ಭಾರತ ತಂಡ ವಿಶ್ವಕಪ್ ಗೆದ್ದ ಮೈದಾನವಾದ ವಾಂಖಡೆ ಸ್ಟೇಡಿಯಂನಲ್ಲಿ ನಡೆದ 2023ರ ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಸೆಮಿಫೈನಲ್ ಪಂದ್ಯದಲ್ಲಿ ಏಕದಿನ ಕ್ರಿಕೆಟ್ 50ನೇ ಶತಕ ಪೂರೈಸಿದ ಬಳಿಕ ಮಾತನಾಡಿರುವ ವಿರಾಟ್ ಕೊಹ್ಲಿ, ತಂಡಕ್ಕಾಗಿ ಆಡು, ಗೆಲುವಿಗಾಗಿ ಆಡು..ಇದೊಂದೇ ನನಗೆ ಸ್ಫೂರ್ತಿ ನೀಡುವ ಅಂಶಕ ಎಂದಿದ್ದಾರೆ.
ಬೆಂಗಳೂರು (ನ.15): ವಾಂಖಡೆ ಸ್ಟೇಡಿಯಂ ಭಾರತೀಯ ಕ್ರಿಕೆಟ್‌ನ ಪಾಲಿಗೆ ಬರೀ ಕ್ರಿಕೆಟ್ ಮೈದಾನವಲ್ಲ. ಸಾಕಷ್ಟು ದಾಖಲೆಗಳು ಐತಿಹಾಸಿಕ ನೆನಪುಗಳನ್ನು ದಾಖಲಿಸಿಕೊಂಡಿರುವ ಕ್ರಿಕೆಟ್ ಸ್ಟೇಡಿಯಂ. 2011ರ ವಿಶ್ವಕಪ್ ಗೆಲುವು ಪಡೆದ ಇದೇ ನೆಲದಲ್ಲಿ ಬುಧವಾರ ಟೀಮ್ ಇಂಡಿಯಾ ಮಾಜಿ ನಾಯಕ ಹಾಗೂ ಕಿಂಗ್ ಕೊಹ್ಲಿ ಏಕದಿನ ಕ್ರಿಕೆಟ್‌ನ 50ನೇ ಶತಕ ಪೂರೈಸಿದರು. ಆ ಮೂಲಕ ಏಕದಿನ ಕ್ರಿಕೆಟ್‌ನಲ್ಲಿ ಗರಿಷ್ಠ ಶತಕ ಬಾರಿಸಿದ ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ಸಚಿನ್ ತೆಂಡುಲ್ಕರ್ ಅವರ 49 ಶತಕದ ವಿಶ್ವದಾಖಲೆಯನ್ನೂ ಮುರಿದರು. ಮೊದಲ ಇನ್ನಿಂಗ್ಸ್ ಮುಕ್ತಾಯದ ಬಳಿಕ ನೇರಪ್ರಸಾರ ವಾಹಿನಿಯೊಂದಿಗೆ ಮಾತನಾಡಿದ ವಿರಾಟ್ ಕೊಹ್ಲಿಗೆ ನಿಮ್ಮ ಆಟಕ್ಕೆ ಸ್ಪೂರ್ತಿ ಏನು ಎಂದು ಪ್ರಶ್ನೆ ಮಾಡಲಾಯಿತು. ಇದಕ್ಕೆ ಉತ್ತರಿಸಿದ ಕೊಹ್ಲಿ, 'ನನ್ನ ಸ್ಪೂರ್ತಿ, ಪ್ರೇರಣೆ ಬೇರೇನೂ ಅಲ್ಲ. ನನ್ನ ತಂಡಕ್ಕಾಗಿ ಆಡು, ನನ್ನ ತಂಡದ ಗೆಲುವಿಗಾಗಿ ಆಡು. ಇದೊಂದೇ ನನ್ನ ಈವರೆಗಿನ ಏಕೈಕ ಸ್ಪೂರ್ತಿ ಎಂದು ಹೇಳಿದ್ದಾರೆ.
'ದಿಗ್ಗಜ ಆಟಗಾರ ಸಚಿನ್ ತೆಂಡುಲ್ಕರ್ ಈಗ ತಾನೆ ಅಭಿನಂದನೆ ಸಲ್ಲಿಸಿದ್ದರು. ಇದೆಲ್ಲವೂ ನನ್ನ ಪಾಲಿಗೆ ಕನಸೇನೋ ಅಂತಾ ಅನಿಸುತ್ತಿದೆ. ಇದೆಲ್ಲವನ್ನೂ ಇಂಥ ವಾತಾವರಣವನ್ನು ನಿರೀಕ್ಷೆಯೇ ಮಾಡಿರಲಿಲ್ಲ. ಇಂದೂ ಕೂಡ ದೊಡ್ಡ ಪಂದ್ಯ. ಇಡೀ ಟೂರ್ನಮಂಎಟ್‌ನಲ್ಲಿ ನಾನು ಆಡಿದ ರೋಲ್‌ಅನ್ನು ನಾನು ಸರಿಯಾಗಿ ನಿಭಾಯಿಸಬೇಕಿತ್ತು. ಹಾಗಿದ್ದಲ್ಲಿ ಮಾತ್ರವೇ ಉಳಿದ ಆಟಗಾರರು ತಮ್ಮ ನಿಜಶೈಲಿಯಲ್ಲಿ ಬ್ಯಾಟಿಂಗ್ ಮಾಡಲು ಸಾಧ್ಯವಾಗುತ್ತದೆ ಎನ್ನುವುದು ಗೊತ್ತಿತ್ತು. ಎಲ್ಲವೂ ಒಟ್ಟಾಗಿಯೇ ಬಂದಿದ್ದಕ್ಕೆ ಖುಷಿ ಇದೆ. ನಾವು ಈಗಾಗಲೇ ಉತ್ತಮ ಮೊತ್ತವನ್ನು ಬೋರ್ಡ್‌ನಲ್ಲಿ ದಾಖಲಿಸಿದ್ದೇವೆ ಎಂದು ಹೇಳಿದ್ದಾರೆ.
ತಮ್ಮ ಸ್ಥಿರ ಆಟದ ಬಗ್ಗೆ ಮಾತನಾಡಿದ ಕೊಹ್ಲಿ, ನನ್ನ ತಂಡ ವಿನ್ ಆಗುವಂತೆ ಮಾಡುವುದೇ ನನ್ನ ಮೊದಲ ಆದ್ಯತೆ. ಅದಕ್ಕಾಗಿ ಏನು ಬೇಕೋ ಎಲ್ಲವನ್ನೂ ಮಾಡಲು ನಾನು ಸಿದ್ಧನಿದ್ದೇನೆ. ಸಿಂಗಲ್ಸ್, ಅಥವಾ ಡಬಲ್ಸ್, ಬೌಂಡರಿ ಹಿಟ್ಟಿಂಗ್... ಹೀಗೆ ಏನು ಬೇಕೋ ಅದೆಲ್ಲವನ್ನೂ ಮಾಡಲು ನಾನು ಸಿದ್ಧ. ಈ ಪಂದ್ಯಾವಳಿಯಲ್ಲಿ ನನಗೆ ಒಂದು ಪಾತ್ರವನ್ನು ನೀಡಲಾಗಿದೆ ಮತ್ತು ನಾನು ಅದನ್ನು ನನ್ನ ಸಾಮರ್ಥ್ಯದ ಅತ್ಯುತ್ತಮವಾಗಿ ಆಡಲು ಪ್ರಯತ್ನಿಸುತ್ತಿದ್ದೇನೆ. ಆದಷ್ಟು ಓವರ್‌ಗಳ ಕಾಲ ಬ್ಯಾಟಿಂಗ್ ಮಾಡಲು ಪ್ರಯತ್ನ ಮಾಡುತ್ತೇನೆ. ಇದರಿಂದಾಗಿ ನಂತರದ ಬರುವ ಆಟಗಾರರು ಅವರ ಪಾತ್ರಗಳನ್ನು ಸಮರ್ಥವಾಗಿ ನಿಭಾಯಿಸಲು ಸಾಧ್ಯವಾಗುತ್ತದೆ ಎಂದು ಹೇಳಿದ್ದಾರೆ.
ಶತಕ ಸಿಡಿಸಿದ ಬಳಿಕ ತಮ್ಮ ಸೆಲಬ್ರೇಷನ್ ಬಗ್ಗೆ ಮಾತನಾಡಿದ ಕೊಹ್ಲಿ, ಮೊದಲೇ ಹೇಳಿದ ಹಾಗೆ ಇದು ನನ್ನ ಕನಸಾಗಿತ್ತು. ಅನುಷ್ಕಾ (ಪತ್ನಿ) ಎದುರಲ್ಲೇ ಇದ್ದರು. ಸಚಿನ್ ಪಾಜೀ ಕೂಡ ಇದ್ದರು. ಇದನ್ನು ಪದಗಳಲ್ಲಿ ವರ್ಣಿಸೋದು ಕಷ್ಟ. ಹಾಗೇನಾದರೂ ನಾನು ಪರ್ಫೆಕ್ಟ್ ಚಿತ್ರ ಪೇಂಟ್ ಮಾಡೋದಿದ್ದರೆ, ಇದೇ ಆ ಚಿತ್ರವಾಗಿರುತ್ತದೆ. ನಾನು ಆಡುವಾಗ ಯಾರು ಎದುರಲ್ಲಿ ಇರಬೇಕು ಎಂದು ಇಷ್ಟಪಡುತ್ತೇನೋ ಅಂಥಾ ಲೈಫ್ ಪಾರ್ಟನರ್, ಅದರೊಂದಿಗೆ ನನ್ನ ಹೀರೋ ಕೂಡ ಪಕ್ಕದಲ್ಲಯೇ ಕುಳಿತಿದ್ದರು. ಇವರೆಲ್ಲರ ನಡುವೆ ನಾನು 50ನೇ ಶತಕ ಪೂರ್ತಿ ಮಾಡಿದೆ. ಅದರೊಂದಿಗೆ ಇಡೀ ವಾಂಖೆಡೆ ಸಂಪೂರ್ಣವಾಗಿ ಭರ್ತಿಯಾಗಿತ್ತು. ಇಂಥದ್ದೊಂದು ಐತಿಹಾಸಿಕ ಸ್ಥಳದ ಬಗ್ಗೆ ಬಹಳ ವಿಶೇಷ ಎನಿಸುತ್ತದೆ ಎಂದು ಕೊಹ್ಲಿ ಹೇಳಿದರು.
ಪಾಕಿಸ್ತಾನ ಕಳಪೆ ಪ್ರದರ್ಶನಕ್ಕೆ ಮತ್ತೊಂದು ತಲೆದಂಡ, ನಾಯಕತ್ವ ತ್ಯಜಿಸಿದ ಬಾಬರ್ ಅಜಮ್!
ತಂಡದ ಇನ್ನಿಂಗ್ಸ್ ಬಗ್ಗೆ ಮಾತನಾಡಿದ ಅವರು, ಇಂಥ ದೊಡ್ಡ ಗೇಮ್‌ನಲ್ಲಿ 330 ರಿಂದ 340 ರನ್ ಗಳಿಸುವುದು ಬಹಳ ಖುಷಿ ಎನಿಸುತ್ತದೆ. ಅಂಥದ್ದರ ನಡುವೆ 400ರ ಸಮೀಪದ ಮೊತ್ತ ಬಾರಿಸುವುದು ಅದ್ಭುತವಾಗಿತ್ತು. ಶ್ರೇಯಸ್ ಬಂದು ಮುಕ್ತವಾಗಿ ಬ್ಯಾಟಿಂಗ್ ಮಾಡಿದ ರೀತಿಗೆ ಬಹಳಷ್ಟು ಕ್ರೆಡಿಟ್ ಸಲ್ಲಬೇಕು.. ಅಗ್ರಸ್ಥಾನದಲ್ಲಿ ಶುಭ್‌ಮನ್ ಮತ್ತು ರೋಹಿತ್, ಕೆಎಲ್ ಬಿರುಸಿನಿಂದ ಬ್ಯಾಟಿಂಗ್ ಮಾಡಿದರು. ಪ್ರತಿಯೊಬ್ಬರೂ ತಮ್ಮ ಪಾತ್ರಗಳನ್ನು ಪರಿಪೂರ್ಣವಾಗಿ ನಿರ್ವಹಿಸಿದ್ದಾರೆ ಮತ್ತು ತಂಡಕ್ಕಾಗಿ ಕೆಲಸವನ್ನು ಸುಂದರವಾಗಿ ಮಾಡಿದ್ದಾರೆ ಎಂದು ನಾನು ಭಾವಿಸುತ್ತೇನೆ ಎಂದು ಕೊಹ್ಲಿ ಹೇಳಿದ್ದಾರೆ.
ಸಚಿನ್ ವಿದಾಯದ ಪಂದ್ಯ ಆಡಿದ ಅದೇ ದಿನ, ಅದೇ ಮೈದಾನದಲ್ಲಿ ಕೊಹ್ಲಿ 50ನೇ ಶತಕ!