
ನವದೆಹಲಿ: ಬಾಂಗ್ಲಾದೇಶ ವೇಗಿ ಮುಸ್ತಾಫಿಜರ್ ರಹಮಾನ್‌ರನ್ನು ಐಪಿಎಲ್‌ನಿಂದ ಹೊರಗಿಟ್ಟ ಬಳಿಕ ಭಾರತದಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ಆಡಲ್ಲ ಎಂದು ಪಟ್ಟುಹಿಡಿದಿರುವ ಬಾಂಗ್ಲಾಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್(ಐಸಿಸಿ) ಈಗ ಖಡಕ್ ಸೂಚನೆ ಜೊತೆಗೆ ಎಚ್ಚರಿಕೆಯನ್ನೂ ಕೊಟ್ಟಿದೆ. ವಿಶ್ವಕಪ್ ಪಂದ್ಯಗಳನ್ನು ಭಾರತದಲ್ಲೇ ಆಡಬೇಕೆಂದು ಬಾಂಗ್ಲಾಗೆ ತಾಕೀತು ಮಾಡಿರುವ ಐಸಿಸಿ, ಇದರ ಬಗ್ಗೆ ಜ.21ಕ್ಕೂ ಮುನ್ನ ತಿಳಿಸುವಂತೆ ಸೂಚಿಸಿದೆ. ತಪ್ಪಿದರೆ ಬೇರೊಂದು ತಂಡಕ್ಕೆ ಅವಕಾಶ ನೀಡುವುದಾಗಿ ಎಚ್ಚರಿಕೆ ನೀಡಿದೆ.
ಟಿ20 ವಿಶ್ವಕಪ್ ಫೆ.7ಕ್ಕೆ ಆರಂಭಗೊಳ್ಳಬೇಕಿದೆ. ಭಾರತ-ಶ್ರೀಲಂಕಾದಲ್ಲಿ ಪಂದ್ಯಗಳು ನಡೆಯಲಿವೆ. ‘ಸಿ’ ಗುಂಪಿನಲ್ಲಿರುವ ಬಾಂಗ್ಲಾದೇಶದ ಪಂದ್ಯಗಳು ಕೋಲ್ಕತಾ, ಮುಂಬೈನಲ್ಲಿ ನಿಗದಿಯಾಗಿವೆ. ಆದರೆ ಭಾರತದಲ್ಲಿ ಭದ್ರತೆ ಸಮಸ್ಯೆ ಇದೆ ಎಂಬ ನೆಪ ಹೇಳುತ್ತಿರುವ ಬಾಂಗ್ಲಾ ಕ್ರಿಕೆಟ್ ಮಂಡಳಿ(ಬಿಸಿಬಿ), ತನ್ನ ಪಂದ್ಯಗಳನ್ನು ಲಂಕಾದಲ್ಲಿ ನಡೆಸಲು ಐಸಿಸಿ ಮುಂದೆ ಬೇಡಿಕೆ ಇಟ್ಟಿದೆ. ‘ಸಿ’ ಗುಂಪಿನ ಬದಲು ‘ಬಿ’ ಗುಂಪಿಗೆ ಸೇರಿಸಲೂ ಮನವಿ ಮಾಡಿದೆ.
ಇದರ ಬಗ್ಗೆ ಐಸಿಸಿ ಅಧಿಕಾರಿಗಳು ಬಿಸಿಬಿ ಜೊತೆ ಕೆಲ ಸುತ್ತಿನ ಸಭೆ ನಡೆಸಿದರೂ ಗೊಂದಲ ಪರಿಹಾರವಾಗಿಲ್ಲ. ಬಾಂಗ್ಲಾದ ಬೇಡಿಕೆಯನ್ನು ತಿರಸ್ಕರಿಸುತ್ತಿರುವ ಐಸಿಸಿ ಈಗ ನಿಗದಿಯಾಗಿರುವಂತೆ ಎಲ್ಲಾ ಪಂದ್ಯಗಳನ್ನು ಭಾರತದಲ್ಲೇ ಆಡಬೇಕು ಎಂದು ಸ್ಪಷ್ಟಪಡಿಸಿದೆ. ಅಲ್ಲದೆ, ವಿಶ್ವಕಪ್ ಆಡುವ ಬಗ್ಗೆ ಬುಧವಾರದ ಒಳಗೆ ನಿರ್ಧಾರ ಪ್ರಕಟಿಸಬೇಕು. ಇಲ್ಲದಿದ್ದರೆ ಬೇರೊಂದು ತಂಡಕ್ಕೆ ಅವಕಾಶ ಕಲ್ಪಿಸುವ ಬಗ್ಗೆಯೂ ಸೂಚನೆ ನೀಡಿದೆ ಎಂದು ಐಸಿಸಿ ಮೂಲಗಳು ತಿಳಿಸಿದ್ದಾಗಿ ಮಾಧ್ಯಮಗಳಲ್ಲಿ ವರದಿಯಾಗಿದೆ.
ಬಾಂಗ್ಲಾ ಮುಂದೆ ಈಗ ಉಳಿದಿರುವ ಏಕೈಕ ಆಯ್ಕೆ ಏನೆಂದರೆ ಭಾರತದಲ್ಲೇ ತನ್ನ ಪಂದ್ಯಗಳನ್ನು ಆಡುವುದು. ತನ್ನ ಯಾವುದೇ ಬೇಡಿಕೆಯನ್ನೂ ಐಸಿಸಿ ಒಪ್ಪದಿರುವ ಹಿನ್ನೆಲೆಯಲ್ಲಿ ಬಾಂಗ್ಲಾ ತಂಡ ಭಾರತಕ್ಕೆ ಆಗಮಿಸಲೇಬೇಕು. ತಪ್ಪಿದರೆ ತಂಡ ಟೂರ್ನಿಯಿಂದ ಹೊರಬೀಳುವುದು ಬಹುತೇಕ ಖಚಿತ.
ಆತಿಥ್ಯ ದೇಶ, ರ್‍ಯಾಂಕಿಂಗ್, ವಿವಿಧ ಖಂಡಗಳ ಅರ್ಹತಾ ಟೂರ್ನಿಗಳ ಮೂಲಕ ಒಟ್ಟು 20 ತಂಡಗಳು ಈಗಾಗಲೇ ವಿಶ್ವಕಪ್ ಪ್ರವೇಶಿಸಿವೆ. ಒಂದು ವೇಳೆ ಬಾಂಗ್ಲಾ ಹೊರಬಿದ್ದರೆ ರ್‍ಯಾಂಕಿಂಗ್ ಆಧಾರದಲ್ಲಿ ಸ್ಕಾಟ್ಲೆಂಡ್‌ಗೆ ಅವಕಾಶ ಸಾಧ್ಯತೆ ಇದೆ. ಸದ್ಯ ವಿಶ್ವ ರ್‍ಯಾಂಕಿಂಗ್‌ನಲ್ಲಿ ಸ್ಕಾಟ್ಲೆಂಡ್ 14ನೇ ಸ್ಥಾನದಲ್ಲಿದೆ. ಸ್ಕಾಟ್ಲೆಂಡ್ ಹೊರತುಪಡಿಸಿ 1ರಿಂದ 20ರ ವರೆಗೆ ರ್‍ಯಾಂಕಿಂಗ್‌ನಲ್ಲಿರುವ ಎಲ್ಲಾ 19 ತಂಡಗಳು ವಿಶ್ವಕಪ್ ಪ್ರವೇಶಿಸಿವೆ. 28ನೇ ರ್‍ಯಾಂಕಿಂಗ್‌ನಲ್ಲಿರುವ ಇಟಲಿ ತಂಡವು ಯುರೋಪ್ ಕ್ವಾಲಿಫೈಯರ್ ಮೂಲಕ ಟೂರ್ನಿಗೆ ಅರ್ಹತೆ ಪಡೆದಿದೆ.
ಭಾರತದಲ್ಲಿ ಆಡಲು ನಿರಾಕರಿಸುತ್ತಿರುವ ಬಾಂಗ್ಲಾ ತಂಡ ಐಸಿಸಿ ಮುಂದೆ ಹೇಳುತ್ತಿರುವ ಕಾರಣ ಭದ್ರತಾ ಸಮಸ್ಯೆ. ಆದರೆ ‘ಭಾರತದಲ್ಲಿ ಭದ್ರತೆ ಸಮಸ್ಯೆ ಇಲ್ಲ. ಬಾಂಗ್ಲಾದೇಶಿ ಆಟಗಾರರೂ ಕೂಡಾ ಸುರಕ್ಷಿತವಾಗಿರಲಿದ್ದಾರೆ’ ಎಂದು ಬಾಂಗ್ಲಾ ಕ್ರಿಕೆಟ್ ಮಂಡಳಿಯ ವಾದವನ್ನು ಐಸಿಸಿ ತಳ್ಳಿಹಾಕಿದೆ. ಇದರ ಬಗ್ಗೆ ಸಭೆಯಲ್ಲಿ ಬಾಂಗ್ಲಾಗೆ ಐಸಿಸಿ ಸ್ಪಷ್ಟವಾಗಿ ತಿಳಿಸಿದೆ ಎಂದು ವರದಿಯಾಗಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.