಆಯ್ಕೆ ಸಮಿತಿ ಮುಖ್ಯಸ್ಥರಾದ ಅಜಿತ್ ಅಗರ್ಕರ್ ಅವರ ಬಗ್ಗೆ. ಭಾರತ ತಂಡವು 2023ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಫೈನಲ್ ಪ್ರವೇಶಿಸಿ ಪ್ರಶಸ್ತಿ ಸುತ್ತಿನಲ್ಲಿ ಮುಗ್ಗರಿಸಿತ್ತು. ಇದಾದ ಮರು ವರ್ಷ ರೋಹಿತ್ ಶರ್ಮಾ ನಾಯಕತ್ವದಲ್ಲಿ ಐಸಿಸಿ ಟಿ20 ವಿಶ್ವಕಪ್ ಜಯಿಸಿತ್ತು. ಇದಾದ ಬಳಿಕ 2025ರಲ್ಲಿ ರೋಹಿತ್ ಶರ್ಮಾ ನಾಯಕತ್ವದಲ್ಲೇ ಭಾರತ ಐಸಿಸಿ ಚಾಂಪಿಯನ್ಸ್ ಟ್ರೋಫಿಯನ್ನು ಜಯಿಸಿತ್ತು. ಹೀಗಿದ್ದೂ ಗಂಭೀರ್ ಹಾಗೂ ಅಗರ್ಕರ್ ಜೋಡಿ ರೋಹಿತ್ ಶರ್ಮಾ ಅವರನ್ನು ಏಕದಿನ ಕ್ರಿಕೆಟ್ ತಂಡದ ನಾಯಕತ್ವದಿಂದ ಕೆಳಗಿಳಿಸಿತು. ಇಲ್ಲಿಂದಲೇ ಟೀಂ ಇಂಡಿಯಾದ ಅದಃಪತನ ಆರಂಭವಾಯಿತು. ಗಿಲ್ ನಾಯಕತ್ವದಲ್ಲಿ ಭಾರತ ಏಕದಿನ ತಂಡವು ನಿರೀಕ್ಷಿತ ಪ್ರದರ್ಶನ ತೋರಲು ಪದೇ ಪದೇ ಎಡವುತ್ತಿದೆ. ತವರಿನಲ್ಲೇ ಏಕದಿನ ಸರಣಿ ಸೋಲುತ್ತಿರುವ ಭಾರತ ತಂಡ 2027ಕ್ಕೆ ವಿಶ್ವಕಪ್ ಗೆಲ್ಲುತ್ತಾ ಎನ್ನುವ ಪ್ರಶ್ನೆ ಕಾಡಲಾರಂಭಿಸಿದೆ.
ಇನ್ನು ಇದರ ಜತೆಗೆ ಅಜಿತ್ ಅಗರ್ಕರ್ ಹಾಗೂ ಗೌತಮ್ ಗಂಭೀರ್ ಜೋಡಿ, ಅನುಭವಿ ವೇಗಿ ಮೊಹಮ್ಮದ್ ಶಮಿ ಅವರನ್ನು ಜಿದ್ದಿಗೆ ಬಿದ್ದಂತೆ ಕಡೆಗಣಿಸುತ್ತಾ ಬಂದಿದೆ. ದೇಶಿ ಕ್ರಿಕೆಟ್‌ನಲ್ಲಿ ಮಿಂಚಿ ವಿಕೆಟ್ ಬೇಟೆಯಾಡುತ್ತಿರುವ ಮೊಹಮ್ಮದ್ ಶಮಿಯನ್ನು ಆಯ್ಕೆ ಮಾಡದೇ ಹೋದದ್ದು ಟೀಂ ಇಂಡಿಯಾ ಸರಣಿ ಸೋಲಿಗೆ ಪ್ರಮುಖ ಕಾರಣ ಎನ್ನಬಹುದು. ಶಮಿ ಎಂತಹ ಅಪಾಯಕಾರಿ ಬೌಲರ್ ಎನ್ನುವುದನ್ನು ಈಗಾಗಲೇ ನಾವೆಲ್ಲರೂ ನೋಡಿದ್ದೇವೆ.
ಇನ್ನು ಮಹಾರಾಷ್ಟ್ರ ಮೂಲದ ಪ್ರತಿಭಾನ್ವಿತ ಬ್ಯಾಟರ್ ಋತುರಾಜ್ ಗಾಯಕ್ವಾಡ್, ದಕ್ಷಿಣ ಆಫ್ರಿಕಾ ಎದುರಿನ ಮೂರನೇ ಹಾಗೂ ಕೊನೆಯ ಏಕದಿನ ಪಂದ್ಯದಲ್ಲಿ ಆಕರ್ಷಕ ಶತಕ ಸಿಡಿಸಿದ್ದರು. ಆದರೆ ಹೀಗಿದ್ದೂ ನ್ಯೂಜಿಲೆಂಡ್ ಎದುರಿನ ಏಕದಿನ ಸರಣಿಗೆ ಅಜಿತ್ ಅಗರ್ಕರ್-ಗೌತಮ್ ಗಂಭೀರ್ ಜೋಡಿ ಕೈಬಿಟ್ಟಿತ್ತು. ಒಂದು ವೇಳೆ ಗಾಯಕ್ವಾಡ್ ತಂಡದಲ್ಲಿದ್ದಿದ್ದರೇ ಬಹುಶಃ ಫಲಿತಾಂಶ ಬೇರೆಯದ್ದೇ ಆಗುತ್ತಿತ್ತು.
ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಿನ ಸರಣಿ ಮುಗಿದ ಮೇಲೆ ಇಪ್ಪತ್ತ ದಿನಗಳ ಕಾಲ ವಿಶ್ರಾಂತಿ ಸಿಕ್ಕಿತ್ತು. ಇದಾದ ಬಳಿಕವೂ ಟೀಂ ಇಂಡಿಯಾ ಪ್ರಮುಖ ವೇಗಿ ಜಸ್ಪ್ರೀತ್ ಬುಮ್ರಾ ಹಾಗೂ ಸ್ಟಾರ್ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಅವರನ್ನು ಆಯ್ಕೆ ಮಾಡದೇ ವಿಶ್ರಾಂತಿ ನೀಡಿದ್ದು, ಸರಣಿ ಸೋಲಿಗೆ ಕಾರಣವಾಯಿತು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.